ಇತ್ತೀಚೆಗಿನ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಡೀ ಕಾಂಗ್ರೆಸ್ ನಾಯಕರ ದಂಡು ಎರಡೂ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡಿದರೂ ಕೊನೆಗೂ ಬಂದ ಫಲಿತಾಂಶ ಮಾತ್ರ ಹೀನಾಯ ಸೋಲು. ಹೀಗಿರುವಾಗಲೇ ಈ ಉಪಚುನಾವಣೆ ಸೋಲಿನ ಆಘಾತದಿಂದ ಹೊರ ಬರುವ ಮುನ್ನವೇ ಇದರ ಪರಾಜಯದ ಆತ್ಮವಿಮರ್ಶೆ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರ ಸಭೆ ಕರೆಯಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸದ್ಯದಲ್ಲೇ ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ನಾಯಕರು ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆ ಸೋಲಿನ ಕುರಿತಾದ ಅವಲೋಕನ ಸಭೆ ನಡೆಸಲಿದ್ದಾರೆ. ಈ ವೇಳೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಆರ್.ಆರ್ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಬಿಹಾರ ಸೇರಿದಂತೆ ಐದು ರಾಜ್ಯಗಳ ಉಪುಚುನಾವಣೆಯಲ್ಲಾದ ಸೋಲಿನ ಕುರಿತು ಪರಾಮರ್ಶೆ ನಡೆಯಲಿದೆ.
ಇದರ ಮಧ್ಯೆಯೇ ಕರ್ನಾಟಕ ಉಪಚುನಾವಣೆ ಉಸ್ತುವಾರಿ ಹೊತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹೈಕಮಾಂಡ್‌ಗೆ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವಾದ ಅಂಶಗಳ ಕುರಿತಾದ ವರದಿ ನೀಡಿದ್ದಾರೆ. ಹೈಕಮಾಂಡ್ ನೀಡಿದ ವರದಿಯಲ್ಲಿ ಪ್ರಸ್ತಾಪವಾದ ಹಲವು ಅಂಶಗಳು ಇಲ್ಲಿವೆ.
ಇವಿಎಂ ಹ್ಯಾಕ್ ಸಾಧ್ಯತೆ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಾನು ಸೇರಿದಂತೆ ಇಡೀ ಕಾಂಗ್ರೆಸ್ ನಾಯಕರು ಹಗಲು ರಾತ್ರಿಯೆನ್ನದೇ ಪಕ್ಷವನ್ನು ಗೆಲ್ಲಿಸಲು ಶಿರಾ ಮತ್ತು ಆರ್.ಆರ್ ನಗರದಲ್ಲಿ ಶ್ರಮಿಸಿದೆವು. ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷವೇ ಗೆಲ್ಲಬೇಕಾಗಿತ್ತು. ಆರ್.ಆರ್.ನಗರದಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ನಡುವಿನ ಅಸಮಾಧನವೇ ಕಾಂಗ್ರೆಸ್ ಅನ್ನು ಗೆಲ್ಲಿಸುವಂತಿತ್ತು. ಆದರೆ, ಫಲಿತಾಂಶ ಬಂದಾಗ ಮಾತ್ರ ಬಿಜೆಪಿ ಅಪಾರವಾದ ಲೀಡ್‌ನಿಂದ ಗೆದ್ದು ಬೀಗಿರುವುದು ಅಚ್ಚರಿ ಮೂಡಿಸಿದೆ. ಇವಿಎಂ ಹ್ಯಾಕ್ ಆಗಿರುವ ಎಲ್ಲಾ ಸಾಧ್ಯತೆಯಿದೆ ಎಂದು ಡಿಕೆಶಿ ಹೈಕಮಾಂಡ್‌ಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಶಿರಾದಲ್ಲಿ ಬಿಜೆಪಿ ಗೆಲುವು ಅಸಾಧ್ಯ: ಶಿರಾದಲ್ಲಿ ಹಲವು ವರ್ಷಗಳಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಗೆಲ್ಲಲಿದೆ ಎಂದೇ ಹೇಳಿದ್ದವು. ಪಕ್ಷ ಸಂಘಟನೆಯೇ ಇಲ್ಲದ ಶಿರಾದಲ್ಲಿ ಜೆಡಿಎಸ್, ಕಾಂಗ್ರೆಸ್ ಬದಲಿಗೆ ಬಿಜೆಪಿ ಹೇಗೆ ಗೆಲ್ಲಲು ಸಾಧ್ಯ? ಇದರ ಹಿಂದೆ ಇವಿಎಂ ಹ್ಯಾಕಿಂಗ್ ಕೈವಾಡ ಇದೆ.
ಬಿಜೆಪಿಯೊಂದಿಗೆ ಜೆಡಿಎಸ್ ಒಳ ಒಪ್ಪಂದ: ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಕೂಡ ಕಾರಣ ಆಗಿರಬಹುದು. ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜೆಡಿಎಸ್ ವರಿಷ್ಠರು ಕೇಸರಿ ಪಡೆ ಗೆಲುವಿಗಾಗಿ ಶ್ರಮಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಎರಡು ಕ್ಷೇತ್ರಗಳಲ್ಲೂ ಜೆಡಿಎಸ್ ತನ್ನ ಮತಗಳನ್ನು ಬಿಜೆಪಿಗೆ ಹೋಗುವಂತೆ ಮಾಡಿ ಕಾಂಗ್ರೆಸ್ ಸೋಲಿಸಲು ಕಾರಣವಾಗಿರಬಹುದು ಎಂದು ಡಿಕೆಶಿ ತನ್ನ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.










