ಕನ್ನಡ ಸಾರಸ್ವತ ಲೋಕದಲ್ಲಿ ಏನು ನಡೆಯ ಬಾರದಿತ್ತೋ ಅದು ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ. ಇದೆ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸ್ ಅನುಮತಿ ನಿರಾಕರಿಸಲಾಗಿದೆ. ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಮ್ಮೇಳನಕ್ಕೆ ಅನುದಾನ ನಿರಾಕರಿಸಿದೆ. ಸಾಹಿತ್ಯ ಪ್ರೇಮಿಗಳು ಸ್ವಂತ ಹಣದಿಂದ ಸಮ್ಮೇಳನ ನಡೆಸಲು ಸಜ್ಜಾಗಿದ್ದಾರೆ… ಇದು 16ನೇ ಚಿಕ್ಕಮಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ಸುತ್ತ ಹಬ್ಬಿರುವ ವಿವಾದಗಳ ಸರಮಾಲೆ
ಇಡೀ ವಿವಾದದ ಕೇಂದ್ರ ಬಿಂದುಗಳು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ ಟಿ ರವಿ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷತೆಯ ಹೆಸರಿನಲ್ಲಿ ಈ ಮಲೆನಾಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋತಿಯಾಟ ಪ್ರಜ್ಞಾವಂತರ ಆತಂಕ್ಕೆ ಕಾರಣವಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ, ಸಚಿವರೊಬ್ಬರ ನಿರ್ದೇಶನದಂತೆ ನೆರವು ನಿರಾಕರಿಸಿ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ತನ್ನ ಸ್ವಾಯತ್ತತೆಯನ್ನು ಸರಕಾರದ ಪಾದಕ್ಕೆ ಅರ್ಪಿಸಿರುವುದು ಎಲ್ಲರ ಕಳವಳಕ್ಕೆ ಕಾರಣವಾಗಿರುವ ಸಂಗತಿ. ಇವೆಲ್ಲದರ ನಡುವೆ ಶೃಂಗೇರಿ ಪೊಲೀಸರು ಅಧಿಕಾರಸ್ಥರ ಮರ್ಜಿ ಹಿಡಿದಿದ್ದಾರೆ. ಸಮ್ಮೇಳನಕ್ಕೆ ಅನುಮತಿ ನಿರಾಕರಿಸಿದ್ದಾರೆ
ಈ ನಡುವೆ ಇದೇ ಮೊದಲ ಬಾರಿಗೆ, ಜನ ಸಾಮಾನ್ಯರಿಂದ ಹಣ ಸಂಗ್ರಹಿಸಿ, ಸಮ್ಮೇಳನ ನಡೆಸಲು ಜಿಲ್ಲಾ ಸಾಹಿತ್ಯ ಪರಿಷತ್ ಮುಂದಾಗಿರುವುದು ಒಂದು ದೊಡ್ಡ ಸುದ್ದಿ. ಜನ ಸಾಹಿತ್ಯ ಪರಿಷತ್‍ಗೆ ದೇಣಿಗೆ ನೀಡಿ, ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಟೊಂಕ ಕಟ್ಟಿರುವುದು ಧನಾತ್ಮಕ ಬೆಳವಣಿಗೆ.
ನಡೆದಿರುವುದಿಷ್ಟೇ: ಈ ಬಾರಿಯ (16ನೇ) ಜಿಲ್ಲಾ ಸಾಹಿತ್ಯ ಸಮ್ಮೇಳನ ಶೃಂಗೇರಿಯಲ್ಲಿ ನಡೆಯುತ್ತಿದೆ. ಜನವರಿ 10 ಹಾಗೂ 11ರಂದು ಈ ಸಮ್ಮೇಳನ ನಡೆಯುತ್ತಿದೆ. ಮಂಗನ ಬ್ಯಾಟೆ ಪುಸ್ತಕ ಖ್ಯಾತಿಯ ಕಲ್ಕುಳಿ ವಿಠಲ ಹೆಗ್ದೆಯವರನ್ನು ಸರ್ವಾನುಮತದಿಂದ ಈ ಸಮ್ಮಳೇನದ ಸರ್ವಾಧ್ಯಕ್ಷರನ್ನಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ. ಇದನ್ನು ಬಿಜೆಪಿ, ಹಾಗೂ ಕೆಲ ಹಿಂದೂ ಪರ ಸಂಘಟನೆಗಳು ವಿರೋಧಿಸಿವೆ. ಸಮ್ಮೇಳನದಿಂದ ದೂರ ಉಳಿಯುವುದಾಗಿ ಘೋಷಿಸಿವೆ. ಇಷ್ಟೆ ಆಗಿದ್ದರೆ ಸಮಸ್ಯೆಯಿರಲಿಲ್ಲ. ಏಕೆಂದರೆ ನಮ್ಮದು ಬಂಡಾಯದ ಪರಂಪರೆ. ಆದರೆ ಇದೀಗ ಕನ್ನಡ ಮತ್ತು ಸಂಸ್ಕøತಿ ಸಚಿವರು, ಈ ಸಮ್ಮೇಳನದ ವಿರುದ್ಧ ಹೂಂಕರಿಸಿರುವುದು, ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕೂಡಾ ಜಿಲ್ಲಾ ಸಾಹಿತ್ಯ ಪರಿಷತ್ ಬೆಂಬಲಕ್ಕೆ ನಿಲ್ಲದಿರುವುದು ನಿಜವಾದ ಸುದ್ದಿ.
ಕಲ್ಕುಳಿ ವಿಠಲ ಹೆಗ್ದೆ ನಕ್ಸಲ್ ಪರ. ಮಲೆನಾಡಿನಲ್ಲಿ ಬಡವರ, ದಲಿತರ ರಕ್ತದೋಕುಳಿಗೆ ಕಾರಣಕರ್ತರಾದವರು. 140ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ಬರೆದವರನ್ನು ಕೂಡಾ ನಿರ್ಲಕ್ಷಿಸಿ, ಇವರನ್ನು ಆಯ್ಕೆ ಮಾಡಿರುವುದರ ಬಗ್ಗೆ ನಮ್ಮ ಆಕ್ಷೇಪಗಳಿವೆ ಎನ್ನುವುದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ಕನ್ನಡ ಹಾಗೂ ಸಂಸ್ಕøತಿ ಸಚಿವ ಸಿ ಟಿ ರವಿ ಹಾಗೂ ಅವರ ಬೆಂಬಲಿಗರ ನಿಲುವು. ಸಮ್ಮೇಳನದ ಸಂಘಟನೆಯಿಂದ ಬಿಜೆಪಿ ಹಾಗೂ ಬಲಪಂಥೀಯರು ದೂರ ಉಳಿದಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಹಿಂದೂ ಪರ ಸಂಘಟನೆಗಳ ಮೂಲಕ ದೂರು ಸಲ್ಲಿಸಲಾಗಿದೆ.
ಹೆಗ್ದೆ, ಶೃಂಗೇರಿ ಸ್ವಾಮಿಗಳನ್ನು ಗೇಲಿ ಮಾಡಿ, ಬ್ರಾಹ್ಮಣರಿಗೆ ಅವಮಾನ ಮಾಡಿದ್ದಾರೆ ಎಂಬ ಒಗ್ಗರಣೆ ಬೇರೆ. ಹೀಗೆ ಹೆಗ್ದೆ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ಕೈಗೊಂಡಿದ್ದಾರೆ ಈ ಸಿಟಿ ರವಿ ಬೆಂಬಲಿಗರು. ಸಾಹಿತ್ಯ ಸಮ್ಮೇಳನ ಮುಂದೂಡಿ ಎಂಬ ಆಗ್ರಹ ಸಚಿವ ಸಿ ಟಿ ರವಿ ಅವರದ್ದು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ್ ಕುಂದೂರು ಹಾಗೂ ಇನ್ನಿತರರ ಪ್ರಕಾರ, ಹೆಗ್ದೆಯವರು ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಸಾಹಿತಿ- ಜನಪರ ಹೋರಾಟಗಾರ. ಯಾರು ಅದೆಷ್ಟೇ ವಿರೋಧಿಸಿದರೂ ಅವರೇ ಸಮ್ಮೇಳನದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಗುರುವಾರದಿಂದ ವಿವಾದ ಶಮನಕ್ಕೆ ಒತ್ತಾಯಿಸಿ ಕುಂದೂರು ಉಪವಾಸ ವೃತ ಕೈಗೊಳ್ಳಲಿದ್ದಾರೆ. “ಹೆಗ್ದೆಯವರ ಜನಪರ ಹೋರಾಟಕ್ಕೆ ನಕ್ಸಲ್ ಬಣ್ಣ ಹಚ್ಚುವುದು ತಪ್ಪು,” ಎಂದು ಖಚಿತವಾಗಿ ಹೇಳುತ್ತಾರೆ ಕುಂದೂರು.
ಈ ನಡುವೆ ಹೆಗ್ದೆಯವರು ತಮ್ಮ ಮೇಲಿನ ಆರೋಪಗಳನ್ನೆಲ್ಲಾ ನಿರಾಕರಿಸುತ್ತಾರೆ. “ಕನ್ನಡದ ಬಂಡಾಯ ಪರಂಪರೆಯನ್ನು ಅರಿಯದವರು, ಬಹುತ್ವದ ನೆಲೆಗಳನ್ನು ಗುರುತಿಸಲು ವಿಫಲರಾಗಿರುವವರು ನನ್ನನ್ನು ವಿರೋಧಿಸುತ್ತಿದ್ದಾರೆ,” ಎನ್ನುತ್ತಾರೆ ಹೆಗ್ದೆ.
ಸ್ಥಳೀಯ ಶಾಸಕ, ಕಾಂಗ್ರೆಸ್ ಮುಖಂಡ ಡಿ ಟಿ ರಾಜೇಗೌಡರು ಜಿಲ್ಲಾ ಸಾಹಿತ್ಯ ಪರಿಷತ್ ಪರ ನಿಂತಿದ್ದಾರೆ. ‘ಒಮ್ಮೆ ಆಯ್ಕೆ ಮಾಡಿದ ಬಳಿಕ ಅಧ್ಯಕ್ಷರ ಬದಲಾವಣೆ ಅವಮಾನಕರ. ಇದನ್ನು ನಾನು ಒಪ್ಪುವುದಿಲ್ಲ. ಸಮ್ಮೇಳನ ಯಶಸ್ವಿಯಾಗಿ ನಡೆಯಲಿದೆ,” ಎನ್ನುತ್ತಾರೆ ಅವರು.
ಈ ನಡುವೆ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಜಿಲ್ಲಾ ಸಮ್ಮೇಳನಕ್ಕೆ ಕೇಂದ್ರ ಸಮಿತಿಯಿಂದ ನೆರವು ನಿರಾಕರಿಸಿದ್ದಾರೆ. “ಸಚಿವ ರವಿ ಮನವಿ ಮೇರೆಗೆ ಈ ಬಾರಿ ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನಕ್ಕೆ ನೆರವು ನೀಡುತ್ತಿಲ್ಲ,” ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್‍ನ ಸ್ವಾಯತ್ತತೆಯನ್ನು ಬಹಿರಂಗವಾಗಿಯೇ ಸಚಿವರೊಬ್ಬರಿಗೆ ಅಡವಿಟ್ಟಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.
ಈ ಎಲ್ಲದರ ನಡುವಿನ ಆಶಾದಾಯಕ ಬೆಳವಣಿಗೆಯೆಂದರೆ, ಸ್ಥಳೀಯರು ಜಿಲ್ಲಾ ಸಾಹಿತ್ಯ ಪರಿಷತ್‍ಗೆ ದೊಡ್ಡ ಮಟ್ಟದಲ್ಲಿ ಸಮ್ಮೇಳನ ಆಯೋಜನೆಗೆ ಹಣಕಾಸು ನೆರವು ನೀಡಲು ಮುಂದಾಗುತ್ತಿರುವುದು. ಬಡವರು, ದಲಿತರು, ಹಿಂದುಳಿದ ವರ್ಗದವರು ಜತೆಗೆ ಮೇಲ್ವರ್ಗ….ಹೀಗೆ ಸಮಾಜದ ಎಲ್ಲಾ ವರ್ಗಗಳ ಜನತೆ ಸಾಹಿತ್ಯ ಪರಿಷತ್ ಜತೆ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಇದು ಕನ್ನಡ ಸಾಹಿತ್ಯ ಪರಿಷತ್‍ನ ಇತಿಹಾಸದಲ್ಲಿನ ಸುವರ್ಣ ಘಳಿಗೆ.