ಕರೋನಾ ಸೋಂಕಿಗೆ ಒಳಗಾಗಿದ್ದ ಸಿದ್ದರಾಮಯ್ಯ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು ಮತ್ತೆ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಮುಂದಿನ ವಾರ ಬಾದಾಮಿಗೆ ಭೇಟಿ ನೀಡಲಿದ್ದೇನೆ ಎಂದಿದ್ದಾರೆ. ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿರುದ್ಧ ನೇರ ಟ್ವೀಟ್ದಾಳಿ ನಡೆಸಿದ ಸಿದ್ದರಾಮಯ್ಯ, ರಾಜ್ಯಗಳ ಬಗ್ಗೆ ಕಾಳಜಿಯೇ ಇಲ್ಲದಿರುವ ಅತ್ಯಂತ ಕೆಟ್ಟ ಸರ್ಕಾರ ಕೇಂದ್ರದಲ್ಲಿದ್ದರೆ, ಅದನ್ನು ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರ್ಕಾರ ನಮ್ಮ ರಾಜ್ಯದಲ್ಲಿದೆ. ಈಗಾಗಲೇ ಬಿಜೆಪಿಯೇತರ ರಾಜ್ಯ ಸರ್ಕಾರಗಳು ಕೇಂದ್ರವು ಜಿಎಸ್‌ಟಿ ಪರಿಹಾರ ನೀಡದಿರುವ ನಿರ್ಧಾರವನ್ನು ವಿರೋಧ ಮಾಡಿವೆ. ರಾಜ್ಯ ಸರ್ಕಾರಕ್ಕೆ ಧೈರ್ಯವಿದ್ದರೆ ನೀವೇ ಸಾಲ ತೆಗೆದುಕೊಂಡು ನಮಗೆ ಜಿ.ಎಸ್.ಟಿ ಪರಿಹಾರ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಲಿ ಮತ್ತು ಸರ್ವ ಪಕ್ಷ ನಿಯೋಗ ಕೊಂಡೊಯ್ದು ಕೇಂದ್ರದ ಮೇಲೆ ಒತ್ತಡ ಹೇರಲಿ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಈಗ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವರ್ಷವೂ ಪ್ರವಾಹ ಬಂದಿದ್ದು 56 ತಾಲೂಕುಗಳ 1000 ಹಳ್ಳಿಗಳು ಪ್ರವಾಹದಿಂದ ಬಾಧಿಸಲ್ಪಟ್ಟಿದೆ. ಸುಮಾರು 1 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ, ಸಾವಿರಾರು ಮನೆಗಳು ಕುಸಿದುಬಿದ್ದಿವೆ, ಜಾನುವಾರುಗಳು ಸಾವಿಗೀಡಾಗಿವೆ. ರಾಜ್ಯ ಸರ್ಕಾರವೇ ಸುಮಾರು ರೂ.4 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ ಎಂದಿದೆ.ಕಳೆದ ಬಾರಿಯ ಪ್ರವಾಹ ಪರಿಹಾರ ಧನವನ್ನೇ ಕೇಂದ್ರ ಸರ್ಕಾರ ಸರಿಯಾಗಿ ಕೊಟ್ಟಿಲ್ಲ. ರೂ.35,000 ಕೋಟಿ ಪರಿಹಾರ ಕೇಳಿದ್ದರೆ ಬರೀ ರೂ.1800 ಕೋಟಿ ಪರಿಹಾರ ಮಾತ್ರ ಕೇಂದ್ರದಿಂದ ಬಂದಿದೆ. ಇನ್ನೂ ಹಲವೆಡೆ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಟ್ಟಿಲ್ಲ, ಹಳ್ಳಿಗಳ ಸ್ಥಳಾಂತರವಾಗಿಲ್ಲ, ಶಾಲೆಗಳ ಪುನರ್ ನಿರ್ಮಾಣ ಕಾರ್ಯವೂ ಆಗಿಲ್ಲ.
ಯಡಿಯೂರಪ್ಪನವರು ಹೆಲಿಕಾಪ್ಟರ್ ಮೂಲಕ ಸರ್ವೇ ಮಾಡಿದರು, ಆದರೆ ಸರ್ಕಾರದ ಬೇರೆ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಜನರ ಬಳಿಗೆ ಹೋಗಿ ಅವರ ಕಷ್ಟ ಆಲಿಸಬೇಕೋ ಬೇಡವೋ? ಸಚಿವರಾದ ಅಶೋಕ್ ಅವರು ಕೇಂದ್ರದಿಂದ ಪರಿಹಾರ ಕೇಳಿದ್ದೇವೆ, ಅವರ ತಂಡ ಬಂದು ಸರ್ವೇ ಮಾಡಿ ಪರಿಹಾರ ನೀಡುತ್ತದೆ ಎನ್ನುತ್ತಾರೆ, ಆದರೆ ಅಧಿಕಾರಿಗಳು ಹೇಳುವ ಮಾತೇ ಬೇರೆ.
ಕೇಂದ್ರದ ವಿತ್ತ ಸಚಿವರನ್ನು ಭೇಟಿ ಮಾಡಿ ಮನವಿ ಕೊಟ್ಟು, ಪ್ರಧಾನಿಗಳ ಮನವೊಲಿಸಿ ಪರಿಹಾರ ಸಿಗುವವರೆಗೂ ಪಟ್ಟು ಬಿಡಬಾರದು. ನಮ್ಮ ಸರ್ಕಾರವಿದ್ದಾಗ ಪದೇ ಪದೇ ಪ್ರಧಾನಿಗಳನ್ನು ಭೇಟಿ ಮಾಡಿ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದೆವು, ಆದರೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಗಳನ್ನು ಭೇಟಿ ಮಾಡೋಕೇ ಹೆದರುತ್ತಾರೆ. ಇದೊಂದು ಮಹಾ ಪುಕ್ಕಲು ಸರ್ಕಾರ ಎಂದು ಬಿ ಯಸ್ ಯಡಿಯೂರಪ್ಪ ಸರ್ಕಾರವನ್ನು ಕಠಿಣವಾಗಿ ವಿಮರ್ಷಿಸಿದ್ದಾರೆ.