ಕರೋನಾ ವಿರುದ್ಧದ ಸಮರದ ಏಕೈಕ ಅಸ್ತ್ರವಾಗಿ ಪ್ರಯೋಗಿಸಲ್ಪಟ್ಟಿದ್ದ ದೇಶವ್ಯಾಪಿ ಲಾಕ್ ಡೌನ್ ಮುಗಿದು, ಇಂದಿನಿಂದ ಫ್ರೀಡೌನ್ ಮೊದಲ ಹಂತ ಆರಂಭವಾಗಿದೆ. “ಕೇವಲ 21 ದಿನದಲ್ಲಿ ಕರೋನಾ ವಿರುದ್ಧದ ಸಮರ ಗೆಲ್ಲುತ್ತೇವೆ. ದೇಶದ ಈ ಗೆಲುವು ವಿಶ್ವಕ್ಕೇ ಮಾದರಿಯಾಗಲಿದೆ. ಹಾಗಾಗಿ ಜನತೆ ಈ ಲಾಕ್ ಡೌನ್ ಗೆ ಸಹಕರಿಸಬೇಕು. ಜನ ಸಹಕರಿಸದೇ ಹೋದರೆ, ದೇಶ 21 ವರ್ಷಗಳಷ್ಟು ಹಿಂದೆ ಹೋಗಲಿದೆ” ಎಂದು ಪ್ರಧಾನಿ ಮೋದಿ ಲಾಕ್ ಡೌನ್ ಘೋಷಣೆಯ ತಮ್ಮ ಭಾಷಣದಲ್ಲಿ ಹೇಳಿದ್ದರು.
ಲಾಕ್ ಡೋನ್ ಘೋಷಣೆಯಾದ ಮಾರ್ಚ್ 24ರಂದು ಕೇವಲ 564 ರಷ್ಟಿದ್ದ ದೇಶದ ಕರೋನಾ ಸೋಂಕಿತರ ಸಂಖ್ಯೆ, ಈ 70 ದಿನದ ಲಾಕ್ ಡೌನ್, ಸೀಲ್ ಡೌನ್ ಗಳ ಬಳಿಕ ಬರೋಬ್ಬರಿ ಎರಡು ಲಕ್ಷ(1.94 ಲಕ್ಷ)ಕ್ಕೇರಿದೆ! ಅದೂ ದೇಶದ ಅಪಾರ ಜನಸಂಖ್ಯೆಗೆ ಹೋಲಿಸಿದರೆ ತೀರಾ ಕನಿಷ್ಟ ಪ್ರಮಾಣದಲ್ಲಿರುವ ವೈರಾಣು ಪರೀಕ್ಷೆಯ ದರದಲ್ಲಿಯೇ ಈ ಮಟ್ಟದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ! ವಾಸ್ತವವಾಗಿ ಪರೀಕ್ಷೆಗೊಳಪಡದ, ಪರೀಕ್ಷೆಯಾಗಿಯೂ ರೋಗ ಪತ್ತೆಯಾಗದ, ರೋಗ ಲಕ್ಷಣಗಳೇ ಕಾಣಿಸಿಕೊಳ್ಳದ ಸೋಂಕಿತರ ಪ್ರಮಾಣ ಇದರ ಹತ್ತು ಪಟ್ಟು ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಈ ನಡುವೆ ನಾಲ್ಕನೇ ಹಂತದ ಲಾಕ್ ಡೌನ್ ಅಂತ್ಯದ ಹೊತ್ತಿಗೆ ಮೊನ್ನೆ ದೇಶದ ಜನರನ್ನುದ್ದೇಶಿಸಿ ಬರೆದ ಪತ್ರದಲ್ಲಿ ಪ್ರಧಾನಿ ಮೋದಿಯವರು, “ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ರೋಗ ನಿಯಂತ್ರಣದ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಇದು ಸುದೀರ್ಘ ಸಮರ. ಆದರೆ, ನಾವು ಈಗಾಗಲೇ ಜಯದ ಹಾದಿಯಲ್ಲಿದ್ದೇವೆ. ಜಯ ನಮ್ಮದೇ. ಕರೋನಾ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತಿಗೇ ನಾವು ಅಚ್ಚರಿ ಉಂಟುಮಾಡಲಿದ್ದೇವೆ” ಎಂದಿದ್ದಾರೆ.
ಆದರೆ, ಮೋದಿಯವರ ಈ ನುಡಿ, ಸದ್ಯದ ಕರೋನಾ ಮಹಾಮಾರಿಯ ಅಟ್ಟಹಾಸದ ಎದುರು ಜಟ್ಟಿ ಮೀಸೆ ಮಣ್ಣಾದರೂ ನೆಲಕ್ಕೆ ಬಿದ್ದಿಲ್ಲ ಎಂಬಂತಹ ವರಸೆ. ಯಾವುದೇ ಮುಂದಾಲೋಚನೆ ಇಲ್ಲದೆ, ಸ್ಪಷ್ಟ ಕಾರ್ಯಯೋಜನೆ ಇಲ್ಲದೆ ದಿಢೀರ್ ಲಾಕ್ ಡೌನ್ ಹೇರಿದ್ದೇ ಮೊದಲನೆಯದಾಗಿ ವಿವೇಚನಾಹೀನ ದಬ್ಬಾಳಿಕೆಯ ಕ್ರಮ. ಈ ವಿಫಲ ಲಾಕ್ ಡೌನ್ ಹೇರಿಕೆಯ ವಿಷಯದಲ್ಲಾಗಲೀ, ವೈದ್ಯಕೀಯ ವ್ಯವಸ್ಥೆ, ಆರೋಗ್ಯ ಸೌಕರ್ಯ ಸೇರಿದಂತೆ ಕರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರ ಪ್ರತಿ ಹಂತದಲ್ಲೂ ಎಡವಿದೆ. ಮುಖ್ಯವಾಗಿ ಇಂತಹ ಜಾಗತಿಕ ಮಹಾಮಾರಿಯನ್ನು ಎದುರಿಸಲು ವಾಸ್ತವವಾಗಿ ಸಾಂಕ್ರಾಮಿಕ ತಜ್ಞರ ಸಲಹೆ ಮತ್ತು ಮಾರ್ಗದರ್ಶನದ ಮೇಲೆ ಕಾಯತಂತ್ರಗಳನ್ನು ಯೋಜಿಸಬೇಕಿತ್ತು. ಆದರೆ, ಸರ್ಕಾರ ಕೇವಲ ಅಧಿಕಾರಿಗಳ ಮರ್ಜಿಗೆ ಒಳಗಾಗಿ ತಳಮಟ್ಟದ ಜ್ಞಾನವಿರದ ಜನರ ಸಲಹೆ ಮೇರೆಗೆ ಇಂತಹ ವಿಫಲ ಕ್ರಮಗಳನ್ನು ಅನುಸರಿಸಿತು. ಪರಿಣಾಮವಾಗಿ ಅತ್ತ ಮಹಾಮಾರಿಯನ್ನೂ ತಡೆಯಲಾಗಲಿಲ್ಲ; ಇತ್ತ ಜನರ ಜೀವವನ್ನೂ ಉಳಿಸಲಾಗುತ್ತಿಲ್ಲ. ಜೊತೆಗೆ ವಿವೇಚನಾಹೀನ ಲಾಕ್ ಡೌನ್ ಕ್ರಮದಿಂದಾಗಿ ದೇಶ ಅಪಾರ ಪ್ರಮಾಣದ ಸಂಕಷ್ಟ ಮತ್ತು ನಷ್ಟಕ್ಕೆ ಒಳಗಾಯಿತು. ಸಾಕಷ್ಟು ಜೀವಹಾನಿ, ಅನಪೇಕ್ಷಿತ ವಲಸೆಯ ಬೆಲೆ ತೆರೆಬೇಕಾಯಿತು ಎಂದು ಸ್ವತಃ ಕೋವಿಡ್-19 ಕಣ್ಗಾವಲು ಕುರಿತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಸಮಿತಿಯ ತಜ್ಞರು ಹೇಳಿದ್ದಾರೆ.
ದೇಶದ ಪ್ರಮುಖ ಮೂವರು ಪ್ರಮುಖ ವೈದ್ಯಕೀಯ ವೃತ್ತಿನಿರತರ ಸಂಸ್ಥೆಗಳಾದ ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್, ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯೋಲಜಿಸ್ಟ್ ಸಂಘಟನೆಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ಕಾರ್ಯವಿಧಾನದ ದೋಷಗಳಿಂದಾಗಿ ದೇಶ ಅಪಾಯಕ್ಕೆ ಸಿಲುಕಿದೆ ಎಂಬ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ದೇಶದಲ್ಲಿ ಈಗಾಗಲೇ ಕರೋನಾ ಸೋಂಕು ಸಮುದಾಯದ ಮಟ್ಟದಲ್ಲಿ ಹರಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಅನಾಹುತಕಾರಿ ಪ್ರಮಾಣದಲ್ಲಿ ಸಾವು- ನೋವುಗಳು ಸಂಭವಿಸಲಿವೆ ಎಂದಿರುವ ಸಂಸ್ಥೆಗಳು, “ಇಂತಹ ಹಂತದಲ್ಲಿ(ಸೋಂಕು ಸಮುದಾಯದ ಮಟ್ಟದಲ್ಲಿ ಹರಡಿರುವಾಗ) ಸೋಂಕನ್ನು ಹಿಮ್ಮೆಟ್ಟಿಸುತ್ತೇವೆ. ಅದರ ವಿರುದ್ಧ ಹೋರಾಡಿ ಗೆದ್ದುಬಿಡುತ್ತೇವೆ. ಜಗತ್ತಿಗೆ ಮಾದರಿಯಾಗುತ್ತೇವೆ ಎಂದು ಹೇಳುವುದು ತೀರಾ ಅವಾಸ್ತವಿಕ” ಎಂದೂ ಆ ಸಂಸ್ಥೆಗಳನ್ನು ಪ್ರತಿನಿಧಿಸುವ ಆರೋಗ್ಯ ತಜ್ಞರು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮುಂಚೂಣಿ ಆರೋಗ್ಯ ಸಂಸ್ಥೆಗಳ ತಜ್ಞರ ಈ ಅಭಿಪ್ರಾಯ ಪ್ರಧಾನಿ ಮೋದಿಯವರು ಪದೇ ಪದೇ ಹೇಳುತ್ತಿರುವ ‘ದೇಶದಲ್ಲಿ ಕರೋನಾ ಸೋಂಕು ಇನ್ನೂ ಸಮುದಾಯದ ಮಟ್ಟದಲ್ಲಿ ಹರಡಿಲ್ಲ’ ಎಂಬ ಹೇಳಿಕೆಗೆ ಸಂಪೂರ್ಣ ತದ್ವಿರುದ್ಧವಾಗಿದೆ. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ಕಳೆದು ಎಪ್ಪತ್ತು ದಿನಗಳಿಂದಲೂ ದೇಶದಲ್ಲಿ ಕರೋನಾ ನಿಯಂತ್ರಣದಲ್ಲಿದೆ. ರೋಗ ಹರಡುವಿಕೆಯನ್ನು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಲಾಕ್ ಡೌನ್ ಕ್ರಮ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಹಾಗಾಗಿ ದೇಶದಲ್ಲಿ ಈವರೆಗೂ ಸಮುದಾಯದ ಮಟ್ಟದಲ್ಲಿ ಹರಡಿಲ್ಲ. ಸಮುದಾಯ ಸೋಂಕಾಗಿ ಬದಲಾಗಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ.
ಆದರೆ, ಅಮೆರಿಕದ ಸಾಂಕ್ರಾಮಿಕ ರೋಗ ತಜ್ಞ ಡಾ ರಮಣನ್ ಲಕ್ಷ್ಮಿನಾರಾಯಣನ್ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಾಂಕ್ರಾಮಿಕ ತಜ್ಞರು ಭಾರತ ಸರ್ಕಾರದ ಆ ಅತಿ ವಿಶ್ವಾಸದ ಮಾತುಗಳನ್ನು ತಳ್ಳಿಹಾಕುತ್ತಲೇ ಇದ್ದರು. ಹಲವರು ಮಾರ್ಚ್ ಮೂರನೇ ವಾರದ ಹೊತ್ತಿಗೆ ಲಾಕ್ ಡೌನ್ ಹೇರುವಾಗಲೇ ದೇಶದಲ್ಲಿ ಕರೋನಾ ಸಮುದಾಯದ ಸೋಂಕಾಗಿದೆ ಎಂದು ಹೇಳಿದ್ದರು. ನಿರೀಕ್ಷಿತ ಪ್ರಮಾಣದಲ್ಲಿ ವೈರಾಣು ಪರೀಕ್ಷೆ ನಡೆಸದೇ ಇರುವುದರಿಂದ ವಾಸ್ತವಿಕವಾಗಿ ಸೋಂಕಿನ ವ್ಯಾಪಕತೆ ಅರಿವಿಗೆ ಬಂದಿಲ್ಲ. ರೋಗ ಪತ್ತೆ ಮಾಡಿಲ್ಲ ಎಂಬ ಕಾರಣಕ್ಕೆ ರೋಗವೇ ಇಲ್ಲ ಎಂದುಕೊಳ್ಳುವುದು ಮೂರ್ಖತನ ಎಂದೂ ಹೇಳಿದ್ದರು. ಇದೀಗ ಸ್ವತಃ ಕೋವಿಡ್ 19 ನಿರ್ವಹಣೆಗಾಗಿ ಸರ್ಕಾರ ರಚಿಸಿರುವ ಕಣ್ಗಾವಲು ಸಮಿತಿಯ ಭಾಗವಾಗಿದ್ದ ತಜ್ಞರೇ ಆ ಮಾತುಗಳನ್ನು ಪುನರುಚ್ಚರಿಸಿದ್ದಾರೆ.
ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್) ಸಂಸ್ಥೆಯ ಸೆಂಟರ್ ಫಾರ್ ಕಮ್ಯುನಿಟಿ ಮೆಡಿಸಿನ್ ನ ಡಾ ಶಶಿ ಕಾಂತ್, ಬನಾರಸ್ ಹಿಂದೂ ವಿವಿಯ ಮಾಜಿ ಪ್ರಾಧ್ಯಾಪಕ ಡಾ ಡಿ ಸಿ ಎಸ್ ರೆಡ್ಡಿ ಜಂಟಿ ಹೇಳಿಕೆಗೆ ಸಹಿ ಮಾಡಿರುವ ಪ್ರಮುಖರು. ಆ ಪೈಕಿ ರೆಡ್ಡಿ ಅವರಂತೂ ಕೋವಿಡ್ 19 ಕ್ಕೆ ಸಂಬಂಧಿಸಿದ ಸರ್ಕಾರದ ಎಪಿಡೆಮಿಯೋಲಜಿ ಮತ್ತು ಸರ್ವೈಲನ್ಸ್ ಪಡೆಯ ಅಧ್ಯಕ್ಷರೂ ಆಗಿದ್ದಾರೆ. ಶಶಿ ಕಾಂತ್ ಅವರು ಇದೇ ಪಡೆಯ ಸದಸ್ಯರು ಕೂಡ!
ಭಾರತ ಸರ್ಕಾರ ಕೋವಿಡ್ ಸೋಂಕು ನಿಯಂತ್ರಣ ಕುರಿತ ಕಾರ್ಯತಂತ್ರ ರೂಪಿಸುವ ವಿಷಯದಲ್ಲಿ ತನ್ನ ಅಧಿಕಾರಿ ವರ್ಗದ ಮೇಲೆ ಅತಿಯಾಗಿ ಅವಲಂಬಿಸುವ ಬದಲು. ಸೋಂಕು ಹರಡುವಿಕೆಯ ವಿಷಯದಲ್ಲಿ ಮತ್ತು ಅದನ್ನು ತಡೆಯು ಮಾರ್ಗೋಪಾಯಗಳ ವಿಷಯದಲ್ಲಿ ತಳಮಟ್ಟದ ತಿಳಿವಳಿಕೆ ಹೊಂದಿದ್ದ ದೇಶದ ಸಾಂಕ್ರಾಮಿಕ ರೋಗ ತಜ್ಞರ ಸಲಹೆಗಳಿಗೆ ಕಿವಿಗೊಟ್ಟಿದ್ದರು, ಬಹುತೇಕ ಸಾವು-ನೋವುಗಳನ್ನು ತಡೆಯುವುದು ಸಾಧ್ಯವಿತ್ತು. ಲಾಕ್ ಡೌನ್ ನಿಂದಾದ ಜೀವನಷ್ಟ ಮತ್ತು ಆರ್ಥಿಕನಷ್ಟವನ್ನು ಕೂಡ ತಡೆಯುವ ಅವಕಾಶವಿತ್ತು ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. ಅಂದರೆ, ಪ್ರಧಾನಿ ಕಚೇರಿಯ(ಪಿಎಂಒ) ಮತ್ತು ಕೆಲವೇ ಕೆಲವು ಮಂದಿ ಅಧಿಕಾರಿಗಳ ವಿವೇಚನಾಹೀನ ನೀತಿ ಮತ್ತು ನಿರ್ಧಾರಗಳಿಗೆ ದೇಶ ಅಪಾರ ಬೆಲೆ ತೆರಬೇಕಾಗಿದೆ ಎಂಬುದನ್ನು ಈ ಜಂಟಿ ಹೇಳಿಕೆ ಪರೋಕ್ಷವಾಗಿ ಹೇಳಿದೆ.
ಹಾಗೆ ನೋಡಿದರೆ, ಸರ್ಕಾರ ಹೇಳುತ್ತಿರುವ ಸುಳ್ಳುಗಳನ್ನು, ಆತ್ಮವಂಚನೆಯ ಹೇಳಿಕೆಗಳನ್ನು ಬಯಲುಮಾಡುತ್ತಿರುವ ಇಂತಹ ಹೇಳಿಕೆಗಳು ಇದೇ ಮೊದಲೇನಲ್ಲ. ಎರಡು ವಾರಗಳ ಹಿಂದೆ ಸ್ವತಃ ಕೋವಿಡ್-19 ಕುರಿತ ಕಾರ್ಯತಂತ್ರಗಳ ಕುರಿತ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಡಾ ವಿ ಕೆ ಪೌಲ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಯ ಸದಸ್ಯರಾದ ವಿವಿಧ ಸಾಂಕ್ರಾಮಿಕ ರೋಗ ತಜ್ಞರೇ ಸರ್ಕಾರದ ಕಾರ್ಯತಂತ್ರಗಳು ವಿಫಲವಾಗಿವೆ. ಸರ್ಕಾರ ಸೋಂಕು ನಿಯಂತ್ರಣದ ಕಾರ್ಯತಂತ್ರದ ವಿಷಯದಲ್ಲಿ ಆಯಾ ಕ್ಷೇತ್ರದ ತಜ್ಞರ ಅಭಿಪ್ರಾಯ, ಸಲಹೆಗಳಿಗೆ ಕಿವಿಗೊಡುತ್ತಿಲ್ಲ. ಬದಲಾಗಿ ತನ್ನದೇ ಮೂಗಿನ ನೇರಕ್ಕೆ ವ್ಯವಹರಿಸುತ್ತಿದೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದರು.
ಈಗಲೂ ಈ ತಜ್ಞರ ಜಂಟಿ ಹೇಳಿಕೆ ಕೂಡ ಇದನ್ನೇ ಪುನರುಚ್ಚರಿಸಿದೆ. ಜೊತೆಗೆ ಲಾಕ್ ಡೌನ್ ಘೋಷಣೆಗೆ ಮುನ್ನ ವಲಸೆ ಕಾರ್ಮಿಕರು ತಮ್ಮ ತಮ್ಮ ಹಳ್ಳಿಗಳಿಗೆ ತಲುಪಲು ಕಾಲಾವಕಾಶ ನೀಡಿದ್ದರೆ ಸೋಂಕು ನಿಯಂತ್ರಣದ ವಿಷಯದಲ್ಲಿ ಮೋದಿಯವರು ಹೇಳಿದಂತೆ ಜಗತ್ತಿಗೇ ಮಾದರಿಯಾಗುವ ಅವಕಾಶ ದೇಶಕ್ಕಿತ್ತು. ಆದರೆ, ದೇಶದ ಅರ್ಧದಷ್ಟು ಜನರ ಬದುಕು ಹೇಗೆ ನಡೆಯುತ್ತದೆ? ಅವರ ನಿತ್ಯದ ಹೊಟ್ಟೆಬಟ್ಟೆಯ ಪರಿಸ್ಥಿತಿ ಏನು ಎಂಬ ಕನಿಷ್ಟ ಅರಿವು ಕೂಡ ಇಲ್ಲದೆ ತೆಗೆದುಕೊಂಡ ದಿಢೀರ್ ಲಾಕ್ ಡೌನ್ ನಿರ್ಧಾರ ಮತ್ತು ಆ ಬಳಿಕ ಸೋಂಕು ನಗರಗಳಲ್ಲಿ ವ್ಯಾಪಕವಾಗಿರುವಾಗ ವಲಸೆ ಕಾರ್ಮಿಕರನ್ನು ಹಳ್ಳಿಗಳಿಗೆ ಕಳಿಸಿದ್ದು ಅನಾಹುತಕಾರಿ ನಿರ್ಧಾರ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರವ್ಯಾಪಿ ಲಾಕ್ ಡೌನ್ ಬದಲಾಗಿ ರೋಗ ವ್ಯಾಪಕವಾಗಿರುವ ಕ್ಲಸ್ಟರ್ ವಾರು ಲಾಕ್ ಡೌನ್ ಅಥವಾ ಸೀಲ್ ಡೌನ್ ಕ್ರಮಗಳು ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ಅನಾಹುತಕಾರಿ ಎಂದು ಹೇಳಿರುವ ತಜ್ಞರು, ಮುಖ್ಯವಾಗಿ ಕೋವಿಡ್ 19ಕ್ಕೆ ಸಂಬಂಧಿಸಿದಂತೆ ವೈರಾಣು ಪರೀಕ್ಷೆ ಫಲಿತಾಂಶ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ಬಹಿರಂಗಪಡಿಸಬೇಕು. ಎಲ್ಲರಿಗೂ ಆ ಮಾಹಿತಿ ಲಭ್ಯವಿರಬೇಕು. ದೇಶದ ಆರೋಗ್ಯ ಸೇವೆಯನ್ನು ಉನ್ನತೀಕರಿಸಬೇಕು. ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕು ಮತ್ತು ವ್ಯಾಪಕ ಪರೀಕ್ಷೆ ನಡೆಸಬೇಕು. ಕರೋನಾ ವಿರುದ್ಧದ ಮುಂಚೂಣಿ ಸೇನಾನಿಗಳಿಗೆ ಅಗತ್ಯ ಪ್ರಮಾಣದ ಪಿಪಿಇಗಳನ್ನು ಒದಗಿಸಲು ಕ್ರಮವಹಿಸಬೇಕು ಎಂಬುದೂ ಸೇರಿದಂತೆ ಹನ್ನೊಂದು ಸಲಹೆಗಳನ್ನೂ ನೀಡಿದ್ದಾರೆ.

ಹಾಗೆ ನೋಡಿದರೆ, ಕರೋನಾ ವಿಷಯದಲ್ಲಿ ಕೂಡ ನೋಟು ರದ್ದತಿ, ಜಿಎಸ್ ಟಿ ಅನುಷ್ಟಾನದಂತಹ ದುಡುಕಿನ, ತಳಮಟ್ಟದ ಬದುಕಿನ ಬಗ್ಗೆ ಕಾಳಜಿ ಇಲ್ಲದ ವರಸೆ ಮುಂದುವರಿದಿದೆ. ಪಿಎಂಒದ ಏಕಪಕ್ಷೀಯ ನಿರ್ಧಾರಗಳು, ಪ್ರಧಾನಿ ಮೋದಿಯವರ ವ್ಯಕ್ತಿತ್ವ ಮತ್ತು ವರ್ಚಸ್ಸು ವೃದ್ಧಿಯ ಏಕೈಕ ಉದ್ದೇಶದ ಸರ್ಕಸ್ಸು ಕರೋನಾ ವಿಷಯದಲ್ಲಿಯೂ ಪುನರಾವರ್ತನೆಯಾಗಿದೆ ಎಂಬುದನ್ನು ಈ ಜಂಟಿ ಹೇಳಿಕೆ ಪರೋಕ್ಷವಾಗಿ ಸಾರಿದೆ! ದೇಶಕ್ಕಿಂತ ವ್ಯಕ್ತಿಮುಖ್ಯವಾದಾಗ, ಜನರಿಗಿಂತ ವ್ಯಕ್ತಿಯ ವರ್ಚಸ್ಸು ಮುಖ್ಯವಾಗುವುದು ಸಹಜ. ಈಗ ಕರೋನಾದ ಸಂಕಷ್ಟದ ಹೊತ್ತಲ್ಲೂ ಸತ್ಯವನ್ನು, ವಾಸ್ತವಾಂಶವನ್ನು ಜನರ ಮುಂದಿಡದೆ, ಈಗಲೂ ನಾವೇ ಗೆಲ್ಲುವುದು, ನಾವೇ ಜಗತ್ತಿಗೆ ಮಾದರಿ, ವಿಶ್ವಗುರು ಎಂದು ಜನರನ್ನು ದಿಕ್ಕುತಪ್ಪಿಸುತ್ತಿರುವುದು ಅಂತಹ ವ್ಯಕ್ತಿನಿಷ್ಠೆಯ, ವ್ಯಕ್ತಿಪೂಜೆಯ ಭಾಗವೇ ಆಗಿ ಕಂಡರೆ ಅತಿಶಯೋಕ್ತಿಯೇನಲ್ಲ!










