ಕರೋನಾ ಎಂಬ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ರೋಗದ ವಿರುದ್ಧ ಗೆಲುವು ಸಾಧಿಸುವಲ್ಲಿ ನಾವು ಸಫಲರಾದರೂ ಸಹ ಕರೋನಾ ನಂತರದ ಕಾಲವನ್ನು ನಾವು ಹೇಗೆ ನಿಭಾಯಿಸಬಲ್ಲೆವು? ಎಂಬುದು ಇದೀಗ ಇಡೀ ವಿಶ್ವಕ್ಕೆ ತಲೆ ನೋವಿನ ಸಂಗತಿಯಾಗಿದೆ. ಏಕೆಂದರೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಇಡೀ ವಿಶ್ವದ ಆರ್ಥಿಕತೆ ಹಿಂದೆಂದೂ ಕಾಣದ ಮಟ್ಟಕ್ಕೆ ಕುಸಿದಿದೆ. ಇದಕ್ಕೆ ಭಾರತದ ಆರ್ಥಿಕತೆಯೂ ಹೊರತೇನಲ್ಲ!
ಜಿಎಸ್ಟಿ ಮತ್ತು ನೋಟ್ಬ್ಯಾನ್ ನಂತಹ ಮಹತ್ವದ ನಿರ್ಧಾರದಿಂದ ಹಿಮ್ಮುಖವಾಗಿ ಚಲಿಸಿದ್ದ ಭಾರತದ ಜಿಡಿಪಿ ಕಳೆದ ಫೆಬ್ರವರಿ ವೇಳೆಗೆ ಶೇ.4.7ರ ಬಳಿಗೆ ಬಂದು ನಿಂತಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಜಾರಿಯಾಗಿರುವ ಕರೋನಾ ಲಾಕ್ಡೌನ್ನಿಂದಾಗಿ ಜಿಡಿಪಿ ಶೇ.1.9ರ ಆಸುಪಾಸಿನಲ್ಲಿದೆ.
ಕರೋನಾ ಕಣ್ಮರೆಯಾದರೂ ಸಹ ಇದರ ಪ್ರಭಾವ ಭಾರತದ ಆರ್ಥಿಕತೆಯ ಮೇಲೆ ಕನಿಷ್ಟ ಎರಡು ವರ್ಷ ಇರಲಿದೆ ಎನ್ನಲಾಗುತ್ತಿದೆ. 10ರಲ್ಲಿ ಒಬ್ಬ ವ್ಯಕ್ತಿ ಕೆಲಸ ಕಳೆದುಕೊಳ್ಳುವುದು ನಿಶ್ಚಿತ ಎಂದು ಈಗಾಗಲೇ ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಇವು ಕರೋನಾ ನಂತರದ ವಿಶ್ವದ ಹಾಗೂ ಭಾರತದ ಆರ್ಥಿಕತೆಯ ಕುರಿತ ವಿಶ್ಲೇಷಣೆಗಳಾದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಕರೋನಾ ವಿರುದ್ಧ ಹೋರಾಟ ನಡೆಸಲು ಯಾವ ರಾಜ್ಯ ಸರ್ಕಾರಗಳ ಬಳಿಯೂ ಅಗತ್ಯಕ್ಕೆ ತಕ್ಕಷ್ಟು ಹಣ ಇಲ್ಲ ಎಂಬುದೇ ಸತ್ಯ. ಕೇಂದ್ರ ಸರ್ಕಾರವೂ ವಿವಿಧ ಆಶ್ವಾಸನೆಗಳನ್ನು ನೀಡುತ್ತಿದೆಯೇ ಹೊರತು ರಾಜ್ಯಗಳಿಗೆ ಅಗತ್ಯಕ್ಕೆ ತಕ್ಕ ಹಣ ಬಿಡುಗಡೆ ಮಾಡುತ್ತಿಲ್ಲ.

ಈ ನಡುವೆ ಮುಂದಿನ ಎರಡು ವರ್ಷಗಳ ಕಾಲ ವಿವಿಧ ಜಿಲ್ಲೆಗಳ ಅಭಿವೃದ್ಧಿಗೆ ನೀಡಲಾಗುವ MPLAD ಯೋಜನೆಯನ್ನೂ ಸ್ಥಗಿತಗೊಳಿಸಿರುವ ಕೇಂದ್ರ ಆ ಹಣವನ್ನು ಕರೋನಾ ವಿರುದ್ಧದ ಹೋರಾಟಕ್ಕೆ ವಿನಿಯೋಗಿಸಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಕೊನೆಯ ಸಂಪನ್ಮೂಲವನ್ನೂ ಕರೋನಾ ವಿರುದ್ಧದ ಹೋರಾಟದಲ್ಲಿ ಬಳಸುವುದು ತೀರಾ ಅಗತ್ಯವೂ ಹೌದು.
ಆದರೆ, ದೇಶದಲ್ಲಿ ಇಷ್ಟೆಲ್ಲಾ ಆರ್ಥಿಕ ಮುಗ್ಗಟ್ಟು ಇದ್ದಾಗ್ಯೂ ಸಹ ಕೇಂದ್ರ ಸರ್ಕಾರ ಮಾತ್ರ ತನ್ನ ಮಹತ್ವಾಕಾಂಕ್ಷೆಯ CENTRAL VISTA ಯೋಜನೆಯನ್ನು ಕೈಬಿಡುವಂತೆ ಕಾಣಿಸುತ್ತಿಲ್ಲ.
ಕರೋನಾ ವಿರುದ್ಧದ ಹೋರಾಟಕ್ಕೆ ಹಣದ ಕೊರತೆ ಇದ್ದಾಗ್ಯೂ, ಬಲು ದುಬಾರಿಯಾದ ಮತ್ತು ಅನಗತ್ಯವಾದ CENTRAL VISTA ಯೋಜನೆಯೇ ಕೇಂದ್ರಕ್ಕೆ ಮುಖ್ಯವಾದಂತೆ ಕಂಡುಬರುತ್ತಿದೆ. ಆರ್ಥಿಕ ತಜ್ಞರ ಮತ್ತು ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಈ ಯೋಜನೆಗೆ ಸುಮಾರು 60 ಸಾವಿರ ಕೋಟಿ ವಿನಿಯೋಗಿಸಲು ಮುಂದಾಗಿದೆ. ಅದು ಕರೋನಾ ಹುಟ್ಟುಹಾಕಿರುವ ಆರ್ಥಿಕ ಸಂದಿಗ್ಧ ಕಾಲದಲ್ಲಿ ಎಂಬುದು ಉಲ್ಲೇಖಾರ್ಹ.
ಹಾಗಾದರೆ ಏನಿದು CENTRAL VISTA ಯೋಜನೆ? ಈ ಯೋಜನೆಯ ಮೇಲೆ ಕೇಂದ್ರಕ್ಕೆ ಯಾಕಿಷ್ಟು ವ್ಯಾಮೋಹ? ಅಸಲಿಗೆ ಈ ಯೋಜನೆಯ ಅಗತ್ಯವಾದರೂ ಏನು? ಈ ಯೋಜನೆಯ ಕುರಿತು ವಿರೋಧ ಪಕ್ಷಗಳ ನಿಲುವೇನು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.
ಏನಿದು CENTRAL VISTA PROJECT?:
ಈಗಿರುವ ಸಂಸತ್ ಭವನಕ್ಕೆ 85 ವರ್ಷಗಳಾಗಿವೆ. ಇದು ಅಶೋಕಚಕ್ರದ ವಿನ್ಯಾಸದಲ್ಲಿದ್ದು, ಮಧ್ಯದ ಗೋಪುರ ಹೊರತುಪಡಿಸಿ ಅಕ್ಕಪಕ್ಕದ ಎರಡು ಕಟ್ಟಡಗಳು ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಕ್ಕೆ ಬಳಸಲ್ಪಡುತ್ತಿವೆ. ಹಿಂದಿನ ಬ್ರಿಟಿಷ್ ಆಡಳಿತದ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ಕಟ್ಟಲಾಗಿತ್ತು. ಹೀಗಾಗಿ ಸಂಸತ್ ಭವನದಲ್ಲೇ ಎಲ್ಲಾ ಸರ್ಕಾರಿ ಕಚೇರಿಗಳನ್ನು ನಡೆಸುವುದು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಅನೇಕ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟದಲ್ಲಿ ನಡೆಸಲಾಗುತ್ತಿದೆ. ಪ್ರಸ್ತುತ ಸರ್ಕಾರದ ನಾನಾ ಸಚಿವಾಲಯಗಳ ಕಚೇರಿಗಳು 47 ಕಟ್ಟಡಗಳಲ್ಲಿ ಹಂಚಿಹೋಗಿವೆ. ಸುಮಾರು 70,000 ಉದ್ಯೋಗಿಗಳು ಇವುಗಳಲ್ಲಿ ದುಡಿಯುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಈ ಕಟ್ಟಡಗಳ ಬಾಡಿಗೆ ಮತ್ತು ನಿರ್ವಹಣೆಗೆ ಮಾತ್ರ ಸುಮಾರು 1000 ಕೋಟಿ ರೂಪಾಯಿಗಳಷ್ಟು ಖರ್ಚು ಮಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಆಡಳಿತ ಸುಗಮವಾಗಿ ನಡೆಸುವ ಸಲುವಾಗಿ ಹೊಸ ಸಂಸತ್ ಭವನದ ನಿರ್ಮಾಣಕ್ಕೆ ಮುಂದಾಗಿದೆ. ಈ ಯೋಜನೆಯ ಹೆಸರೇ CENTRAL VISTA PROJECT.
ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗಿನ 4 ಚದರ ಕಿಲೋಮೀಟರ್ ವ್ಯಾಪ್ತಿಯ ಈ ಆವರಣವನ್ನು ಸೆಂಟ್ರಲ್ ವಿಸ್ತಾ- ರಾಜಪಥ ಎಂದೇ ಕರೆಯಲಾಗುತ್ತದೆ. ಇದನ್ನೂ ಸೇರಿದಂತೆ ಮಂತ್ರಿಗಳ ನಿವಾಸ ಇತ್ಯಾದಿಗಳಿರುವ ವಿಶಾಲ ಪ್ರದೇಶವನ್ನು ‘ಲ್ಯುಟೆನ್ಸ್ ದಿಲ್ಲಿ’ ಎಂದೇ ಕರೆಯಲಾಗುತ್ತಿದೆ.
ಮೊದಲು, ಈ ಸಚಿವಾಲಯಗಳನ್ನು ಲ್ಯುಟೆನ್ಸ್ ಬಂಗಲೆ ವಲಯದಲ್ಲಿಒಟ್ಟಾಗಿ ತಂದು ರೂಪಿಸುವ ಉದ್ದೇಶ ಸರ್ಕಾರಕ್ಕೆ ಇತ್ತು. ಆದರೆ, ಇಲ್ಲಿ ಖಾಸಗಿ ಕಟ್ಟಡಗಳೂ ಸಾಕಷ್ಟಿದ್ದು ಅವುಗಳನ್ನು ವಶಪಡಿಸಿಕೊಳ್ಳಬೇಕಾಗುತ್ತದೆ. ಅದರ ಬದಲು, ರಾಜಪಥದ ಅಕ್ಕಪಕ್ಕ ಇರುವ ಜಾಗವನ್ನೇ ಸದ್ವಿನಿಯೋಗಗೊಳಿಸಿಕೊಳ್ಳಬಹುದು ಎಂಬ ಯೋಚನೆ ಸರಕಾರಕ್ಕೆ ಬಂತು.
ಹೀಗಾಗಿ ನೂತನ ಆವರಣದಲ್ಲಿ ಸಂಸತ್ ಭವನ ಮತ್ತು ಮೆಗಾ ಸಚಿವಾಲಯ ಅಕ್ಕಪಕ್ಕದಲ್ಲೇ ನಿರ್ಮಿಸಲು ಚಿಂತನೆ ನಡೆಸಲಾಯಿತು. ಸಚಿವಾಲಯಗಳು ದೂರದೂರದಲ್ಲಿಇರುವುದರಿಂದ ಪ್ರತ್ಯೇಕತೆ ಚಿಂತನೆ ಬೆಳೆಯುತ್ತದೆ. ಆದರೆ, ಒಟ್ಟಿಗೇ ಇದ್ದರೆ ಸಂಘಟಿತವಾಗಿ, ಸಹಕಾರಪೂರ್ವಕ ಕಾರ್ಯಾಚರಿಸಬಹುದು ಎಂಬುದು ಸರ್ಕಾರದ ಉದ್ದೇಶ. ಈ ಯೋಜನೆಯ ವೆಚ್ಚ ಬರೋಬ್ಬರಿ 60,000 ಕೋಟಿ.
ಕೇಂದ್ರದ ಮುಂದಿದೆ ಎರಡು ಯೋಜನೆಗಳು:
ಪ್ರಸ್ತುತ ಸರಕಾರದ ಮುಂದೆ ಎರಡು ಯೋಜನೆಗಳಿವೆ. ಮೊದಲನೆಯದು, ಈಗಿರುವ ಸಂಸತ್ ಭವನಕ್ಕೆ ಸಮೀಪದಲ್ಲೇ ಹೊಸತೊಂದು ವಿಶಾಲ ಸಂಸತ್ತನ್ನು ನಿರ್ಮಿಸುವುದು. ಎರಡನೆಯದು, ಈಗಿರುವ ಭವನವನ್ನೇ ಭವಿಷ್ಯದ ಅನುಕೂಲಗಳಿಗೆ ತಕ್ಕಂತೆ ಆಧುನೀಕರಣಗೊಳಿಸುವುದು. ಜೊತೆಗೆ ಎಲ್ಲಸಚಿವಾಲಯಗಳನ್ನೂ ಒಳಗೊಂಡ ಆವರಣವನ್ನೂ ಇಲ್ಲೇ ರಚಿಸುವುದು.
ಎರಡರಲ್ಲೂಹೊಸ ರಾಜಪಥವು ಪ್ರಮುಖ ಪ್ರವಾಸೀ ಆಕರ್ಷಣೆಯಾಗಿರಲಿದೆ. 2024ರಲ್ಲಿಈ ಯೋಜನೆಗಳು ಪೂರ್ತಿಯಾದ ಬಳಿಕ, ಸೌತ್ ಹಾಗೂ ನಾತ್ರ್ ಬ್ಲಾಕ್ನಿಂದ ಸರಕಾರಿ ಕಚೇರಿಗಳನ್ನು ನೂತನ ಸಂಸತ್ ಭವನಕ್ಕೇ ವರ್ಗಾಯಿಸಲಾಗುತ್ತದೆ. ಆಗ ಇವೆರಡೂ ಬ್ಲಾಕ್ಗಳನ್ನು ಮ್ಯೂಸಿಯಂ ಮಾಡಬಹುದೆಂಬ ಆಶಯವಿದೆ.
ಕರೋನಾ ಕಾಲದಲ್ಲಿ ಇದು ಬೇಕಿತ್ತಾ?:
CENTRAL VISTA ಯೋಜನೆಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಬಿಡ್ ಕರೆದಿದ್ದು ದೇಶದ 75ನೇ ಸ್ವಾತಂತ್ರ ದಿನಾಚರಣೆಯಂದು ಈ ನೂತನ ಸಂಸತ್ ಕಟ್ಟಡವನ್ನು ಅನಾವರಣಗೊಳಿಸುವುದು ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆ.
60,000 ಕೋಟಿ ಮೌಲ್ಯದ ಈ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ ಸುಮಾರು 20,000 ಕೋಟಿ ಬೃಹತ್ ಮೊತ್ತವನ್ನು ಬಿಡುಗಡೆ ಮಾಡಿದೆ. ಆದರೆ, ಕರೋನಾ ಇಡೀ ದೇಶದ ಆರ್ಥಿಕತೆಗೆ ಇಷ್ಟು ದೊಡ್ಡ ಪೆಟ್ಟು ನೀಡಿರುವಾಗ ಇಂತಹ ಸಂದರ್ಭದಲ್ಲಿ ಈ ಯೋಜನೆ ಅಗತ್ಯವೇನಿದೆ. ದೇಶದಲ್ಲಿ ಎಲ್ಲಾ ಯೋಜನೆಗಳೂ ಸ್ಥಗಿತಗೊಂಡಿರುವಾಗ ಸಂಸತ್ ಯೋಜನೆ ಮಾತ್ರ ಏಕೆ ಬೇಕು? ಇದರ ಬದಲಿಗೆ ಈ ಹಣವನ್ನು ಉಳಿಸಿ ಬಡವರ ಒಳಿತಿಗೆ, ಕರೋನಾ ವಿರುದ್ಧದ ಹೋರಾಟಕ್ಕೆ ಏಕೆ ಬಳಸಬಾರದು? ಎಂಬುದು ಅನೇಕರ ಕೂಗು.
ಹರಿಹಾಯ್ದ ವಿರೋಧ ಪಕ್ಷಗಳು:
ಈ ಯೋಜನೆಯನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, “ಕೋವಿಡ್ -19 ಸಾಂಕ್ರಾಮಿಕ ರೋಗ ಇಡೀ ದೇಶದ ಆರ್ಥಿಕತೆಯನ್ನು ಹಳಿದು ಹಾಕಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ವಿಸ್ಟಾ ಸುಂದರೀಕರಣ ಮತ್ತು ನಿರ್ಮಾಣ ಯೋಜನೆಯನ್ನು ಅನಗತ್ಯ. ಈ ಹಣವನ್ನು ಕರೋನಾ ವಿರುದ್ಧದ ಯುದ್ಧಕ್ಕೆ ಬಳಸಿ. ಪ್ರಸ್ತುತ ಅಸ್ತಿತ್ವದಲ್ಲಿರುವ ಐತಿಹಾಸಿಕ ಕಟ್ಟಡಗಳಲ್ಲಿ ಸಂಸತ್ತು ನಿರಾತಂಕವಾಗಿ ಕಾರ್ಯನಿರ್ವಹಿಸಬಲ್ಲದು ಎಂಬ ನಂಬಿಕೆ ನನಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಪಿಐ (ಎಂ) ಮುಖಂಡ ಸೀತಾರಾಮ್ ಯೆಚೂರಿ ಕೂಡ ಸೆಂಟ್ರಲ್ ವಿಸ್ಟಾ ಯೋಜನೆಯ ಬಗ್ಗೆ ಟ್ವೀಟ್ ಮೂಲಕ ತೀವ್ರವಾಗಿ ಟೀಕೆಸಿದ್ದು, “ ಕೇಂದ್ರ ಸರ್ಕಾರದಲ್ಲಿ ಹಣವಿಲ್ಲದಿದ್ದರೆ, ದೆಹಲಿಯಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಏಕೆ ಮುಂದುವರೆಸಬೇಕು? ಲಕ್ಷಾಂತರ ಭಾರತೀಯರ ಜೀವ ಮತ್ತು ಜೀವನಕ್ಕಿಂತ ಈ ಯೋಜನೆ ಹೆಚ್ಚಿನ ಆದ್ಯತೆಗೆ ಅರ್ಹವಾಗಿದೆಯೇ?” ಎಂದು ಕಿಡಿಕಾರಿದ್ದಾರೆ.
ಅಲ್ಲದೆ, ಕೇಂದ್ರದ ಈ ಮಹತ್ವಾಕಾಂಕ್ಷೆ ಯೋಜನೆಗೆ ತಡೆ ನೀಡಬೇಕು ಎಂದು ಒತ್ತಾಯಿಸಿ ಕಳೆದ ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯದ ಯೋಜನೆಗೆ ತಡೆ ನೀಡಲು ನಿರಾಕರಿಸಿದೆ.

ಕಳೆದ 38 ದಿನಗಳಿಂದ ದೇಶದಲ್ಲಿ ಲಾಕ್ಡೌನ್ ಚಾಲ್ತಿಯಲ್ಲಿದೆ. ಒಂದು ದಿನದ ಲಾಕ್ಡೌನ್ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬರೋಬ್ಬರಿ 35,000 ಕೋಟಿ ನಷ್ಟವಾಗುತ್ತದೆ. ಇದಲ್ಲದೆ, ಕಳೆದ ಒಂದು ತಿಂಗಳಿನಿಂದ ದೇಶದ ಲಕ್ಷಾಂತರ ಕಾರ್ಮಿಕರು ಅನ್ನ ನೀರಿಲ್ಲದೆ ದಿನದೂಡುವಂತಾಗಿದೆ. ಕಾಲ್ನಡಿಗೆಯಲ್ಲೇ ಸ್ವಂತ ಊರಿಗೆ ಕ್ರಮಿಸುತ್ತಾ ಸತ್ತ ಬಡ ಅಲೆಮಾರಿ ಕಾರ್ಮಿಕರ ಹತ್ತಾರು ಪ್ರಕರಣಗಳು ಅಲ್ಲಲ್ಲಿ ದಾಖಲಾಗುತ್ತಲೇ ಇದೆ. ಮತ್ತೊಂದೆಡೆ ಕರೋನಾ ವಿರುದ್ಧ ಹೋರಾಡಲು ವೈದ್ಯರಿಗೆ ಸುವ್ಯವಸ್ಥಿತ ಮತ್ತು ಗುಣಮಟ್ಟದ ಪಿಪಿಇ ಕಿಟ್ ನೀಡುವುದು ಸಹ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದರೆ, ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲಿ ಹೊಸ ಸಂಸತ್ ಅಗತ್ಯವಿದೆಯಾ ಎಂಬುದು ಪ್ರಶ್ನೆ? ಆದರೆ, ಈ ಪ್ರಶ್ನೆಗೆ ಉತ್ತರ ನೀಡುವವರಾರು?













