ಕರೋನಾ ನಿಯಂತ್ರಣ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸೋತಿದ್ದು, ದೇಶದಲ್ಲಿ ಕರೋನಾ ಹೆಚ್ಚಾಗಲು ಸರ್ಕಾರದ ಗೊಂದಲಕಾರಿ ನೀತಿಗಳೇ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆದಿದ್ದರು. ಇನ್ನೂ ರಾಜ್ಯ ಸರ್ಕಾರದ ಹಲವು ಮಂತ್ರಿಗಳ ನಡುವೆ ಸಾಮರಸ್ಯದ ಕೊರತೆ ಇದೆ ಎಂದು ಸಿದ್ದರಾಮಯ್ಯ ಕುಟುಕಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ ನಾಯಕರು, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಸಮನ್ವಯತೆ ಇದೆಯೇ ಎಂದು ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದರು. ಆದರೀಗ ಕಾಂಗ್ರೆಸ್ ನಾಯಕರ ಹೊಂದಾಣಿಕೆ ಕಂಡು ಕಮಲ ನಾಯಕರು ಕರುಬುವಂತಾಗಿದೆ.
ಹಾಸಿಗೆ ಬಾಡಿಗೆ 800, ಸ್ವಂತಕ್ಕಾದ್ರೆ ಎಷ್ಟು..?
ಕರೋನಾ ರೋಗ ಲಕ್ಷಣ ಇಲ್ಲದವರನ್ನು ಪ್ರತ್ಯೇಕ ಇಡುವುದಕ್ಕೆ ರಾಜ್ಯ ಸರ್ಕಾರ ಕೋವಿಡ್ ಸೆಂಟರ್‌ಗಳಲ್ಲಿ ವ್ಯವಸ್ಥೆ ಮಾಡುತ್ತಿದೆ. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಒಂದರಲ್ಲೇ 10,100 ಹಾಸಿಗೆ ಸೌಲಭ್ಯವುಳ್ಳ ಕೋವಿಡ್ ಸೆಂಟರ್ ಮಾಡಲಾಗ್ತಿದೆ. ಆ ಸೆಂಟರ್‌ನ ಒಂದು ಹಾಸಿಗೆಗೆ ದಿನವೊಂದಕ್ಕೆ 800 ರೂಪಾಯಿ ಬಾಡಿಗೆ ಕೊಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಯಾವಾಗ ರಾಜ್ಯ ಸರ್ಕಾರ ಬಾಡಿಗೆ ಲೆಕ್ಕದಲ್ಲಿ ಹಣ ಕೊಡುವುದಕ್ಕೆ ವಿರೋಧ ಪಕ್ಷಗಳು ವಿರೋಧ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಖರೀದಿ ಮಾಡುವುದಕ್ಕೆ ಮುಂದಾಗಿತ್ತು. ಒಟ್ಟು ಏಳೂವರೆ ಕೋಟಿ ಹಣ ನೀಡಿ ಖರೀದಿ ಮಾಡಲು ಸಿಎಂ ಸೂಚನೆಯನ್ನೂ ಕೊಟ್ಟಿದ್ದರು. ಇವತ್ತು ಕಾಂಗ್ರೆಸ್ ಮಾಡಿದ ಈ ಕೆಲಸ ಬಿಜೆಪಿ ಸರ್ಕಾರವನ್ನು ಅಣಕಿಸುವಂತಿದೆ.
ಕಾಂಗ್ರೆಸ್ ಪಕ್ಷ ಪ್ರಾಯೋಗಿಕವಾಗಿ 650 ಹಾಸಿಗೆಗಳನ್ನು ಖರೀದಿಸಿದ್ದು, ರಾಯಚೂರಿಗೆ 100, ಕಲಬುರಗಿಗೆ 550 ಹಾಸಿಗೆಗಳನ್ನು ರವಾನೆ ಮಾಡಲಾಗಿದೆ. ಕಾಂಗ್ರೆಸ್‌ನ ಮಾಜಿ ಸಚಿವ ಪ್ರಿಯಾಂಕಾ ಖರ್ಗೆ, ಹಾಸಿಗೆ ತುಂಬಿದ್ದ ಲಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ. ರಾಜ್ಯ ಸರ್ಕಾರ ಬಾಡಿಗೆ ಬದಲು ಕೇವಲ 900 ರೂಪಾಯಿಗಳಲ್ಲಿ ಸಿಗುವ ಹಾಸಿಗೆ ಖರೀದಿಸಬಹುದು. ಸರ್ಕಾರ ಬಾಡಿಗೆ ಹಾಸಿಗೆ ಬದಲು ಕಡಿಮೆವೆಚ್ಚದ ಹಾಸಿಗೆ ಖರೀದಿ ಮಾಡಲಿ ಎಂದು ಕಾಂಗ್ರೆಸ್ ಸಲಹೆ ನೀಡಿದೆ. ಸುಲಭವಾಗಿ ವಿಲೇವಾರಿ ಮಾಡಬಹುದಾದ ಪರಿಸರ ಸ್ನೇಹಿ ಹಾಸಿಗೆ ಇದಾಗಿದ್ದು, ದೆಹಲಿ ಸರ್ಕಾರ 10 ಸಾವಿರ ಹಾಗೂ ಆಂಧ್ರಪ್ರದೇಶ 5 ಸಾವಿರ ಹಾಸಿಗೆ ಖರೀದಿ ಮಾಡಿವೆ. ನಮ್ಮ ರಾಜ್ಯದಲ್ಲೂ ಪ್ರಾಯೋಗಿಕ ಕಾಂಗ್ರೆಸ್ 650 ಹಾಸಿಗೆ ಹಂಚಿಕೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದ ವಾಡ್ ಪ್ಯಾಕ್ ಕಾರ್ಖಾನೆ ಬಳಿ ಮಾತನಾಡಿದ ಡಿ.ಕೆ ಶಿವಕುಮಾರ್, ಈ ಕಂಪನಿಯ ಬೆಡ್‌ಗಳು ಪರಿಸರ ಸ್ನೇಹಿ ಆಗಿವೆ. ದೆಹಲಿಯಲ್ಲೂ ಸಹ ಇದೇ ರೀತಿಯ ಬೆಡ್‌ಗಳನ್ನು ಉಪಯೋಗಿಸಲಾಗ್ತಿದೆ. 300 ಕೆಜಿ ತೂಕವನ್ನು ಈ ಬೆಡ್ ಮೇಲೆ ಹಾಕಿದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಸರ್ಕಾರ ಮಾತನಾಡಿ ಒಪ್ಪಂದ ಮಾಡಿಕೊಂಡರೆ ತಲಾ 850 ರೂಪಾಯಿಗೂ ಬೆಡ್ ಒದಗಿಸಲು ಕಂಪನಿ ಸಿದ್ಧವಿದೆ. ಆದರೆ ನಮ್ಮ ರಾಜ್ಯ ಬಿಜೆಪಿ ಸರಕಾರ ಒಂದು ಬೆಡ್‌ಗೆ ದಿನವೊಂದಕ್ಕೆ 800 ರೂಪಾಯಿ ಬಾಡಿಗೆ ಕೊಡಲು ಸಿದ್ಧವಾಗಿತ್ತು. ಈ ಕಂಪನಿಯಿಂದ ಬೆಡ್ ಖರೀದಿಸಿದರೆ ಬೆಡ್, ಬ್ಲಾಂಕೆಟ್ ಸೇರಿ ಒಂದು ಸಾವಿರ ರೂಪಾಯಿಯಲ್ಲಿ ಎಲ್ಲವೂ ಮುಗಿಯುತ್ತದೆ. ಸರ್ಕಾರಕ್ಕೂ ಸಹ ಈ ಬೆಡ್ ಒಂದನ್ನು ಗಿಫ್ಟ್ ಕಳುಹಿಸುತ್ತೇನೆ ಎಂದಿದ್ದಾರೆ ಡಿ.ಕೆ ಶಿವಕುಮಾರ್.
ಸಿದ್ದರಾಮಯ್ಯನವರು ಲೆಕ್ಕ ಕೊಡಿ ಎಂದು ಸರ್ಕಾರವನ್ನು ಕೇಳಿದ್ದಾರೆ. ನಾನೂ ಕೂಡ ಸರ್ಕಾರವನ್ನು ಉತ್ತರ ಕೊಡಿ ಎಂದು ಕೇಳುತ್ತಿದ್ದೇನೆ. ಸಿದ್ದರಾಮಯ್ಯನವರ ಲೆಕ್ಕ ಕೊಡಿ ಕಾರ್ಯಕ್ರಮ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ರಾಜ್ಯ ಸರ್ಕಾರ ಕರೋನಾ ವಿಚಾರದಲ್ಲಿ ವೆಚ್ಚ ಮಾಡಿರುವುದನ್ನು ರಾಜ್ಯದ ಎದುರು ಬಿಚ್ಚಿಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಬಿಬಿಎಂಪಿಗೆ ನೂತನವಾಗಿ ವರ್ಗವಾಗಿ ಬಂದಿರುವ ನೂತನ ಆಯುಕ್ತ ಮಂಜುನಾಥ್ ಪ್ರಸಾದ್, ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ್ದು, ತನ್ನ ಮುಂದಿರುವ ಸವಾಲುಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಸಾವಿನ ಪ್ರಮಾಣ ಕಡಿಮೆ ಮಾಡುವುದು. ಟೆಸ್ಟ್ ರಿಪೋರ್ಟ್ ಬೇಗ ಸಿಗುವಂತೆ ಮಾಡುವುದು, ಕೋ ಮಾರ್ಬಿಡ್ ಕಂಡೀಶನ್ ಇರುವವರಿಗೆ ತಪ್ಪದೇ ಪರೀಕ್ಷೆ ಮಾಡುವುದು. ಏ ಸಿಂಪ್ಟಮ್ಯಾಟಿಕ್ ಇರುವವರಿಗೆ ಬಲವಂತವಾಗಿ ಆಸ್ಪತ್ರೆಗೆ ಕರೆತರುವುದನ್ನು ತಡೆಯುವುದು. ಸರ್ವೇಲೆನ್ಸ್ ಮತ್ತು ಕಾಂಟ್ಯಾಕ್ಟ್ ಟ್ರೇಸಿಂಗ್ ವೇಗ ಹೆಚ್ಚಿಸುವುದು. 35 ಸಾವಿರ ಸರ್ಕಾರಿ ಸಿಬ್ಬಂದಿಯನ್ನು ಗುರುತಿಸಿದ್ದು, ಇವರಲ್ಲಿ ಶೇಕಡ 25 ರಷ್ಟು ಜನ ಕೋವಿಡ್ ಭಯದಿಂದ ಕೆಲಸಕ್ಕೆ ಹಾಜರಾಗಿಲ್ಲ. ಎಲೆಕ್ಷನ್ ವೇಳೆ ಮಾಡಿದಂತೆ ಪೋಲಿಸ್ ಸ್ಟೇಷನ್, ಬೂತ್ ಲೆಕ್ಕದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಈಗಾಗಲೇ 20 ಸಾವಿರ ಆಂಟಿಜನ್ ಟೆಸ್ಟ್ ಬೆಂಗಳೂರಿನಲ್ಲಿ ಎಲ್ಲೆಡೆ ಕಳಿಸಲಾಗಿದೆ, ಸಹಜ ಸಾವಿನಸಂದರ್ಭದಲ್ಲಿ ಇನ್ಮೇಲೆ ಕೋವಿಡ್ ಟೆಸ್ಟ್ ಮಾಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ಹೊಸಾ ನಿಯಮಗಳ ಪಟ್ಟಿ ಬಿಡುಗಡೆಯಾಗುತ್ತದೆ ಎಂದಿದ್ದಾರೆ. ಇನ್ನೂ ಪ್ರಮುಖವಾಗಿ ಬಿಬಿಎಂಪಿ ಪ್ರತಿ ಖರೀದಿ, ವೆಚ್ಚ ಎಲ್ಲವನ್ನೂ ಇನ್ಮೇಲೆ ಬಿಬಿಎಂಪಿ ವೆಬ್ ಸೈಟಿನಲ್ಲಿ ಲಭ್ಯ ಆಗುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರವೂ ಇನ್ನು ಮುಂದೆ ಬೇಕಾಬಿಟ್ಟಿ ವೆಚ್ಚ ಮಾಡಿದ್ರೆ, ರಾಜ್ಯದ ಜನತೆ ಎದುರು ಮಂಡಿಯೂರುವ ಕಾಲ ಬಂದೇ ಬರುತ್ತದೆ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಆಗುವಂತೆ ಮಾಡುವ ಪ್ರಯತ್ನದಲ್ಲಿ ಯಶಸ್ಸು ಸಾಧಿಸುವುದು ಕಷ್ಟ. ಡಿ.ಕೆ ಶಿವಕುಮಾರ್ ಲೆಕ್ಕ ಕೇಳಲು ಇದು ಸಮಯವಲ್ಲ ಎಂದಾಗ ಸಿದ್ದರಾಮಯ್ಯ ಕೊಟ್ಟಿದ್ದ ಉತ್ತರ, ಡಿ ಕೆ ಶಿವಕುಮಾರ್ ಹಾಗೆ ಹೇಳಿರುವುದಿಲ್ಲ ಎಂದಿದ್ದರು. ಇದೀಗ ಸಿದ್ದರಾಮಯ್ಯ ಅವರ ಲೆಕ್ಕ ಕೊಡಿ ಕಾರ್ಯಕ್ರಮವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಯೋಜನೆ ಮಾಡುತ್ತೇವೆ ಎಂದು ಸ್ವತಃ ಡಿ.ಕೆ ಶಿವಕುಮಾರ್ ಹೇಳಿರುವುದು ಕಾಂಗ್ರೆಸ್ ಒಗ್ಗಟ್ಟನ್ನು ತೋರಿಸುತ್ತಿದೆ. ಈ ಒಗ್ಗಟ್ಟು ಕಮಲ ನಾಯಕರಿಗೆ ನುಂಗಲಾರದ ತುತ್ತಾಗಿದೆ.