ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಢ ಹಾಗೂ ರಾಜಸ್ತಾನವಸರ್ಕಾರಗಳು ಕೇಂದ್ರ ಸರ್ಕಾರ ತಂದಿರುವ ನೂತನ ಕೃಷಿ ಸಂಬಂಧಿತ ಮಸೂದೆಗಳನ್ನು ಎದುರಿಸಲು ರಾಜ್ಯ ಮಟ್ಟದಲ್ಲಿ ಹೊಸ ಕಾನೂನುಗಳನ್ನು ಅಂಗೀಕರಿಸಲು ತಯಾರಾಗಿವೆ.
ಕಾಂಗ್ರೆಸ್ ಆಡಳಿತವಿರುವ ಪಂಜಾಬಿನಲ್ಲಿ ಈಗಾಗಲೇ ಇಂತಹ ಕಾನೂನುಗಳನ್ನು ಎದುರಿಸುವ ಹೊಸ ಮಸೂದೆಯನ್ನು ಅಂಗೀಕರಿಸಿದೆ. ಕೇಂದ್ರ ಸರ್ಕಾರ ತಂದಿರುವ ಕೃಷಿ ಸಂಬಂಧಿತ ಮೂರು ಕಾನೂನುಗಳನ್ನು ದೇಶವ್ಯಾಪಿ ರೈತರು ವಿರೋಧಿಸಿದ್ದರು. ಮುಖ್ಯವಾಗಿ ಹರ್ಯಾಣ, ಪಂಜಾಬ್ ಪ್ರಾಂತ್ಯದಲ್ಲಿ ತೀವ್ರತರವಾದ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಎದುರಿಸಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೊಸ ಕಾನೂನನ್ನು ಅಂಗೀಕರಿಸಲು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್, ಅಕ್ಟೋಬರ್ 27 ಮತ್ತ 28 ರಂದು ವಿಶೇಷ ವಿಧಾನ ಸಭೆಯನ್ನು ಕರೆಯಲು ಪ್ರಸ್ತಾವಣೆ ಸಲ್ಲಿಸಿದ್ದಾರೆ.
ರಾಜ್ಯ ಶಾಸಕಾಂಗ ಸಭೆಯ ವಿಶೇಷ ಅಧಿವೇಶನ ನಡೆಸಲು ಅವಕಾಶ ನೀಡುವಂತೆ ಭೂಪೇಶ್ ಬಾಗೆಲ್ ಸರ್ಕಾರ ಈಗಾಗಲೇ ರಾಜ್ಯಪಾಲ ಅನುಸೂಯಾ ಉಕೈ ಅವರನ್ನು ಕೋರಿದೆ. ಆದರೆ, ಸರ್ಕಾರದ ಪ್ರಸ್ತಾವನೆಯನ್ನು ರಾಜ್ಯಪಾಲರು ಹಿಂದಕ್ಕೆ ಕಳುಹಿಸಿದ್ದಾರೆ, ವಿಧಾನಸಭೆಯ ಮುಂಗಾರು ಅಧಿವೇಶನ ಮುಗಿದು ಕೇವಲ 58 ದಿನಗಳು ಕಳೆದಿವೆ ಎಂದು ಸೂಚಿಸಿದ ರಾಜ್ಯಪಾಲರು ಮತ್ತೊಂದು ಅಸೆಂಬ್ಲಿ ಅಧಿವೇಶನ ನಡೆಸಲು ಪ್ರಬಲ ಕಾರಣಗಳನ್ನು ಕೇಳಿದ್ದಾರೆ.
Also Read: ಕೃಷಿ ಮಸೂದೆ ವಿರೋಧಿ ರೈತರ ಆಕ್ರೋಶದ ಹಿಂದಿನ ಸಂದೇಶಗಳೇನು?
ರಾಜ್ಯಪಾಲರ ಕ್ರಮಕ್ಕೆ ಬಾಗೆಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಪೂರ್ಣ ಬಹುಮತ ಹೊಂದಿರುವ ಸರ್ಕಾರವನ್ನು ವಿಧಾನಸಭೆ ಅಧಿವೇಶನ ನಡೆಸದಂತೆ ತಡೆಯಲು ರಾಜ್ಯಪಾಲರಿಗೆ ಸಾಧ್ಯವಿಲ್ಲ ಎಂದು ಬಾಗೆಲ್ ಹೇಳಿದ್ದಾರೆ.
ವಿಧಾನಸಭೆಯನ್ನು ಕರೆಯಲು ಬಹುಮತವನ್ನು ಹೊಂದಿರುವ ಚುನಾಯಿತ ಸರ್ಕಾರವು ಕೋರಿದ ದಿನಾಂಕಗಳಲ್ಲಿ ರಾಜ್ಯಪಾಲರು ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ಛತ್ತೀಸ್‌ಗಡ ಕೃಷಿ ಮಂತ್ರಿ ರವೀಂದ್ರ ಚೌಬೆ ಹೇಳಿದ್ದಾರೆ.
ಮತ್ತೊಂದೆಡೆ, ಎನ್‌ಡಿಎ ಸರ್ಕಾರ ಅಂಗೀಕರಿಸಿದ “ರೈತ ವಿರೋಧಿ” ಕಾನೂನುಗಳನ್ನು ವಿರೋಧಿಸಲು ಶೀಘ್ರದಲ್ಲೇ ವಿಧಾನಸಭೆ ಅಧಿವೇಶನ ನಡೆಸಲಾಗುವುದು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪಷ್ಟವಾಗಿ ಹೇಳಿದ್ದಾರೆ.
ಕಾಂಗ್ರೆಸ್ ರೈತರೊಂದಿಗೆ ಧೃಢ ನಿಶ್ಚಯದಿಂದ ನಿಲ್ಲಲಿದ್ದು, ನೂತನ ಕೃಷಿ ಮಸೂದೆಯ ತಿದ್ದುಪಡಿಯನ್ನು ವಿರೋಧಿಸಲಿದೆ. ಪಂಜಾಬ್ ಸರ್ಕಾರದಂತೆ ರಾಜಸ್ತಾನ ಸರ್ಕಾರವೂ ನೂತನ ಕೃಷಿ ಸಂಬಂಧಿತ ಮಸೂದೆಗಳನ್ನು ಎದುರಿಸಲು ರಾಜ್ಯ ಮಟ್ಟದಲ್ಲಿ ಹೊಸ ಕಾನೂನುಗಳನ್ನು ತರಲಿದೆ ಎಂದು ಭರವಸೆ ನೀಡಿದ್ದಾರೆ.
ಕೇಂದ್ರ ತಂದಿರುವ ಕಾನೂನುಗಳನ್ನು ರಾಜ್ಯಗಳು ಮೀರಬಹುದೇ?
ಸಂವಿಧಾನದ 254 (2) ನೇ ವಿಧಿ ಅನ್ವಯ, ಏಳನೇ ವೇಳಾಪಟ್ಟಿಯ ಏಕಕಾಲೀನ ಪಟ್ಟಿಯಡಿಯಲ್ಲಿ ಸೇರ್ಪಡೆಗೊಂಡಿರುವ ಕೇಂದ್ರ ಶಾಸನಗಳಲ್ಲಿ ಬದಲಾವಣೆಗಳನ್ನು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಕೃಷಿ, ಶಿಕ್ಷಣ ಮತ್ತು ಸಂಶೋಧನೆ, ಜಾನುವಾರು, ಮೀನುಗಾರಿಕೆ ಮತ್ತು ನೀರಾವರಿ ರಾಜ್ಯ ಪಟ್ಟಿಯಲ್ಲಿವೆ.
Also Read: ಕೃಷಿ ಮಸೂದೆ ತಿದ್ದುಪಡಿಯನ್ನು ತನ್ನ ಆಡಳಿತವಿರುವ ರಾಜ್ಯಗಳಲ್ಲಿ ತಡೆಯಲು ಕಾಂಗ್ರೆಸ್ ಯೋಜನೆ
ಕೇಂದ್ರ ಶಾಸನವನ್ನು ಎದುರಿಸಿ ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳನ್ನು ಕಾನೂನುಗಳಾಗಿ ಜಾರಿಗೆ ತರಲು ರಾಷ್ಟ್ರಪತಿಗಳ ಒಪ್ಪಿಗೆಯ ಅಗತ್ಯವಿದೆಯಾದರೂ, ಕಾಂಗ್ರೆಸ್ ಸರ್ಕಾರಗಳು ಕೃಷಿ ಮಸೂದೆಯ ವಿರುದ್ಧದ ಪ್ರತಿರೋಧದಲ್ಲಿ ಇನ್ನೂ ಅತ್ಯುತ್ತಮ ಹೆಜ್ಜೆಯನ್ನು ಮುಂದಿಡಲು ಬಯಸಿವೆ. ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ದಂಗೆಯ ಬಾವುಟ ಎತ್ತಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅನುಮೋದನೆಯನ್ನು ಪಡೆಯದಿದ್ದರೂ, ಕೃಷಿ ಕಾನೂನುಗಳನ್ನು ವಿರೋಧಿಸುವ ಮೂಲಕ ಪಕ್ಷವು ಬಲವಾದ ರಾಜಕೀಯ ಹೇಳಿಕೆಯನ್ನು ದಾಖಲಿಸಲು ಯಶಸ್ವಿಯಾಗುತ್ತದೆ.
ಕಳೆದ ತಿಂಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪಕ್ಷದ ಆಡಳಿತದ ರಾಜ್ಯಗಳಿಗೆ ಕೇಂದ್ರ ಕಾನೂನುಗಳ ನಿಬಂಧನೆಗಳನ್ನು “ನಿರಾಕರಿಸುವ” ಆದೇಶ ನೀಡಿದ ಹಿನ್ನೆಲೆಯಲ್ಲಿ ಇದು ಬಂದಿದೆ.