ವಿಶ್ವದಲ್ಲಿ ಕರೋನಾ ಸೋಂಕು ಅಬ್ಬರಿಸುತ್ತಿದ್ದರೂ ಎಲ್ಲಾ ದೇಶಗಳೂ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆಯನ್ನು ತಡೆಯುವಲ್ಲಿ ಯಾವುದೇ ದೇಶವೂ ಸಫಲವಾಗಿಲ್ಲ. ವೈದ್ಯಕೀಯ ವ್ಯವಸ್ಥೆಯೂ ಹೇಳಿಕೊಳ್ಳುವ ಪ್ರಮಾಣದಲ್ಲಿ ಇಲ್ಲ. ಅದೇ ಕಾರಣಕ್ಕೆ ಸೋಂಕು ತಗುಲುವ ಮುನ್ನವೇ ತಡೆಯುವ ಉದ್ದೇಶದಿಂದ ಭಾರತ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಈ ನಡುವೆ ಭಾರತ ಸಂಸದರ 2 ವರ್ಷಗಳ ಪ್ರದೇಶಾಭಿವೃದ್ಧಿ ನಿಧಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ. ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ಬರಿಗೈಲಿ ಸಂಸದರು ಮಾಡುವುದಾದರೂ ಏನು? ಎನ್ನುವ ಪ್ರಶ್ನೆ ಎದುರಾಗಿದೆ. ಈ ನಡುವೆ, ರಾಜ್ಯದಲ್ಲೂ ವೇತನ ಕಡಿತ ವಿಚಾರದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಕಷ್ಟಪಡುತ್ತಿರುವ ಸಿಬ್ಬಂದಿಗಳ ವೇತನ ಕಡಿತ ಜನಾಕ್ರೋಶಕ್ಕೂ ಕಾರಣವಾಗಿದೆ.

ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸರ್ಕಾರಗಳೂ ಕೇಂದ್ರಕ್ಕೂ ಮುನ್ನವೇ ಆರ್ಥಿಕ ಸಂಗ್ರಹ ನಿರ್ಧಾರ ಮಾಡಿದ್ದವು. ಇದೀಗ ಕರ್ನಾಟಕದಲ್ಲೂ ಆರ್ಥಿಕ ಸಂಗ್ರಹದ ಮಾತುಕತೆಗಳು ನಡೆಯುತ್ತಿವೆ. ಮಾರ್ಚ್ ತಿಂಗಳ ವೇತನ ಏಪ್ರಿಲ್ ನಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಬಿಡುಗಡೆ ಮಾಡಲು ಸಿಎಂ ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಆದರೆ ಏಪ್ರಿಲ್ ತಿಂಗಳಿನ ವೇತನವನ್ನು ಎಷ್ಟು ಕೊಡಬೇಕು. ಯಾವ ಪ್ರಮಾಣದಲ್ಲಿ ವೇತನ ಕಡಿತ ಮಾಡಬೇಕು ಎನ್ನುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ. ಅಂದರೆ ಸರ್ಕಾರಿ ನೌಕರರ ವೇತನದಲ್ಲಿ ಕಡಿತ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಎಷ್ಟು ಪ್ರಮಾಣ ಎನ್ನುವುದು ಅಷ್ಟೇ ಬಾಕಿ ಇದೆ. ಈಗಾಗಲೇ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಶೇಕಡ 60 ರಿಂದ ಇಳಿಕೆ ಕ್ರಮದಲ್ಲಿ ಹಂತಹಂತವಾಗಿ ವೇತನ ಕಡಿತ ಮಾಡಲಾಗಿದೆ. ಆದರೆ ಸರ್ಕಾರಿ ನೌಕರರು ಈಗಾಗಲೇ ಒಂದು ದಿನದ ವೇತನವನ್ನು ಸರ್ಕಾರಕ್ಕೆ ದೇಣಿಗೆಯಾಗಿ ನೀಡಲಾಗಿದೆ. ಈ ದೇಣಿಗೆ ಬಗ್ಗೆ ಅಪಸ್ವರ ಎದ್ದಿದೆ.
ಬೆಂಗಳೂರಿನ ಆಸ್ಪತ್ರೆ ಸಿಬ್ಬಂದಿಗಳ 30% ವೇತನ ಕಡಿತ!
ಬೆಂಗಳೂರಿನ ರಾಜಾಜಿನಗರದಲ್ಲಿರುವ ಕಾಡೆ ಆಸ್ಪತ್ರೆ ಸಿಬ್ಬಂದಿ ಕರೋನಾ ವೈರಸ್ ಸೋಂಕಿನ ಭೀತಿಯಲ್ಲೂ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆದರೆ ಏಪ್ರಿಲ್ 9 ರಂದು ಪಾವತಿ ಆಗಿರುವ ವೇತನದಲ್ಲಿ ಶೇಕಡ 30 ರಷ್ಟು ಹಣ ಕಡಿತ ಮಾಡಲಾಗಿದೆ. ಈ ಬಗ್ಗೆ ಸಿಬ್ಬಂದಿ ಪ್ರಶ್ನೆ ಮಾಡಿದಾಗ ಲಾಕ್‌ಡೌನ್‌ನಿಂದ ನಷ್ಟವಾಗಿದೆ ಎಂಬ ಉಢಾಫೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಲಾಕ್‌ಡೌನ್‌ನಿಂದ ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಿದೆ. ಬಹುತೇಕ ಎಲ್ಲಾ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಅನಿವಾರ್ಯ ಪರಿಸ್ಥಿತಿ. ಕರೋನಾ ಸೋಂಕು ಕಾಣಿಸಿಕೊಳ್ಳದೆ ರೋಗಿಗಳು ಅತ್ಯಧಿಕ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದಿದ್ದರೆ, ಹೆಚ್ಚುವರಿ ವೇತನ ಸಂದಾಯ ಮಾಡುತ್ತಿದ್ದರೆ ಎನ್ನುವ ಪ್ರಶ್ನೆ ಆಸ್ಪತ್ರೆ ಸಿಬ್ಬಂದಿಗಳದ್ದಾಗಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡುವುದಾಗಲಿ, ವೇತನ ಕಡಿತ ಮಾಡುವುದಾಗಲಿ ಮಾಡುವಂತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯೇ ಹೇಳಿದ್ದಾರೆ. ಕಾರ್ಮಿಕ ಇಲಾಖೆ ಕೂಡ ಈ ಬಗ್ಗೆ ಸ್ಪಷ್ಟವಾಗಿ ಸೂಚನೆ ಕೊಟ್ಟಿದೆ. ಆದರೂ 30% ವೇತನ ಕಡಿತ ಮಾಡಿರುವುದು ಕಾಡೆ ಆಸ್ಪತ್ರೆಯವರ ಹಣದಾಹವನ್ನು ಎತ್ತಿ ತೋರಿಸುವಂತಿದೆ.
ಕೆಲಸ ಮಾಡದೆ ಮನೆಯಲ್ಲಿ ಇರುವ ಕಾರ್ಮಿಕರಿಗೆ ವೇತನ ಪಾವತಿ ಮಾಡಬೇಕು ಎನ್ನುವ ಸೂಚನೆಯನ್ನು ಧಿಕ್ಕರಿಸಿರುವ ಕಾಡೆ ಆಸ್ಪತ್ರೆ ಆಡಳಿತ ಮಂಡಳಿ ಕೆಲಸಕ್ಕೆ ಹಾಜರಾಗುತ್ತಿರುವ ಆಸ್ಪತ್ರೆ ಸಿಬ್ಬಂದಿಗೆ ಶಾಕ್ ಕೊಟ್ಟಿದೆ. ಕೇವಲ ಹತ್ತರಿಂದ ಹದಿನೈದು ಸಾವಿರಕ್ಕೆ ಕೆಲಸ ಮಾಡುವ ನರ್ಸ್‌ಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನು ಏಳೆಂಟು ಸಾವಿರಕ್ಕೆ ಕೆಲಸ ಮಾಡುವ ವಾರ್ಡ್ ಬಾಯ್ಸ್, ಆಯಾಗಳು, ಸ್ವಚ್ಛ ಮಾಡುವ ಹೌಸ್ ಕೀಪರ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಸಂಬಂಧಪಟ್ಟ ಆರೋಗ್ಯ ಇಲಾಖೆ, ಆರೋಗ್ಯ ಸಚಿವ ಶ್ರೀರಾಮುಲು ಅವರು ಕಾಡೆ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಪೂರ್ಣ ವೇತನ ಪಾವತಿ ಮಾಡಿಸಬೇಕಿದೆ.
ಮುಖ್ಯಮಂತ್ರಿ ತಮ್ಮ ಒಂದು ವರ್ಷದ ವೇತನ ಕೊಟ್ಟಿದ್ದಾರೆ. ಬೆರಳೆಣಿಕೆ ಮಂತ್ರಿಗಳು, ಶಾಸಕರು ಕೂಡ ವೇತನ ಬಿಟ್ಟುಕೊಟ್ಟಿದ್ದಾರೆ. ಆದರೆ ಎಲ್ಲರೂ ವೇತನ ಬಿಟ್ಟುಕೊಟ್ಟಿಲ್ಲ. ಇದೀಗ ಕೇಂದ್ರ ಸರ್ಕಾರವೇ ಆರ್ಥಿಕ ಸಂಗ್ರಹಕ್ಕೆ ಮುಂದಾಗಿದ್ದು, ಎಲ್ಲರ ವೇತನ ಕಡಿತ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಸಂಸದರ ನಿಧಿಯನ್ನು ಕಡಿತ ಮಾಡಲಾಗಿದೆ. ಇದೀಗ ರಾಜ್ಯದಲ್ಲೂ ಸಾಮೂಹಿಕ ವೇತನ ಕಡಿತ ಮಾಡುವ ಸಾಧ್ಯತೆಯಿದೆ. A ಗ್ರೇಡ್, B ಗ್ರೇಡ್, C ಗ್ರೇಡ್, D ಗ್ರೇಡ್ ಎಂದು ವಿಂಗಡಿಸಿ ವೇತನ ಕಡಿತ ಮಾಡುವ ಸಾಧ್ಯತೆಯಿದೆ. ಆದರೆ ಕರೋನಾ ವಿರುದ್ಧ ಸೈನಿಕರಂತೆ ಹೋರಾಟ ಮಾಡುತ್ತಿರುವ ವೈದ್ಯರು ಹಾಗೂ ಪೊಲೀಸರ ವೇತನ ಕಡಿತ ಮಾಡುವುದು ಯಾವ ನ್ಯಾಯ ಎನ್ನುವ ಆಕ್ರೋಶ ಹೊರಬಿದ್ದಿದೆ. ಅದರಲ್ಲೂ ಪೊಲೀಸರು ಬಿಸಿಲು, ಮಳೆ ಎನ್ನದೆ ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಾರೆ. ಬರುವ ಸಂಬಳವೂ ಅಷ್ಟಕ್ಕಷ್ಟೇ. ಹೀಗಿರುವಾಗ ಅವರ ವೇತನವನ್ನು ಕಡಿತ ಮಾಡುವುದು ಸರಿಯೇ? ವೈದ್ಯರಿಗೆ ಇರುವಷ್ಟು ಸೌಕರ್ಯಗಳೂ ಪೊಲೀಸರಿಗೆ ಸಿಗುವುದಿಲ್ಲ. ಪೊಲೀಸರ ವೇತನ ಕಡಿತ ಮಾಡಿದರೆ ತೊಂದರೆ ಆಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಕರೋನಾ ವಿರುದ್ಧ ಹೋರಾಡಲು ಆರ್ಥಿಕ ಕ್ರೋಢೀಕರಣ ಅನಿವಾರ್ಯ. ಈಗ ಯಾವುದೇ ವ್ಯವಹಾರ ನಡೆಯುತ್ತಿಲ್ಲ. ಆದಾಯದ ಮೂಲಗಳು ಬಂದ್ ಆಗಿದ್ದು ಸರ್ಕಾರದ ಖಜಾನೆ ಖಾಲಿಯಾಗುತ್ತಲೇ ಇದೆ. ಸಿಎಂ ಯಡಿಯೂರಪ್ಪ ಅವರೇ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂದು ಅನೇಕ ಬಾರಿ ಒಪ್ಪಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ವೇತನ ಕಡಿತ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಳ ದರ್ಜೆಯ ಸರ್ಕಾರಿ ಸಿಬ್ಬಂದಿ ವೇತನ ಕಡಿತ ಮಾಡಿದರೆ ಸಮಸ್ಯೆ ಎನ್ನಲಾಗುತ್ತಿದೆ. ಅದರಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಹಗಲು ಇರುಳು ಎನ್ನದೆ ಕರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಹೆಚ್ಚುವರಿ ಇನಾಮು ಕೊಟ್ಟು ಅವರ ಕೆಲಸಕ್ಕೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕಿದೆ. ಇನ್ನೂ ಶಿಕ್ಷಣ ಇಲಾಖೆ ಸೇರಿದಂತೆ ಕರೋನಾ ಭೀತಿಯಿಂದ ಸಾಕಷ್ಟು ರಜೆಗಳನ್ನು ಅನುಭವಿಸುತ್ತಿರುವ ಇಲಾಖೆಗಳ ಸಿಬ್ಬಂದಿ ವೇತನದಲ್ಲಿ ಹೆಚ್ಚುವರಿ ಕಡಿತ ಮಾಡಿದರೂ ಸಮಸ್ಯೆ ಆಗಲಾರದು. ಒಂದು ತಿಂಗಳ ಸಮಸ್ಯೆಯನ್ನು ಸರಿದೂಗಿಸುವ ಶಕ್ತಿ ಎಲ್ಲಾ ಸರ್ಕಾರಿ ನೌಕರರಿಗಿದೆ. ಆದರೆ ಕಷ್ಟದ ಸಮಯದಲ್ಲೂ ಕೆಲಸ ಮಾಡುವ ಸಿಬ್ಬಂದಿ ವೇತನ ಕಡಿತ ಮಾಡಿದರೆ ಕೆಲಸದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿಯ ವೇತನ ಕಡಿತ ಮಾಡದಿರುವುದೇ ವಾಸಿ.