ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಜೆಪಿ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡ ತಮಗೆ ಬೇಕಾದಂತಹ ಕೆಲಸಗಳನ್ನು ಸರ್ಕಾದಿಂದ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಗಂಭಿರವಾದ ವಿಚಾರವನ್ನು ಇತ್ತೀಚಿಗೆ ವಿಧಾನಪರಿಷತ್ ಸದಸ್ಯರಾಗಿ ನೇಮಕಗೊಂಡಂತಹ ಸಿ ಪಿ ಯೋಗೇಶ್ವರ್ ಅವರು ಬಹಿರಂಗಪಡಿಸಿದ್ದಾರೆ.
“ಕುಮಾರಸ್ವಾಮಿ ಅವರ ಇತ್ತೀಚಿನ ನಡವಳಿಕೆ, ಹೇಳಿಕೆಗಳನ್ನು ನೋಡಿದರೆ ಅವರು ಬಿಜೆಪಿಗೆ ಸಂಪೂರ್ಣವಾಗಿ ಬೆಂಬಲವನ್ನು ಕೊಡುತ್ತಾ ಇದ್ದಾರೆ ಎಂದು ಭಾಸವಾಗುತ್ತದೆ. ಇದಕ್ಕೆ ಶಿವಕುಮಾರ್ ಅವರ ಹಾವಳಿ ಜಾಸ್ತಿ ಆಗಿರಬಹುದು, ರಾಮನಗರ ಜಿಲ್ಲೆಯಲ್ಲಿ ಡಿಕೆ ಬ್ರದರ್ಸ್‌ನಿಂದಾಗಿ ಕುಮಾರಸ್ವಾಮಿ ಬುಡಕ್ಕೆ ಕೊಡಲಿ ಏಟು ಬಿದ್ದಿದೆ. ಅವರ ಸ್ವಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಆಪರೇಷನ್ ಶುರು ಮಾಡಿದ್ದಾರೆ. ರಾಮನಗರ ಕಳೆದುಕೊಳ್ಳುವ ಆತಂಕ ಕುಮಾರಸ್ವಾಮಿಗೆ ಎದುರಾಗಿದೆ. ಹಾಗಾಗಿ ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದಿದ್ದಾರೆ,” ಎಂದು ಸಿ ಪಿ ಯೋಗೇಶ್ವರ್ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದಿಂದ ಕೂಡಾ ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಸಹಕಾರ ಸಿಗುತ್ತಾ ಇದೆ. ಅವರು ಹೇಳಿದ ಹಾಗೇ ನಾಮನಿರ್ದೇಶನಗಳಾಗುತ್ತಿವೆ. ಸರ್ಕಾರಿ ಕೆಲಸ ಕಾರ್ಯಗಳು, ವರ್ಗಾವಣೆಗಳು ಕುಮಾರಸ್ವಾಮಿ ಹೇಳಿದ ಹಾಗೆ ಆಗುತ್ತಿದೆ. ಅವರು ಪರೋಕ್ಷವಾಗಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ, ಎಂದು ಯೋಗೇಶ್ವರ್ ಹೇಳಿದ್ದಾರೆ.
ಕುಮಾರಸ್ವಾಮಿಯವರೇ ಬಿಜೆಪಿ ಬೆಂಬಲ ನೀಡಿರುವಾಗ ಜೆಡಿಎಸ್ ಬೆಂಬಲಿಗರು ಆಲೋಚಿಸಬೇಕು. ಅವರು ಕೂಡಾ ಬಿಜೆಪಿ ಪಕ್ಷಕ್ಕೆ ಸೇರಿ ನಮಗೆ ಬೆಂಬಲ ನೀಡಬೇಕು, ಎಂದು ಬಹಿರಂಗವಾಗಿ ಜೆಡಿಎಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಬಿಜೆಪಿ ಸೇರಲು ಆಹ್ವಾನ ನೀಡಿದ್ದಾರೆ.