ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ವಾರದ ಹಿಂದೆ ಅಧಿಕಾರ ಸ್ವೀಕರಿಸಿದ ಡಿ ಕೆ ಶಿವಕುಮಾರ್, ಪ್ರಮುಖವಾಗಿ ಪಕ್ಷವನ್ನು ಕೇಡರ್ ಬಲದ ಮೇಲೆ ಪುನರ್ ಸಂಘಟನೆ ಮಾಡುವುದಾಗಿ ಹೇಳಿದ್ದರು. ಅವರ ಹೇಳಿಕೆ ಪಕ್ಷದ ಕಾರ್ಯಕರ್ತರಲ್ಲಿ ಎಷ್ಟರಮಟ್ಟಿಗೆ ಉತ್ಸಾಹ ಹುಟ್ಟಿಸಿದೆಯೋ ಗೊತ್ತಿಲ್ಲ; ಆದರೆ, ಪಕ್ಷ ಅವರ ಪದಗ್ರಹಣದ ಭರ್ಜರಿ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಂಘಟಿಸಲು ನೇಮಕಗೊಂಡಿದ್ದ 400 ಮಂದಿ ಕೆಪಿಸಿಸಿ ಸಂಯೋಜಕರ ಕೊರಳಿಗೆ ಕಟ್ಟಿದ್ದ ಟ್ರಾಕರ್ ಗಳು ಈಗ ಸದ್ದುಮಾಡತೊಡಗಿವೆ!
ಪಕ್ಷ ಸಂಘಟನೆಯಲ್ಲಿ ಹೊಸ ಹವಾ ಎಬ್ಬಿಸುವ ಉಮೇದಿನಲ್ಲಿ ಹೊಸದೇನಾದರೂ ಮಾಡುವ ಹುರುಪಿನಲ್ಲಿ ಡಿ ಕೆ ಶಿವಕುಮಾರ್ ಆರಂಭಿಸಿದ ಈ ಪ್ರಯೋಗ, ವಾಸ್ತವವಾಗಿ ತಳಮಟ್ಟದಲ್ಲಿ ಕೇಡರ್ ಕಟ್ಟುವ ಅವರ ಆಶಯಕ್ಕೇ ಬಲವಾದ ಪೆಟ್ಟು ನೀಡುತ್ತಿದೆ. ತಮ್ಮದೇ ಪಕ್ಷದ ಬ್ಲಾಕ್ ಮತ್ತು ಬೂತ್ ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆಯೇ ನಂಬಿಕೆ ಇಡದೆ, ಹೀಗೆ ಕೊರಳಿಗೆ ಟ್ರೇಸರ್ ಕಟ್ಟಿ ಅವರ ಚಲನವಲನದ ಮೇಲೆ ಕಣ್ಗಾವಲು ಇಡುವುದು ಪಕ್ಷ ಮತ್ತು ನಾಯಕರ ಮೇಲಿನ ಅಭಿಮಾನದಿಂದ ಚುನಾವಣೆ, ಚುನಾವಣಾರಹಿತ ಸಮಯ ಸಂದರ್ಭವೆನ್ನದೆ ಪಕ್ಷ ಕಟ್ಟಿದ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಮಾನಕರ ಸಂಗತಿ. ದಶಕಗಳ ಕಾಲ, ತಲೆತಲಾಂತರದಿಂದ ಪಕ್ಷಕ್ಕಾಗಿ ದುಡಿದವರಿಗೆ ನಾಯಕರ ಈ ವರಸೆ ಅವರ ಸ್ವಾಭಿಮಾನವನ್ನೇ ಕೆಣಕುವುದಿಲ್ಲವೆ ಎಂಬ ಪ್ರಶ್ನೆ ಕೂಡ ಕೇಳಿಬಂದಿದೆ.
ಕಳೆದ ವಾರ ಶಿವಕುಮಾರ್ ಅವರು ಕೆಪಿಸಿಸಿಯ ನೂತನ ಸಾರಥಿಯಾಗಿ ಪದಗ್ರಹಣ ಸ್ವೀಕರಿಸುವುದಕ್ಕೆ ಮುನ್ನವೇ ಆರಂಭವಾಗಿದ್ದ ಈ ಟ್ರ್ಯಾಕರ್ ವಿವಾದ, ಇದೀಗ ನಿಧಾನಕ್ಕೆ ಇನ್ನಷ್ಟು ಕಾವೇರತೊಡಗಿದ್ದು, ಶಿವಕುಮಾರ್ ಅವರ ಪಕ್ಷವನ್ನು ಕೇಡರ್ ಬಲದ ಮೇಲೆ ಕಟ್ಟಿ ಅಧಿಕಾರಕ್ಕೆ ತರುವ ಹರಸಾಹಸದ ಕಾರ್ಯಕ್ಕೆ ಆರಂಭದಲ್ಲೇ ತೊಡಕು ಎದುರಾಗಿದೆ. ಆರಂಭದಲ್ಲಿ ಈ ಟ್ರ್ಯಾಕರ್ ತಮ್ಮ ಚಲನವಲನದ ಮೇಲೆ ಕೆಪಿಸಿಸಿ ಬೆಂಗಳೂರು ಕಚೇರಿಯಲ್ಲಿ ಕೂತು ನಾಯಕರು ಕಣ್ಣಿಡಲು ಬಳಸುತ್ತಿದ್ದಾರೆ ಎಂಬ ಹೇಳಲೂ ಆಗದ, ಸಹಿಸಿಕೊಂಡಿರೂ ಆಗದ ಮುಜುಗರಕ್ಕೆ, ಬೇಗುದಿಗೆ ಈಡಾಗಿದ್ದ ಕಾರ್ಯಕರ್ತರು ಇದೀಗ, ತಮ್ಮ ನಿಷ್ಠೆಯನ್ನೇ ಈ ಟ್ರ್ಯಾಕರ್ ಪರೀಕ್ಷೆಗೊಡ್ಡಿದೆ ಎಂಬ ಅಸಮಾಧಾನ ಹೊರಹಾಕಲಾರಂಭಿಸಿದ್ದಾರೆ. ಜೊತೆಗೆ ಪಕ್ಷದ ಕಾರ್ಯಕರ್ತರ ಮಟ್ಟದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವ ಈ ಟ್ರ್ಯಾಕರ್ ಅಳವಳಡಿಕೆಯ ಡಿಕೆ ಶಿವಕುಮಾರ್ ಅವರ ಕ್ರಮಕ್ಕೆ ಪಕ್ಷದ ನಾಯಕರ ಮಟ್ಟದಲ್ಲಿಯೂ ಅಸಮಾಧಾನ ಹೊಗೆಯಾಡುತ್ತಿದ್ದು, ಪರಸ್ಪರ ನಂಬಿಕೆ, ವಿಶ್ವಾಸದ ಮೇಲೆ , ತಲೆಮಾರುಗಳು ಅಭಿಮಾನದ ಮೇಲೆ ಪಕ್ಷ ಕಟ್ಟಿದ ಸ್ಥಳೀಯ ನಾಯಕರು ಇಂದು ಹೀಗೆ ಹೊಸ ಕಾರ್ಪೊರೇಟ್ ಶೈಲಿಯಲ್ಲಿ ಕತ್ತಿಗೆ ಟ್ರ್ಯಾಕರ್ ನೇತು ಹಾಕಿಕೊಂಡು ತಮ್ಮ ಪಕ್ಷನಿಷ್ಠೆಗೆ, ಪಕ್ಷಕ್ಕಾಗಿನ ಸೇವೆಗೆ ಸಾಕ್ಷಿ ನೀಡಬೇಕಾಗಿ ಬಂದಿರುವುದು ದುರಂತ ಎಂದು ಕೆಪಿಸಿಸಿ ಕಚೇರಿಯಲ್ಲೇ ಗುಸುಗುಸು ಕೇಳಿಬರತೊಡಗಿದೆ.
ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ರಾಜು ಅವರು ‘ಮುಂಬೈ ಮಿರರ್’ ಪತ್ರಿಕೆಯ ತಮ್ಮ ಅಂಕಣದಲ್ಲಿ ಈ ಬಗ್ಗೆ ಸೂಕ್ಷ್ಮ ವಿಶ್ಲೇಷಣೆ ನಡೆಸಿದ್ದು, ಬುಧವಾರ ಅವರ ವಿಶ್ಲೇಷಣೆ ಪ್ರಕಟವಾಗುತ್ತಿದ್ದ ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಟೈಮ್ಸ್ ನೌ ಸೇರಿದಂತೆ ಕೆಲವು ಇಂಗ್ಲಿಷ್ ಸುದ್ದಿವಾಹಿನಿಗಳು ಕೂಡ ಕಾಂಗ್ರೆಸ್ ಪಕ್ಷದ ಯಜಮಾನಿಕ, ಹೈಕಮಾಂಡ್ ವರಸೆಗಳಿಗೆ ಈ ವಿದ್ಯಮಾನವನ್ನು ತಳಕುಹಾಕಿ ಸುದ್ದಿ ಮಾಡಿದ್ದು, ವಿಷಯ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
“ಶಿವಕುಮಾರ್ ಅವರು ಕೇಡರ್ ಬಲದ ಪಕ್ಷವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವುದಾಗಿ ಹೇಳಿದ್ದಾರೆ. ಅದೇ ಹೊತ್ತಿಗೆ ಇಂತಹ ತಂತ್ರಜ್ಞಾನ ಮತ್ತು ತಾಂತ್ರಿಕತೆಗಳು ಆ ದಿಸೆಯಲ್ಲಿ ತಮಗೆ ದೊಡ್ಡ ವರದಾನವಾಗಲಿವೆ ಎಂದು ಅವರು ಭಾವಿಸಿದಂತಿದೆ. ಆದರೆ, ವಾಸ್ತವವಾಗಿ ಪಕ್ಷದ ಕಾರ್ಯಕರ್ತರು, ಮುಖಂಡರ ಮೇಲೆ ಕಣ್ಣಿಡುವ ಇಂತಹ ಟ್ರ್ಯಾಕರ್ ಬಳಕೆಯ ಮೂಲಕ ಅವರು ಯಾವುದೇ ಸಂಘಟನೆಯ ಅಡಿಪಾಯವಾದ ನಂಬಿಕೆ ಮತ್ತು ವಿಶ್ವಾಸಕ್ಕೆ ಬಲವಾದ ಪೆಟ್ಟು ನೀಡುತ್ತಿದ್ದೇನೆ ಎಂಬುದನ್ನು ಮರೆತಿದ್ದಾರೆ. ಕಾಂಗ್ರೆಸ್ ಅಷ್ಟೇ ಅಲ್ಲ, ಭಾರತದ ಮಟ್ಟಿಗೆ ಯಾವುದೇ ರಾಜಕೀಯ ಪಕ್ಷ ಕೂಡ ಕಟ್ಟಿದ್ದು ಯಾವುದೇ ತಾಂತ್ರಿಕತೆಯಲ್ಲ; ಆ್ಯಪ್ಗಳಲ್ಲ. ಬದಲಾಗಿ ಕಾರ್ಯಕರ್ತ ಸ್ವಇಚ್ಛೆ, ಬದ್ಧತೆ ಮತ್ತು ತ್ಯಾಗದ ಮೂಲಕ ಎಂಬುದನ್ನು ಮರೆಯಬಾರದು. ಹಾಗಾಗೇ ರಾಜಕೀಯ ಸಂಘಟನೆಯಗಳು ಸಾಮಾಜಿಕ ಸಂಘಟನೆಗಳಾಗಿವೆ ವಿನಃ ಕಾರ್ಪೊರೇಟ್ ಸಂಸ್ಥೆಗಳಾಗಿಲ್ಲ. ಪಕ್ಷದಲ್ಲಿ ಭಯ ಮತ್ತು ತಾಂತ್ರಿಕತೆ ಬಳಸಿ ಬೆನ್ನುಬೀಳುವ ಮೂಲಕ ಕಾರ್ಯಕರ್ತರನ್ನು ಪಕ್ಷದ ಕೆಲಸಕ್ಕೆ ಹಚ್ಚಿದ ಉದಾಹರಣೆ ಈವರೆಗೆ ಇರಲಿಲ್ಲ” ಎಂದು ಸುಗತ ಶ್ರೀನಿವಾಸರಾಜು ಅವರು ತಮ್ಮ ಅಂಕಣದಲ್ಲಿ ವಿಶ್ಲೇಷಿಸಿದ್ದರು.

ಶಿವಕುಮಾರ್ ಅವರು ಪಕ್ಷದ ಸಭೆಯಲ್ಲಿ ಮಾತನಾಡುತ್ತಾ, ಆ ಟ್ರ್ಯಾಕರ್ ಕುರಿತು ವಿವರಿಸಿದ ವೀಡಿಯೋ ವೈರಲ್ ಆಗಿದ್ದು, ಅವರ ಆಪ್ತ ಕೆಂಪರಾಜ ಗೌಡ ಎಂಬುವರು ಪ್ರತ್ಯೇಕ ವೀಡಿಯೋ ಕೂಡ ಸಾಕಷ್ಟು ಹರಿದಾಡುತ್ತಿದೆ. ಈ ಪೈಕಿ ಶಿವಕುಮಾರ್ ಅವರು ಪಕ್ಷದ ಸಂಯೋಜಕರಿಗೆ ನೀವು ದಿನವಿಡೀ ಎಲ್ಲೆಲ್ಲಿ ಹೋಗ್ತೀರಿ, ಏನು ಮಾಡ್ತೀರಿ, ಎಲ್ಲಿ ಸಭೆ ಮಾಡ್ತೀರಿ, ಎಲ್ಲಿ ಊಟ ಮಾಡ್ತೀರಿ, ಎಲ್ಲಿ ಮಲಗ್ತೀರಿ ಎನ್ನೋದೆಲ್ಲಾ ನಮಗೆ ಇಲ್ಲಿಂದಲೇ ಗೊತ್ತಾಗುತ್ತದೆ. ನೀವು ಏನು ಮಾಡ್ತೀರಿ ಎನ್ನೋದ ಮೇಲೆ ನಾವು ಕಣ್ಣಿಟ್ಟಿರುತ್ತೇವೆ ಎಂದು ಹೇಳುತ್ತಾರೆ. ಮತ್ತೊಂದು ವೀಡಿಯೋದಲ್ಲಿ ಕೆಂಪರಾಜ ಎಂಬುವರು ಆ ಟ್ರ್ಯಾಕರ್ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಸುಗತ ಅವರು ವಿಶ್ಲೇಷಿಸಿದಂತೆ ಶಿವಕುಮಾರ್ ಅವರ ಉದ್ದೇಶ ಪಕ್ಷವನ್ನು ಪರಸ್ಪರ ವಿಶ್ವಾಸ, ನಂಬಿಕೆ ಮತ್ತು ಅಭಿಮಾನದ ಮೇಲೆ ಕಟ್ಟುವ ಬದಲಾಗಿ, ಕಾರ್ಯಕರ್ತರು ನಂಬಿಕೆಗೆ ಯೋಗ್ಯರಲ್ಲ, ತಳಮಟ್ಟದಲ್ಲಿ ಪಕ್ಷ ಕಟ್ಟುವ ಹೊಣೆ ವಹಿಸಿ ಅವರನ್ನು ನಂಬಿ ಕೂರಲಾಗದು. ಹಾಗಾಗಿ ಅವರ ಮೇಲೆ ನಿತ್ಯ ನಿಗಾ ಇಡಬೇಕು. ಕಣ್ಗಾವಲಿನಲ್ಲಿ ಮೇಸ್ತ್ರಿಗಳಂತೆ ಬೆನ್ನ ಮೇಲೆ ಕೂತು ಕೆಲಸ ಮಾಡಿಸಬೇಕು ಎಂಬುದೇ ಆಗಿದೆ ಎಂಬುದಕ್ಕೆ ವಿಡಿಯೋದಲ್ಲಿರುವ ಸ್ವತಃ ಶಿವಕುಮಾರ್ ಅವರ ಮಾತುಗಳೇ ಸಾಕ್ಷಿ. ಜೊತೆಗೆ ಪಕ್ಷದ ಆಧಾರ ಸ್ತಂಭವಾದ ಕಾರ್ಯಕರ್ತರ ಕೊರಳಿಗೆ ಆತನ ಚಲನವಲನದ ಮೇಲೆ ಕಣ್ಣಿಡುವ ಕ್ಷಣಕ್ಷಣದ ಮಾಹಿತಿ ಪಡೆಯುವ ಟ್ರ್ಯಾಕರ್ ಹಾಕುವುದು ಎಂದರೆ ಮೂಲಭೂತವಾಗಿ ಆತ ನಂಬಿಕೆಗೆ ಅರ್ಹನಲ್ಲ; ಪ್ರಾಮಾಣಿಕನಲ್ಲ, ಹಾಗಾಗಿ ಅವನ ಮೇಲೆ ಕಣ್ಣಿಡಬೇಕಾಗಿದೆ ಎಂದಂತೆಯೇ ಅಲ್ಲವೆ? ಒಂದು ರಾಜಕೀಯ ಪಕ್ಷ ತನ್ನ ಕಾರ್ಯಕರ್ತನ ಕೊರಳಿಗೇ ಗಂಟೆ ಕಟ್ಟಿದರೆ, ಅದರ ಬುನಾದಿಯ ಮೇಲೆ ಅದಕ್ಕೆ ನಂಬಿಕೆ ಇಲ್ಲವೆಂದರೆ ಆ ಪಕ್ಷದ ಸಂಘಟನೆ ಎಷ್ಟು ಸುಭದ್ರ? ಎಂಬ ಪ್ರಶ್ನೆ ಕೂಡ ಹುಟ್ಟದೇ ಇರದು.
ಸುಗತ ಅವರು ಬಹಳ ಮಾರ್ಮಿಕವಾಗಿ ಹೇಳಿರುವಂತೆ, ‘ಶಿವಕುಮಾರ್ ಅವರು ಪಕ್ಷದ ಸಾಮಾನ್ಯ ಬಡಪಾಯಿ ಕಾರ್ಯಕರ್ತರ ಮೇಲೆ ಪ್ರಯೋಗಿಸುವ ಬದಲು ಈ ಅಸ್ತ್ರವನ್ನು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಕ್ಷದ ಕೆಲವು ಹಿರಿಯ ನಾಯಕರ ಮೇಲೆ ಬಳಸಿದ್ದರೆ, ಅಥವಾ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮರ್ಪಕವಾಗಿ ಬಳಸಿದ್ದರೆ ಸರಿಯಾದ ಉದ್ದೇಶವಾದರೂ ಈಡೇರುತ್ತಿತ್ತು. ಏನಿಲ್ಲವೆಂದರೂ ಕನಿಷ್ಟ ಸಮ್ಮಿಶ್ರ ಸರ್ಕಾರವನ್ನಾದರೂ ಉಳಿಸಿಕೊಳ್ಳಬಹುದಿತ್ತು!’
ತಾಂತ್ರಿಕತೆ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಚುನಾವಣೆಗಳಲ್ಲಿ ತನ್ನ ಪರ ಜನಾಭಿಪ್ರಾಯ ರೂಪಿಸುವ ಮಟ್ಟಿಗೆ ಬೆಳೆದಿರುವ ಬಿಜೆಪಿಯ ಅನುಕರಣೆಯ ಹಾದಿಯಲ್ಲಿ ಬಹುಶಃ ಶಿವಕುಮಾರ್ ಅವರು ಮೊದಲ ಪ್ರಯತ್ನದಲ್ಲೇ ಎಡವಿದ್ದಾರೆ. ತನ್ನದೇ ಆದ ಒಂದು ಸ್ಪಷ್ಟ ಅಜೆಂಡಾದೊಂದಿಗೆ ಸಂದೇಶವನ್ನು ರವಾನಿಸುವ ಮತ್ತು ಪ್ರಾಪಗಾಂಡ ಪ್ರಸರಣದ ಮಾಧ್ಯಮವಾಗಿ ಬಿಜೆಪಿ ತಂತ್ರಜ್ಞಾನವನ್ನು ಪರಿಣಾಮಕಾರಿ ಬಳಸುವುದರಲ್ಲಿ ಪಳಗಿದೆ. ಆದರೆ, ಅಂತಹ ಯಾವುದೇ ಸ್ಪಷ್ಟ ಅಜೆಂಡಾವಿಲ್ಲದೆ, ಸಂದೇಶವಿಲ್ಲದೆ, ಹೀಗೆ ತನ್ನದೇ ಕಾರ್ಯಕರ್ರನ್ನು ಗುರಿಯಾಗಿಸಿಕೊಂಡು ತಂತ್ರಜ್ಞಾನವನ್ನು ಅಸ್ತ್ರವಾಗಿಸಿಕೊಳ್ಳುವುದು ಖಂಡಿತಾ ತಿರುಗುಬಾಣವಾಗಲಿದೆಯೇ ವಿನಃ ರಾಮಬಾಣವಾಗಲಾರದು!
ಕೇಡರ್ ಬಲದ ಮೇಲೆ ಪಕ್ಷ ಕಟ್ಟುವುದಾಗಿ ಹೇಳುತ್ತಲೇ ಅದೇ ಕೇಡರನ್ನು ಅಪನಂಬಿಕೆಯಲ್ಲಿ, ಅವಮಾನದಲ್ಲಿಅದ್ದಿ ತೆಗೆಯುವ ಯಜಮಾನಿಕೆಯ ವರಸೆ ತೀರಾ ಅಪಹಾಸ್ಯಕರ. ವಾರಾನ್ನ ಉಂಡು, ಬರಿಗೈನಲ್ಲಿ ಊರೂರು ಸುತ್ತಿ ಸಂಘಟನೆ ಕಟ್ಟಿದ ಹಿಂದಿನ(ಇಂದಿನ ವೇತನದಾರ ಸ್ವಯಂಸೇವಕರಲ್ಲ!)ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್ ಎಸ್ ಎಸ್)ದ ಕೇಡರ್ ಒಂದು ಕಡೆಯಾದರೆ, ಸಮಾನತೆಯ ಆಶಯದ ಮೇಲೆ ಸಮಸಮಾಜ ಕಟ್ಟುವ ಕನಸಿನೊಂದಿಗೆ ಇಡೀ ಬದುಕನ್ನೇ ಪಣಕ್ಕಿಟ್ಟು ಸಂಘಟನೆ ಕಟ್ಟಿದ ಕಮ್ಯುನಿಸ್ಟ್ ಕೇಡರ್ ಮತ್ತೊಂದು ಕಡೆ. ಸೈದ್ಧಾಂತಿಕವಾಗಿ ಪರಸ್ಪರ ತದ್ವಿರುದ್ಧ ತುದಿಯಲ್ಲಿದ್ದರೂ ಆ ಎರಡೂ ಕೇಡರುಗಳ ನಡುವೆ ಸಮಾನ ಅಂಶ ತಮ್ಮ ತಮ್ಮ ಪಕ್ಷ, ಸಿದ್ಧಾಂತ, ನಾಯಕತ್ವದ ಕುರಿತ ಅವರ ನಂಬಿಕೆ ಮತ್ತು ಬದ್ಧತೆ ಹಾಗೂ ಸಂಘಟನೆಯಾಗಿನ ತ್ಯಾಗ. ಹಾಗೇ ಆ ಸಂಘಟನೆಗಳ ನಾಯಕತ್ವಗಳೂ ಕೇಡರ್ ಮೇಲೆ ಅಷ್ಟೇ ನಂಬಿಕೆ ಮತ್ತು ವಿಶ್ವಾಸ ಹೊಂದಿರುತ್ತಿದ್ದರು. ಅದು ಕೇಡರ್ ಬಲದ ಸಂಘಟನೆಯ ಯಶಸ್ಸಿನ ಗುಟ್ಟು ಕೂಡ. ಆದರೆ, ಯಾವುದು ತಮ್ಮ ಬಲವಾಗಬೇಕೊ ಅದಕ್ಕೆ ಅಪನಂಬಿಕೆಯ ಕೊಡಲಿಪೆಟ್ಟು ಕೊಟ್ಟ ಬಳಿಕ ಅದನ್ನೇ ಬುನಾದಿಯಾಗಿ ಹೇಗೆ ಬಳಸುತ್ತಾರೆ ಎಂಬುದಕ್ಕೆ ಮುಖ್ಯವಾಹಿನಿ ಮಾಧ್ಯಮಗಳ “ಟ್ರಬಲ್ ಶೂಟರ್” ಶಿವಕುಮಾರ್ ಅವರೇ ಉತ್ತರಿಸಬೇಕು!