ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿರುವುದು ತೀವ್ರ ಕುತೂಹಲ ಹುಟ್ಟಿಸಿದೆ. ಎರಡು ಹಂತದ ಲಾಕ್‌ಡೌನ್ ಮುಕ್ತಾಯಗೊಂಡು, ಮೂರನೇ ಹಂತದ ಲಾಕ್‌ಡೌನ್ ಚಾಲ್ತಿಯಲ್ಲಿರುವಾಗಲೇ ಕರೋನಾ ಸೋಂಕಿನೊಂದಿಗೆ ಬದುಕಲು ಕಲಿಯಿರಿ ಎಂದು ಪ್ರಧಾನಿ ಮತ್ತು ಆರೋಗ್ಯ ಸಚಿವ ಹೇಳಿಕೆ ನೀಡಿರುವುದು ಕರೋನಾ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂಬುವುದರ ಸೂಚನೆಯೇ ಎಂಬ ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ.
ನಿನ್ನೆಯಷ್ಟೇ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದ ಪ್ರಧಾನಿ ಮೋದಿ ಇಂದು ದೇಶದ ನಾಗರಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಎರಡು ಲಾಕ್‌ಡೌನ್ ಮುಕ್ತಾಯಗೊಂಡರೂ ತಹಬದಿಗೆ ಬರದ ಸಾಂಕ್ರಾಮಿಕ ರೋಗ ಮೂರನೇ ಹಂತದ ಮುಕ್ತಾಯದ ವೇಳೆಯೂ ಸಂಪೂರ್ಣ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ.
ಈಗಾಗಲೇ ದೇಶದ ಆರ್ಥಿಕತೆ ಕುಸಿತಗೊಂಡಿರುವಾಗ ಲಾಕ್‌ಡೌನನ್ನು ನಾಲ್ಕನೇ ಹಂತಕ್ಕೆ ಮುಂದುವರೆಸಲಾಗುತ್ತದೆಯೇ ಅಥವಾ ಅಂತ್ಯಗೊಳಿಸಲಾಗುತ್ತಾರೆಯೇ ಎಂಬ ಅನುಮಾನಗಳು ಎದ್ದಿವೆ. ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ತೆರಳಲು ಅನುವು ಮಾಡಲು ಆಯಾ ರಾಜ್ಯಗಳಿಗೆ ನಿರ್ದೇಶಿಸಿರುವ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಮ್ಮ ತಮ್ಮ ಊರುಗಳಲ್ಲೇ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು.
ಮೂರನೇ ಹಂತದ ಲಾಕ್‌ಡೌನ್ ಮೇ 17 ರಂದು ಅಂತ್ಯವಾದ ಬಳಿಕ ದೇಶವ್ಯಾಪಿ ಲಾಕ್‌ಡೌನ್ ಘೋಷಿಸದೆ ಕೇವಲ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಲಾಕ್‌ಡೌನ್ ಮುಂದುವರೆಸುತ್ತಾರ ಎಂಬ ಗುಮಾನಿ ಬಲವಾಗಿದೆ. ಆರ್ಥಿಕ ಚೇತರಿಕೆಗೆ ʼಹೆಲಿಕಾಪ್ಟರ್ ಮನಿʼಯಂತಹ ಯೋಜನೆಗಳನ್ನು ರಾಜಕೀಯ ನಾಯಕರು, ಆರ್ಥಿಕ ತಜ್ಞರು ಸಲಹೆ ನೀಡಿರುವುದರಿಂದ ಇಡೀ ಭಾರತಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಲಿದ್ದಾರೆಯೆ ಪ್ರಧಾನಿ ಎಂಬುದರ ಬಗ್ಗೆಯೂ ಚರ್ಚೆಗಳು ಶುರುವಾಗಿದೆ.
Also Read: ಅಸಲಿಗೆ ಈ ‘ಹೆಲಿಕಾಪ್ಟರ್ ಮನಿ’ ಎಂದರೇನು?
ಅಲ್ಲದೆ ನಿನ್ನೆ ನಡೆದ ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಹೆಚ್ಚಿನ ಮುಖ್ಯಮಂತ್ರಿಗಳು ಲಾಕ್‌ಡೌನ್ ಮುಂದುವರೆಸುವುದರ ಜೊತೆಗೆ ರಾಜ್ಯಗಳಿಗೆ ಸಾಕಷ್ಟು ಹಣಕಾಸಿನ ನೆರವು ನೀಡಬೇಕು ಎಂದು ಕೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ಮೋದಿಯ ಇಂದಿನ ಭಾಷಣದ ಮೇಲೆ ಸಾಕಷ್ಟು ಕುತೂಹಲಗಳು ಹುಟ್ಟಿದೆ.