ಬಹುಭಾಷಾ ನಟ ಸೋನು ಸೂದ್ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿ ಜನ ಮೆಚ್ಚುಗೆ ಪಡೆದವರು. ಲಾಕ್‌ಡೌನ್ ಹಿನ್ನಲೆಯಲ್ಲಿ ತಮ್ಮೂರುಗಳಿಗೆ ಮರಳಲಾಗದ ಹಲವಾರು ವಲಸೆ ಕಾರ್ಮಿಕರನ್ನು ತನ್ನ ಸ್ವ ಖರ್ಚಿನಿಂದಲೇ ಅವರ ಊರುಗಳಿಗೆ ತೆರಳಲು ಅನುವು ಮಾಡಿಕೊಟ್ಟ ನಟನ ಮಾನವೀಯತೆಗೆ ವ್ಯಾಪಕ ಶ್ಲಾಘನೆ ದೊರೆತಿತ್ತು.
ಆದರೆ, ಭಾರತದಲ್ಲಿ ವ್ಯಾಪಕವಾಗಿ ತಲೆದೋರಿರುವ ನಿರುದ್ಯೋಗ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವಂತಹ ವ್ಯಂಗ್ಯ ಚಿತ್ರವೊಂದು ತನ್ನ ಫೇಸ್‌ಬುಕ್ ಖಾತೆಯಿಂದ ಹಂಚಿಕೊಂಡದ್ದು ಸೋನು ಸೂದ್ ಮೇಲೆ ಮೋದಿ ಅಭಿಮಾನಿಗಳು ಮುಗಿಬೀಳುವಂತೆ ಮಾಡಿದೆ. ಮೋದಿ ಅಭಿಮಾನಿಗಳ ವಿಪರೀತ ಟ್ರಾಲ್‌ಗಳಿಗೆ ಬೇಸತ್ತು ಕೊನೆಗೆ ಸೋನು ಸೂದ್ ತನ್ನ ಪೋಸ್ಟ್ ಡಿಲಿಟ್ ಮಾಡಿದ್ದಾರೆ.

ದೇಶದ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾದ ಕನ್ನಡಿಗ ಸತೀಶ್ ಆಚಾರ್ಯ ಅವರು ದೇಶದಲ್ಲಿ ಉಂಟಾದ 1.9 ಕೋಟಿ ಉದ್ಯೋಗ ನಷ್ಟದ ಕುರಿತು ವ್ಯಂಗ್ಯಚಿತ್ರವೊಂದು ಬರೆದಿದ್ದು, ಚಿತ್ರದಲ್ಲಿ ಮೋದಿ ತಲೆಮೇಲೆ ಕೈ ಹೊತ್ತು ದೇಶದಲ್ಲಿ 1.9 ಕೋಟಿ ನಷ್ಟವಾಗಿದೆ, ಏನು ಮಾಡುತ್ತಿದ್ದೀರಿ ಸೋನು ಸೂದ್ ಎಂದು ಕೇಳುವ ರೀತಿಯಲ್ಲಿ ಬರೆಯಲಾಗಿತ್ತು. ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರಿಗೆ ಸೋನು ಸೂದ್ ಮಾಡಿರುವ ಸಹಾಯ ಸರ್ಕಾರಕ್ಕೆ ಇರಿಸುಮುರಿಸು ತಂದಿತ್ತು. ಅದೇ ಹಿನ್ನಲೆಯಲ್ಲಿ ಸತೀಶ್ ಅವರು ಈ ಚಿತ್ರವನ್ನು ಬರೆದಿದ್ದರು.
ಇದನ್ನು ಸೋನು ಸೂದ್ ತನ್ನ ಖಾತೆಯಿಂದ ಹಂಚಿಕೊಂಡಿದ್ದರು. ಇದು ನರೇಂದ್ರ ಮೋದಿ ಅಭಿಮಾನಿಗಳಿಗೆ ಮರ್ಮಾಘಾತ ನೀಡಿದೆ. ಬಳಿಕ ಕೇಸರಿ ಪಡೆಯ ಟ್ರಾಲ್ ಪೇಜ್‌ಗಳು ಸೋನು ಸೂದ್ ಅವರನ್ನು ವ್ಯಾಪಕ ಟ್ರಾಲ್ ಮಾಡಲು ಆರಂಭಿಸಿವೆ. ಕೆಟ್ಟ ರೀತಿಯ ಟ್ರಾಲ್‌ಗಳನ್ನು ಎದುರು ನೋಡದ ಸೋನು ಸೂದ್, ತನ್ನ ಪೋಸ್ಟ್ ಡಿಲಿಟ್ ಮಾಡಿದ್ದಾರೆ.
ಈ ಕುರಿತು ಸತೀಶ ಆಚಾರ್ಯ ಪ್ರತಿಕ್ರಿಯಿಸಿದ್ದು, ಸೋನು ಸೂದ್ ಅವರನ್ನು ಟ್ರಾಲ್ ಮಾಡಲು ಆರಂಭಿಸಿದ್ದರಿಂದ ನಾನೇ ಅವರ ಬಳಿ ಆ ಪೋಸ್ಟನ್ನು ಡಿಲಿಟ್ ಮಾಡಲು ವಿನಂತಿಸಿಕೊಂಡಿದ್ದೆ ಎಂದಿದ್ದಾರೆ.
