ಕೇಂದ್ರ ಸರ್ಕಾರ ಕರೋನಾ ವೈರಸ್ ಸೋಂಕು ತಡೆಗಟ್ಟುವಲ್ಲಿ ಸಾಕಷ್ಟು ಮುತುರ್ಜಿ ವಹಿಸಿದ್ಯಾ ಅಂದರೆ ಜನಸಾಮಾನ್ಯರು ಕೊಡುವ ಉತ್ತರ ಇಲ್ಲ ಎಂದು. ಕರೋನಾ ಸೋಂಕು ನಮ್ಮ ದೇಶದಲ್ಲಿ ಕಾಣಿಸಿಕೊಂಡ ಮೇಲೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳು ಸೂಕ್ತವಾಗಿ ಇವೆಯಾ ಎಂದರೆ ಜನರ ಉತ್ತರ ಇಲ್ಲ. ಸರೀ, ಮೊದಲಿಗೆ ಎಡವಿದ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸೋಂಕು ಹರಡುತ್ತಿರುವ ವೇಗಕ್ಕೆ ಕಡಿವಾಣ ಹಾಕಲು ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿವೆಯಾ? ಚಿಕಿತ್ಸೆ ಸರಿಯಾಗಿ ಸಿಗುತ್ತಿದ್ಯಾ? ಶಂಕಿತರ ತಪಾಸಣೆ ಸರಿಯಾದ ದಿಕ್ಕಿನಲ್ಲಿ ಸಾಗಿದ್ಯಾ ಎಂದಾಗಲು ಜನರಿಂದ ಬರುವ ಉತ್ತರ ಇಲ್ಲ ಎಂದು. ಒಟ್ಟಾರೆ, ವಿಶ್ವದ ಬೇರೆಲ್ಲಾ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಸರ್ಕಾರ ತೆಗೆದುಕೊಂಡ ನಿಲುವುಗಳು ಅಷ್ಟಕಷ್ಟೆ. ಭಾರತ ಸರ್ಕಾರ ಮಾಡಿದ ಏಕೈಕ ಕ್ರಮ ಎಂದರೆ ಇಡೀ ದೇಶವನ್ನು ಲಾಕ್ ಡೌನ್ ಮಾಡಿದ್ದು ಅಷ್ಟೇ. ಇದೀಗ ಕೇಂದ್ರ ಸರ್ಕಾರದ ಕೆಲಸಗಳು ಟೀಕಾಕಾರರ ಬಾಯಿಗೆ ಶರಬತ್ತಾಗಿದೆ ಎಂದರೆ ತಪ್ಪಲ್ಲ.
ಕೇಂದ್ರದ ಆರೋಗ್ಯ ಸಚಿವರು ತುಂಬಾ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರಾ ಎಂದರೆ ಅದೂ ಇಲ್ಲ. ಕರೋನಾ ದೇಶಕ್ಕೆ ಕಾಲಿಟ್ಟ ದಿನದಿಂದಲೂ ಆರೋಗ್ಯ ಸಚಿವರು ಎಲ್ಲಿದ್ದಾರೆ ಎನ್ನುವುದೇ ದೇಶಕ್ಕೆ ತಿಳಿಯದಾಗಿದೆ. ಕರೋನಾ ಬಗ್ಗೆ ಏನೇ ಘೋಷಣೆ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಣೆ ಮಾಡುತ್ತಿದ್ದಾರೆ. ಯಾವುದೇ ಮಾಹಿತಿ ಇದ್ದರೂ ಪ್ರಧಾನಿಯೇ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿರುವ ಡಾ. ಹರ್ಷವರ್ಧನ್ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ದೇಶದ ನಾಗರಿಕರನ್ನು ಕಾಡುತ್ತಿದೆ. ಡಾ. ಹರ್ಷವರ್ಧನ್ ತಮ್ಮ ಪತ್ನಿ ಜೊತೆ ಕುಳಿತು ಪಗಡೆ ಆಡುತ್ತಿರುವ ಚಿತ್ರವನ್ನು ಹಿಡಿದು ಟ್ವಿಟರ್ ನಲ್ಲಿ ಪರ ವಿರೋಧ ಟೀಕೆಗಳು ವ್ಯಕ್ಯವಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರೇ ಎಲ್ಲಾ ವಿಚಾರಗಳನ್ನು ನೋಡಿಕೊಳ್ಳುವುದಾದರೆ ಆರೋಗ್ಯ ಇಲಾಖೆಗೆ ಮಂತ್ರಿ ಎಂದು ಇರಬೇಕಾ? ಎನ್ನುವ ಪ್ರಶ್ನೆಯನ್ನೂ ಕೇಳುವಂತಾಗಿದೆ.
ಪ್ರತಿಧ್ವನಿ ಕೆಲವು ದಿನಗಳ ಹಿಂದೆ ಒಂದು ವರದಿ ಮಾಡಿತ್ತು ‘ವಿಪಕ್ಷ ನಾಯಕರ ಟೀಕೆಯನ್ನು ನಿರ್ಲಕ್ಷಿಸಿದ್ದೇ ದೇಶಕ್ಕೆ ದುಬಾರಿ ಆಯಿತೇ?’ ಎಂದು. ಹೌದು ಜನವರಿ 30 ರಂದು ಕರೋನಾ ಮಹಾಮಾರಿ ಬಾಗಿಲು ತೆರೆದು ದೇಶದ ಒಳಕ್ಕೆ ಬಂದಾಗಲೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 12 ದಿನಗಳ ಬಳಿಕ ಸಣ್ಣದೊಂದು ಟ್ವೀಟ್ ಮಾಡಿದ್ದರು. ಕರೋನಾ ವೈರಸ್ ತುಂಬಾ ಡೇಂಜರ್
ಎನಿಸುತ್ತಿದೆ. ನಮ್ಮ ದೇಶದ ಜನರು ಹಾಗೂ ಆರ್ಥಿಕತೆಗೆ ಬೆದರಿಕೆ ಹಾಕುವಂತಿದೆ. ಆದರೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದಿದ್ದರು. ಈ ಟ್ವೀಟ್ ಗೆ ಕೇಂದ್ರ ಸರ್ಕಾರ ಕಿಂಚಿತ್ತು ಬೆಲೆ ಕೊಡಲಿಲ್ಲ. ಮಾರ್ಚ್ 15ರಿಂದ ವಿದೇಶಿ ವಿಮಾನ ಹಾರಾಟ ರದ್ದು ಮಾಡಿದ ಕೇಂದ್ರ ಸರ್ಕಾರ, ಮಾರ್ಚ್ 18ರಂದು ವಿದೇಶಗಳಿಗೆ ರಫ್ತಾಗುತ್ತಿದ್ದ ಮಾಸ್ಕ್ ಹಾಗೂ ವೆಂಟಿಲೇಟರ್ ಗಳ ಮೇಲೆ ನಿರ್ಬಂಧ ಹೇರಿತ್ತು. ಇದೀಗ ಲಾಕ್ ಡೌನ್ ಮಾಡದೆ ಬೇರೆ ದಾರಿ ಇರಲಿಲ್ಲ ಎಂದು ದೇಶದ ಜನರ ಎದುರು ಪ್ರಧಾನಿ ನರೇಂದ್ರ ಮೋದಿ ಕ್ಷಮಾಪಣೆ ಕೇಳುತ್ತಿದ್ದಾರೆ.
Also Read: ‘ಲಾಕ್ ಡೌನ್’ ಸಂಕಷ್ಟ ನಿವಾರಣೆಗೆ ಸೋನಿಯಾಗಾಂಧಿ ಮತ್ತು ಚಿದಂಬರಂ ಪ್ರಧಾನಿಗೆ ನೀಡಿದ ಸಲಹೆಗಳೇನು ಗೊತ್ತಾ?
ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದೇಶವನ್ನು ಲಾಕ್ ಡೌನ್
ಮಾಡಿರುವ ಕಾರಣ ಲಕ್ಷಾಂತರ ಮಂದಿಗೆ ಉಣ್ಣಲು ಅನ್ನ ಸಿಗುತ್ತಿಲ್ಲ. ಹಸಿವಿನಿಂದ ಜೀವನ ನಡೆಸುವಂತಾಗಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 3 ರೂಪಾಯಿ ದರದ ಅಕ್ಕಿ ಇನ್ನು ಜನಸಾಮಾನ್ಯರ ಕೈ ಸೇರಿಲ್ಲ. ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಮುಂದಿನ 2 ತಿಂಗಳ ಅಕ್ಕಿಯನ್ನು ಒಂದೇ ಬಾರಿಗೆ ಕೊಡುವ ನಿರ್ಧಾರವೂ ಇನ್ನೂ ಜಾರಿಯಾಗಿಲ್ಲ. ಆದರೆ ನಮ್ಮ ದೇಶದಿಂದ ಮಾಲ್ಡೀವ್ಸ್ ಗೆ ಪ್ರಮುಖ ಆಹಾರ ಹಾಗೂ ಔಷಧಿಗಳನ್ನು ರಫ್ತು ಮಾಡಲಾಗಿದೆ. ಇದಕ್ಕೆ ಸಾಕ್ಷಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ನಷೀದ್ ಮಾಡಿರುವ ಫೋಟೋ ಟ್ವೀಟ್. ಜೊತೆಗೆ ಈ ರೀತಿಯ ಕಠಿಣ ಪರಿಸ್ಥಿತಿಯಲ್ಲಿ ಭಾರತ ನಮಗೆ ನೆರವು ನೀಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಮಾಲ್ಡೀವ್ಸ್
ನಲ್ಲಿ ಇಲ್ಲೀವರೆಗೂ ಪತ್ತೆಯಾಗಿರುವ ಕರೋನಾ ವೈರಸ್
ಸೋಂಕಿನ ಸಂಖ್ಯೆ ಕೇವಲ 17, ಅದರಲ್ಲಿ 13 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಉಳಿದಿದ್ದು ಕೇವಲ 4 ಜನರು ಮಾತ್ರ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಅಂದರೆ ನಮ್ಮ ದೇಶಕ್ಕಿಂತಲೂ ಮಾಲ್ಡೀವ್ಸ್ ತುಂಬಾ ಉತ್ತಮ ಪರಿಸ್ಥಿತಿಯಲ್ಲಿದೆ. ನಮ್ಮ ದೇಶದಲ್ಲೇ ಪರಿಸ್ಥಿತಿ ಹದಗೆಟ್ಟಿರುವಾಗ ಬೇರೆ ದೇಶಕ್ಕೆ ಸಹಾಯ ಹಸ್ತ ಚಾಚಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗಿದೆ. ಸಹಾಯ ಮಾಡುವುದು ಮಾನವೀಯ ಧರ್ಮ. ಅದರಲ್ಲೂ ನಮ್ಮ ಭಾರತದ ಸಂಸ್ಕೃತಿ. ಆದರೆ ನಮಗೇ ತಿನ್ನಲು ಅನ್ನ ಇಲ್ಲದಿರುವಾಗ ಎನ್ನುವುದು ಯೋಚಿಸಬೇಕಾದ ವಿಚಾರ.
ಸಹಾಯದ ವಿಚಾರ ಒಂದು ಕಡೆಗೆ ಇರಲಿ. ಕರೋನಾ ವೈರಸ್ ರಾಜ್ಯಕ್ಕೆ ದಾಂಗುಡಿ ಇಟ್ಟ ಕೂಡಲೇ ಆರೋಗ್ಯ ಸಚಿವರು ನಾಪತ್ತೆಯಾಗಿದ್ದರು. ಮಾಧ್ಯಮಗಳು ಆರೋಗ್ಯ ಸಚಿವರು ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಸಿಕ್ಕಿದ್ದು, ಮಗಳ ಮದುವೆಯಲ್ಲಿ ಬ್ಯುಸಿ ಎನ್ನುವ ಉತ್ತರ. ಆರೋಗ್ಯ ಸಚಿವರು ಕರೋನಾ ವೈರಸ್ ಪತ್ತೆಯಾದ ಮೇಲೂ ಮದುವೆ ತುಂಬಾ ಸರಳವಾಗಿರಲಿ, ನೂರು ಜನರ ಸಂಖ್ಯೆ ಮೀರುವುದು ಬೇಡ ಎಂದು ಸಿಎಂ ಆದೇಶ ಮಾಡಿದ ಬಳಿಕವೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಮದುವೆ ಕಾರ್ಯಕ್ರಮ ನಡೀತು. ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಏರುಮುಖದಲ್ಲಿ ಸಾಗುತ್ತಿದ್ದರೂ ವಾರದ ಕಾಲ ಆರೋಗ್ಯ ಸಚಿವರು ತಿರುಗಿಯೂ ನೋಡಲಿಲ್ಲ. ಆ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ನಾನು ನೋಡಿಕೊಳ್ತಿದ್ದೇನೆ, ಎಂದು ಬಂದರು. ಆಗ ಯಾವ ಇಲಾಖೆ ಕರೋನಾ ವೈರಸ್
ಸೋಂಕಿನ ಬಗ್ಗೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಚಿವರು ಕಿತ್ತಾಡಿಕೊಂಡರು. ಆರೋಗ್ಯ ಇಲಾಖೆ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳ ಜವಾಬ್ದಾರಿ, ವೈದ್ಯಕೀಯ ಶಿಕ್ಷಣ ಇಲಾಖೆ ಬೆಂಗಳೂರು ಜಿಲ್ಲಾ ಉಸ್ತುವಾರಿ ಎಂದು ವಿಂಗಡಿಸಿದ್ದು, ಇನ್ನೂ ಕೂಡ ಗೊಂದಲ ಬಗೆಹರಿದಿಲ್ಲ.
ಯಾರೂ ಹೇಗಾದರೂ ಕೆಲಸ ಮಾಡಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜವಾಬ್ದಾರಿಯುತವಾಗಿ ಕೆಲಸ ಮಾಡದಿದ್ದರೂ ಪರವಾಗಿಲ್ಲ. ಜನರೇ ನೀವು ಮಾತ್ರ ಮನೆಯಿಂದ ಹೊರಕ್ಕೆ ಬರದಿರಿ. ಕರೋನಾ ವೈರಸ್ ನಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು. ಸರ್ಕಾರಗಳು ಸತ್ತ ಮೇಲೆ ಲೆಕ್ಕಕ್ಕೆ ಬರುವಂತಿದೆ.