ಚೆನ್ನೈ ಮತ್ತು ಶಿಲ್ಲಾಂಗ್ ಸೇರಿದಂತೆ ದೇಶದ ಹಲವೆಡೆ ಕರೋನಾ ಸೇನಾನಿ ವೈದ್ಯರ ಮೇಲೆ ನಡೆದ ಹಲ್ಲೆ ಮತ್ತು ಹೇಯ ಘಟನೆಗಳನ್ನು ಖಂಡಿಸಿ ಮತ್ತು ವೈದ್ಯರಿಗೆ ಹೆಚ್ಚಿನ ರಕ್ಷಣೆಗೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ ಏ.23ರಂದು ರಾಷ್ಟ್ರವ್ಯಾಪಿ ಕರೆ ನೀಡಿದ್ದ ‘ಕರಾಳ ದಿನ’ ಆಚರಣೆಯನ್ನು ಕೈಬಿಟ್ಟಿದೆ.
ಕೆಲವು ದಿನಗಳ ಹಿಂದಿನ ಶಿಲ್ಲಾಂಗ್ ನಲ್ಲಿ ಕರೋನಾ ರೋಗಿಗಳ ಚಿಕಿತ್ಸೆ ವೇಳೆ ಸೋಂಕು ತಗುಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ವೈದ್ಯರ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಘಟನೆಯ ಬಳಿಕ, ಭಾನುವಾರ ಚೆನ್ನೈನಲ್ಲಿಯೂ ಅಂತಹದ್ದೇ ಘಟನೆ ನಡೆದಿತ್ತು. ಕರೋನಾ ಚಿಕಿತ್ಸೆ ವೇಳೆ ಸೋಂಕು ತಗುಲಿ ಮೃತಪಟ್ಟ ಅವರ ಶವಸಂಸ್ಕಾರಕ್ಕೆ ಬಿಡದೆ, ಆಂಬ್ಯುಲೆನ್ಸ್ ಚಾಲಕರು, ವೈದ್ಯರು, ಪೊಲೀಸ್ ಮತ್ತಿತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿತ್ತು. ಜೊತೆಗೆ ಕರೋನಾ ಮಹಾಮಾರಿ ತೀವ್ರಗೊಳ್ಳುತ್ತಿದ್ದಂತೆ ಕರ್ತವ್ಯದ ವೇಳೆ ಸೋಂಕಿಗೆ ಒಳಗಾಗಿದ್ದ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ, ನಿಂದನೆ, ಬಾಡಿಗೆ ಮನೆಗಳಿಂದ ಹೊರಹಾಕುವುದು, ವಾಸ ಪ್ರದೇಶದಿಂದ ಹೊರಗಟ್ಟುವುದು ಸೇರಿದಂತೆ ಹಲವು ಆಘಾತಕಾರಿ ಘಟನೆಗಳಿಗೆ ವೈದ್ಯಕೀಯ ಸಿಬ್ಬಂದಿ ಈಡಾಗಿದ್ದರು.
ಆ ಹಿನ್ನೆಲೆಯಲ್ಲಿ ತಮ್ಮ ಜೀವ ಪಣಕ್ಕಿಟ್ಟು, ಸಾವಿನ ಎದುರು ಸೆಣಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸೋಂಕಿನಿಂದಷ್ಟೇ ಅಲ್ಲದೆ, ಸಮಾಜದಿಂದಲೂ ಅಪಾಯ ಎದುರಾಗಿತ್ತು. ಇದೇ ಕಾರಣವನ್ನು ಮುಂದಿಟ್ಟು ದೇಶದ ವಿವಿಧೆಡೆ ನಡೆದ ಘಟನೆಗಳನ್ನು ಖಂಡಿಸಿ, ಮತ್ತು ಅಂತಹ ಹೇಯ ಕೃತ್ಯಗಳಿಗೆ ಕಡಿವಾಣ ಹಾಕಲು ಬಿಗಿ ಕಾನೂನು ಜಾರಿಗೆ ಆಗ್ರಹಿಸಿ ವೈದ್ಯಕೀಯ ಸಂಘ ಬುಧವಾರ ಮತ್ತು ಗುರುವಾರ ಸಾಂಕೇತಿಕ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ, ಕೇಂದ್ರ ಗೃಹ ಸಚಿವರು ಮತ್ತು ಆರೋಗ್ಯ ಸಚಿವರು ವೀಡಿಯೋ ಕಾನ್ಫರೆನ್ಸ್ ಮೂಲಕ ವೈದ್ಯಕೀಯ ಸಂಘದ ಪ್ರಮುಖರೊಂದಿಗೆ ಮಾತುಕತೆ ನಡೆಸಿ, ವೈದ್ಯರಿಗೆ ಸೂಕ್ತ ಭದ್ರತೆ ನೀಡುವ ಜೊತೆಗೆ, ವೈದ್ಯಕೀಯ ಸಿಬ್ಬಂದಿ ವಿರುದ್ಧ ಹಲ್ಲೆ, ನಿಂದನೆಯಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಬಿಗಿ ಕಾನೂನು ಜಾರಿಗೊಳಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಪ್ರತಿಭಟನೆ ಕೈಬಿಡಲಾಗಿದೆ.
ಈ ನಡುವೆ, ಭಾರತೀಯ ವೈದ್ಯಕೀಯ ಸಂಘಕ್ಕೆ ತಾನು ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರ ಕರೋನಾ ವಿರುದ್ಧದ ಸಮರದ ಮುಂಚೂಣಿ ಸೇನಾನಿಗಳ ರಕ್ಷಣೆಗೆ ಪೂರಕವಾಗಿ ಹೊಸ ಸುಗ್ರೀವಾಜ್ಞೆ ಹೊರಡಿಸಿದ್ದು, ಸಾಂಕ್ರಾಮಿಕ ರೋಗ ಕಾಯ್ದೆಗೆ ತಿದ್ದುಪಡಿ ತಂದು, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಮೇಲಿನ ದಾಳಿಯನ್ನು ಜಾಮೀನುರಹಿತ ಅಪರಾಧವೆಂದು ಘೋಷಿಸಲಾಗಿದ್ದು, ಅಪರಾಧಿಗಳಿಗೆ ಏಳು ವರ್ಷದವರೆಗೆ ಶಿಕ್ಷೆ ಮತ್ತು ಐದು ಲಕ್ಷಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರಕರಣವನ್ನು ಒಂದು ತಿಂಗಳಲ್ಲಿ ತನಿಖೆ ನಡೆಸಿ, ಒಂದು ವರ್ಷದಲ್ಲಿ ಪ್ರಕರಣದ ತೀರ್ಪು ಹೊರಬೀಳಬೇಕು. ತಪ್ಪಿತಸ್ಥರಿಗೆ ಶೀಘ್ರ ಮತ್ತು ಕಠಿಣ ಶಿಕ್ಷಯಾಗುವಂತೆ ನೋಡಿಕೊಳ್ಳಬೇಕು ಎಂದೂ ಹೇಳಲಾಗಿದೆ. ಜೊತೆಗೆ ಯಾವುದೇ ಖಾಸಗೀ ಚಿಕಿತ್ಸಾಲಯ ಅಥವಾ ವೈದ್ಯರಿಗೆ ಸೇರಿದ ವಾಹನಗಳನ್ನು ದ್ವಂಸಗೊಳಿಸುವ ಕೃತ್ಯಗಳಲ್ಲಿ ಅವುಗಳ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು ದಂಡ ವಸೂಲಿಗೂ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ರಕ್ಷಣೆ ಮತ್ತು ಕಾನೂನು ಬಲ ನೀಡಲು ಸರ್ಕಾರ ತುರ್ತು ಕ್ರಮಕೈಗೊಂಡಿದೆ.
ವಾಸ್ತವವಾಗಿ, ದೇಶದ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಬಲ ತುಂಬಿದ ಈ ಕಾನೂನು ಜಾರಿಗೆ ಬರಲು ಕಾರಣವಾಗಿದ್ದು, ಪ್ರಮುಖವಾಗಿ ಚೆನ್ನೈನಲ್ಲಿ ಭಾನುವಾರ ನಡೆದ ಹೇಯ ಘಟನೆ. ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ಸ್ವತಃ ಸೋಂಕಿಗೆ ಒಳಗಾಗಿದ್ದ ಡಾ ಸೈಮನ್ ಹರ್ಕ್ಯುಲಸ್(55) ಅವರು ಭಾನುವಾರ ಮಹಾಮಾರಿಗೆ ಬಲಿಯಾಗಿದ್ದರು. ಬಳಿಕ ಅವರ ಮೃತದೇಹವನ್ನು ವೈದ್ಯಕೀಯ ರೀತಿರಿವಾಜುಗಳ ಬಳಿಕ ಶವಸಂಸ್ಕಾರಕ್ಕಾಗಿ ಮುನಿಸಿಪಲ್ ಸ್ಮಶಾನಕ್ಕೆ ತೆಗೆದುಕೊಂಡುಹೋದಾಗ, ಸ್ಮಶಾನದ ಆಸುಪಾಸಿನ ಜನ ಗುಂಪಾಗಿ ಆಂಬ್ಯುಲೆನ್ಸ್ ಮೇಲೆ ದಾಳಿ ನಡೆಸಿ ವೈದ್ಯರೂ ಮತ್ತು ಪೊಲೀಸರೂ ಸೇರಿದಂತೆ ಹಲವರ ಮೇಲೆ ಭೀಕರ ಹಲ್ಲೆ ನಡೆಸಿದ್ದರು. ಎರಡು- ಮೂರು ಬಾರಿ ಇದೇ ರೀತಿ ಶವ ಸಂಸ್ಕಾರಕ್ಕೆ ಪ್ರಯತ್ನಿಸಿದಾಗಲೂ ಪ್ರತಿಬಾರಿಯೂ ಗುಂಪು ಅವಕಾಶ ನೀಡದೇ ಹಲ್ಲೆ ಮಾಡಿ ಬೆದರಿಸಿತ್ತು. ಬಳಿಕ ವೈದ್ಯರ ಸಹೋದ್ಯೋಗಿ ಡಾ ಪ್ರದೀಪ್ ಕುಮಾರ್ ಅವರು ನಡುರಾತ್ರಿಯಲ್ಲಿ ಸ್ವತಃ ಆಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ಹೋಗಿ, ಇಬ್ಬರು ಸಹಾಯಕರೊಂದಿಗೆ ಸ್ವತಃ ಗುದ್ದಲಿ ಹಿಡಿದು ಮೃತದೇಹವನ್ನು ಹೂತು ಬಂದಿದ್ದರು.
ತಮ್ಮ ಸಹೋದ್ಯೋಗಿಯ ಶವ ಸಂಸ್ಕಾರಕ್ಕೆ ಜನರು ಅಡ್ಡಿಪಡಿಸಿದ್ದರಿಂದ ನೊಂದು, ಅವರ ಮೃತದೇಹ ಬೀದಿಪಾಲಾಗಬಾರದು ಎಂಬ ಕಾರಣಕ್ಕೆ ಸ್ವತಃ ಜೀವಪಣಕ್ಕಿಟ್ಟು ಈ ಕೆಲಸ ಮಾಡಿದ್ದಾಗಿ ವೈದ್ಯ ಪ್ರದೀಪ್ ಕುಮಾರ್ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚೆನ್ನೈ ಪೊಲೀಸರು ಅಗತ್ಯ ಭದ್ರತೆ ನೀಡದೇ ಇರುವ ಬಗ್ಗೆಯೂ ಆತಂಕ ವ್ಯಕ್ತವಾಗಿತ್ತು. ಈ ನಡುವೆ ಮೃತ ವೈದ್ಯರ ಪತ್ನಿ ಕೂಡ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿ, ತಮ್ಮ ಪತಿಯ ಶವಸಂಸ್ಕಾರ ಸರಿಯಾಗಿ ಆಗಿಲ್ಲ. ಕ್ರೈಸ್ತ ಧರ್ಮದ ಸ್ಮಶಾನದಲ್ಲಿಯೇ ವಿಧಿವಿಧಾನದಂತೆ ಸಂಸ್ಕಾರ ಮಾಡಬೇಕು ಎಂದು ಪತಿಯ ಕೊನೆಯ ಆಸೆಯಾಗಿತ್ತು. ಹಾಗಾಗಿ ಸರ್ಕಾರ ಅವರ ಕೊನೆಯ ಆಸೆ ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ 21 ಮಂದಿಯನ್ನು ಬಂಧಿಸಿರುವ ಚೆನ್ನೈ ಪೊಲೀಸರು ಕ್ರಮಜರುಗಿಸಿದ್ದಾರೆ.
ಕಳೆದ ವಾರ ಮೇಘಾಲಯದ ಶಿಲ್ಲಾಂಗ್ ನಲ್ಲಿ, ಖಾಸಗೀ ಚಿಕಿತ್ಸಾಯದ ವೈದ್ಯರೊಬ್ಬರು ಕರೋನಾ ಸೋಂಕಿನಿಂದ ಮೃತಪಟ್ಟಿದ್ದ ಸಂದರ್ಭದಲ್ಲಿಯೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು, ಅವರ ಶವ ಸಂಸ್ಕಾರಕ್ಕೆ ವಾಸ ಪ್ರದೇಶದ ಕ್ರೈಸ್ತ ಸ್ಮಶಾನದಲ್ಲಿ ಅವಕಾಶ ನಿರಾಕರಿಸಲಾಗಿತ್ತು. ಬಳಿಕ ಸ್ಥಳೀಯ ಆಡಳಿತ ಬೇರೊಂದು ಪ್ರದೇಶದಲ್ಲಿ ಶವ ಸಂಸ್ಕಾರ ಪೂರ್ಣಗೊಳಿಸಿತ್ತು.
ಈ ಎರಡು ಘಟನೆಗಳು, ಕರೋನಾದಂತಹ ಮಹಾಮಾರಿಯ ವಿರುದ್ಧ ಜನರ ಜೀವ ಉಳಿಸಲು ಸ್ವತಃ ತಮ್ಮದೇ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯನ್ನು ಸಮಾಜ ಹೇಗೆ ಕಾಣುತ್ತಿದೆ. ಅವರನ್ನು ಎಷ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂಬ ಕುರಿತು ದೇಶ- ವಿದೇಶಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಜೊತೆಗೆ ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ಹಲವು ವೈದ್ಯಕೀಯ ಸಂಘ-ಸಂಸ್ಥೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಆ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಯ ಮೂಲಕ ವೈದ್ಯಕೀಯ ಸಿಬ್ಬಂದಿಯ ಮಾನ(ಘನತೆ) ಮತ್ತು ಪ್ರಾಣ ರಕ್ಷಣೆಯ ಅಭಯ ನೀಡಿದಂತಾಗಿದೆ!