ಕೃಷಿ ಪ್ರಧಾನ ರಾಷ್ಟ್ರ ಭಾರತದಲ್ಲಿ ಸ್ವಾತಂತ್ರೋತ್ತರ ಕ್ರಾಂತಿಗಳು ಬೆಳೆ ಸಂವರ್ಧನೆ, ಆದಾಯ ವೃದ್ಧಿಯ ಮೇಲೆ ಕೇಂದ್ರಿಕೃತವಾಗಿದ್ದವು, ಈ ಭರಾಟೆಯಲ್ಲಿ ಕೀಟನಾಶಕ, ರಸಗೊಬ್ಬರಗಳ ಮಿತಿಮೀರಿದ ಬಳಕೆಯಿಂದ ದೀರ್ಘಕಾಲದ ಪರಿಣಾಮಗಳನ್ನ ಕೃಷಿ ಭೂಮಿ ಎದುರಿಸುತ್ತಿದೆ, ದೀರ್ಘಕಾಲದ ಬೆಳೆಗಳಿಗೆ ಭಾಧಿಸುವ ರೋಗಗಳು ಹತೋಟಿಗೆ ಬರುತ್ತಿಲ್ಲ, ಜನಸಂಖ್ಯೆ ಹಿರಿದಾದಂತೆ ತುಂಡು ಭೂಮಿಯ ಬೆಳೆಗಳು ಸುಧಾರಿಸದೇ ಉಳಿದಿದೆ, ಕೃಷಿ ತಂತ್ರಜ್ಞರು, ವಿಜ್ಞಾನಿಗಳು, ಬೋಧಕರು, ಸಂಶೋಧಕರೆಲ್ಲಾ ಎಲ್ಲಿ ಹೋದರು, ಏನು ಮಾಡುತ್ತಿದ್ದಾರೆ, ಆ ತರಹದ ಒಂದಿಷ್ಟು ವರ್ಗಗಳು ಇವೆಯಾ..? ಆಯವ್ಯಯ ಪಟ್ಟಿಯಲ್ಲಿ ಸಿಂಹಪಾಲು ಘೋಷಿಸಿಕೊಳ್ಳುವ ಕೃಷಿಗೆ ಸಿಕ್ಕ ಅನುದಾನಗಳೆಲ್ಲಿ ಹೋಯ್ತು, ಅಷ್ಟೆಲ್ಲಾ ಇರಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದ ಬಿಎಸ್ ಯಡಿಯೂರಪ್ಪನವರು ಪ್ರಗತಿ ಸಾಧಿಸಿದ್ದರಾ..? ಸಾಧ್ಯವೇ ಇಲ್ಲ ಅದಕ್ಕೊಂದು ನಿದರ್ಶನ ಹಲವು ದಶಕಗಳಿಂದ ದಿನದೂಡಿಕೊಂಡು ಬರುತ್ತಿರುವ ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕ ವಿಶ್ವ ವಿದ್ಯಾಲಯ. ಈಗದು ವಿಶ್ವವಿದ್ಯಾಲಯ ಹಾಗೂ ಇನ್ನೊಂದು ದುರಂತ ಅದನ್ನ ತನ್ನ ಪರಿಮಿತಿಯಲ್ಲಿಟ್ಟುಕೊಂಡು ವಿಶ್ವವಿದ್ಯಾಲಯದ ಮೂಲ ಕೇಂದ್ರವಾಗುತ್ತಿರುವ ಸಾಗರದ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯ.
ಎಪ್ಪತ್ತರ ದಶಕದಲ್ಲಿ ತಂಬಾಕು ಸಂಶೋಧನಾ ಕೇಂದ್ರವಾಗಿದ್ದ ಜಾಗದಲ್ಲಿ 1990ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪನವರ ದೂರದೃಷ್ಟಿ ಹಾಗೂ ರೈತಪರ ಕಾಳಜಿಯಿಂದ ಕೃಷಿ ಮಹಾವಿದ್ಯಾಲಯ ಶಿವಮೊಗ್ಗದ ನವುಲೆಯಲ್ಲಿ ಆರಂಭವಾಯಿತು. ನಂತರ ಮತ್ತೊಬ್ಬ ರೈತಪರ ಕಾಳಜಿಯ ಬಿಎಸ್ ಯಡಿಯೂರಪ್ಪನವರು ಶಿವಮೊಗ್ಗದಿಂದ ಮುಖ್ಯಮಂತ್ರಿಗಳಾದರು, ಆಗ ನವುಲೆ ಕೃಷಿ ಮಹಾವಿದ್ಯಾಲಯವನ್ನು ವಿಶ್ವವಿದ್ಯಾಲಯವಾಗಿ ಮಾಡುವ ಪ್ರಕ್ರಿಯೆ ಆರಂಭವಾಯಿತು. ಅದರಂತೆ ಸೆ.21. 2012ರಿಂದ ನವುಲೆಯಲ್ಲಿ ಕೃಷಿ ಮಹಾವಿದ್ಯಾಲಯ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಂಡು ಸ್ವತಂತ್ರ ವಿಶ್ವವಿದ್ಯಾಲಯವಾಯ್ತು.
ಬಿಎಸ್ ಯಡಿಯೂರಪ್ಪನವರ ಆಶಯದಂತೆ ಆರಂಭವಾದ ವಿವಿ, ಯಡಿಯೂರಪ್ಪನವರು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ವಿದ್ಯಾಲಯವೂ ಕುಂಠಿತವಾಯ್ತು. ಶಿವಮೊಗ್ಗದಲ್ಲಿ ಕೃಷಿ ವಿವಿ ಸ್ಥಾಪಿಸುವ ಉದ್ದೇಶ ಮಲೆನಾಡು, ಮಧ್ಯಕರ್ನಾಟಕದ ರೈತರಿಗೆ ನೆರವಾಗಲೆಂದು, ಆದರೆ ಅದು ಆಗಿದ್ದೇ ಬೇರೆ..! ಮಲೆನಾಡಿನ ಪ್ರಮುಖ ಬೆಳೆ ಅಡಕೆಯ ಕೊಳೆ ರೋಗವಿರಲಿ, ಹಿಡಿ ಮುಂಡಿಗೆ ರೋಗಕ್ಕೂ ಇಲ್ಲಿ ಪರಿಹಾರ ಸಿಗಲಿಲ್ಲ ಎಂದರೆ ಎಂಥಹ ಸಾರ್ಥಕ ಸೇವೆ ನೀಡುತ್ತಿರಬಹುದು..!? ವಿಶ್ವವಿದ್ಯಾಲಯದ ಮೂಲ ಆಶಯವೇ ಸ್ಥಳೀಯ ಬೆಳೆಗಳ ಮೇಲೆ ಸಂಶೋಧನೆ ನಡೆಸಿ ಆ ಮೂಲಕ ಸುಸ್ಥಿರ ಕೃಷಿ ಸಾಧನೆ, ಸಂಶೋಧನೆ, ಬೋಧನೆ, ರೈತ ಸಂಪರ್ಕಗಳನ್ನ ಮೈಗೂಡಿಸಿಕೊಳ್ಳವುದು, ಆದರೆ ವಿದ್ಯಾಲಯ ಯಾವುದನ್ನೂ ಪ್ರಾಮಾಣಿವಾಗಿ ನಿಭಾಯಿಸದೇ ದಿನ ದೂಡುತ್ತಿದೆ. ಉದಾಹರಣೆಗೆ ಅಡಿಕೆ ಮಲೆನಾಡು ಹಾಗೂ ಅರೆಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿರುವುದರಿಂದ ಕೃಷಿ ವಿವಿ ಆವರಣದಲ್ಲಿ ಅಡಿಕೆ ಸಂಶೋದನಾ ಕೇಂದ್ರವನ್ನು ಸ್ಥಾಪಿಸಲಾಗಿದೆ, ಆದರೆ ಇಲ್ಲಿ ಸಂಶೋಧನೆ ಕೈಗೊಳ್ಳಲು ಪೂರ್ಣ ಪ್ರಮಾಣದಲ್ಲಿ ನಿಯೋಜನೆಗೊಂಡಿರುವ ವಿಜ್ಞಾನಿಗಳು ಒಬ್ಬರೂ ಇಲ್ಲ, ಒಬ್ಬ ವಿಜ್ಞಾನಿಗೆ ಈ ಕೇಂದ್ರದ ಹೊಣೆ ನೀಡಲಾಗಿದ್ದರು ಸಹ ಇತರೆ ಹೊಣೆಗಾರಿಕೆ ಹೇರಿ ಕಾರ್ಯಭಾರವನ್ನು ನೀಡಲಾಗಿದೆ. ಇಂತಹ ವ್ಯವಸ್ಥೆಯಲ್ಲಿ ಅಡಿಕೆ ಹಿಡಿಮುಂಡಿಗೆ ಹಾಗೂ ಕೊಳೆ ರೋಗಕ್ಕೆ ಸಮಗ್ರ ರೂಪದ ಸಂಶೋಧನೆ ಹೇಗೆ ಸಾಧ್ಯ, ತಮಾಷೆ ಎಂದರೆ ವಿವಿಯ ಆವರಣದಲ್ಲಿರುವ ತೋಟದಲ್ಲೇ ಹಿಡಿಮುಂಡಿಗೆ ಬಾಧೆಗೆ ಅಡಕೆ ಮರಗಳು ಸತ್ತಿವೆ, ಇದು ಕೇವಲ ಅಡಕೆ ಸಂಶೋಧನೆ ಕೇಂದ್ರಕ್ಕೆ ಸೀಮಿತವಾಗಿಲ್ಲ ಎಲ್ಲ ವಿಭಾಗಗಳಲ್ಲಿಯೂ ಇದೇ ಸ್ಥಿತಿ.
ವಿವಿ ಆರಂಭವಾದಾಗ ಹೆಚ್ಚಿನ ವಿಭಾಗಗಳಲ್ಲಿ ಸ್ನಾತಕೋತ್ತರ ವಿಭಾಗಗಳನ್ನು ತೆರೆಯಲಾಗಿದೆ, ಆದರೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಲು ಅಗತ್ಯ ಸಿಬ್ಬಂದಿಯ ಕೊರತೆಯಿಂದಾಗಿ, ಅರೆಕಾಲಿಕ ಉಪನ್ಯಾಸಕರು ಹಾಗೂ ಸಂಶೊಧನಾ ವಿದ್ಯಾರ್ಥಿಗಳೇ ಉಪನ್ಯಾಸ ಮಾಡಬೇಕಿದೆ. ಈ ಎಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣ ಸಿಬ್ಬಂದಿ ಕೊರತೆ. ಬಿ. ಎಸ್. ಯಡಿಯೂರಪ್ಪನವರು ವಿಶ್ವವಿದ್ಯಾಲಯ ಎಂದು ಘೋಷಣೆ ಮಾಡಿದ ತಕ್ಷಣ ಕೇವಲ ಕೃಷಿ ಮಹಾವಿದ್ಯಾಲದ ಸಿಬ್ಬಂದಿ ಇಟ್ಟುಕೊಂಡು ಕೃಷಿ ವಿವಿ ನಡೆಸುವ ಅನಿವಾರ್ಯತೆ ಉಂಟಾಯಿತು. ನವುಲೆ ವಿಶ್ವವಿದ್ಯಾಲಯದಡಿ ಎಂಟು ಜಿಲ್ಲೆಗಳು ಬರುತ್ತವೆ, ಇಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಕೇಂದ್ರಗಳಿವೆ, ಸಾವಿರಾರು ಎಕರೆ ಜಮೀನಿದೆ. ಇದನ್ನ ನಿರ್ವಹಿಸಲು ಸಿಬ್ಬಂದಿಗಳ ಅವಶ್ಯಕತೆ ಇದೆ. ಸಿಬ್ಬಂದಿ ಕೊರತೆಯಿಂದಾಗಿ ವಿವಿಯಲ್ಲಿ ಯಾವ ಸಂಶೋಧನೆಗಳು ಸರಿಯಾಗಿ ನಡೆಯುತ್ತಿಲ್ಲ. ಕಾರ್ಯ ಒತ್ತಡದಿಂದಾಗಿ ವಿವಿಯಲ್ಲಿ ಸಂಶೋದನೆ, ಶಿಕ್ಷಣ ಮತ್ತು ವಿಸ್ತರಣಾ ಕಾರ್ಯಗಳ ಗುಣಮಟ್ಟ ಕುಸಿದಿದೆ. ಈ ವರೆಗೆ ವಿವಿಗೆ 3 ಜನ ಕುಲಪತಿಗಳು ನೇಮಕಗೊಂಡು 7 ವರ್ಷ ಅಧಿಕಾರ ನಡೆಸಿದ್ದರೂ ಸಹ ಇಲ್ಲಿಯವರೆಗೆ ಒಂದೂ ನೇಮಕಾತಿ ಪೂರ್ಣಗೊಳಿಸಿಲ್ಲ, ಇದರಿಂದಾಗಿ ಸುಮಾರು ಮುನ್ನೂರು ಕೋಟಿ ವಾರ್ಷಿಕ ಅನುದಾನ ಪಡೆದುಕೊಳ್ಳುವ ವಿಶ್ವವಿದ್ಯಾಲಯದಿಂದ ರೈತರಿಗೆ ನಯಾಪೈಸೆಯಷ್ಟೂ ಲಾಭವಾಗುತ್ತಿಲ್ಲ.
ಈ ಎಲ್ಲಾ ಅವಾಂತರಗಳ ಮುಂದುವರಿದ ಭಾಗ ಸಾಗರದ ಇರುವಕ್ಕಿಯಲ್ಲಿ ತಲೆ ಎತ್ತುತ್ತಿರುವ ವಿಶ್ವವಿದ್ಯಾಲಯದ ಹೊಸ ಆವರಣ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ಕಾಗೋಡು ತಿಮ್ಮಪ್ಪನವರು ತಮ್ಮ ಸಾಗರ ತಾಲೂಕಿನಲ್ಲೇ ವಿವಿ ತಲೆ ಎತ್ತಿದರೆ ಅನುಕೂಲ ಎಂಬ ಆಶಯದೊಂದಿಗೆ 2015ರಲ್ಲಿ ಇರುವಕ್ಕಿ ಎಂಬ ಗ್ರಾಮದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ ಮಾಡುವುದಾಗಿ ಘೋಷಿಸಿದರು. ಸರ್ಕಾರವೂ ಅವರದ್ದೇ ಹಾಗೂ ಕಂದಾಯ ಮಂತ್ರಿಯೂ ಕಾಗೋಡೇ ಆಗಿದ್ದರು, ಸಾಗರದ ಆನಂದಪುರಂ ಹೋಬಳಿ ಕೇಂದ್ರದಿಂದ ಐದು ಕಿಲೋಮೀಟರ್ ದೂರದ ಈ ಇರುವಕ್ಕಿ ಗ್ರಾಮದಲ್ಲಿ 777 ಎಕರೆ ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ವಿವಿಗೆ ಭೂಮಿ ಗುರುತಿಸಲಾಯಿತು. ಆದರೆ ಭೂಮಿ ಹಸ್ತಾಂತರಗೊಂಡು ಐದು ವರ್ಷ ಕಳೆದರೂ ವಿವಿ ತನ್ನ ಗಡಿಯನ್ನು ಪೂರ್ಣವಾಗಿ ಗುರುತಿಸಿಕೊಂಡಿಲ್ಲ. ಕೃಷಿ ವಿವಿ ಆವರಣವನ್ನು ಅಬಿವೃದ್ಧಿಪಡಿಸಲು ಪೂರ್ಣ ಪ್ರಮಾಣದಲ್ಲಿ ಹೆಚ್ಚಿನ ವಿಜ್ಞಾನಿಗಳನ್ನು ನಿಯೋಜಿಸಿಲ್ಲ. ಬದಲಾಗಿ ಒತ್ತುವರಿ ವಿಷಯದಲ್ಲಿ ಸ್ಥಳೀಯರೊಂದಿಗೆ ಕಾಳಗಕ್ಕೆ ಇಳಿದಿದೆ. ಇದರಿಂದಾಗಿ ಇರುವಕ್ಕಿ ಹಾಗೂ ಸುತ್ತಲಿನ ರೈತರು ಹಾಗೂ ಸ್ವತ: ಮಾನ್ಯ ಶಾಸಕರಾದ ಹರತಾಳು ಹಾಲಪ್ಪನವರು ವಿವಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ವಿವಿ ಅಧಿಕಾರಿಗಳೇ ಬಗರ್ ಹುಕುಂ ಹೆಸರಿನಲ್ಲಿ ಜಮೀನು ಮಾಡಿಕೊಂಡಿದ್ದಾರೆ ಎಂದು ಆಪಾಸಿದ್ದರು.
ಈ ಎಲ್ಲ ಅಂಶಗಳ ನಡುವೆ ವಿವಿಗೆ ಭೂಮಿ ವಶಪಡಿಸಿಕೊಳ್ಳುವ ಸಮಯದಲ್ಲಿ ಆಗ ಇರುವಕ್ಕಿ ಆವರಣದ ವಿಶೇಷ ಅಧಿಕಾರಿಯಾಗಿದ್ದ ಡಾ. ಎಮ್. ಎಸ್. ವಿಘ್ನೇಶ್ ರವರು ಕೆಲವೇ ವರ್ಷದಲ್ಲಿ ಇಲ್ಲಿ ವಿವಿ ತಲೆಯೆತ್ತಲಿದ್ದು ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ ಎಂದಿದ್ದರು, ಕಟ್ಟಡಗಳೇನೋ ತಲೆ ಎತ್ತಿದವು ಆದರೆ ಇರುವಕ್ಕಿಗೆ ಪೂರ್ಣಪ್ರಮಾಣದಲ್ಲಿ ವಿಜ್ಞಾನಿಗಳ ನಿಯೋಜನೆ ಆಗುತ್ತಿಲ್ಲ. ವಿವಿ ಇರುವಕ್ಕಿಗೆ ಸ್ಥಳಾಂತರಗೊಳ್ಳದೆ ಅಲ್ಲಿನ ಆವರಣದ ಅಭಿವೃದ್ಧಿ ಅಸಾಧ್ಯ. ಶಿವಮೊಗ್ಗ ಆವರಣದಲ್ಲಿರುವ ವಿದ್ಯಾಲಯದಲ್ಲಿಯೇ ಪಾಠ ಮಾಡಲು ಪ್ರಾಧ್ಯಾಪಕರ ಸಮಸ್ಯೆ ಇದೆ. ಇರುವಕ್ಕಿಗೆ ಹೋಗಿ ಪಾಠ ಮಾಡುವವರು ಯಾರು..?
ಸಾಗರದ ಶಾಸಕರಾದಿಯಾಗಿ, ಸಿಎಂ ಪುತ್ರ ಹಾಗೂ ಸಂಸದ ಬಿವೈ ರಾಘವೇಂದ್ರ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಮನವಿ ಮಾಡಿ, ಅವರ ಆಶಯದಂತೆ ನಿರ್ಮಾಣವಾದ ವಿಶ್ವವಿದ್ಯಾಲಯ ರೈತರ ಜೀವನ ಹಸನು ಮಾಡುವಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ಧಾರಿ ನಿಭಾಯಿಸಬೇಕಿದೆ.