ದೇಶದಲ್ಲಿರುವ ರೈತರ ಉತ್ಪಾದನೆಗೆ ಪೂರಕವಾದ ಯೋಜನೆಗಳು ಅಥವಾ ಬಜೆಟ್ ಮಂಡನೆಯಾಗುತ್ತಿದೆಯೇ ಅನ್ನೋ ಪ್ರಶ್ನೆ ಸಹಜವಾದುದು. ಏಕೆಂದರೆ ದೇಶದಲ್ಲಿ ಪ್ರತಿವರುಷ ಸಾವಿರಾರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೃಷಿಯೇ ನಮ್ಮ ದೇಶದ ಬೆನ್ನುಲುಬು ಅನ್ನೋ ರಾಜಕಾರಣಿಗಳು ರೈತರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿದ್ದೇ ಕಡಿಮೆ. ಅದರಲ್ಲೂ ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗಳಿಗೆ ಕೇಂದ್ರ ಸರಕಾರ ಬಜೆಟ್ ವಿಚಾರದಲ್ಲಿ ಮಾತ್ರ ಚೌಕಾಸಿ ತೋರಿಸುತ್ತಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ರೈತರಿಗೆ ಕೃಷಿ ಮೇಲಿನ ಸಾಲದಲ್ಲಿ ಸಬ್ಸಿಡಿ ನೀಡುವಂತೆ ಕೇಳಿಕೊಂಡಿತ್ತು. ಆದರೆ ಕೇಂದ್ರ ಸರಕಾರ ಇದನ್ನು ಕಿವಿಗೆ ಹಾಕಿಕೊಂಡಿಲ್ಲ. ಬಜೆಟ್‌ನಲ್ಲಿ ತಕ್ಕುದಾದ ನ್ಯಾಯವನ್ನು ನೀಡಿಲ್ಲ. ಪ್ರತಿ ಭಾಷಣದಲ್ಲೂ ರೈತರಿಗೆ ನ್ಯಾಯಯುತ ಬೆಲೆ ನೀಡುತ್ತಿದ್ದೇವೆ ಎನ್ನುವ ಪ್ರಧಾನ ಮಂತ್ರಿಯಾಗಲೀ, ಕೃಷಿ ಹಾಗೂ ವಿತ್ತ ಸಚಿವಾಲಯಗಳು ಹಲವು ವಿಚಾರದಲ್ಲಿ ರೈತನನ್ನು ವಂಚಿಸುತ್ತಿದೆ.
ಕೃಷಿ ಸಚಿವಾಲಯವು ಕೃಷಿ ಯೋಜನೆಗಳಿಗೆ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಮತ್ತು ಬೆಂಬಲ ಬೆಲೆ ವ್ಯವಸ್ಥೆ (ಎಂಐಎಸ್-ಪಿಎಸ್‌ಎಸ್)ಗೆ 2020-21 ನೇ ಅವಧಿ ಬಜೆಟ್‌ನಲ್ಲಿ 14,337 ಕೋಟಿ ರೂಪಾಯಿ ನೀಡುವಂತೆ ಕೇಳಿಕೊಂಡಿತ್ತು. ಆದರೆ ಹಣಕಾಸು ಸಚಿವಾಲಯ MIS-PSS ಹಾಗೂ PM-AASHA ಅಡಿ 2020-21 ಅವಧಿಗೆ ಅನುಗುಣವಾಗಿ 2000 ಕೋಟಿ ಹಾಗೂ 500 ಕೋಟಿ ರೂಪಾಯಿಯನ್ನಷ್ಟೇ ನೀಡಿದೆ. ಆದರೆ ಈ ಅನುದಾನ ಕಳೆದ ಬಾರಿಗಿಂತ ಕಡಿಮೆ ಮೊತ್ತ ಅನ್ನೋದನ್ನು ಗಮನಿಸಬೇಕಾಗುತ್ತದೆ. ಕಳೆದ 2019-20 ರ ಬಜೆಟ್‌ನಲ್ಲಿ ಇದೇ ಯೋಜನೆಯಡಿ 3000 ಕೋಟಿ ರೂಪಾಯಿ ಹಾಗೂ 1500 ಕೋಟಿ ರೂಪಾಯಿಗಳನ್ನ ನೀಡಿತ್ತು.
ಇನ್ನು ಆಶ್ಚರ್ಯ ಅಂದ್ರೆ ಕಳೆದ ಬಾರಿಯ ಬಜೆಟ್‌ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಇರಿಸಲಾಗಿದ್ದ 75 ಸಾವಿರ ಕೋಟಿ ಅನುದಾನದಲ್ಲಿ ಹಂಚಿಕೆಯಾಗದೆ ಉಳಿದ ಸಾವಿರಾರು ಕೋಟಿ ರೂಪಾಯಿಗಳು ಕೇಂದ್ರ ಹಣಕಾಸು ಸಚಿವಾಲಯದಲ್ಲೇ ಇದ್ದವು. ಇದನ್ನು ಇತರೆ ಯೋಜನೆಗಳಿಗೆ ವರ್ಗಾಯಿಸುವಂತೆ ಕೃಷಿ ಸಚಿವಾಲಯ ಕೇಳಿಕೊಂಡಿತ್ತಾದರೂ ಅದನ್ನ ಹಣಕಾಸು ಸಚಿವಾಲಯ ತಿರಸ್ಕರಿಸಿತ್ತು.
ಅಲ್ಲದೇ ಇದೇ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವಾಲಯವು ಈ ಬಾರಿಯ ಬಜೆಟ್‌ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಅನುದಾನವನ್ನು 60,180 ಕೋಟಿ ರೂಪಾಯಿಗೆ ಇಳಿಸುವಂತೆ ಕೇಳಿಕೊಂಡಿತ್ತು. ಆದರೆ ಈ ಬೇಡಿಕೆಯನ್ನೂ ಹಣಕಾಸು ಸಚಿವಾಲಯ ತಿರಸ್ಕರಿಸಿ ಈ ಬಾರಿ ಮತ್ತೆ ಕಳೆದ ಬಾರಿ ಇರಿಸಿದಂತೆ 75 ಸಾವಿರ ಕೋಟಿಯನ್ನೇ ನಿಗದಿಪಡಿಸಿದೆ. ಈ ರೀತಿಯ ಹಣಕಾಸುವಿನ ವಿನಿಯೋಗದ ವಿಚಾರದಲ್ಲೂ ಕೇಂದ್ರ ಸರಕಾರ ಎಡವುತ್ತಿರುವುದು ಸ್ಪಷ್ಟ. ಕಾರಣ, ಇದುವರೆಗೂ ದೇಶದಲ್ಲಿ ಎಷ್ಟು ಮಂದಿ ಕೃಷಿಕರು, ರೈತರು ಇದ್ದಾರೆ ಅನ್ನೋ ಸ್ಪಷ್ಟ ಲೆಕ್ಕಾಚಾರಗಳೇ ಸರಕಾರದ ಬಳಿಯಿದ್ದಂತಿಲ್ಲ. ಆದರೆ ಈ ಯೋಜನೆಯಡಿ ವಾರ್ಷಿಕ ಮೂರು ಕಂತಗಳಲ್ಲಿ ರೈತರು ಒಟ್ಟು 6 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ.
ಇನ್ನು ಕೃಷಿ ಸಚಿವಾಲಯದ ಹಿರಿಯ ಅಂಕಿಅಂಶ ಅಧಿಕಾರಿಯೊಬ್ಬರು ಕೃಷಿ ಯೋಜನೆಗಳಿಗೆ ಸಂಬಂಧಿಸಿ 1,55,325 ಕೋಟಿ ರೂಪಾಯಿ ಹಣಕಾಸು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಅದನ್ನೂ ಪರಿಗಣಿಸದೇ ಕಡಿಮೆ ಬಜೆಟ್ ಮಂಡಿಸಲಾಗಿದ್ದು ಗಮನಾರ್ಹ. ಇನ್ನೋರ್ವ ಕೃಷಿ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಅಗರ್‌ವಾಲ್ ಕೂಡಾ MIS-PSS ಅಡಿ ಸಬ್ಸಿಡಿಗೆ ಬೇಕಾಗಿ ಹೆಚ್ಚುವರಿ ಹಣ ಹಾಗೂ ಬಜೆಟ್‌ನಲ್ಲಿ ವಿನಿಯೋಗವಾಗದೆ ಇರುವ ಹೆಚ್ಚುವರಿ ಹಣವನ್ನು ಇದಕ್ಕಾಗಿ ನೀಡುವಂತೆ ತಿಳಿಸಿದ್ದರು.
ಇನ್ನು PM-AASHA ಯೋಜನೆ ಕಥೆಯೂ ಅಷ್ಟೇ. 2019-20 ಸಾಲಿನ ಬಜೆಟ್‌ನಲ್ಲಿ ಇರಿಸಲಾಗಿದ್ದ ಅನುದಾನವು ಮೊದಲ ಆರು ತಿಂಗಳಲ್ಲಿ ಒಂದು ಪೈಸೆ ಖರ್ಚಾಗಿರಲಿಲ್ಲ. ಅದಲ್ಲದೇ ಕೃಷಿ ಸಚಿವಾಲಯದ 2018-19 ರ ಅಂಕಿ ಅಂಶ ಪ್ರಕಾರ ಆ ವರುಷದಲ್ಲಿ ದೇಶದಲ್ಲಿ ಬೆಳೆಯಲಾಗಿದ್ದ ಒಟ್ಟು ದ್ವಿದಳ ಧಾನ್ಯಗಳ ಒಟ್ಟು ಉತ್ಪಾದನೆ 220.80 ಲಕ್ಷ ಟನ್. ಹಾಗೂ ಎಣ್ಣೆಕಾಳುಗಳ ಉತ್ಪಾದನೆ 315.22 ಲಕ್ಷ ಟನ್. ಆದರೆ ಸರಕಾರ ಬೆಂಬಲ ಬೆಲೆ ಯೋಜನೆ (ಪಿಎಸ್‌ಎಸ್)ಯಡಿ ಖರೀದಿಸಿದ್ದು ಕೇವಲ 37.33 ಲಕ್ಷ ಟನ್‌ಗಳಷ್ಟೇ. ಇದು ಇವರು ಬೆಳೆದಿರುವ ಒಟ್ಟು ಉತ್ಪಾದನೆಗೆ ಹೋಲಿಸಿದ್ದಲ್ಲಿ ಕೇವಲ ಶೇಕಡಾ 7.4 ಅಷ್ಟೇ.
ಆದ್ದರಿಂದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (CACP)ವು ಖಾರಿಫ್ ಹಾಗೂ ರಾಬಿ ಬೆಳೆಗೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಹೆಚ್ಚಿಸುವಂತೆ ಕೇಳಿಕೊಂಡಿದೆ. ಅಲ್ಲದೇ ವಿಶೇಷವಾಗಿ ರೈತರಿಗೆ ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶದಲ್ಲೂ ಖರೀದಿ ಕೇಂದ್ರ ತೆರೆಯಬೇಕೆನ್ನುವುದು ಅದರ ಬೇಡಿಕೆ ಕೂಡಾ. ಹಾಗಿದ್ದಲ್ಲಿ ಮಾತ್ರ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತಾದೀತು ಅನ್ನೋದು ಸ್ಪಷ್ಟ.
ದೇಶದ ಅರ್ಧದಷ್ಟು ಜನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. 2016 ರ ವರದಿ ಅನ್ವಯ ದೇಶದ ಜಿಡಿಪಿ ಹೆಚ್ಚಳಕ್ಕೆ ಸರಿಸುಮಾರು ಶೇಕಡಾ 17 ರಷ್ಟು ರೈತರ ಕೃಷಿ ಚಟುವಟಿಕೆಯೂ ಕಾರಣವಾಗಿದೆ. ಆದ್ದರಿಂದ ಕೇಂದ್ರವಾಗಲೀ, ರಾಜ್ಯ ಸರಕಾರವಾಗಲೀ ಕೃಷಿ ಮೇಲಿನ ಬಜೆಟ್‌ಗೆ ನಿರಾಸಕ್ತಿ ತೋರಿ ಕೈಗಾರಿಕೆಗಳತ್ತ ಮುಖ ಮಾಡುತ್ತಿರುವುದು ವಿಷಾದದ ಸಂಗತಿ.
ಕೃಪೆ : ದಿ ವೈರ್