ಕೋವಿಡ್‌ನಂತಹ ಸಂಕಷ್ಟದ ಸ್ಥಿತಿಯಲ್ಲೂ, ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ 70ಕ್ಕೂ ಹೆಚ್ಚು ದಲಿತರು ಕಳೆದ ಎರಡು ತಿಂಗಳಿಂದ ಧರಣಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಗ್ರಾಚೋನ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಳುಮೆಗೆ ಗೇಣಿ ರೂಪದಲ್ಲಿ ಭೂಮಿಯನ್ನು ನೀಡಲು ಒತ್ತಾಯಿಸಿ ಈ ಧರಣಿ ನಡೆಯುತ್ತಿದೆ.
ಸಂಗ್ರೂರ್ ಜಿಲ್ಲೆಯಲ್ಲಿ ಸುಮಾರು 48 ಎಕರೆಗಳಷ್ಟು ಭೂಮಿ ದಲಿತರಿಗೆ ಗೇಣಿ ನೀಡಲು ಮೀಸಲಿಟ್ಟಿದ್ದು, ಇದನ್ನು ಬೇರೆಯವರಿಗೆ ನೀಡಿ ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ. 170ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಜೀವನಾಧಾರವಾಗಿದ್ದ ಈ ಭೂಮಿ ಈಗ ಬೇರೆಯವರ ಪಾಲಾಗಿರುವುದು ಅವರ ಕುಟುಂಬಗಳು ಬೀದಿಗೆ ಬರುವಂತಾಗಿದೆ.
ಈಗ ಝಮೀನ್ ಪ್ರಾಪ್ತಿ ಸಂಘರ್ಷ ಸಮಿತಿ ಎಂಬ ಸಂಘವನ್ನು ಕಟ್ಟಿಕೊಂಡು ಮೇ 20ರಿಂದ ಧರಣಿಯನ್ನು ಆರಂಭಿಸಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಕಳೆದ ವರ್ಷ ದಲಿತರಿಗೆ ಮೀಸಲಾಗಿದ್ದ ಭೂಮಿಯನ್ನು ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರು ಅರ್ಹರಲ್ಲದ 5 ಕುಟುಂಬಗಳಿಗೆ ಗೇಣಿ ರೂಪದಲ್ಲಿ ನೀಡಿದ್ದಾರೆ. ಒಟ್ಟು 48 ಎಕರೆ ಭೂಮಿಯಲ್ಲಿ 18 ಎಕರೆ ಭೂಮಿಗೆ ಪ್ರತೀ ಎಕರೆಗೆ ರೂ. 20000ದಂತೆ ಹಾಗೂ ಉಳಿದ 30 ಎಕರೆಗೆ ರೂ. 55000ದಂತೆ ಹರಾಜು ಮೊತ್ತವನ್ನು ಪಾವತಿಸಬೇಕು. ಈಗ ಗೇಣಿ ಪಡೆದಿರುವ 5 ಕುಟುಂಬಗಳು ಯಾವ ರೀತಿ ಅಷ್ಟು ಮೊತ್ತವನ್ನು ಪಾವತಿಸಿದರು ಎಂದು ತಿಳಿಯುತ್ತಿಲ್ಲ,” ಎಂದು ಝಮೀನ್ ಪ್ರಾಪ್ತಿ ಸಂಘರ್ಷ ಸಮಿತಿಯ ಅಧ್ಯಕ್ಷರಾಗಿರುವ ಗುರ್ಮುಖ್ ಸಿಂಗ್ ಹೇಳಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸಂಗ್ರೂರ್ ಜಿಲ್ಲೆಯ ಜಿಲ್ಲಾಧಿಕಾರಿ ರಾಮ್‌ವೀರ್, ಧರಣಿ ನಿರತರೊಡನೆ ಮಾತುಕತೆ ನಡೆಸುತ್ತಿದ್ದೇವೆ. ಅಲ್ಲಿನ ದಲಿತರಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪು ನಿಯಮದ ಪ್ರಕಾರ ಗೇಣಿ ಪಡೆದುಕೊಂಡಿದೆ. ಇನ್ನೊಂದು ಗುಂಪು ಇದರಲ್ಲಿ ಮೋಸವಿದೆ ಎಂದು ಆರೋಪಿಸುತ್ತಿದೆ. ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆದಿದೆ. ಅವರು ಧರಣಿಗೆ ಕುಳಿತಿರುವ ವಿಚಾರ ನಮಗೆ ತಿಳಿದಿದೆ. ಮಾತುಕತೆಯ ಮೂಲಕ ಈ ವಿಚಾರವನ್ನು ಬಗೆಹರಿಸಲು ಪ್ರಯತ್ನ ಪಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಕೋವಿಡ್ ಶಿಷ್ಟಾಚಾರವನ್ನು ಪಾಲಿಸದಿದ್ದ ಕಾರಣಕ್ಕೆ ಗುರ್ಮುಖ್ ಸಿಂಗ್, ಇತರ ದಲಿತ ನಾಯಕರು ಸೇರಿದಂತೆ 60 ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.