ಜನಸಾಮಾನ್ಯರನ್ನು ಅಕ್ಷರಶಃ ನಲುಗಿಸಿರುವ ಕರೋನಾ ಸೋಂಕು ಮಿಲಿಟರಿ ಮತ್ತು ಪೋಲೀಸರನ್ನೂ ಬಿಟ್ಟಿಲ್ಲ. CRPF, BSF ಯೋಧರಲ್ಲಿ ಕರೋನಾ ಸೋಂಕು ಪತ್ತೆಯಾಗಿರುವಂತೆಯೇ ದೇಶದ ವಿವಿಧ ರಾಜ್ಯಗಳ ಪೋಲಿಸರಿಗೂ ಈ ಮಾರಕ ರೋಗ ತಗುಲಿದೆ.
ಭಾರತದಲ್ಲೇ ಅತೀ ಹೆಚ್ಚು ಕರೋನಾ ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿ 714 ಪೋಲಿಸರಿಗೆ ಸೋಂಕು ತಗುಲಿದೆಯೆಂದು ಮಹಾರಾಷ್ಟ್ರ ಪೋಲಿಸ್ ಮೂಲಗಳು ತಿಳಿಸಿವೆ. ಒಟ್ಟು ದಾಖಲಾದ ಪ್ರಕರಣಗಳಲ್ಲಿ 61 ಪೋಲಿಸರು ರೋಗದಿಂದ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಪೋಲಿಸರಲ್ಲಿ 648 ಕರೋನಾ ಪ್ರಕರಣಗಳು ಸಕ್ರಿಯವಾಗಿದ್ದು, 5 ಮಂದಿ ಪೋಲಿಸ್ ಸಿಬ್ಬಂದಿಗಳು ಸೋಂಕಿನಿಂದಾಗಿ ಮೃತಪಟ್ಟಿರುವುದಾಗಿ ʼದಿ ಎಕನಾಮಿಕ್ ಟೈಮ್ಸ್ʼ ವರದಿ ಮಾಡಿದೆ.
ಮುಂಬೈಯ ಜೆ.ಜೆ.ಮಾರ್ಗ್ ಪೋಲಿಸ್ ಸ್ಟೇಷನ್ನಿನಲ್ಲಿ 12 ಅಧಿಕಾರಿಗಳು ಸೇರಿ 26 ಮಂದಿ ಪೋಲಿಸ್ ಸಿಬ್ಬಂದಿಗಳಲ್ಲಿ ಕರೋನಾ ಸೋಂಕು ಕಂಡು ಬಂದಿರುವುದಾಗಿ ಮೇ 06 ರಂದು ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿತ್ತು.

ಮೇ 5 ರಂದು ರಾಜಸ್ಥಾನದ ಗಡಿಯಲ್ಲಿ ನಿಯೋಜಿಸಿದ್ದ ಪಂಜಾಬಿನ ಮುಕ್‌ಸ್ತರ್ ಜಿಲ್ಲೆಯ ಪೋಲಿಸರಲ್ಲಿ ಇಬ್ಬರು ಅಧಿಕಾರಿಗಳಿಗೆ ಕರೋನಾ ಸೋಂಕು ಪತ್ತೆಯಾಗಿ ಸಂಪೂರ್ಣ ಠಾಣೆಯನ್ನೇ ಸೀಲ್‌ಡೌನ್ ಮಾಡಿಸಲಾಗಿತ್ತು. ಕರೋನಾ ವಿರುಧ್ದ ಹೋರಾಟದಲ್ಲಿ ಭಾಗಿಯಾಗುವ ಪೋಲಿಸರ ಕುಟುಂಬಸ್ಥರಿಗೂ ಸೋಂಕು ತಗುಲುತ್ತಿದ್ದು, ದೇಶ ರಾಜಧಾನಿ ದೆಹಲಿಯ ಠಾಣೆಯೊಂದರಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಕರೋನಾದಿಂದಾಗಿ ಮರಣವನ್ನಪ್ಪಿದ ಅಮಿತ್ ರಾಣಾ ಅವರ ಹೆಂಡತಿ ಮತ್ತು ಮಗನಲ್ಲಿಯೂ ವೈರಸ್ ಪತ್ತೆಯಾಗಿರುವುದಾಗಿ ದೆಹಲಿ ಪೋಲಿಸ್ ಮೂಲಗಳು ತಿಳಿಸಿವೆ.