ಹೈದರಾಬಾದ್ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿ, ಜೀವಂತವಾಗಿ ಸುಟ್ಟು ಹಾಕಿ ಪೈಶಾಚಿಕ ಕೃತ್ಯ ಎಸಗಿದ್ದ ನಾಲ್ವರು ದುಷ್ಕರ್ಮಿಗಳಿಗೆ ಪೊಲೀಸರು ತಕ್ಕ ಶಾಸ್ತಿಯನ್ನು ನೀಡಿದ್ದಾರೆ. ಎಲ್ಲಾ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಡೆಸಿ ಹತ್ಯೆ ಮಾಡಲಾಗಿದೆ.
ಈ ಮೂಲಕ ಅತ್ಯಾಚಾರಿಗಳಿಗೆ ಹೈದ್ರಾಬಾದ್ ಪೊಲೀಸರು ಸ್ಪಷ್ಟ ಸಂದೇಶ ರವಾನಿಸಿದ್ದು, ಪೊಲೀಸರ ಕಾರ್ಯಕ್ಕೆ ದೇಶ ವಿದೇಶಗಳಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ದೆಹಲಿಯಲ್ಲಿ ನಿರ್ಭಯಾಳನ್ನು ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಗೆ ಇನ್ನೂ ಶಿಕ್ಷೆ ಜಾರಿಯಾಗಿಲ್ಲ. ಈ ನಿರ್ಭಯಾ ಪ್ರಕರಣ ಹಸಿರಾಗಿರುವಾಗಲೇ ಹೈದ್ರಾಬಾದ್ ನಲ್ಲಿ ನವೆಂಬರ್ 27 ರಂದು ನಾಲ್ವರು ಕಿರಾತಕರು ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿ ಅವರನ್ನು ಸುಟ್ಟು ಹಾಕಿದ್ದರು. ಇದು ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದರು. ಶುಕ್ರವಾರ ಬೆಳಗಿನ ಜಾವ 3.30 ರ ವೇಳೆಗೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಸ್ಥಳಕ್ಕೆ ಮಹಜರು ಮಾಡಲೆಂದು ನಾಲ್ವರು ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲುನನ್ನು ಹೈದರಾಬಾದ್ ಹೊರವಲಯದ ಚಟಾನ್‌ಪಲ್ಲಿ ಬ್ರಿಡ್ಜ್ ಬಳಿ ಸೈಬರಾಬಾದ್ ಪೊಲೀಸ್ ಆಯುಕ್ತ ಕನ್ನಡಿಗ ವಿಶ್ವನಾಥ ಸಜ್ಜನರ್ ನೇತೃತ್ವದ ಪೊಲೀಸರ ತಂಡ ಕರೆದೊಯ್ದಿದೆ.
ಮಹಜರು ಆರಂಭಿಸಬೇಕೆನ್ನುವಷ್ಟರಲ್ಲಿ ಆರೋಪಿಗಳು ಏಕಾಏಕಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಅವರ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಕಲ್ಲು ತೂರಾಟ ಮತ್ತು ಹಲ್ಲೆಯನ್ನು ಮುಂದುವರಿಸಿದ್ದರಿಂದ ಪೊಲೀಸರು ಸ್ವಯಂರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ.
ಗುಂಡು ದೇಹದೊಳಗೆ ಸೇರುತ್ತಿದ್ದಂತೆಯೇ ಕುಸಿದು ಬಿದ್ದ ಆರೋಪಿಗಳನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅಸು ನೀಗಿದ್ದರು.
ದೇಶದೆಲ್ಲೆಡೆ ನಡೆದಿದ್ದ ಪ್ರತಿಭಟನೆ :
ನವೆಂಬರ್ 27 ರಂದು ಪಶುವೈದ್ಯೆಯನ್ನು ಹತ್ಯೆ ಮಾಡಿದ್ದನ್ನು ಖಂಡಿಸಿ ದೇಶಾದ್ಯಂತ ಮಹಿಳಾ ಸಂಘಟನೆಗಳು, ಸಾರ್ವಜನಿಕರು ನಿರಂತರ ಪ್ರತಿಭಟನೆ ನಡೆಸಿ ಆರೋಪಿಗಳಿಗೆ ತ್ವರಿತವಾಗಿ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತಾ ಬಂದಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಹಲವು ತಂಡಗಳನ್ನು ರಚಿಸಿಕೊಂಡು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದರು. ಇವರ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿ, ನಂತರ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಗುರುವಾರವಷ್ಟೇ ತಮ್ಮ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಇಡೀ ದಿನ ವಿಚಾರಣೆ ನಡೆಸಿ ಶುಕ್ರವಾರ ಬೆಳಗಿನ ಜಾವ ಸ್ಥಳ ಮಹಜರು ಮಾಡಲು ಆರೋಪಿಗಳನ್ನು ಕರೆದೊಯ್ದಿದ್ದರು.
ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ
ಈ ಪ್ರಕರಣ ಮತ್ತೊಂದು ನಿರ್ಭಯಾ ಪ್ರಕರಣವನ್ನು ಮರುಕಳಿಸುವಂತೆ ಮಾಡಿತ್ತು. ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಈ ಕಾಮುಕರಿಗೆ ಶಿಕ್ಷೆ ವಿಧಿಸಲು ಇನ್ನೂ ಹತ್ತಾರು ತಿಂಗಳು ಅಥವಾ ವರ್ಷವನ್ನೇ ತೆಗೆದುಕೊಳ್ಳುತ್ತಿತ್ತೋ ಏನೋ? ಏಕೆಂದರೆ, ದೆಹಲಿಯ ನಿರ್ಭಯಾ ಹತ್ಯಾಕಾಂಡ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದ್ದರೂ ಇನ್ನೂ ಜಾರಿಯಾಗಿಲ್ಲ.
ಆದರೆ, ಹೈದ್ರಾಬಾದ್ ಪ್ರಕರಣದಲ್ಲಿ ವಿಚಾರಣೆ ಆರಂಭಿಕ ಹಂತದಲ್ಲಿಯೇ ಎಲ್ಲಾ ಆರೋಪಿಗಳು ಪೊಲೀಸರ ಗುಂಡಿಗೆ ಬಲಿಯಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ರೀತಿ ಇತರೆ ಕಾಮುಕರಿಗೆ ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸುತ್ತಿರುವ ಸಾರ್ವಜನಿಕರು ಈ ಮೂಲಕ ಅತ್ಯಾಚಾರಕ್ಕೆ ಮುಂದಾಗುವ ದುಷ್ಕರ್ಮಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಪಾತಕಿಗಳಲ್ಲಿ ಒಬ್ಬನಾಗಿರುವ ಜೊಲ್ಲಾ ನವೀನ್ ಕುಟುಂಬದವರು ತಮ್ಮ ಮಗ ಮಾಡಿದ ಪಾಪಕ್ಕೆ ತಕ್ಕ ಶಾಸ್ತಿಯಾಗಿದೆ ಎಂದು ಹೇಳಿಕೊಳ್ಳುವ ಮೂಲಕ ಪ್ರಿಯಾಂಕ ರೆಡ್ಡಿ ಕುಟುಂಬದ ನೋವಿನಲ್ಲಿ ಭಾಗಿಯಾಗಿದ್ದಾರೆ.
ಇನ್ನು ದೆಹಲಿಯಲ್ಲಿ ಇದಕ್ಕಿಂತಲೂ ಕ್ರೂರವಾಗಿ ಅತ್ಯಾಚಾರ ಮತ್ತು ಹತ್ಯೆಗೀಡಾಗಿದ್ದ ವಿದ್ಯಾರ್ಥಿನಿ ನಿರ್ಭಯಾ ತಾಯಿ ತನ್ನ ಮಗಳನ್ನು ಬಲಿ ತೆಗೆದುಕೊಂಡವರಿಗೂ ಈ ರೀತಿಯ ಶಿಕ್ಷೆಯಾಗಬೇಕು ಮತ್ತು ಆದಷ್ಟೂ ಬೇಗ ಶಿಕ್ಷೆಯನ್ನು ಜಾರಿಗೆ ತಂದು ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಇನ್ನೂ ಅಂಗಲಾಚುತ್ತಿದ್ದಾರೆ.
ಇನ್ನು ದೇಶ ವಿದೇಶಗಳಿಂದಲೂ ಪೊಲೀಸರು ನಡೆಸಿದ ಎನ್ ಕೌಂಟರ್ ಪ್ರಕರಣಕ್ಕೆ ಶ್ಲಾಘನೆಯ ಮಹಾಪೂರವೇ ಹರಿದುಬರುತ್ತಿದೆ. ಪಾತಕ ಕೃತ್ಯ ಎಸಗಿದವರಿಗೆ ಪೊಲೀಸರು ತಕ್ಕ ಶಿಕ್ಷೆ ನೀಡಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಬರತೊಡಗಿವೆ.
ಮೊಸರಲ್ಲಿ ಕಲ್ಲು ಹುಡುಕಬೇಡಿ
ಸಾಮಾನ್ಯವಾಗಿ ದೇಶದ ಯಾವುದೇ ಮೂಲೆಯಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿದರೂ ಅದಕ್ಕೊಂದು ಕೌಂಟರ್ ಕೊಡಲು ಕೆಲವು ಸಂಘಟನೆಗಳು ಸಿದ್ಧವಾಗಿರುತ್ತವೆ. ಪೊಲೀಸರು ನಿಜವಾಗಿಯೂ ದುಷ್ಕರ್ಮಿಗಳ ಅಟ್ಟಹಾಸವನ್ನು ಮಟ್ಟ ಹಾಕಲು ಎನ್ ಕೌಂಟರ್ ಮಾಡಿದರೂ ಅದಕ್ಕೆ ಕೆಲ ಸಂಘಟನೆಗಳು ಆಕ್ಷೇಪವೆತ್ತುವುದು ಸಾಮಾನ್ಯವಾಗಿದೆ. ದುಷ್ಕರ್ಮಿಗಳು ಅದೆಷ್ಟೇ ಸಮಾಜಘಾತುಕ ಕೃತ್ಯಗಳನ್ನು ನಡೆಸಿದ್ದರೂ, ಅದೆಷ್ಟೇ ಹತ್ಯೆಗಳಿಗೆ ಕಾರಣರಾಗಿದ್ದರೂ, ಸಾರ್ವಜನಿಕರಿಗೆ ಹಿಂಸೆ ನೀಡಿದವರಾಗಿದ್ದರೂ ಅವರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದರೆ ಅದು ಸರಿಯಿಲ್ಲ. ಅದೊಂದು ನಕಲಿ ಎನ್ ಕೌಂಟರ್ ಎಂದು ಗುಲ್ಲೆಬ್ಬಿಸಿ ಇಡೀ ಪ್ರಕರಣವನ್ನೇ ಬುಡಮೇಲು ಮಾಡಲು ಕೆಲ ಸಂಘಟನೆಗಳು ಮುಂದಾಗುತ್ತವೆ.
ಏಕೆಂದರೆ, ಈ ಸಂಘಟನೆಗಳಿಗೆ ಆರೋಪಿ ಎಷ್ಟೇ ಕ್ರೂರಿಯಾಗಿದ್ದರೂ ಆತನ ಮಾನವ ಹಕ್ಕು ವಿಚಾರದ ಬಗ್ಗೆ ಚಿಂತಿಸುತ್ತವೆ. ಆದರೆ, ಹತ್ಯೆಗೂ ಮುನ್ನ ಆತ ನಡೆಸಿದ್ದ ಕುಕೃತ್ಯಗಳು, ಅದೆಷ್ಟೋ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಮಾತ್ರ ಇವುಗಳ ಕಣ್ಣಿಗೆ ಬೀಳುವುದೇ ಇಲ್ಲ.
ಇದೀಗ ಹೈದ್ರಾಬಾದ್ ನಲ್ಲಿ ನಡೆದಿರುವ ಈ ಎನ್ ಕೌಂಟರ್ ಬಗ್ಗೆಯೂ ಆಕ್ಷೇಪಗಳು ಬರುವುದಿಲ್ಲ ಎಂದು ಹೇಳಲಾಗದು. ಆದರೆ, ಇಲ್ಲಿ ಪ್ರಕರಣದ ಪೈಶಾಚಿಕತೆ ಮತ್ತು ಗಂಭೀರತೆಯನ್ನೊಮ್ಮೆ ಕೆಲವು ಸಂಘಟನೆಗಳು ನೆನಪಿಸಿಕೊಳ್ಳಬೇಕು. ಇದನ್ನು ಬಿಟ್ಟು ಕೇವಲ ಪೊಲೀಸರ ಎನ್ ಕೌಂಟರ್ ಬಗ್ಗೆ ಚಿಂತಿಸಬಾರದು.
ಕನ್ನಡಿಗನ ನೇತೃತ್ವ
ಸೈಬರಾಬಾದ್ ನ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್ ನೇತೃತ್ವದ ಪೊಲೀಸರ ತಂಡ ಈ ಎನ್ ಕೌಂಟರ್ ಮಾಡಿ ಕ್ರಿಮಿಗಳನ್ನು ಒಸಕಿ ಹಾಕಿದೆ. ಅಂದ ಹಾಗೆ ಸಜ್ಜನರ್ ಅವರು ಹುಬ್ಬಳ್ಳಿ ಮೂಲದ ಕನ್ನಡಿಗ ಪೊಲೀಸ್ ಅಧಿಕಾರಿಯಾಗಿದ್ದಾರೆ. ಕಳೆದ ಕೆಲವು ದಶಕಗಳಿಂದ ಅವಿಭಜಿತ ಆಂಧ್ರಪ್ರದೇಶದ ವಿವಿಧ ಪ್ರದೇಶಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸಜ್ಜನರ್ ಖಡಕ್ ಆಫೀಸರ್ ಎಂದೇ ಖ್ಯಾತಿಯನ್ನು ಗಳಿಸಿದ್ದಾರೆ.
ಅಲ್ಲದೇ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂಬ ಹಿರಿಮೆಯನ್ನೂ ಹೊಂದಿದ್ದಾರೆ. ಅವರ ದಕ್ಷತೆಯಿಂದಾಗಿ ಸರ್ಕಾರ ಪ್ರಿಯಾಂಕ ರೆಡ್ಡಿ ಪ್ರಕರಣವನ್ನು ಇವರ ಹೆಗಲಿಗೆ ಹಾಕಿತ್ತು.
ಅತ್ಯಾಚಾರದ ನಂತರ ಜೀವಂತ ಸುಟ್ಟಿದ್ದರು
ನವೆಂಬರ್ 27ರ ಬುಧವಾರ 9.15ರ ಸುಮಾರಿಗೆ 27 ವರ್ಷದ ಪಶುವೈದ್ಯೆಯ ಸ್ಕೂಟರ್ ಪಂಚರ್ ಆಗಿತ್ತು. ಪಂಚರ್ ಹಾಕಿಕೊಡುವ ನೆಪದಲ್ಲಿ ಈ ನಾಲ್ವರು ದುಷ್ಕರ್ಮಿಗಳು ವೈದ್ಯೆಯನ್ನು ಅಪಹರಿಸಿ ಬ್ರಿಡ್ಜ್ ಕೆಳಗಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಗೆ ಮದ್ಯವನ್ನು ಕುಡಿಸಿ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ನಂತರ ಜೀವಂತವಿದ್ದಾಗಲೇ ಆಕೆಯನ್ನು ಪೆಟ್ರೋಲ್ ಸುರಿದು ಸುಟ್ಟಿದ್ದರು. ನವೆಂಬರ್ 28ರ ಬೆಳಗ್ಗೆ ಸುಟ್ಟುಹೋಗಿದ್ದ ಶವದ ಅವಶೇಷಗಳು ಪತ್ತೆಯಾಗಿದ್ದವು.
ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮರುದಿನವೇ ಆರೋಪಿಗಳ ಜಾಡು ಹಿಡಿದ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.