ಕಾಂಗ್ರೆಸ್‌ನ ನೂತನ ಅಧ್ಯಕ್ಷ ಡಿ ಕೆ ಶಿವಕುಮಾರ್, ಇನ್ನೂ ಬಹಿರಂಗವಾಗಿ ಅಧಿಕಾರ ಸ್ವೀಕಾರಕ್ಕೆ ಕೆಲವೇ ದಿನಗಳು ಇರುವಾಗ ಸಮಸ್ಯೆ ಒಂದನ್ನು ತಲೆ ಮೇಲೆ ಎಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಕಳೆದ 3 ವಾರಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಲೇ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನಕ್ಕೆ ಬೇಡಿಕೆ ಹೆಚ್ಚಾದ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಆಗುವುದು ಸಹಜ. ಆದರೆ ಇದೀಗ ಕರೋನಾ ಸಂಕಷ್ಟದಿಂದ ಬೇಡಿಕೆ ಕುಸಿದಿದ್ದು, ಗಲ್ಫ್ ರಾಷ್ಟ್ರಗಳು ಇಂಧನ ಖರೀದಿ ಮಾಡಿದರೆ ಸಾಕು ಎನ್ನುವ ಸ್ಥಿತಿಯಲ್ಲಿವೆ. ಪರಿಸ್ಥಿತಿ ಹೀಗಿರುವಾಗ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಬರೋಬ್ಬರಿ 22ನೇ ಬಾರಿ ಏರಿಕೆ ಮಾಡಿದೆ.
ಭಾರತ ಸರ್ಕಾರದ ನಿಯಂತ್ರಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣದಲ್ಲಿ ಇಲ್ಲ ಎನ್ನುವುದು ಗೊತ್ತಿದ್ದರೂ ನಿರಂತರ ಹಾಗೂ ದಾಖಲೆಯ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ತಡೆಯಬಹುದಿತ್ತು. ಆದರೆ ಕೇಂದ್ರ ಸರ್ಕಾರತ ಮೌನಕ್ಕೆ ಶರಣಾಗಿದೆ. ಕಾಂಗ್ರೆಸ್ ಮಾತ್ರ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇಂದೂ ಕೂಡ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು. ರಾಜ್ಯದಲ್ಲೂ ಕೆಪಿಸಿಸಿ ಕಚೇರಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜನ ಜಾತ್ರೆ ಸೇರಿತ್ತು. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸೇರಿದಂತೆ ಸಾಕಷ್ಟು ನಾಯಕರು ಮನೆಯಿಂದ ಸೈಕಲ್ ಏರಿ ಕೆಪಿಸಿಸಿ ಕಚೇರಿಗೆ ಬಂದಿದ್ದರು. ಅಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಸುಮಾರು ಸಾವಿರ ಜನರು ಭಾಗಿಯಾಗಿದ್ದರು. ಮಾಸ್ಕ್, ಸಾಮಾಜಿಕ ಅಂತರ ಯಾವುದೂ ಇರಲಿಲ್ಲ. ಕರೋನಾ ಸೋಂಕು ಏರುಗತಿಯಲ್ಲಿ ಹೋಗುತ್ತಿರುವಾಗ ಕಾಂಗ್ರೆಸ್ ನಡೆದುಕೊಂಡ ರೀತಿ ಜನಾಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಯಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡದೆ ಮಾಸ್ಕ್ ಧರಿಸದೆ ಪ್ರತಿಭಟನೆ ಮಾಡಿದ್ದನ್ನು ಸ್ವತಃ ಗೃಹ ಸಚಿವ ಆಕ್ಷೇಪ ವ್ಯಕ್ತಪಡಿಸಿದ್ದಾರೆ. National Disaster Management Act ಪ್ರಕಾರ ದೂರು ದಾಖಲು ಮಾಡುವುದಾಗಿ ತಿಳಿಸಿದ್ರು. ಹೋಂ ಮಿನಿಸ್ಟರ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋಡ್, ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಕಾನೂನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ವಿರುದ್ಧ ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸಿದ ಬಳಿಕ National Disaster Management Act ಹಾಗೂ ಇತರೆ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು ಇಂದಿನ ಪ್ರತಿಭಟನೆಗೆ ಅನುಮತಿ ಕೋರಿದ್ದರು ಆದರೆ, ಕೋವಿಡ್ 19 ವಿಷಮ ಸ್ಥಿತಿಯಲ್ಲಿ ಬೆಂಗಳೂರು ನಗರ ಸಿಲುಕಿ ತೋಳಲಾಡುತ್ತಿರುವ ಕಾರಣ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ಪಟ್ಟು ಬಿಡದ ಕಾಂಗ್ರೆಸ್ ನಾಯಕರು ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ಮಾಡಿದರು. ಕೊನೆಗೆ ಜನರ ಎದುರು ನಾಯಕರು ಭಾಷಣವನ್ನೂ ಮಾಡಿದರು. ಮಾಧ್ಯಮಗಳಲ್ಲಿ ಸಾಮಾಜಿಕ ಅಂತರದ ಬಗ್ಗೆ ವರದಿಯಾಗುತ್ತಿದ್ದಂತೆ ಸಾಮಾಜಿಕ ಅಂತರದ ಬಗ್ಗೆ ಕಾರ್ಯಕರ್ತರಿಗೆ ತಿಳಿ ಹೇಳುವ ರೀತಿ ಮಾಡಿದರು.
ಕಾಂಗ್ರೆಸ್ ನಾಯಕರು ಗುಂಪುಗೂಡಿ ಪ್ರತಿಭಟನೆ ಮಾಡಿದ್ದು ಅಕ್ಷಮ್ಯ ಅಪರಾಧ. ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಿಸುವ ಸರ್ಕಾರದ ನಿರ್ಧಾರ ಶೇಕಡ 100ಕ್ಕೆ ನೂರಷ್ಟು ಸರಿಯಾಗಿದೆ. ಕಾಂಗ್ರೆಸ್ ನಾಯಕರಿಗೆ ಸರಿಯಾಗಿ ಬುದ್ಧಿ ಕಲಿಸಲೇಬೇಕಿದೆ. ಈ ರೀತಿ ಕಾನೂನು ಇಲಾಖೆ ಅನುಮತಿಯನ್ನೂ ಪಡೆಯದೆ ನೂರಾರು ಜನರನ್ನು ಒಟ್ಟಿಗೆ ಸೇರಿಸಿ ಕರೋನಾ ಸೋಂಕು ಹರಡುವುದಕ್ಕೆ ಪೂರಕವಾಗಿ ನಡೆದುಕೊಂಡಿದ್ದಾರೆ. ಭಾರತದ ಸಂವಿಧಾನವನ್ನು ಉಲ್ಲಂಘಿಷಿ ನಡೆದುಕೊಂಡವರ ವಿರುದ್ಧ ಕಾನೂನು ತನ್ನದೇ ಆದ ಕ್ರಮವನ್ನು ಕೈಗೊಳ್ಳಲಿದೆ. ಆದರೆ ಆಡಳಿತ ಪಕ್ಷದ ನಾಯಕರು ಏನು ಮಾಡಿದರೂ ನಡೆಯುತ್ತದೆ. ವಿರೋಧ ಪಕ್ಷದ ನಾಯಕರು ಮಾತ್ರ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ ಎಂದರೆ ಯಾವ ನ್ಯಾಯ ಅಲ್ಲವೇ..?

ಬಿಜೆಪಿ ನಾಯಕರು ಮಾಡಿದ್ದೇನು?
ಚಿತ್ರದುರ್ಗ ಜಿಲ್ಲೆಯಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು 500ಕ್ಕೂ ಜನರನ್ನು ಸೇರಿಸಿಕೊಂಡು ಸೇಬಿನ ಹಾರ ಹಾಕಿಸಿಕೊಂಡು ದರ್ಬಾರ್ ನಡೆಸಿದ್ದರು. ಆದರೆ ಚಿತ್ರದುರ್ಗದ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿತ್ತು. ಅದೇ ರೀತಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸ್ವಕ್ಷೇತ್ರ ಗೋಕಾಕ್‌ನಲ್ಲಿ ನೂರಾರು ಬೆಂಬಲಿಗರನ್ನು ಸೇರಿಸಿಕೊಂಡು ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹೆಸರಲ್ಲಿ ಪ್ರಚಾರ ನಡೆಸಿದ್ದರು, ಅಲ್ಲಿಯೂ ಜಿಲ್ಲಾಡಳಿತ ಕಂಡು ಕಾಣದಂತೆ ಇತ್ತು.

ರಾಯಚೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಜನಸಂದಣಿ ನಡುವೆ ಪ್ರವಾಸ ನಡೆಸಿದ್ದರು ಅಲ್ಲಿಯೂ ಯಾರಿಗೂ ಗೊತ್ತಾಗಲಿಲ್ಲ. ಇತ್ತ ಉಡುಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಾಮಾಜಿಕ ಅಂತರಕ್ಕೆ ಎಳ್ಳು ನೀರು ಬಿಟ್ಟು ಕಾರ್ಯಕ್ರಮ ಮಾಡಿದ್ದರು ಯಾರೂ ನೋಡಲಿಲ್ಲ. ಆದರೆ ಕಾಂಗ್ರೆಸ್ ನಾಯಕರು ಮಾಡಿದ ಕಾರ್ಯಕ್ರಮವನ್ನು ಮಾಧ್ಯಮಗಳೂ ಸೇರಿದಂತೆ ಎಲ್ಲರೂ ನೋಡಿದ್ದಾರೆ. ಈಗ ಕೇಸ್ ಕೂಡ ಬುಕ್ ಆಗಿದೆ.
ಕೇಸ್ ಆಗುತ್ತೆ, ಕೋರ್ಟ್‌ಗೆ ಕೇಸ್ ಬರುತ್ತೆ.. ಮುಂದೇನು..?
ಡಿ ಕೆ ಶಿವಕುಮಾರ್ ಸರ್ಕಾರದ ಅನುಮತಿ ಸಿಗದಿದ್ದಕ್ಕೆ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನೇ ಮುಂದೂಡಿಕೆ ಮಾಡಿದ್ದರು. ಆದರೆ, ಯಾವಾಗ ಕೇವಲ ವಿರೋಧ ಪಕ್ಷದ ನಾಯಕರನ್ನು ಮಾತ್ರ ಗುರಿಯಾಗಿಸಿ ಪ್ರಕರಣ ದಾಖಲಿಸುತ್ತಿರುವುದನ್ನು ಗಮನಿಸಿದ ಡಿ ಕೆ ಶಿವಕುಮಾರ್, ಪ್ರತಿಭಟನಾ ಕಾರ್ಯಕ್ರಮಕ್ಕೆ ಅನುಮತಿ ಸಿಗದಿದ್ದರೂ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದರು.
ಇದೀಗ ಪೊಲೀಸರು ಕೇಸ್ ಹಾಕಿ ಕೋರ್ಟ್ ಎದುರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದಾಗ, ಸರ್ಕಾರದ ಮಂತ್ರಿಗಳು, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸೇರಿದಂತೆ ಹತ್ತಾರು ಕಡೆ ಇದೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಆದರೆ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ನಮ್ಮ ಮೇಲೆ ದೂರು ದಾಖಲಿಸಿದೆ. ನಮ್ಮ ತಪ್ಪಿಗೆ ಕ್ಷಮೆಯಾಚಿಸುತ್ತೇವೆ, ಆದರೆ ಸರ್ಕಾರದ ಮಂತ್ರಿಗಳೂ ಸೇರಿದಂತೆ ಎಲ್ಲರ ಮೇಲೂ ಕ್ರಮಕ್ಕೆ ಸೂಚಿಸಬೇಕು ಎನ್ನುವ ಮೂಲಕ ಕೋರ್ಟ್‌ಗೆ ಎಳೆಯುವ ಉದ್ದೇಶವೂ ಇದೆ ಎನ್ನಲಾಗ್ತಿದೆ. ಆದರೆ ಸರ್ಕಾರ ಕೇಸ್ ಎಂದು ಜನರ ಎದುರು ಹೇಳಿ ಆ ಬಳಿಕ ಸುಮ್ಮನಾಗುವ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಈ ಕೇಸ್ ಏನಾಗುತ್ತೆ ಕಾದು ನೋಡ್ಬೇಕು.
