ಕರೋನಾ ಸೋಂಕಿನಿಂದ ಇಡೀ ವಿಶ್ವವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕರೋನಾ ಸೋಂಕು ಭಾರತಕ್ಕೆ ಬರುವ ಮುಂಚೆಯೇ ಭಾರತದಲ್ಲಿ ಆರ್ಥಿಕ ಕುಸಿತ ಕಂಡಿತ್ತು. ಆರ್ಥಿಕ ಚೇತರಿಕೆ ಕಾಣದೆ ಕಾಣದೆ ಕಂಗಾಲಾಗಿದ್ದ ಭಾರತ ಸರ್ಕಾರಕ್ಕೆ ಕರೋನಾ ಬಂದಪ್ಪಳಿಸಿದ್ದು ಹೇಳಲಾರದ ಸಂಕಷ್ಟವನ್ನು ತಂದಿದೆ. ಅದೇ ಕಾರಣಕ್ಕೆ ಕೇಂದ್ರ ಸರ್ಕಾರ ಕರೋನಾ ಸಂಕಷ್ಟ ದೂರ ಮಾಡಿಕೊಳ್ಳಲು ರಾಜ್ಯ ಸರ್ಕಾರದ ನೆರವಿಗೆ ನಿಲ್ಲಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಆದ್ಯತೆ ನೀಡುವಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಕೊಟ್ಟಿದ್ದರು. ಅದರಂತೆ ಇದೀಗ ಕರ್ನಾಟಕ ರಾಜ್ಯ ಸರ್ಕಾರ ಕೂಡ ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಕೈ ಹಾಕಿದೆ. ಕರೋನಾ ಜಂಜಾಟದಲ್ಲೇ ಖಜಾನೆ ಭರ್ತಿ ಮಾಡುವ ಕಸರತ್ತಿಗೆ ಕೈ ಹಾಕಿದೆ.
ಕರ್ನಾಟಕ ರಾಜ್ಯದಲ್ಲೂ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಎಂದು ಕರೋನಾ ಸೋಂಕು ಕಾಲಿಡುವ ಮುಂಚೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದರು. ಅದೇ ಕಾರಣಕ್ಕಾಗಿ ಈ ಹಿಂದಿನ ಕುಮಾರಸ್ವಾಮಿ ಸರ್ಕಾರ ಶುರು ಮಾಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಮುಖ್ಯಮಂತ್ರಿಗಳೇ ಸೂಚನೆ ಕೊಟ್ಟಿದ್ದರು. ಉತ್ತರ ಕರ್ನಾಟಕದ ಪ್ರವಾಹದಲ್ಲಿ ಸಿಲುಕಿದ್ದ ರಾಜ್ಯ ಸರ್ಕಾರ ಖಜಾನೆ ಪಗಡೆಯಾಟದಲ್ಲಿ ರಾಜ್ಯ ಕಳೆದುಕೊಂಡ ಪಾಂಡವರ ಸ್ಥಿತಿಯಂತಿತ್ತು. ಇದೀಗ ಚೇತರಿಕೆ ಕಾಣಬಹುದು, ಖಜಾನೆ ಭರ್ತಿ ಆಗಬಹುದು ಎಂದು ನಿರೀಕ್ಷೆ ಮಾಡಿದ್ದ ಅವಧಿಯಲ್ಲಿ ಕರೋನಾ ಮಹಾಮಾರಿ ರುದ್ರ ನರ್ತನ ಮಾಡುತ್ತಿದೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುತ್ತಲೇ ಸಾಗಿದೆ. ಸರ್ಕಾರ ಲಾಕ್ಡೌನ್ ಮಾಡಿಕೊಂಡಿದ್ದರಿಂದ ಯಾವುದೇ ಆದಾಯ ಮೂಲವಿಲ್ಲದ ಅಳಿದುಳಿದಿದ್ದ ಆರಾಣೆ ಮೂರಾಣೆ ಕಾಸು ಕರೋನಾ ನಿಯಂತ್ರಣದ ಪಾಲಾಗಿದೆ.
ಇದೀಗ ಬಂದಷ್ಟೇ ಸಾಕು ಎನ್ನುತ್ತಿರುವ ರಾಜ್ಯ ಸರ್ಕಾರ ಏನಾದರೂ ಮಾಡಿ ಖಜಾನೆಗೆ ಸ್ವಲ್ಪ ಹಣ ತುಂಬಿಕೊಳ್ಳುವ ಹಪಾಹಪಿಯಲ್ಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕೆಲ ಕೈಗಾರಿಕೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ. ಉತ್ಪಾದನಾ ವಲಯ ಶುರು ಆದರೆ ಖಜಾನೆಗೆ ಕಾಸು ಬರುತ್ತೆ ಎನ್ನುವ ಲೆಕ್ಕಾಚಾರ ಅಧಿಕಾರಿಗಳದ್ದಾಗಿದೆ. ಮೊದಲಿಗೆ ಮೆಡಿಸಿನ್, ಕೃಷಿ, ಆಹಾರ ಸಂಸ್ಕರಣೆಗೆ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ 5 ಲಕ್ಷ ಉತ್ಪಾದನಾ ಘಟಕಗಳಿದ್ದು 43 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಾರೆ. ಉತ್ಪಾದನೆ ಮೂಲಕ ತೆರಿಗೆ ಸಂಗ್ರಹದ ಗುರಿ ಹಾಕಿಕೊಳ್ಳಲಾಗಿದೆ. ಇನ್ನೂ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಿದ್ದು, 11 ಕೋಟಿ ರೂಪಾಯಿ ಸಂಗ್ರಹವಾಗಿದೆ. ಬೆಂಗಳೂರು ಒಂದರಲ್ಲೇ 2 ದಿನಕ್ಕೆ 5 ಕೋಟಿ 18 ಲಕ್ಷ ಸಂಗ್ರಹವಾಗಿದೆ.
ಗ್ಯಾರೇಜ್, ಮಿಲ್ ಸೇರಿದಂತೆ ಕೆಲ ಉದ್ದಿಮೆಗಳ ಆರಂಭಕ್ಕೆ ಅನುಮತಿ ಕೊಡಲಾಗಿದೆ. ಕೃಷಿ ಸಂಬಂಧಿ ಉಪಕರಣಗಳ ಮಾರಾಟ ಶುರುವಾಗಿದೆ. ಟ್ರ್ಯಾಕ್ಟರ್, ಟಿಲ್ಲರ್ ಮಾರಾಟ ಶುರುವಾಗಿದೆ. ಇನ್ನೂ ಕರೋನಾ ಸೋಂಕು ಇಲ್ಲದ ಗ್ರೀನ್ ಝೋನ್ ಗಳಲ್ಲಿ ಎಲ್ಲಾ ರೀತಿಯ ವಹಿವಾಟಿಗೂ ಅನುಮತಿ ಸಿಕ್ಕಿರುವುದರಿಂದ ಆದಾಯಗಳಿಕೆ ಯತ್ನ ಮಾಡಲಾಗ್ತಿದೆ. ಕರೋನಾದಿಂದ ಆಗಿರುವ ನಷ್ಟ ಭರಿಸಿಕೊಳ್ಳಲು ಈಗಾಗಲೇ ಮೆಡಿಕಲ್, ಪಿಜಿ ಸೀಟುಗಳ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಒಟ್ಟಾರೆ ಯಾವ ಮೂಲದಿಂದ ಖಜಾನೆಗೆ ಹಣ ಬರುತ್ತೆ ಎನ್ನುವುದು ಮುಖ್ಯವಲ್ಲ, ಖಜಾನೆಗೆ ಹಣ ಹರಿದು ಬರುವುದು ಅಷ್ಟೇ ಮುಖ್ಯ ಎನ್ನುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಾಗಿದೆ.
ಲಾಕ್ಡೌನ್ ಉಲ್ಲಂಘನೆ ವೇಳೆ ಸೀಝ್ ಆಗಿದ್ದ ವಾಹನಗಳನ್ನು ಇಂದಿನಿಂದ ಬಿಡುಗಡೆ ಮಾಡಲಾಗ್ತಿದೆ. ಸೀಝ್ ಆದ ವಾಹನ ಪಡೆಯೋಕೆ ಕಾರುಗಳಿಗೆ ಒಂದು ಸಾವಿರ ಬೈಕ್ ಗಳಿಗೆ 500 ರೂಪಾಯಿ ದಂಡವನ್ನು ಕೋರ್ಟ್ ನಿರ್ಧರಿಸಿದೆ, ಆದರೆ ಇಷ್ಟು ಸಣ್ಣ ಪ್ರಮಾಣದಲ್ಲಿ ವಾಹನಗಳನ್ನು ಬಿಡುಗಡೆ ಮಾಡಿದರೆ ಯಾವುದೇ ಪ್ರಯೋಜನೆ ಇಲ್ಲ ಎನ್ನುವುದು ರಾಜ್ಯ ಸರ್ಕಾರದ ಲೆಕ್ಕಾಚಾರ. ಇದೇ ಕಾರಣಕ್ಕೆ ಇದೀಗ ಅದರೊಳಗೊಂದು ಸಣ್ಣ ಲೆಕ್ಕಾಚಾರ ಹಾಕಿಕೊಂಡಿದ್ದು, ಮೊದಲು ಹಳೇ ಕೇಸ್ಗಳ ಹಣವನ್ನು ಪಾವತಿ ಮಾಡಬೇಕು. ಆ ಬಳಿಕ ʼಲಾ ಅಂಡ್ ಆರ್ಡರ್ʼ ಠಾಣೆಯಲ್ಲಿ ಲಾಕ್ಡೌನ್ ಉಲ್ಲಂಘನೆ ದಂಡವನ್ನು ಪಾವತಿ ಮಾಡಿದರೆ ಮಾತ್ರ ಕಾರು, ಬೈಕ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಒಂದಿಷ್ಟು ಹಣ ಖಜಾನೆ ಸೇರಲಿದೆ.
ಇಷ್ಟು ಮಾತ್ರವಲ್ಲ, ಇನ್ಮುಂದೆ ನೀವು ಮಾಸ್ಕ್ ಹಾಕಿಕೊಂಡಿಲ್ಲ ಎಂದರೂ ದಂಡ, ರಸ್ತೆಯಲ್ಲಿ ಉಗುಳಿದ್ದೀರಿ ಎಂದರೂ ದಂಡ ಹಾಕಲು ರಾಜ್ಯ ಸರ್ಕಾರ ಅಸ್ತು ಎಂದಿದೆ. ಕರೋನಾ ಸೋಂಕು ನಿಯಂತ್ರಣಕ್ಕೆ ಸ್ವಚ್ಛತೆಗೆ ಆದ್ಯತೆ ನೀಡುವುದು ಅನಿವಾರ್ಯ, ಅದರಲ್ಲಿ ಬೇರೆ ಮಾತು ಇಲ್ಲ. ಆದರೆ ಸ್ವಚ್ಛತೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ರಾಜ ಕಾಲುವೆ ಪಕ್ಕದಲ್ಲಿ ನಿಲ್ಲಲು ಅಸಾಧ್ಯವಾಗಿದೆ. ಮೆಜೆಸ್ಟಿಕ್ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನ ಸವಾರರು ರಸ್ತೆಯಲ್ಲಿ ಹೋಗುವಾಗ ಮೂಗು ಮುಚ್ಚಿಕೊಳ್ಳಬೇಕು. ರೈಲ್ವೆ ಟ್ರ್ಯಾಕ್ ಕೆಳಗೆ ಹೋಗುವಾಗ ತಲೆ ಮೇಲೆ ಏನಾದರೂ ಬೀಳಬಹುದು ಎನ್ನುವ ಭಯ ತಪ್ಪಿಲ್ಲ. ಆದರೆ ರಸ್ತೆಯಲ್ಲಿ ಉಗುಳಿದ್ರೆ ಮಾತ್ರ ದಂಡ ಕಟ್ಟಿಟ್ಟ ಬುತ್ತಿ. ಬೆಂಗಳೂರಿನಲ್ಲಿ ಈ ಮೊದಲು ಸಿಗರೇಟ್ ಸೇದುವ ಜನರಿಗೆ ದಂಡ ಹಾಕುತ್ತಿದ್ದರು. ಟೀ ಅಂಗಡಿ ಎದುರು ನಿಂತಿದ್ದರೆ ಪೊಲೀಸರು ಬಂದು ದಂಡ ವಸೂಲಿ ಮಾಡುತ್ತಿದ್ದರು. ಇನ್ಮುಂದೆ ಉಗುಳಿನ ಪಕ್ಕದಲ್ಲಿ ನಿಂತಿದ್ದರೂ ಬಿಬಿಎಂಪಿ ಅಧಿಕಾರಿಗಳು ದಂಡ ವಸೂಲಿ ಮಾಡಿದರೆ ಅಚ್ಚರಿಯೇನು ಇಲ್ಲ. ಒಟ್ಟಾರೆ ರಾಜ್ಯ ಸರ್ಕಾರದ ಖಜಾನೆ ಬಡವರ ಕಾಸಿನಿಂದ ತುಂಬಬೇಕಿದೆ ಅಷ್ಟೆ.