ಕರೋನಾ ಸೋಂಕು ಭಾರತದಲ್ಲಿ 5 ಸಾವಿರ ಸಂಖ್ಯೆಯನ್ನು ಮೀರಿ ಹೋಗುತ್ತಿದೆ. ದಿನಕ್ಕೆ ಹತ್ತರಿಂದ ಹದಿನೈದು ಪ್ರಕರಣಗಳು ಕಂಡು ಬರುತ್ತಿದ್ದ ಸೋಂಕಿತರ ಪಟ್ಟಿ ಇದೀಗ ಐನೂರಕ್ಕೆ ಏರಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಮೂರು ಸಾವಿರ ಸೋಂಕಿತರು ಹೆಚ್ಚಾಗಿದ್ದಾರೆ. ರಾಜ್ಯ ಸರ್ಕಾರಗಳೂ ಸಹ ಹಣಕಾಸಿನ ಕೊರತೆ ಎದುರಿಸುತ್ತಿದ್ದು, ದಾನಿಗಳ ಕಡೆಗೆ ಆಸೆಗಣ್ಣಿನಿಂದ ಕಾಯುವಂತಾಗಿದೆ. ಆದರೆ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ದೇವರ ನಾಡು ಕೇರಳ ಸೆಟೆದು ನಿಂತಿದೆ. ಕೇಂದ್ರದ ವಿರುದ್ಧ ಎಲ್ಲಾ ರಾಜ್ಯಗಳನ್ನು ಒಗ್ಗೂಡಿಸಿಕೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಈ ಬಗ್ಗೆ ಮಾತನಾಡಿರುವ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್, ಕೇಂದ್ರ ಸರ್ಕಾರ ಇಲ್ಲಿವರೆಗೂ ಸಾಂಕ್ರಾಮಿಕ ರೋಗ ಆಗಿರುವ ಕರೋನಾ ತಡೆಗಟ್ಟಲು ಯಾವುದೇ ನೆರವು ನೀಡಿಲ್ಲ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ.
ಕರೋನಾದಿಂದ ಕಂಗೆಟ್ಟವರಿಗೆ ಪ್ರಧಾನಿ ಮಂತ್ರಿ ನಿಧಿಯಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಹಾರ ಘೋಷಿಸಿದ್ದರು. 1.70ಲಕ್ಷ ಕೋಟಿ ಹಣವನ್ನು ವಿಶೇಷ ಪ್ಯಾಕೇಜ್ ಎಂದು ಘೋಷಿಸಿದ್ದರು. ಆದರೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್ ಬಗ್ಗೆ ಅಪಸ್ವರ ತೆಗೆದಿರುವ ಕೇರಳ ಸರ್ಕಾರ, ಕೇವಲ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದೆ. ಆದರೆ ಜಿಎಸ್ಟಿ ನಷ್ಟ ಪರಿಹಾರವನ್ನು ತುಂಬಿಕೊಡುವ ಆಶ್ವಾಸನೆ ಕೊಟ್ಟಿದ್ದ ಕೇಂದ್ರ ಸರ್ಕಾರ 2017ರಿಂದ ಇಲ್ಲಿವರೆಗೂ ಪಾವತಿ ಮಾಡಿಲ್ಲ. ಈ ಹಣವನ್ನು ಕೇಂದ್ರ ಸರ್ಕಾರ ಪಾವತಿ ಮಾಡಿದರೆ ಕರೋನಾ ವಿರುದ್ಧ ಹೋರಾಡಲು ಶಕ್ತಿ ಬರುತ್ತದೆ ಎಂದಿದ್ದಾರೆ. ಅದಕ್ಕೂ ಮೊದಲು ಬೇರೆ ರಾಜ್ಯಗಳನ್ನು ಸಂಪರ್ಕ ಮಾಡಿ ಬೆಂಬಲ ಪಡೆಯುವ ನಿರ್ಧಾರ ಮಾಡಿದೆ.
ಲಾಕ್‌ಡೌನ್ ನಿಂದ ರಾಜ್ಯಗಳ ಪಾಲಿನ ಆದಾಯವೂ ನಷ್ಟವಾಗಿದೆ. ಪ್ರತಿಶತ ಆದಾಯದಲ್ಲಿ ಕುಸಿತ ಕಂಡಿದ್ದು ಕೇವಲ 20ರಷ್ಟು ಆದಾಯ ಮಾತ್ರವಿದೆ. ವಾಹನಗಳ ಮಾರಾಟವಾಗುತ್ತಿಲ್ಲ. ರಿಯಲ್ ಎಸ್ಟೇಟ್ ಕುಸಿತ, ವಹಿವಾಟು. ಲಾಟರಿ ಆದಾಯವೂ ಇಲ್ಲ. ಮದ್ಯದಂಗಡಿಗಳನ್ನು ನಿಷೇಧ ಮಾಡಿದ್ದೇವೆ. ಹೀಗಾಗಿ ಜಿಎಸ್ಟಿ ನಷ್ಟವನ್ನು ಕೇಂದ್ರ ಸರ್ಕಾರ ತುಂಬಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಲಾಕ್ ಡೌನ್ ಅಂತ್ಯ ಮಾಡಿದರೂ ಶೀಘ್ರದಲ್ಲೇ ಆದಾಯ ನಿರೀಕ್ಷೆ ಸಾಧ್ಯವಿಲ್ಲ. ಕನಿಷ್ಟ ಮೂರು ತಿಂಗಳು ಬೇಕಾಗಿದೆ. ಅದೂ ಅಲ್ಲದೆ ಸಣ್ಣ ಸಣ್ಣ ಕಂಪನಿಗಳು ಏನಾಗಲಿದೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಇನ್ನೂ ಪ್ರವಾಸೋದ್ಯಮ ಯಾವಾಗ ಚೇತರಿಕೆ ಕಾಣುತ್ತದೆ ಎಂದು ಅಂದಾಜು ಸಿಗುತ್ತಿಲ್ಲ. ಲಾಕ್‌ಡೌನ್ ನಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇರಳ ಸರಕಾರ ಆರೋಗ್ಯ ಕ್ಷೇತ್ರಕ್ಕೆ 400 ಕೋಟಿ ರೂಪಾಯಿ ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟಿತ್ತು. ಅದಕ್ಕಿಂತ ಹೆಚ್ಚುವರಿಯಾಗಿ 100 ಕೋಟಿ ಹೆಚ್ಚಿಸಲಾಯ್ತು. ಆದರೆ ಈಗಾಗಲೇ ಕೋವಿಡ್-19 ವಿರುದ್ಧದ ಹೋರಾಟದಲ್ಲಿ 600 ಕೋಟಿ ಹಣವನ್ನು ವೆಚ್ಚ ಮಾಡಿದ್ದೇವೆ. ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಲಕರಣೆಗಳು, ಔಷಧಿ ಸೇರಿದಂತೆ ಸಲಕರಣೆ ವ್ಯವಸ್ಥೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಜೆಟ್ ನ ಶೇಕಡ 50ರಷ್ಟು ಹಣವನ್ನು ಕರೋನಾಗೆ ಬಳಸುವಂತಾಗಿದೆ. ಎಲ್ಲಾ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡುತ್ತಿದ್ದು, ಪ್ರತಿ ನಾಲ್ಕು ಗಂಟೆಗೊಮ್ಮೆ ಆರೋಗ್ಯ ಸಿಬ್ಬಂದಿಯನ್ನು ಬದಲಾಯಿಸುತ್ತಿದ್ದೇವೆ. ಎಲ್ಲಾ ಆರೋಗ್ಯ ಸಿಬ್ಬಂದಿಗಳ ರಕ್ಷಣೆಗಾಗಿ ಪಿಪಿಇ (personal protection equipment) ಕಿಟ್ ಕೊಟ್ಟಿದ್ದೇವೆ. ಆದರೆ ಕೇಂದ್ರ ಸರ್ಕಾರ ಕೋವಿಡ್ – 19 ವಿರುದ್ಧದ ಈ ಹೋರಾಟಕ್ಕೆ ಕೊಟ್ಟಿರುವ ಕೊಡುಗೆ ಶೂನ್ಯ ಎಂದು ವ್ಯಂಗ್ಯವಾಡಿದ್ದಾರೆ. ರಾಷ್ಟ್ರೀಯ ಆರೋಗ್ಯ ಯೋಜನೆಯ ಫಂಡ್ ಹಾಗೂ ಜಿಎಸ್ಟಿ ಸೆಸ್ ಮಾರ್ಚ್ ಅಂತ್ಯಕ್ಕೆ ಬಿಡುಗಡೆಯಾಗಿತ್ತು. ಈಗ ರಾಜ್ಯ ವಿಕೋಪ ನಿಧಿಯಿಂದ ಹಣ ಬಿಡುಗಡೆ ಮಾಡಲಾಗ್ತಿದ್ದು, ಮುಂದಿನ ದಿನಗಳಲ್ಲಿ ಏನು ಮಾಡುವುದು ತೋಚದಂತಾಗಿದೆ ಎಂದಿದ್ದಾರೆ.
ಕೋವಿಡ್ – 19 ನಿಯಂತ್ರಣ ಮಾಡಲು ಸಾಧ್ಯವಾಗದೆ ಕೇಂದ್ರ ಸರ್ಕಾರ ದಿಕ್ಕು ತೋಚದಂತಾಗಿದೆ. ಮತ್ತೊಂದು ಒಂದು ಕಡೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಸದರ 2 ವರ್ಷಗಳ ಪ್ರದೇಶಾಭಿವೃದ್ಧಿ ಅನುದಾನವನ್ನು ಜಪ್ತಿ ಮಾಡಿಕೊಂಡಿದೆ. ಇದರ ಜೊತೆಗೆ ಸಂಸದರ, ಮಂತ್ರಿಗಳ ಶೇಕಡ 30ರಷ್ಟು ವೇತನ ಕಡಿತ ಮಾಡುವುದಕ್ಕೂ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ನಡುವೆ ಕೇಂದ್ರ ಸರ್ಕಾರಕ್ಕೆ ಮತ್ತೊಂದು ತಲೆನೋವು ಶುರುವಾಗಿದೆ. ಏಪ್ರಿಲ್ 14ರಂದು ದೇಶದ ಲಾಕ್ಡೌನ್ ಅವಧಿ ಅಂತ್ಯವಾಗಲಿದ್ದು, ಲಾಕ್ಡೌನ್ ಮುಂದುವರಿಸಬೇಕಾ..? ಬೇಡವಾ..? ಎನ್ನುವ ಜಿಜ್ಞಾಸೆಗೆ ಒಳಗಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಸಂಸದರ ನಿಧಿಯನ್ನು ಬಳಸಿಕೊಳ್ಳಲು ಮುಂದಾಗಿರುವ ಕ್ರಮ ಭಾರೀ ಟೀಕೆಗೆ ಒಳಗಾಗಿದೆ. ಹಾಗಾಗಿ ಲಾಕ್ಡೌನ್ ವಿಚಾರದಲ್ಲಿ ಎಲ್ಲರನ್ನು ಒಟ್ಟುಗೂಡಿಸಿ ಮಾಹಿತಿ ವಿನಿಮಯ ಮಾಡಿಕೊಂಡ ಬಳಿಕ ಲಾಕ್ಡೌನ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಮಾಡಿದ್ದಾರೆ. ಇಂದು ಶಾಸಕಾಂಗ ನಾಯಕರ ಜೊತೆ ಸಭೆ ನಡೆಸಿದ ಬಳಿಕ ತಜ್ಞರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳಲಿದ್ದಾರೆ. ಆದರೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯಗಳು ಸುಪ್ರೀಂಕೋರ್ಟ್ ಮೊರೆ ಹೋದರೆ ಒಕ್ಕೂಟ ವ್ಯವಸ್ಥೆಯಲ್ಲಿ ಮತ್ತೊಂದು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.