ಲಿನಿ.. ಬಹುಶಃ ಈ ಎರಡಕ್ಷರದ ಹೆಣ್ಣುಮಗಳ ಹೆಸರು ದೇಶದ ಆಗುಹೋಗು ಗೊತ್ತಿರುವ ಪ್ರತಿಯೊಬ್ಬರಿಗೂ ನೆನಪಿನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದ ಹೆಸರಾಗಿದೆ. ಈಕೆ ಯಾವುದೋ ಖ್ಯಾತ ವೈದ್ಯೆಯೋ, ತಜ್ಞೆಯೋ ಆಗಿರಲಿಲ್ಲ. ಬದಲಾಗಿ ಓರ್ವ ಸಾಮಾನ್ಯ ದಾದಿಯಷ್ಟೇ ಆಗಿದ್ದರು. ಆದರೆ 2018 ರಲ್ಲಿ ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡ ಮಾರಣಾಂತಿಕ ʼನಿಫಾʼ ವೈರಸ್ ಸಮಯದಲ್ಲಿ ಈಕೆ ತೋರಿದ ಕರ್ತವ್ಯ ಬದ್ಧತೆ, ಸೇವೆ ಅನ್ನೋದು ಇವರ ಹೆಸರನ್ನ ಚಿರಸ್ಥಾಯಿಯಾಗಿ ಭಾರತದಲ್ಲಿ ಉಳಿಯುವಂತೆ ಮಾಡಿದೆ.
ಕರೋನಾ ಸಂಕಷ್ಟದ ಈ ಕಾಲದಲ್ಲಿ ಇಂತಹ ಲಕ್ಷಾಂತರ ಲಿನಿ ಅಂತಹ ದಾದಿಯರು ದೇಶಾದ್ಯಂತ ತಮ್ಮ ಸೇವೆ ಒದಗಿಸುತ್ತಿದ್ದಾರೆ. ಸ್ವತಃ ಒಂದೊಮ್ಮೆ ಕರೋನಾ ಚಿಕಿತ್ಸೆ ನೀಡುತ್ತಿರುವ ದಾದಿಯರು ಕ್ವಾರೆಂಟೈನ್ ಹಾಗೂ ಸೋಂಕಿಗೆ ಒಳಗಾದವರೂ ಆಗಿದ್ದಾರೆ. ಇವರೆಲ್ಲರಿಗೂ ಲಿನಿಯಂತಹ ಓರ್ವ ಸಾಮಾನ್ಯ ದಾದಿಯೇ ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಮಾದರಿಯೆನಿಸಬಹುದು. ಲಿನಿ ಕೇವಲ ದಾದಿಯಾಗಿರದೇ, ಇಬ್ಬರು ಮಕ್ಕಳಿಗೆ ಮುದ್ದಿನ ತಾಯಿಯಾಗಿ, ಪತಿಗೆ ಓರ್ವ ಉತ್ತಮ ಪತ್ನಿಯಾಗಿ, ಅದಕ್ಕೂ ಜಾಸ್ತಿ ರೋಗಿಗಳ ಪಾಲಿಗೆ ಓರ್ವ ಅತ್ಯತ್ತಮ ಶುಶ್ರೂಷಕಿಯಾಗಿಯೂ ಇದ್ದವರು. ಹೌದು, ಈ ಅತ್ಯುತ್ತಮ ಶುಶ್ರೂಷಕಿ ಅನ್ನೋದೆ ಲಿನಿ ಪ್ರಾಣಕ್ಕೆ ಸಂಚಕಾರ ತಂದಿತ್ತು. ಆದರೂ ಧೃತಿಗೆಡದ ಲಿನಿ ತನ್ನ ಪ್ರಾಣ ಅರ್ಪಿಸಿದರೇ ವಿನಃ ಹಿಂದೆ ಸರಿಯಲಿಲ್ಲ.
ಒಂದರ್ಥದಲ್ಲಿ ಲಿನಿ, ಯುದ್ಧ ಭೂಮಿಯಲ್ಲಿ ಶತ್ರು ರಾಷ್ಟ್ರದ ವಿರುದ್ಧ ಹೋರಾಡುತ್ತ ತನ್ನ ಹುತಾತ್ಮತೆ ಹತ್ತಿರ ಬರುತ್ತಿದೆ ಅನ್ನೋದು ಗೊತ್ತಾಗಿಯೂ ಹಿಂದೆ ಸರಿಯದೇ ಸಾವನ್ನೇ ಮೆಟ್ಟಿ ನಿಲ್ಲಲು ಮುಂದಡಿ ಇಟ್ಟ ಧೀರ ಯೋಧೆಯಂತೆ ಭಾಸವಾಗದೇ ಇರಲಾರರು, ಅದೇ ಕಾರಣಕ್ಕಾಗಿ ಕಳೆದ ವರುಷ ಭಾರತ ಸರಕಾರ ನೀಡಲ್ಪಡುವ ʼಫ್ಲೋರೆನ್ಸ್ ನೈಟಿಂಗೇಲ್ʼ ಮರಣೋತ್ತರ ಪ್ರಶಸ್ತಿ ಲಿನಿ ಅವರಿಗೆ ನೀಡಿ ಗೌರವಿಸಲಾಯಿತು.
ಅಂದಹಾಗೆ, ಕೇರಳದ ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಿನಿ ಸಜೀಶ್ ನಿಫಾ ಸೋಂಕಿತರ ಸೇವೆ ಮಾಡುತ್ತಲೇ (ನಿಫಾ ಯುದ್ಧಭೂಮಿಯಲ್ಲಿ) ಸಾವನ್ನಪ್ಪಿ ಇಂದಿಗೆ ಎರಡು ವರುಷಗಳಾಯಿತು. ಕೇರಳ ಸರಕಾರ ಅವರ ಸೇವೆಯನ್ನ ಇಂದಿಗೂ ನೆನಪಿಸಿಕೊಳ್ಳುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಟ್ವೀಟ್ ಮೂಲಕ “ಲಿನಿ ಅವರನ್ನ ಯಾವತ್ತೂ ಮರೆಯಲಾರೆವು“ ಎಂದಿದ್ದಾರೆ. ಆ ಮೂಲಕ ಕೇರಳ ಸರಕಾರ ಲಿನಿ ಅವರ ಹುತಾತ್ಮತೆಯನ್ನ ನೆನಪಿಸಿಕೊಳ್ಳುತ್ತಿದೆ. ಕೇರಳ ಸರಕಾರವು ನಿಫಾ ವೈರಸ್ ನಿಂದಾಗಿ 17 ಮಂದಿಯನ್ನ ಬಲಿ ಪಡೆದುಕೊಂಡಿತ್ತು. ಆದರೆ ಆರೋಗ್ಯ ಸಚಿವೆ ಶೈಲಜಾ ಟೀಚರ್ ತೋರಿದ ಅವಿರತ ಶ್ರಮವೂ ಅಂದು ಕೇರಳ ಶೀಘ್ರವಾಗಿ ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಹೊರ ಬರಲು ಸಾಧ್ಯವಾಗಿತ್ತು. ಇದೇ ಮಾದರಿಯಲ್ಲಿ ಕೇರಳ ಇದೀಗ ಕರೋನಾ ವಿರುದ್ಧವೂ ಸೆಣಸಾಡುತ್ತಿದೆ. ಪರಿಣಾಮ ಕೇರಳ ಕರೋನಾ ತಡೆಗಟ್ಟುವಲ್ಲಿ ದೇಶದಲ್ಲಿಯೇ ಮಾದರಿಯೆನಿಸುತ್ತಿದೆ. ಮಾತ್ರವಲ್ಲದೇ ಆರೋಗ್ಯ ಸಚಿವೆ ಶೈಲಜಾ ಟೀಚರ್ ಮತ್ತೊಮ್ಮೆ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಸುದ್ದಿಯಾಗುವಷ್ಟರ ಮಟ್ಟಿಗೆ ಮಾದರಿಯಾದರು.
Also Read: ಕರೋನಾ ವಿಚಾರದಲ್ಲೂ ತಪ್ಪದ ಶೈಲಜಾ ಟೀಚರ್ ʼಲೆಕ್ಕಾಚಾರʼ… !!
Today, we remember sister Lini, the brave nurse who lost her life in line of duty during the Nipah outbreak of 2018. The selfless service of people like her form a protective shield over humanity. Lest we forget them. pic.twitter.com/CBFinHV7ej
— Pinarayi Vijayan (@vijayanpinarayi) May 21, 2020
ಮೇ 21 ರ 2018ರಲ್ಲಿ ಸಾವನ್ನಪ್ಪಿದ ಲಿನಿ ತನ್ನ ಪತಿ ಸಜೀಶ್ ಪುತೂರು ಅವರಿಗೆ ಬರೆದ ಪತ್ರ ಅಂದು ವೈರಲ್ ಆಗಿ ದೇಶದ ಜನರನ್ನ ಭಾವನಾತ್ಮಕವಾಗಿ ದುಃಖಿಸುವಂತೆ ಮಾಡಿತ್ತು. ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಲಿನಿ ಅವರು ಆರಂಭಿಕ ಹಂತದಲ್ಲಿ ನಿಫಾ ವೈರಸ್ ರೋಗಿಗಳನ್ನ ಸೇವೆ ಮಾಡುತ್ತಲೇ ತಾವೂ ಕೂಡಾ ಗಂಭೀರ ಸೋಂಕಿಗೆ ತುತ್ತಾಗಿದ್ದರು. ಅದಾಗಲೇ ಹತ್ತಾರು ಮಂದಿ ನಿಫಾ ಸೋಂಕಿತರ ಆರೈಕೆ ಮಾಡಿದ್ದ ಲಿನಿ ತನ್ನ ಆರೋಗ್ಯದ ಕಡೆ ಗಮನಹರಿಸಿಯೇ ಇಲ್ಲ. ಕೊನೆಗೆ ಲಿನಿ ಅವರೇ ಕ್ವಾರೆಂಟೈನ್ ಒಳಗಾದರು. ಬಹರೇನ್ ನಲ್ಲಿದ್ದ ಪತಿ ಊರಿಗೆ ದೌಡಾಯಿಸಿದರು. 5 ಹಾಗೂ 2 ರ ಹರೆಯದ ಇಬ್ಬರು ಗಂಡು ಮಕ್ಕಳನ್ನ ಬಿಟ್ಟು ಆಸ್ಪತ್ರೆಯಲ್ಲಿಯೇ ಸೇವೆ ನಿರತರಾಗಿದ್ದ ಲಿನಿ ಅವರನ್ನ ಸಾಯುವ ಒಂದು ದಿನ ಮುನ್ನವಷ್ಟೇ ಪತಿ ಕೇವಲ ಎರಡು ನಿಮಿಷಗಳಷ್ಟೇ ನೋಡಲು ಸಾಧ್ಯವಾಗಿತ್ತು. ಆದರೆ ಮಾತನಾಡುವ ಪರಿಸ್ಥಿತಿಯಲ್ಲಿ ಸಜೀಶ್ ಪತ್ನಿ ಲಿನಿ ಇರಲಿಲ್ಲ. ಆದರೆ ಆಕೆ ಬರೆದ ಪತ್ರವಷ್ಟೇ ಸಜೀಶ್ ಪಾಲಿನ ಕೊನೆಯ ಏಕಮುಖ ಸಂಭಾಷಣೆಯಾಗಿತ್ತು..

“ನಾನು ಸಾಯ್ತೀನಿ.. ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ”
ಹೌದು, ಅಂದು ಕೊನೆಯದಾಗಿ ಪತಿಗಾಗಿ ಬರೆದ ಪತ್ರದಲ್ಲಿ ಲಿನಿ ಅವರು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಸಾವು ತನ್ನ ಕಣ್ಣಿನೆದುರು ಇರುವಂತೆಯೇ ಅದನ್ನ ಖಚಿತಪಡಿಸಿಕೊಂಡವರೇ ತನ್ನ ಪತಿಗೆ ಪತ್ರ ಬರೆಯುತ್ತಾರೆ. “ ಕ್ಷಮಿಸಿ, ನಾನು ಇನ್ಮುಂದೆ ನಿಮ್ಮನ್ನೆಲ್ಲಾ ಭೇಟಿಯಾಗುತ್ತೇನೆ ಎಂದು ನನಗೆ ಅನ್ನಿಸ್ತಿಲ್ಲ. ಆದರೆ ನಮ್ಮ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ಅವರನ್ನ ನಿಮ್ಮ ಜೊತೆ ಗಲ್ಫ್‌ಗೆ ಕರೆದುಕೊಂಡು ಹೋಗಿ..” ಹೀಗೆ ಮಲಯಾಳಂ ನಲ್ಲಿ ಬರೆದ ಆ ಪತ್ರದ ಸಾಲು ಅವರ ಸಾವಿನ ನಂತರ ಸಾಕಷ್ಟು ವೈರಲ್ ಆಗಿ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಸುದ್ದಿಯಾಗಿತ್ತು. ಇಂತಹ ಲಿನಿ ಇಂದಿಗೆ ಅಗಲಿ ಎರಡು ವರುಷ ಆಗಿದೆ. ಆದರೂ ಕೇರಳದ ಮಂದಿ ಅವರನ್ನ ಮರೆತಿಲ್ಲ. ಕರೋನಾ ಸಂದಿಗ್ಧತೆ ನಡುವೆಯೂ ಕೇರಳ ಸರಕಾರ ಹಾಗೂ ಕೇರಳಿಯನ್ನರು ತಮ್ಮ ಟ್ವಿಟ್ಟರ್, ಫೇಸ್ಬುಕ್ ಹಾಗೂ ವಾಟ್ಸಾಪ್ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

Remembering sister Lini on her second death anniversary.
Lini, who was a nurse at the EMS memorial hospital in Kozhikode, looked after the first Nipah virus patient in 2018, after which she also succumbed to the virus on this day, two years ago.
— Korah Abraham (@thekorahabraham) May 21, 2020
“I don't think I will be able to see you again. Sorry. Please raise our children well.”
Sister Lini, a tearful memory of the Nipah outbreak. pic.twitter.com/yqStNwfk9y— Narendran (@Narendran_11) May 21, 2020
ಕರೋನಾ ಮಧ್ಯೆ ನೆನಪಾದ ʼಲಿನಿʼ :
ಓರ್ವ ದಾದಿಯಾಗಿ ಲಿನಿ ಮಾಡಿರುವ ಸಾಹಸ, ಧೈರ್ಯ ಹಾಗೂ ಸೇವೆ ಇದೀಗ ಕರೋನಾ ಅವಧಿಯಲ್ಲೂ ಕಾಣಬಹುದು. ಲಕ್ಷಾಂತರ ದಾದಿಯರು ದೇಶಾದ್ಯಂತ ಪಿಪಿಇ ಕಿಟ್‌ಗಳ ಕೊರತೆಯ ಹೊರತಾಗಿಯೂ ತಮ್ಮ ನೋವನ್ನ ತೋಡಿಕೊಳ್ಳದೇ ಕೆಲಸದಲ್ಲಿ ನಿರತರಾಗಿದ್ದಾರೆ. ಅವರೆಲ್ಲರಿಗೂ ಸರಕಾರ ಘೋಷಿಸಿರುವ ಲಕ್ಷ ಕೋಟಿ ಪ್ಯಾಕೇಜ್‌ಗಳಾಗಲೀ, ಇಲ್ಲವೇ ನಿಮ್ಮ ಚಪ್ಪಾಳೆ, ಕ್ಯಾಂಡಲ್ ಲೈಟ್‌ಗಳಾಗಲೀ ಸ್ಫೂರ್ತಿಯಾಗಿಲ್ಲ. ಒಂದು ವೇಳೆ ಆಗಿದೆ ಎಂದುಕೊಂಡರೂ ಅದು ಭ್ರಮೆಯಷ್ಟೇ. ಬದಲಿಗೆ ಅಂತಹ ಶುಶ್ರೂಷಕಿಯರೆಲ್ಲರಿಗೂ ಇದೇ ಲಿನಿಯಂತಹ ನಿಸ್ವಾರ್ಥ ಸೇವೆಗೈದ ಓರ್ವ ದಾದಿಯಷ್ಟೇ ಮಾದರಿಯಾಗಿದ್ದಾರೆ ಅನ್ನೋದೆ ಸತ್ಯ.
Also Read: ಕೋವಿಡ್ 19 ವಿರುದ್ಧದ ಹೋರಾಟ: ವಿಶ್ವ ಮಾಧ್ಯಮಗಳಲ್ಲಿ ರಾರಾಜಿಸಿದ ಕೇರಳ.!










