ಜುಲೈ 18 ರಂದು ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಮೂವರು ಯುವಕರ ಡಿಎನ್‌ಎ ಮಾದರಿಯು ಅವರ ಕುಟುಂಬಗಳೊಂದಿಗೆ ಹೊಂದಿಕೆಯಾಗಿದೆ, ಅವರು ಮೂವರು ಬಡ ಕಾರ್ಮಿಕರು ಮತ್ತು “ಉಗ್ರರು” ಅಲ್ಲ ಎಂದು ವರದಿಯು ಸಾಬೀತುಪಡಿಸಿದೆ.
ಕಾಶ್ಮೀರದ ಐಜಿ ವಿಜಯ್ ಕುಮಾರ್ ʼರಾಜೌರಿಯ ಇಮ್ತಿಯಾಜ್ ಅಹ್ಮದ್, ಇಬ್ರಾರ್ ಅಹ್ಮದ್ ಮತ್ತು ಮೊಹಮ್ಮದ್ ಇಬ್ರಾರ್ ಅವರ ಕುಟುಂಬಗಳೊಂದಿಗೆ ಡಿಎನ್‌ಎ ಮಾದರಿಗಳು ಹೊಂದಿಕೆಯಾಗಿವೆ ಎಂದು ದೃಢಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜುಲೈನಲ್ಲಿ ನಡೆದ ಎನ್ಕೌಂಟರ್ನಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯಡಿ ನೀಡಲಾದ ಅಧಿಕಾರಗಳನ್ನು ಉಲ್ಲಂಘಿಸಲಾಗಿದೆ ಎಂದು ಸೇನೆಯು ಕಳೆದ ವಾರ ಒಪ್ಪಿಕೊಂಡಿತ್ತು. ತಪ್ಪಿತಸ್ಥ ಸೈನಿಕರ ವಿರುದ್ಧ ಸೇನಾ ಕಾಯ್ದೆಯಡಿ ಶಿಸ್ತು ಕ್ರಮಗಳನ್ನು ಪ್ರಾರಂಭಿಸಲು ವಿಚಾರಣಾ ನ್ಯಾಯಲಯವು ನಿರ್ಧರಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಜುಲೈನಲ್ಲಿ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯಿಂದ ಕೊಲ್ಲಲ್ಪಟ್ಟ ಮೂವರು ಯುವಕರು, ವಾಸ್ತವವಾಗಿ ರಾಜೌರಿಯ ಕಾರ್ಮಿಕರಾಗಿದ್ದರು. ಆದರೆ ಸೇನೆಯು, ಮೂವರು ಸೋದರ ಸಂಬಂಧಿಗಳಾದ ಅಬ್ರಾರ್ (20), ಇಮ್ತಿಯಾಜ್ (25) ಮತ್ತು ಇಬ್ರಾರ್ ಅಹ್ಮದ್ (17) ರನ್ನು “ಭಯೋತ್ಪಾದಕರು” ಎಂದು ಹಣೆಪಟ್ಟಿ ಕಟ್ಟಿ, ಶೋಪಿಯಾನ್‌ನಲ್ಲಿರುವ ತಮ್ಮ ಬಾಡಿಗೆ ವಸತಿ ಕೋಣೆಯಿಂದ ಅವರನ್ನು ಎತ್ತಿಕೊಂಡು, ಗುಂಡು ಹಾರಿಸಿ ಕೊಂದಿದ್ದಾರೆ.

ಸೇನೆಯ ವಿಚಾರಣೆಯಲ್ಲಿ ಸೈನಿಕರು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಯ ಅಡಿಯಲ್ಲಿ ಅಧಿಕಾರವನ್ನು ಮೀರಿದ್ದಾರೆ ಮತ್ತು ಮುಖ್ಯ ಸೇನಾ ಸಿಬ್ಬಂದಿ ಮಾಡಬೇಕಾದ ಮತ್ತು ಮಾಡಬಾರದೆಂದು (COAS) ಸುಪ್ರೀಂ ಕೋರ್ಟ್ ಅನುಮೋದಿಸಿರುವುದರ ವಿರುದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ವಿಚಾರಣಾ ನ್ಯಾಯಾಲಯವು ಈಗಾಗಲೇ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಸೈನಿಕರ ಮೇಲೆ ದೋಷಾರೋಪಣೆ ಮಾಡಿದ್ದು, ಅವರ ವಿರುದ್ಧ ಸೇನಾ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದೆ.
ಎನ್‌ಕೌಂಟರ್ ನಲ್ಲಿ ಬಲಿಯಾದವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ಎನ್‌ಕೌಂಟರ್ ಸಾಕಷ್ಟು ವಿವಾದಗಳನ್ನು, ಆಕ್ರೋಶವನ್ನು ಸೃಷ್ಟಿಸಿತ್ತು.

ಕಾಶ್ಮೀರ ರಾಜಕೀಯ ಮುಖಂಡ ಒಮರ್ ಘಟನೆಯನ್ನು ಖಂಡಿಸಿದ್ದು, ಮೃತರ ಕುಟುಂಬ ಹೇಳಿರುವ ವಿಷಯವನ್ನು ಪೊಲೀಸರು ದೃಡಪಡಿಸಿದ್ದಾರೆ. ಮೂರು ಅಮಾಯಕರು ಉಗ್ರರ ಹಣೆಪಟ್ಟಿ ಹೊತ್ತು ಬಲಿಯಾದರು. ನಕಲಿ ಎನ್‌ಕೌಂಟರ್‌ಗಳು ಜನರ ನಂಬಿಕೆಯನ್ನು ನಾಶಮಾಡುತ್ತವೆ. ಅದು ಅವರನ್ನು (ಸರ್ಕಾರದಿಂದ) ದೂರಮಾಡುತ್ತವೆ. ಅವರು ಏಕೆ ಇನ್ನೂ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪ್ರತಿಕ್ರಿಯಿಸಿದ್ದಾರೆ.