ಕಳೆದ ವರ್ಷವೇ ನಡೆದ ರಾಜ್ಯದ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ನಡೆದ ಪ್ರತಿಯೊಂದು ಘಟನೆಗಳೂ ರಾಜಕೀಯ ವಿವಾದವನ್ನೇ ಸೃಷ್ಟಿಸುತ್ತಿವೆ. ಅದರ ಕೇಂದ್ರ ಬಿಂದು ಅತಂತ್ರ ಜನಾದೇಶ. ಅದು ಬಿಜೆಪಿಯಿಂದ, ಸಮ್ಮಿಶ್ರವೆಂಬ ಸರಕಾರದಿಂದ ತೊಡಗಿ ಚುನಾವಣಾ ಆಯೋಗದವರೆಗೂ ಬಂದು ನಿಲ್ಲುತ್ತದೆ.
ಎಲ್ಲಾ ರಾಜಕೀಯ ವಿವಾದಗಳ ಆರಂಭವಾಗಿ ಬಂದು ಹೋದದ್ದು ಬಹುಮತವಿಲ್ಲದೇ ಸರಕಾರ ಮಾಡಿ ಬಹುಮತ ಸಾಬೀತ ಮಾಡಲು ವಿಫಲವಾದ ಬಿಜೆಪಿಯ ಯಡಿಯೂರಪ್ಪನವರ `ದೋ ದಿನ್ ಕಾ ಸುಲ್ತಾನ’ ಸರಕಾರ. ನಂತರ ಬಂದದ್ದು ಬಿಜೆಪಿಯೇತರ ಕಾಂಗ್ರೆಸ್-ಜೆಡಿಎಸ್ “ಮೈತ್ರಿ ಸರಕಾರ.” ಅದಕ್ಕೆ ಕಾಗದದ ಮೇಲೆ ಸಂಖ್ಯಾಬಲವಿತ್ತು. ಆದರೆ, ಮಾನಸಿಕವಾಗಿ ಮತ್ತು ರಾಜಕೀಯವಾಗಿ ತದ್ವಿರುದ್ದವಿರುವ ಅವುಗಳಲ್ಲಿ ಹೊಂದಾಣಿಕೆಯಿರದೇ ಒಂದು ವರ್ಷದ ನಂತರ ಕುಸಿದು ಬಿದ್ದಿತು.
ನಂತರ ಬಂದದ್ದು ಮೂರನೆಯ ಮತ್ತು ಈ ಅವಧಿಯಲ್ಲಿನ ಬಿಜೆಪಿ ಮತ್ತು ಯಡಿಯೂರಪ್ಪನವರ ಹಿರಿತನದ ಎರಡನೆಯ ಸರಕಾರ. ಬಹುಮತದ ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಕಾಣದಿದ್ದರೂ, ಬಿಜೆಪಿ ಸರಕಾರ ರಚಿಸಿದೆ. ಅತಂತ್ರದ ನೆರಳಿನಲ್ಲಿಯೇ ಸರಕಾರ ರಚಿಸಲು ಮುಂದಾದವರು ಯಡಿಯೂರಪ್ಪನವರೋ ಅಥವಾ ಬಿಜೆಪಿ ರಾಷ್ಟ್ರೀಯ ವರಿಷ್ಠ ಮಂಡಳಿಯೋ ಎನ್ನುವುದು ಇನ್ನೂ ಗೊತ್ತಾಗಲಿಲ್ಲ. ಆದರೆ ಬಿಜೆಪಿ ಎಡವಿತು ಎನ್ನುವುದು ಸ್ಪಷ್ಟ. ಯಾರು, ಎಲ್ಲಿ, ಯಾಕೆ ಕೆಡುವಂತೆ ಎಡವಿದರು ಎನ್ನುವುದು ಸರಿಯಾಗಿ ಗೊತ್ತಾಗುತ್ತಿಲ್ಲ.
ಅತಂತ್ರದ ನೆರಳಿನಲ್ಲಿ ಸರಕಾರ ರಚಿಸಲಾಗದೇ, ಮಂತ್ರಿ ಮಂಡಳವನ್ನು ಸರಿಯಾಗಿ ಮಾಡಲಾಗದೆ ಬಿಜೆಪಿ ಬಹಳ ಎಡವಟ್ಟು ಮಾಡಿಕೊಂಡಿತು. ಅತೃಪ್ತ ಶಾಸಕರ ರಾಜಿನಾಮೆಯ ವಿಷಯದಲ್ಲಿ ಸಭಾಧ್ಯಕ್ಷರು ತಳೆದ ನಿಲುವು ಗೊಂದಲ ತಂದಿದ್ದಲ್ಲದೇ, ವಿಷಯ ಸರ್ವೋಚ್ಛ ನ್ಯಾಯಲಯದ ಮೆಟ್ಟಿಲು ಏರಿ ಈ ಬೆಳವಣಿಗೆಗಳಿಗೆ ಒಂದು ಹೊಸ ಆಯಾಮವನ್ನು ತಂದು ಕೊಟ್ಟಿತು. ತನ್ಮಧ್ಯೆ ಬಂದ ನೆರೆ ಹಾವಳಿ, ಮಹಾಪೂರ ಮತ್ತು ಪರಿಹಾರ ನೀಡುವಲ್ಲಿ ಎಡವಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತಷ್ಟು ಹೆಸರನ್ನು ಕೆಡಿಸಿಕೊಂಡವು. ಅಧಿಕಾರಕ್ಕಾಗಿ ಹಪಹಪಿಸಿದ ಯಡಿಯೂರಪ್ಪವನವರು ಊದುವುದನ್ನು ಬಿಟ್ಟು ಒದರುವದನ್ನು ಕೊಂಡಂತಾಗಿದೆ.
ಕರ್-ನಾಟಕದ ಗೊಂದಲಕ್ಕೊಂದು ಆಯೋಗ:
ಆದರೆ, 2018ರಿಂದ ಆರಂಭವಾದ ಗೊಂದಲಗಳಿಗೆ ಕಳಶವಿಟ್ಟಂತೆ ಬಂದದ್ದು ಚುನಾವಣಾ ಆಯೋಗದ ಕ್ರಮ. ಖಾಲಿ ಎಂದು ಘೋಷಿಸಿದ ಹದಿನೈದು ವಿಧಾನಸಭಾ ಸ್ಥಾನಗಳನ್ನು ತುಂಬಲು ಉಪ ಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಅಯೋಗ ಪ್ರಕಟಿಸಿತು. ಅದಕ್ಕೆ ಅವಸರವೇನಿತ್ತು? ಇಂತಹ ಮಹತ್ವದ ವಿಷಯದಲ್ಲಿ ನಿರ್ಣಯ ತೆಗೆದುಕೊಂಡವರಾರು ಎನ್ನುವುದು ಎಲ್ಲರಿಗೂ ಗೂಢವಾಗಿದೆ.
ಮೊದಲನೆಯದಾಗಿ ಖಾಲಿ ಎನ್ನುವ ಘೋಷಣೆಗಳನ್ನು ಮಾಡಿದವರು ವಿಧಾನಸಭಾ ಸಭಾಪತಿ ರಮೇಶ್ ಕುಮಾರ್ ಅವರು. ಅದೊಂದು ವಿವಾದಾಸ್ಪದ ನಿರ್ಣಯ. ಆತೃಪ್ತ ಶಾಸಕರು ರಾಜಿನಾಮೆ ಸಲ್ಲಿಸಿದರೂ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಧುರೀಣರಾದ ಸಿದ್ದರಾಮಯ್ಯನವರು ಮತ್ತು ಪ್ರದೇಶ ಕಾಂಗ್ರೆಸ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಕೊಟ್ಟ “ವ್ಹಿಪ್” ಉಲ್ಲಂಘನೆಯಾಗಿದೆ ಎನ್ನುವುದರ ಕಾರಣದ ಮೇಲೆ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ, ಅವರನ್ನು ಈ ಅವಧಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕೊಟ್ಟ ಸಭಾಪತಿಗಳ ಅಜ್ಞೆ ಅದು. (ರಮೇಶ್ ಕುಮಾರ್ ಅವರು ಮೈತ್ರಿ ಸರಕಾರ ಬಿದ್ದ ಮೇಲೆ ತಮ್ಮ ಹುದ್ದೆಯಿಂದ ರಾಜಿನಾಮೆ ಕೊಟ್ಟಿದ್ದಾರೆ. ಕಾಂಗ್ರೆಸ ಪಕ್ಷದ ಅವರೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಕೋಲಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ ಅಭ್ಯರ್ಥಿ ಕೆ ಎಚ್ ಮುನಿಯಪ್ಪ ಸೋಲಲು ಕಾರಣರಾಗಿದ್ದಾರೆ ಎಂದು ಸ್ವತಹ ಮುನಿಯಪ್ಪನವರೇ ಆಪಾದಿಸಿದ್ದಾರೆ ಎಂದು ಈಗ ಎದ್ದಿರುವ ಹೊಸ ವಿವಾದವೊಂದು ಹೇಳುತ್ತದೆ).
ಅತೃಪ್ತ ಶಾಸಕರ ರಾಜಿನಾಮೆಯ ವಿಷಯ ಮತ್ತು ಅದನ್ನು ಪರಿಗಣಿಸದೇ ಹಿಂದಿನ ಸಭಾದ್ಯಕ್ಷರು ತೆಗೆದುಕೊಂಡ ಅನರ್ಹತೆಯ ನಿರ್ಣಯವೆರಡೂ ಈಗ ಸರ್ವೋಚ್ಚ ನ್ಯಾಯಾಲಯದ ಮುಂದೆ ಇದೆ. ಹೀಗಿದ್ದರೂ, ಚುನಾವಣಾ ಆಯೋಗ ಮರುಚುನಾವಣೆ ಮಾಡುವ ಅವಸರದ ನಿರ್ಣಯ ತೆಗೆದು ಕೊಂಡದ್ದೇಕೆ ಎಂಬುದು ಈಗ ಎದ್ದಿರುವ ಹೊಸ ವಿವಾದ. ನಿಯಮಗಳ ಪ್ರಕಾರ ಖಾಲಿ ಎಂದು ಘೊಷಿಸಲಾದ ವಿಧಾನಸಭಾ/ಲೋಕಸಭಾ ತುಂಬಲು ಆರು ತಿಂಗಳು ವೇಳೆ ಇದೆ. ಹೀಗಾಗಿ ಇವುಗಳನ್ನು ಅವಸರದಲ್ಲಿ ತುಂಬುವ ಪ್ರಮೇಯವೇನೂ ಇರಲಿಲ್ಲ. ಮೇಲಾಗಿ ವಿಷಯ ನ್ಯಾಯಾಲಯದ ಮುಂದಿರುವಾಗ ಅದರ ನಿರ್ಣಯಕ್ಕೆ ಕಾಯದೇ ನಿರ್ಣಯ ತೆಗೆದು ಕೊಳ್ಳುವದು ಸಾಧುವೂ ಅಲ್ಲ.
ಹೀಗಾದರೂ ಇಂತಹ ಮಹತ್ವದ ನಿರ್ಣಯವನ್ನು ಚುನಾವಣಾ ಆಯೋಗ ತೆಗೆದುಕೊಂಡು ಸಂಬಂಧಿತ ಶಾಸಕರು, ರಾಜಕೀಯ ಪಕ್ಷಗಳನ್ನು ಅನಾವಶ್ಯಕ ಪೇಚಿನಲ್ಲಿ ಸಿಕ್ಕಿಸಿದ್ದೇಕೆ? ಎಲ್ಲೋ ಯಾರೋ ಹಾದಿ ತಪ್ಪಿದ್ದಾರೆ ಎನ್ನುವುದು ಚುನಾವಣಾ ಅಯೋಗ ತನ್ನ ನಿರ್ಣಯವನ್ನು ತಾನೇ ಪುನವಿರ್ಮಶಿಸಿ, ಮರು ಚುನಾವಣೆಗಳನ್ನು ತಾನೇ ನ್ಯಾಯಾಲಯದ ಮುಂದಿರುವ ವಿಷಯ ಪರಿಷ್ಕರಣೆ ಮಾಡುವ ತನಕ ಮುಂದೆ ಹಾಕಿ ವಿವಾದಕ್ಕೆ ತೆರೆ ಹಾಕಿದೆ ಎಂದು ಸಮಾಧಾನದ ಸಂಗತಿ.
ಹೀಗೆ ಮಾಡದಿದ್ದರೆ ಪೇಚಿನ ಸುರಿಮಳೆಗೆ ತೆರಪೇ ಇರಲಿಲ್ಲ. ಅನರ್ಹರೆಂಬ ಹಣೆಪಟ್ಟಿ ಕಟ್ಟಿಕೊಂಡ ಶಾಸಕರು ಮರುಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಕಾನೂನು ತೊಡಕಾಗುವದು ಒಂದು ಕಡೆ. ಈ ಎಲ್ಲಾ ಸ್ಥಳಗಳಿಗೆ ಹೊಸ ಮುಖಗಳನ್ನು ಹುಡುಕುವುದು ಇನ್ನೊಂದು ಕಡೆ. ಅನರ್ಹರನ್ನು ಅಲ್ಲಿಯ ತನಕ ಸಂಬಾಳಿಸುವ ಹೊಣೆಗಾರಿಕೆ ಮುಖ್ಯಮಂತ್ರಿಗಳಿಗೆ. ತನ್ಮಧ್ಯೆ ಮೈತ್ರಿ ಪಕ್ಷಗಳಲ್ಲಿ ತಾರಕಕ್ಕೆ ಏರುತ್ತಿರುವ ಭಿನ್ನಾಭಿಪಾಯ, ಪರಸ್ಪರ ಅಪನಂಬಿಕೆ ಮತ್ತು ದೂಷಣೆಗಳ ಸುರಿಮಳೆ. ವಿಶೇಷವಾಗಿ ಜೆಡಿಎಸ್ ನ ಕುಮಾರಸ್ವಾಮಿ, ಮತ್ತು ಕಾಂಗ್ರೆಸಿನ ಸಿದ್ದರಾಮಯ್ಯನವರ ನಡುವೆ ದಿನವೂ ನಡೆದಿರುವ ಮಾತಿನ ಜಟಾಪಟಿಯನ್ನು ನೋಡಿದವರೆ ಈ ಎರಡೂ ಪಕ್ಷಗಳ ನಡುವಿನ ಮೈತ್ರಿ ಮುರಿದುಹೋಯಿತು ಎಂದು ಹೇಳುವುದಕ್ಕೆ ಯಾವ ಜ್ಯೋತಿಷಿಯೂ ಬೇಕಾಗಿಲ್ಲ. ಜನರ ಜೀವನದ ನಡುವೆ ಚೆಲ್ಲಾಟವಾಡಿದ ಅವಕಾಶವಾದಿ ರಾಜಕಾರಣ ಅಂತ್ಯವಾಗುತ್ತಿದೆಯೇ?