ಕೇರಳದಲ್ಲಿ ಭಾರೀ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಹಲವಾರು ಭೂಮಾರ್ಗ, ಸೇತುವೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ, ಅದೇ ವೇಳೆ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ್ದು, ಹಲವಾರು ಪ್ರದೇಶಗಳಲ್ಲಿ ಸರಾಗ ಸಂಚಾರಕ್ಕೆ ಅನಾನುಕೂಲ ಎದುರಾಗಿದೆ.
ಹಲವಾರು ಭೂಪ್ರದೇಶಗಳ ಸಂಚಾರ ಮಾರ್ಗಗಳು, ಸೇತುವೆಗಳು ಮುಖ್ಯ ಭೂಭಾಗದಿಂದ ಬೇರ್ಪಟ್ಟಿದ್ದು, ಅಲ್ಲಿನ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವ ಜವಾಬ್ದಾರಿಯನ್ನು ರಕ್ಷಣಾ ಬೋಟ್‌ಗಳು ವಹಿಸಿಕೊಂಡಿವೆ.
ಕೇರಳದಲ್ಲಿ ಕೋವಿಡ್ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ರಕ್ಷಣಾ ಬೋಟ್‌ಗಳನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿ ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಂತೆ ರಕ್ಷಣಾ ಬೋಟ್‌ಗಳು ಈಗ ರೋಗಿಗಳನ್ನು ಜಲಮಾರ್ಗದ ಮೂಲಕ ಆಸ್ಪತ್ರೆಗಳಿಗೆ ತಲುಪಿಸುವ ಪರ್ಯಾಯ ಆಂಬ್ಯುಲೆನ್ಸ್ ಆಗಿ ಬಳಸಲ್ಪಡುತ್ತಿದೆ.
ಸಾಧಾರಣವಾಗಿ, ಕೇರಳದಲ್ಲಿ ಒಳ ನಾಡು ಜಲಸಾರಿಗೆ ವ್ಯಾಪಕವಾಗಿದೆ. ನದಿ ಪ್ರದೇಶ ಹೇರಳವಾಗಿದೆ. ಇದು ಕೇರಳ ಪ್ರವಾಸೋದ್ಯಮದ ಬಹುಮುಖ್ಯ ಆಕರ್ಷಣೀಯ ಭಾಗವೂ ಹೌದು. ಆದರೆ ಈ ಪ್ರದೇಶಗಳಲ್ಲಿ ಅತಿವೃಷ್ಟಿ ಉಂಟಾದರೆ ಇಲ್ಲಿಯ ಜನರು ಬವಣೆ ಹೇಳತೀರದು.
ಮುಖ್ಯವಾಗಿ, ಪ್ರಮುಖ ಭೂಪ್ರದೇಶದಿಂದ ಬೇರ್ಪಟ್ಟಿರುವ ದ್ವೀಪದಂತಹ ಪ್ರದೇಶಗಳು ಬೋಟ್‌ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಭೂಮಾರ್ಗವಿಲ್ಲದ ಹಲವಾರು ಪ್ರದೇಶಗಳ ಕೋವಿಡ್ ಸೋಂಕಿತರಿಗೆ ಬೋಟ್ ಆಂಬ್ಯುಲೆನ್ಸ್ ಗಳು ನೆರವಾಗಿವೆ ಎಂದು ವಿಜಿಲೆನ್ಸ್ ವಿಂಗ್ ಅಧಿಕಾರಿ ಸಂತೋಷ್ ಕುಮಾರ್ ಎಎನ್‌ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಕರೋನಾ ಸೋಂಕು ಕೇರಳದಲ್ಲಿ ಕಾಣಿಸಿಕೊಂಡಿದ್ದರೂ, ತಮ್ಮ ಇಚ್ಛಾಶಕ್ತಿಯಿಂದ ಕರೋನಾ ಸೋಂಕನ್ನು ಸಮರ್ಥವಾಗಿ ಅಲ್ಲಿನ ಆಡಳಿತ ನಿರ್ವಹಿಸಿತ್ತು. ಅಲ್ಲದೆ, ಕೇರಳದ ಆರೋಗ್ಯ ಮಂತ್ರಿ ಕೆ ಕೆ ಶೈಲಜಾ ಅವರ ಕೋವಿಡ್ ನಿರ್ವಹಣೆ ವಿಶ್ವಾದ್ಯಂತ ಕೊಂಡಾಡಲ್ಪಟ್ಟಿದ್ದವು.