“ಅಲ್ಲಿ ಗಡಿಯಲ್ಲಿ ಭಯೋತ್ಪಾದಕರು ದೇಶದೊಳಕ್ಕೆ ನುಸುಳುತ್ತಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರ ಭಯೋತ್ಪಾದಕರನ್ನು ತಡೆಯುವುದನ್ನು ಬಿಟ್ಟು ರೈತರನ್ನು ಭಯೋತ್ಪಾದಕರಂತೆ ಕಾಣುತ್ತಿದೆ”. ಇದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ಹೇಳಿಕೆ.
ಇನ್ನೊಂದು, ರೋಮ್ ಹೊತ್ತಿ ಉರಿಯುತ್ತಿದ್ದಾಗ ಅದರ ದೊರೆ ಪಿಡೀಲು ನುಡಿಸುತ್ತಿದ್ದನಂತೆ. ಇಲ್ಲಿ ದೇಶದ ವಿವಿಧ ಭಾಗಗಳಿಂದ ದೆಹಲಿ ಗಡಿಗೆ ಬಂದಿರುವ ಲಕ್ಷಾಂತರ ರೈತರು ಪ್ರಾಣದ ಹಂಗು ತೊರೆದು ಕೊರೆಯುವ ಚಳಿಯಲ್ಲಿ ವಾಟರ್ ಜೆಟ್ ಮತ್ತು ಟಿಯರ್ ಗ್ಯಾಸ್ ಶೆಲ್ ಗಳಿಗೆ ಎದೆಗೊಟ್ಟು ಹೋರಾಡುತ್ತಿದ್ದರೆ ಪ್ರಧಾನ ಸೇವಕ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಡಿಜೆ ಸೌಂಡ್ ಮತ್ತು ಬೆಳಕಿನ ಚಿತ್ತಾರದ ಮೆರವಣಿಗೆಗೆ ತಾಳ ಹಾಕುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮತ್ತೊಂದು, ಕೇಂದ್ರ ಸರ್ಕಾರ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಿರೋಧಿಸಿ ಅನ್ನದಾತರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವಾಗ ಪ್ರಧಾನಿ ಮೋದಿ ತಮ್ಮ ‘ಮನ್ ಕಿ ಬಾತ್’ನಲ್ಲಿ ಕೃಷಿ ಕಾಯಿದೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ.
ಮೇಲಿನ ಈ ಮೂರು ಸಂಗತಿಗಳು ಏನು ಕೇಂದ್ರ ಸರ್ಕಾರದ ಆದ್ಯತೆಯನ್ನು ಬಿಚ್ಚಿಡುತ್ತವೆ. ಸದ್ಯದಲ್ಲಿ ಬಿಜೆಪಿಯನ್ನು ಪ್ರಬಲ ವಿರೋಧಿಸುತ್ತಿರುವ ಶಿವಸೇನೆ ಪಕ್ಷದ ನಾಯಕನಾಗಿ ಸಂಜಯ್ ರಾವತ್ ಕಟುವಾಗಿ ಮಾತನಾಡಿರಬಹುದು ಎಂದೇ ಇಟ್ಟುಕೊಳ್ಳಿ. ಬಿಜೆಪಿ ನಾಯಕರು ‘ಪ್ರತಿಭಟನಾ ನಿರತ ರೈತರಿಗೆ ದೇಶ ವಿರೋಧಿಗಳ ಕುಮ್ಮಕ್ಕಿದೆ’ ಎಂದು ಕುಹಕವಾಡಿದ್ದು ಸುಳ್ಳಾ? ‘ದೇಶ ವಿರೋಧಿಗಳು’ ಎಂದರೆ ಯಾರು? ಜೊತೆಗೆ ಈ ಮೂಲಕ ಲಾಠಿ ಏಟಿಗೆ ಎದೆಗೊಟ್ಟು ಹೋರಾಡುತ್ತಿರುವ ಲಕ್ಷಾಂತರ ರೈತರನ್ನು ಅನುಮಾನಿಸಿದಂತಲ್ಲವೇ? ಅವಮಾನಿಸಿದಂತ್ತಲ್ಲವೇ? ಸಂಜಯ್ ರಾವತ್ ಮಾತನ್ನು ಬಿಡಿ. ಭೀಮ್ ಸಿಂಗ್ ಎಂಬ 72 ವರ್ಷದ ರೈತನ ಮಾತನ್ನು ಕೇಳಿ. “ನನ್ನ ಮಗ ಗಡಿಯಲ್ಲಿ ದೇಶ ಕಾಯುತ್ತಿದ್ದಾನೆ. ಆದರೆ ಸೈನಿಕನ ಅಪ್ಪನಾದ ನನ್ನನ್ನು ಭಯೋತ್ಪಾದಕ, ಕ್ರಿಮಿನಲ್ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ”.
Also Read: ಐದನೇ ದಿನಕ್ಕೆ ಕಾಲಿಟ್ಟ ಕೃಷಿ ಕಾನೂನು ವಿರೋಧಿ ಹೋರಾಟ
ಎರಡನೇಯದು ನರೇಂದ್ರ ಮೋದಿ ಕರೋನಾ ಲಸಿಕಾ ತಯಾರಿಕಾ ಕೇಂದ್ರಗಳಿಗೆ ಭೇಟಿ ಕೊಟ್ಟರು. ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಹೌದು. ಇದು ಅಗತ್ಯವಾದ ಕ್ರಮಗಳು. ಅದೇ ರೀತಿ ರೈತರೊಂದಿಗೂ ಮಾತುಕತೆ ನಡೆಸಬಹುದಿತ್ತಲ್ಲವೇ? ‘ಚಾಯ್ ವಾಲಾ’, ‘ಬಡತನದ ಹಿನ್ನೆಲೆಯಿಂದ ಬಂದವನು’ ಎಂದು ಹೇಳಿಕೊಳ್ಳುವ ಮೋದಿಗೆ ಬಡ ರೈತರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯ ಕಾಣುವುದಿಲ್ಲವೇ? ಅನ್ನದಾತನ ಆರ್ತನಾದ ಆಕಾಶಕ್ಕೂ ಕೇಳಿಸುತ್ತಿರುವಾಗ ಮೋದಿ ಡಿಜೆ ಸೌಂಡಿಗೆ ತಾಳ ಹಾಕುತ್ತಾ ಸುಂದರ ಸಂಜೆಯನ್ನು ಸವಿಯುವಷ್ಟು ಸಂವೇದನಾರಹಿತರಾಗಿಬಿಟ್ಟರೆ?
ಮೂರನೇಯದು, ರೈತರು ದಿಢೀರನೆ ದೆಹಲಿಗೆ ಬಂದಿಲ್ಲ. ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ತಂದಾಗಿನಿಂದಲೂ ಅಲ್ಲಲ್ಲಿ ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತಲೇ ಇದ್ದರು. ಇದೇ ಅಕ್ಟೋಬರ್ 27ರಂದು ಅಕ್ಟೋಬರ್ 27 ರಂದೇ ನವದೆಹಲಿಯ ಗುರುದ್ವಾರ ರಾಕಬ್‌ಗಂಜ್‌ನಲ್ಲಿ ಸಭೆ ಸೇರಿದ್ದ ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ಎಐಕೆಎಸ್‌ಸಿಸಿ ‘ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿತ್ತು. ಈ ತೀವ್ರ ಹೋರಾಟದ ಭಾಗವಾಗಿ ‘ದೆಹಲಿ ಚಲೋ’ ಹಮ್ಮಿಕೊಳ್ಳಲಾಗಿತ್ತು. ದೆಹಲಿ ಚಲೋ ಹೆಸರಿನಲ್ಲಿ ದೆಹಲಿಗೆ ಬಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಲಾಗಿತ್ತು. ರಾಮಲೀಲಾ ಮೈದಾನದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ಪೊಲೀಸರಿಂದ ಒಪ್ಪಿಗೆಯನ್ನೂ ಪಡೆಯಲಾಗಿತ್ತು.
Also Read: ಪ್ರಧಾನಿ ಮೋದಿಯ ರೈತ ವಿರೋಧಿ ನಿಲುವು ಮೂರ್ಖತನವೋ? ಉದ್ಧಟತನವೋ?
ಇದನ್ನರಿತ ಕೇಂದ್ರ ಸರ್ಕಾರ ನವೆಂಬರ್ 13ರಂದು ರೈತ ಪ್ರತಿನಿಧಿಗಳ ಸಭೆ ಕರೆಯಿತು. ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸಿ ರೈತ ಸಂಘಟನೆಗಳ ಪ್ರತಿನಿಧಿಗಳು ನವೆಂಬರ್ 13ರ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಆ ಸಭೆಯಲ್ಲಿ ರೈತರ ಒಂದೇ ಒಂದು ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಲಿಲ್ಲ. ‘ಮಾತುಕತೆಗೆ ಕರೆಸಿ ತಮ್ಮದೇ ನಡೆಯಬೇಕೆಂಬ ದಾರ್ಷ್ಯ ತೋರಿದ’ ಕೇಂದ್ರ ಸರ್ಕಾರದ ಈ ನಿಲುವಿನಿಂದ ಬೇಸತ್ತ ರೈತ ಸಂಘಟನೆಗಳ ಒಕ್ಕೂಟವಾದ ಎಐಕೆಎಸ್‌ಸಿಸಿ ಮತ್ತೆ ದೆಹಲಿ ಚಲೋ ಹೋರಾಟಕ್ಕೆ ಕರೆಕೊಟ್ಟಿತು. ರೈತರು ದೆಹಲಿಯತ್ತ ಧಾವಿಸತೊಡಗಿದರು. ಆದರೆ ಪೊಲೀಸರು ರೈತರನ್ನು ದೆಹಲಿ ಗಡಿಯಲ್ಲೇ ತಡೆದರು. ಇದರಿಂದ ಆಕ್ರೋಶಗೊಂಡ ರೈತರು ಗಡಿಯಲ್ಲೇ ಪ್ರತಿಭಟನೆಗಿಳಿದರು. ಗಡಿಯಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಮತ್ತೆ ಮಾತುಕತೆಗೆ ಕರೆದಿದೆ. ಆದರೆ ಪ್ರಧಾನ ಮಂತ್ರಿಗಳೇ ‘ರೈತ ವಿರೋಧಿ ಕೃಷಿ ಕಾನೂನುಗಳನ್ನು ಕೊಂಡಾಡಿದರೆ ಕೇಂದ್ರ ಸರ್ಕಾರ ತಮ್ಮ ಪರ ನಿಲ್ಲುತ್ತದೆ ಎಂಬ ವಿಶ್ವಾಸ ರೈತರಿಗೆ ಮೂಡುವುದಾದರೂ ಹೇಗೆ?
ಕೇಂದ್ರ ಸರ್ಕಾರದ, ಅದಕ್ಕೂ ಮುಖ್ಯವಾಗಿ ಪ್ರಧಾನಿ ಮೋದಿಯವರ ನಿಲುವು ‘ಕೈಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ’ ಎಂಬಂತಿದೆ. ಒಂದೆಡೆ ಪ್ರತಿಭಟನಾನಿರತ ರೈತರನ್ನು ಮಾತುಕತೆಗೆ ಆಹ್ವಾನಿಸಲಾಗುತ್ತದೆ. ಇನ್ನೊಂದೆಡೆ ಪ್ರಧಾನಿಯಿಂದ ಹಿಡಿದು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಕೃಷಿ ಕಾನೂನುಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಷ್ಟಾದರೂ ರೈತರು ದೊಡ್ಡ ಮನಸ್ಸು ಮಾಡಿ ಇಂದು ಕೇಂದ್ರ ಸರ್ಕಾರದ ಜೊತೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಒಪ್ಪಿದ್ದಾರೆ. ಮಧ್ಯಾಹ್ನ 3ಗಂಟೆಗೆ ದೆಹಲಿಯ ವಿಜ್ಞಾಮ ಭವನದಲ್ಲಿ ಸಭೆ ನಡೆಯಲಿದ್ದು ಈಗಲಾದರೂ ಕೇಂದ್ರ ಸರ್ಕಾರ ರೈತರ ಬಗ್ಗೆ ಕರುಣೆ ತೋರುವುದೇ ಎಂದು ನಿರೀಕ್ಷಿಸಲಾಗುತ್ತಿದೆ. ವಾಸ್ತವವಾಗಿ ಇದು ಕೇಂದ್ರ ಸರ್ಕಾರ ಕರುಣೆ ತೋರುವ ವಿಷಯವಲ್ಲ, ನ್ಯಾಯ ಕೇಳುವುದು ರೈತರ ಹಕ್ಕು. ಆದರೆ ಇವು ದುರ್ದಿನಗಳು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಪೂರ್ವಭಾವಿ ಸಭೆ
ಮಧ್ಯಾಹ್ನ ರೈತರೊಂದಿಗೆ ಮಾತುಕತೆ ನಡೆಸುವ ಹಿನ್ನೆಲೆಯಲ್ಲಿ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿವಾಸದಲ್ಲಿ ಕೇಂದ್ರ ಸಚಿವರು ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ನರೇಂದ್ರ ತೋಮರ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾಲೋಚನೆ ನಡೆಸುತ್ತಿದ್ದಾರೆ. ರೈತರೊಂದಿಗೆ ನಡೆಸುವ ಸಭೆಯ ನೇತೃತ್ವವನ್ನು ರಾಜನಾಥ್ ಸಿಂಗ್ ಹೆಗಲಿಗೇರಿಸುವ ಸಾಧ್ಯತೆ ಇದೆ.
Also Read: ರೈತ ಪ್ರತಿಭಟನೆ ಸುತ್ತ ಸುಳ್ಳು ಮಾಹಿತಿ ಬಿತ್ತರಿಸಿದ ಬಿಜೆಪಿ ಐಟಿ ಸೆಲ್