ಕೋವಿಡ್‌ನಿಂದ ಮೃತಪಟ್ಟ ವೈದ್ಯರ ಕುರಿತ ಮಾಹಿತಿ ಸರ್ಕಾರದ ಬಳಿ ಲಭ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಮಂತ್ರಿ ಹರ್ಷ್‌ವರ್ಧನ್ ಅವರು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯ ವಿರುದ್ದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಖಾರವಾಗಿ ಪ್ರತಿಕ್ರಿಯಿಸಿದೆ. ಕೋವಿಡ್‌ನಿಂದ ಮೃತಪಟ್ಟವರೆಂದು ವರದಿಯಾದ 382 ವೈದ್ಯರ ಪಟ್ಟಿಯನ್ನು ಬಿಡುಗಡೆ ಮಾಡಿ, ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.
“ಕೇಂದ್ರ ಸರ್ಕಾರವು ನೀಡಿರುವ ಉತ್ತರ ನಿಜಕ್ಕೂ ಆಘಾತಕಾರಿ. ಕರೋನಾ ವಿರುದ್ದ ಹೋರಾಡಿದ್ದ ಸೈನಿಕರನ್ನು ನಡು ರಸ್ತೆಯಲ್ಲಿ ಸರ್ಕಾರ ಕೈಬಿಟ್ಟಿದೆ,” ಎಂದು IMA ಹೇಳಿದೆ.
ಪ್ರಪಂಚದ ಬೇರೆ ಎಲ್ಲಾ ದೇಶಗಳಿಗಿಂತ ಹೆಚ್ಚು ಆರೋಗ್ಯ ಕಾರ್ಯಕರ್ತರು ಭಾರತದಲ್ಲಿ ಮೃತಪಟ್ಟಿದ್ದಾರೆ. ಸಾಮಾನ್ಯ ಜನರಿಗಿಂತ ನಾಲ್ಕುಪಟ್ಟು ಹೆಚ್ಚು ಸಾವಿನ ಅಪಾಯ ವೈದ್ಯರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗಿದೆ, ಎಂದು IMA ಹೇಳಿದೆ.
ಇನ್ನು, ರಾಜ್ಯಸಭೆಯಲ್ಲಿ ಕೇರಳ ಸಂಸದ ಬಿನೋಯ್ ವಿಸ್ವಂ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ಆರೋಗ್ಯವು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ. ಅದಕ್ಕೆ ಸಂಬಂದಪಟ್ಟ ದಾಖಲೆ ಹಾಗೂ ಅಂಕಿಅಂಶಗಳು ನಮ್ಮ ಬಳಿ ಲಭ್ಯವಿಲ್ಲ. ಆದರೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ ಅಡಿಯಲ್ಲಿ ಬರುವ ಫಲಾನುಭವಿಗಳ ದತ್ತಾಂಶ ನಮ್ಮಲ್ಲಿ ಲಭ್ಯವಿದೆ, ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತದನಂತರ ಅವರು ಕೋವಿಡ್‌ನಿಂದ ಮೃತಪಟ್ಟ 155 ಆರೋಗ್ಯ ಕಾರ್ಯಕರ್ತರ ಹೆಸರನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ 64 ಜನರು ವೈದ್ಯರೂ ಸೇರಿದ್ದಾರೆ. ಇದಕ್ಕೆ ಉತ್ತವಾಗಿ 382 ವೈದ್ಯರ ಹೆಸರಿರುವ ಪಟ್ಟಿಯನ್ನು ಬಿಡಗಡೆ ಮಾಡಿರುವ IMA, ಆ ವೈದ್ಯರನ್ನು ಹುತಾತ್ಮರೆಂದು ಘೋಷಣೇ ಮಾಡುವಂತೆ ಆಗ್ರಹಿಸಿದೆ.
IMA ಅಂಕಿ ಅಂಶಗಳ ಪ್ರಕಾರ ಸುಮಾರು 2,238 ವೈದ್ಯರಿಗೆ ಕರೋನಾ ಸೋಂಕು ತಗುಲಿದ್ದು, ಅವರಲ್ಲಿ 382 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ.
“ಒಂದು ವೇಳೆ ಕೇಂದ್ರ ಸರ್ಕಾರ ಕರೋನಾ ಸೋಂಕು ತಗುಲಿದ ಆರೋಗ್ಯ ಕಾರ್ಯಕರ್ತರ ಹಾಗೂ ವೈದ್ಯರ ಮತ್ತು ಕೋವಿಡ್‌ನಿಂದ ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಅಂಕಿ ಅಂಶಗಳನ್ನು ಶೇಖರಿಸದಿದ್ದಲ್ಲಿ, ಸರ್ಕಾರಕ್ಕೆ ಸಾಂಕ್ರಾಮಿಕ ಕಾಯ್ದೆ 1897 ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಅನುಷ್ಟಾನಗೊಳಿಸಲು ಯಾವುದೇ ಅರ್ಹತೆ ಇಲ್ಲ,” ಎಂದು IMA ಕಿಡಿಕಾರಿದೆ.
ಒಂದು ಕಡೆಯಿಂದ ಆರೋಗ್ಯ ಕಾರ್ಯಕರ್ತರು ಕೋವಿಡ್ ವಾರಿಯರ್ಸ್ ಎಂದು ಕರೆದು, ಅವರನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವಾನ ಹೇಳದ ಸರ್ಕಾರವಿದು, ಎಂದು ಟೀಕಿಸಿದೆ.