ಕರೋನಾ ಸೋಂಕು ಕೈಮೀರಿ ಹೋಗುತ್ತಿದೆ ಎಂದು ಈಗ ಆಡಳಿತಾರೂಢ ಬಿಜೆಪಿಯ ಸಚಿವರು, ಶಾಸಕರುಗಳೇ ಅಧಿಕೃತವಾಗಿ ಹೇಳತೊಡಗಿದ್ದಾರೆ. ಅಂದರೆ; ಅಷ್ಟರಮಟ್ಟಿಗೆ ರಾಜ್ಯ ಮತ್ತು ದೇಶದಲ್ಲಿ ಕೋವಿಡ್-19 ಮಹಾಮಾರಿ ನಿಯಂತ್ರಣದಲ್ಲಿ ಸರ್ಕಾರಿ ವ್ಯವಸ್ಥೆ ವೈಫಲ್ಯ ಕಂಡಿದೆ ಮತ್ತು ಇನ್ನೇನಿದ್ದರೂ ಜನರು ಸ್ವಯಂ ಹೊಣೆಗಾರಿಕೆ ಮತ್ತು ಶಕ್ತಿಯ ಮೇಲೆ ತಮ್ಮ ತಮ್ಮ ಜೀವ ರಕ್ಷಣೆ ತಾವೇ ಮಾಡಿಕೊಳ್ಳಬೇಕು ಎಂಬುದನ್ನು ಆಳುವ ಮಂದಿ ಪರೋಕ್ಷವಾಗಿ ಹೇಳತೊಡಗಿದ್ದಾರೆ.
ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು ಏರುತ್ತಿರುವ ಹೊತ್ತಿನಲ್ಲಿ, ಸೋಂಕು ಪ್ರತಿಯೊಬ್ಬರ ಮನೆ ಹೊಸ್ತಿಲಿಗೆ ಬಂದು ನಿಂತಿರುವಾಗ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಗಳು ಕೈಚೆಲ್ಲುತ್ತಿರುವಾಗ, ಜವಾಬ್ದಾರಿಯುತ ನಾಗರಿಕರಾಗಿ ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣದ ಮೂಲಕ ತಮ್ಮ ಜೀವದ ಜೊತೆ ತಮ್ಮ ನಂಬಿಕೊಂಡವರು ಮತ್ತು ತಮ್ಮಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಅಪಾಯವನ್ನು ತಪ್ಪಿಸುವ ಮೂಲಕ ಸಹನಾಗರಿಕರ ಜೀವವನ್ನೂ ಕಾಪಾಡುವ ಹೊಣೆಗಾರಿಕೆ ಹೊರಬೇಕಿದೆ.
ಏಕೆಂದರೆ; ಒಂದು, ಇದು ಅಪಾಯಕಾರಿ ವೇಗದಲ್ಲಿ ಹರಡುತ್ತಿರುವ ವೈರಾಣು ಮತ್ತು ವಯಸ್ಕರು, ವಿವಿಧ ಮಾರಕ ರೋಗಗಳಿಂದ ಬಳಲುತ್ತಿರುವವರು ಮತ್ತು ಮಕ್ಕಳ ವಿಷಯದಲ್ಲಿ ಇನ್ನಷ್ಟು ಮಾರಣಾಂತಿಕ. ಜೊತೆಗೆ ಆರೋಗ್ಯವಂತ ನಡುವಯಸ್ಸಿನವರು ಕೂಡ ರೋಗ ಲಕ್ಷಣಗಳೇ ಕಾಣಿಸಿಕೊಳ್ಳದೆ ದಿಢೀರನೇ ಉಸಿರಾಟದ ತೊಂದರೆಯಂತಹ ಸಂಕಷಕ್ಕೆ ಒಳಗಾಗಿ ಧುತ್ತನೇ ಸಾವು ಕಾಣುವಂತಹ ಪ್ರಕರಣಗಳೂ ವರದಿಯಾಗುತ್ತಿವೆ. ಎರಡನೆಯದಾಗಿ ನಮ್ಮಲ್ಲಿ ಇರುವ ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿಯ ವ್ಯವಸ್ಥೆ ತೀರಾ ಕಡಿಮೆ. ಇಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ತೀರಾ ಆತಂಕಕಾರಿ ಪ್ರಮಾಣದಲ್ಲಿ ಆಸ್ಪತ್ರೆಗಳಿವೆ, ವೆಂಟಿಲೇಟರು, ಪಿಪಿಇ ಕಿಟ್, ಮಾಸ್ಕ್, ಸೇರಿದಂತೆ ವೈದ್ಯಕೀಯ ಸುರಕ್ಷಾ ಸಾಧನ ಮತ್ತು ಜೀವರಕ್ಷಕ ಉಪಕರಣಗಳು ಕೂಡ ತೀರಾ ಸೀಮಿತ ಪ್ರಮಾಣದಲ್ಲಿವೆ ಎಂಬುದು ಆಸ್ಪತ್ರೆಗಳಲ್ಲಿ ಜಾಗವಿಲ್ಲದೆ, ಬೀದಿಯಲ್ಲೇ ಜೀವ ಬಿಡುತ್ತಿರುವ ಸೋಂಕಿತರ ಪ್ರಕರಣಗಳೇ ಸಾಕ್ಷಿ. ಕನಿಷ್ಟ ಸೋಂಕಿತರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಕೂಡ ಸಿಗದ ಹೀನಾಯ ಸ್ಥಿತಿ ನಮ್ಮ ಆರೋಗ್ಯ ವ್ಯವಸ್ಥೆಯದ್ದು.
ಹೆಚ್ಚುವರಿ ಹಾಸಿಗೆ, ತಾತ್ಕಾಲಿಕ ಆಸ್ಪತ್ರೆ, ಪಿಪಿಇ ಕಿಟ್, ಮಾಸ್ಕ್, ಔಷಧ ಮುಂತಾದ ಸೌಲಭ್ಯ-ಸಲಕರಣಗಳನ್ನು ಲಾಕ್ ಡೌನ್ ಅವಧಿಯ ನೂರು ದಿನಗಳಲ್ಲಿ ಮಾಡುವ ಅವಕಾಶ ಸರ್ಕಾರಗಳ ಮುಂದಿತ್ತು. ಆದರೆ, ಆ ಕೆಲಸವನ್ನು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮಾಡಿಲ್ಲ ಎಂಬುದಕ್ಕೆ ಇದೀಗ ನಿತ್ಯ ವರದಿಯಾಗುತ್ತಿರುವ ಆಸ್ಪತ್ರೆ ಅವಾಂತರಗಳೇ ನಿದರ್ಶನ. ಇಚ್ಛಾಶಕ್ತಿ ಮತ್ತು ಜನಪರ ಕಾಳಜಿಯೊಂದಿಗೆ ಹಣಕಾಸಿನ ಅನುದಾನದ ಬೆಂಬಲವಿದ್ದರೆ ಹತ್ತಾರು ದಿನಗಳಲ್ಲಿ ಮಾಡಬಹುದಾದ ಈ ಸೌಲಭ್ಯಗಳ ವಿಷಯದಲ್ಲೇ ಹೀಗಾದರೆ, ಇನ್ನು ಹಾಗೆ ಬೇಕೆಂದಾಗ ತಯಾರಿಸಲಾಗದ ವೈದ್ಯಕೀಯ ಸಿಬ್ಬಂದಿಯ ವಿಷಯದಲ್ಲಿ; ಅದರಲ್ಲೂ ವೈದ್ಯರ ವಿಷಯದಲ್ಲಿ ಭಾರತವೆಷ್ಟು ಸಜ್ಜಾಗಿದೆ ಎಂಬುದನ್ನು ನೋಡಿದರೆ; ಸ್ವಯಂ ನಿಯಂತ್ರಣದ ಮಹತ್ವ ಜನರಿಗೆ ಮನವರಿಕೆಯಾಗಬಹುದು.
ದೇಶದಲ್ಲಿ ಸದ್ಯ ಎಷ್ಟು ಮಂದಿ ವೈದ್ಯರಿದ್ದಾರೆ? ಆ ಪೈಕಿ ಎಷ್ಟು ಮಂದಿ ಕರೋನಾ ಸಾಂಕ್ರಾಮಿಕದ ಚಿಕಿತ್ಸೆಗೆ ಲಭ್ಯವಿದ್ದಾರೆ. ಅವರಲ್ಲಿ ಒಬ್ಬ ವೈದ್ಯ ಎಷ್ಟು ಮಂದಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಬಹುದು? ದೇಶದ ರಾಕೆಟ್ ವೇಗದಲ್ಲಿ ಹೆಚ್ಚುತ್ತಿರುವ ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ ಲಭ್ಯ ವೈದ್ಯರ ಸಂಖ್ಯೆ ನೀಡುವ ಚಿತ್ರಣ ಎಂಥದು? ಎಂಬ ಪ್ರಶ್ನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ‘ಬ್ರೂಕಿಂಗ್ಸ್.ಎಜು’ ಎಂಬ ಜಾಲತಾಣ ನಡೆಸಿದ ಸಮೀಕ್ಷೆ ಮತ್ತು ಅಂದಾಜಿನ ಅಂಶಗಳು ಬೆಚ್ಚಿಬೀಳಿಸದೇ ಇರವು.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ಮಾಹಿತಿ ಮತ್ತು ನ್ಯಾಷನಲ್ ಹೆಲ್ತ್ ಪ್ರೊಫೈಲ್ 2019ರ ಅಂಕಿಅಂಶಗಳನ್ನು ಬಳಸಿಕೊಂಡು ‘ಬ್ರೂಕಿಂಗ್ಸ್’ ಅಂದಾಜು ಲೆಕ್ಕಾಚಾರಗಳನ್ನು ಮಾಡಿದೆ. ಸದ್ಯ ದೇಶದಲ್ಲಿ ನೋಂದಾಯಿತ ವೈದ್ಯರ ಸಂಖ್ಯೆ ಮತ್ತು ಕೋವಿಡ್ ಸೋಂಕಿತರ ಏರಿಕೆಯ ಪ್ರಮಾಣದಲ್ಲಿ ಭವಿಷ್ಯದಲ್ಲಿ ತಲುಪಬಹುದಾದ ಸಂಖ್ಯೆಯನ್ನು ಹೋಲಿಸಿ ಈ ಪ್ರೊಜೆಕ್ಷನ್ಸ್ ಮಾಡಲಾಗಿದ್ದು, ಸರಿಸುಮಾರು ಯಾವ ಹೊತ್ತಿಗೆ ದೇಶದ ಕರೋನಾ ಸೋಂಕಿತ ಗಂಭೀರ ಪ್ರಕರಣಗಳ ಸಂಖ್ಯೆ ವೈದ್ಯರ ಚಿಕಿತ್ಸೆಯ ಸಾಮರ್ಥ್ಯವನ್ನು ಮೀರಿಹೋಗುತ್ತದೆ? ಯಾವಾಗ ದೇಶದ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಕುಸಿದುಬೀಳಲಿದೆ ಎಂಬುದನ್ನು ಈ ಅಂದಾಜು ವಿವರಿಸುತ್ತದೆ.
ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರವೇ ಕೋವಿಡ್ ಪ್ರಕರಣಗಳ ಪ್ರಮಾಣ(ವಾಸ್ತವವಾಗಿ ಐದು ಪಟ್ಟು ಹೆಚ್ಚಿದೆ ಎನ್ನಲಾಗುತ್ತಿದೆ!) ಮುಂದಿನ ಕೆಲವು ವಾರಗಳಲ್ಲಿ ಯಾವ ಗತಿಯಲ್ಲಿ ಹೆಚ್ಚಾಗಲಿದೆ ಎಂಬುದನ್ನು ಅಂದಾಜಿಸಿ, ಆ ಪೈಕಿ ನಿಜಕ್ಕೂ ವೈದ್ಯಕೀಯ ಚಿಕಿತ್ಸೆ ಬೇಕಾಗುವ ಶೇ.15ರಷ್ಟು ಗಂಭೀರ ಪ್ರಕರಣಗಳನ್ನು ಪರಿಗಣಿಸಿ ಆ ಪ್ರಮಾಣವನ್ನು ಲಭ್ಯವಿರುವ ವೈದ್ಯರ ಪ್ರಮಾಣಕ್ಕೆ ತಾಳೆ ನೋಡಿ ಈ ಲೆಕ್ಕಾಚಾರ ಮಾಡಲಾಗಿದೆ.
ನ್ಯಾಷನಲ್ ಹೆಲ್ತ್ ಪ್ರೊಫೈಲ್ ಪ್ರಕಾರ ನೋಂದಾಯಿತ ಒಟ್ಟು ವೈದ್ಯರ ಪೈಕಿ ಶೇ.80ರ ದೇಶದಲ್ಲಿ ಈಗ ಸೇವೆಗೆ ಲಭ್ಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಆ ಪೈಕಿ ವಿವಿಧ ರೋಗ ಪರಿಣಿತರು, ಸರ್ಜನ್ನರು, ಜನರಲ್ ಮೆಡಿಸಿನ್ ವೈದ್ಯರೂ ಸೇರಿದ್ದಾರೆ. ಆ ಹಿನ್ನೆಲೆಯಲ್ಲಿ ಮೂರು ಸಂಭಾವ್ಯ ಸ್ಥಿತಿಗಳನ್ನು ಅಂದಾಜಿಸಲಾಗಿದ್ದು, ಮೊದಲನೆಯ ಸ್ಥಿತಿಯಲ್ಲಿ ಲಭ್ಯ ವೈದ್ಯರ ಪೈಕಿ ಶೇ.1ರಷ್ಟು ಮಂದಿಯನ್ನು ಕರೋನಾ ಚಿಕಿತ್ಸೆಗೆ ನಿಯೋಜಿಸಿದರೆ, ಎರಡನೆಯ ಸಾಧ್ಯತೆ ಶೇ.5ರಷ್ಟು ವೈದ್ಯರನ್ನು ನಿಯೋಜಿಸುವುದು ಮತ್ತು ಮೂರನೇ ಸಾಧ್ಯತೆ ಶೇ.10ರಷ್ಟು ವೈದ್ಯರ ನಿಯೋಜನೆ. ಈ ಮೂರು ಸಾಧ್ಯತೆಗಳ ಮೇಲೆ ಕೋವಿಡ್ ಚಿಕಿತ್ಸೆ ಯಾವ ಹಂತದಲ್ಲಿ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಲಿದೆ ಎಂದು ಕಳೆದ ಮಾರ್ಚ್ ನಲ್ಲಿ ನಡೆಸಿದ ಅಂದಾಜು ಲೆಕ್ಕಾಚಾರಗಳಿವು.
ಈಗಾಗಲೇ ದೇಶದಲ್ಲಿ ಶೇ.10ರಷ್ಟು ವೈದ್ಯರು ಕರೋನಾ ಚಿಕಿತ್ಸೆಯಲ್ಲಿ ತೊಡಗಿಕೊಂಡಿರುವ ಸಾಧ್ಯತೆ ಹೆಚ್ಚಿದ್ದು, ಅನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗಿರುವ ಸೋಂಕಿತರ ಪ್ರಮಾಣ ಮತ್ತು ಬಹುತೇಕ ಎಲ್ಲಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಶೇ.10ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ವೈದ್ಯರು ತೊಡಗಿಸಿಕೊಂಡಿರುವ ಸಾಧ್ಯತೆಯನ್ನು ಕೂಡ ಅಲ್ಲಗಳೆಯಲಾಗದು.
ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಸುಮಾರು 12 ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಬಲ್ಲರು ಎಂದು ಅಂದಾಜಿಸಿದರೆ, ಶೇ.1ರಷ್ಟು ವೈದ್ಯರು ನಿಯೋಜಿತರಾಗಿದ್ದ ಪಕ್ಷದಲ್ಲಿ ಸುಮಾರು 1,10,850 ಸೋಂಕಿತರಿಗೆ ಚಿಕಿತ್ಸೆ ನೀಡಬಹುದು. ಶೇ.5ರಷ್ಟು ವೈದ್ಯರು ನಿಯೋಜಿತರಾಗಿದ್ದಲ್ಲಿ ಸುಮಾರು 5,54,249 ಮಂದಿಗೆ ಚಿಕಿತ್ಸೆ ನೀಡಬಹುದು. ಹಾಗೂ ಶೇ.10 ರಷ್ಟು ವೈದ್ಯರು ನಿಯೋಜಿತರಾದರೆ ಸುಮಾರು 11,08,499 ಸೋಂಕಿತರಿಗೆ ಚಿಕಿತ್ಸೆ ನೀಡಬಹುದು ಎಂದು ಅಂದಾಜಿಸಲಾಗಿದ್ದು, ಏಳು ದಿನಗಳ ಅವಧಿಗೆ ಚಿಕಿತ್ಸೆಯ ಒಂದು ಸುತ್ತು ಪೂರೈಸಲಿದೆ ಎಂಬ ಊಹೆಯ ಮೇಲೆ ನೋಡಿದರೂ ಶೇ.10ರಷ್ಟು ವೈದ್ಯರು ನಿಯೋಜಿತಗೊಂಡಿದ್ದರೂ ಜೂನ್ 11-18ರ ಹೊತ್ತಿಗೆ ಭಾರತ ವೈದ್ಯರ ಕೊರತೆಯ ಬಿಕ್ಕಟ್ಟಿಗೆ ಸಿಲುಕಲಿದೆ ಎಂದು ಬ್ರೂಕಿಂಗ್ಸ್ ವಿಶ್ಲೇಷಣೆ ಹೇಳಿತ್ತು.
ಆದರೆ, ಇದೀಗ ಜುಲೈ 6ರ ಹೊತ್ತಿಗೆ ದೇಶದ ಕರೋನಾ ಒಟ್ಟು ಪ್ರಕರಣಗಳ ಸಂಖ್ಯೆ 7.20 ಲಕ್ಷ ದಾಟಿದೆ ಮತ್ತು ಆ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ 2.60 ಲಕ್ಷ ಗಡಿ ದಾಟಿದೆ. ಸಕ್ರಿಯ ಪ್ರಕರಣಗಳ ಪೈಕಿ ಶೇ.15ರಷ್ಟು ಮಂದಿಗೆ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಂದಾಜಿಸಿದರೂ ಸುಮಾರು ನಲವತ್ತು ಸಾವಿರ ಮಂದಿಗೆ ಚಿಕಿತ್ಸೆ ನೀಡಲು ವೈದ್ಯರ ಅಗತ್ಯ ಬೀಳುತ್ತಿತ್ತು. ಆದರೆ, ಸದ್ಯ ಕರ್ನಾಟಕವೂ ಸೇರಿದಂತೆ ಎಲ್ಲೆಡೆ ವೈರಾಣು ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ಮತ್ತು ತೀವ್ರ ರೋಗ ಲಕ್ಷಣಗಳಿರುವ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ(ಮೊನ್ನೆ ತಾನೆ ಸೋಂಕಿತರಲ್ಲಿ ರೋಗಲಕ್ಷಣವಿಲ್ಲದವರಿಗೆ ಮನೆಯಲ್ಲಿ ಚಿಕಿತ್ಸೆ ಎಂಬ ಸೂಚನೆ ಹೊರಬಿದ್ದಿದೆ). ಹಾಗಾಗಿ ಬಹುತೇಕ ಸಕ್ರಿಯ ಪ್ರಕರಣಗಳೆಲ್ಲವೂ ಆಸ್ಪತ್ರೆ ಚಿಕಿತ್ಸೆಯಡಿಯಲ್ಲಿಯೇ ಇವೆ! ಅಷ್ಟು ಪ್ರಮಾಣದಲ್ಲಿ ಚಿಕಿತ್ಸೆ ನೀಡಲು ದೇಶದ ಶೇ.10ರಷ್ಟು ವೈದ್ಯರು ನಿಯೋಜನೆಯಾದರೂ ಕೊರತೆಯೇ! ಏಕೆಂದರೆ, ಚಿಕಿತ್ಸೆಗೆ ಮೂರು ಪಾಳಿಯಲ್ಲಿ ವೈದ್ಯರ ನಿಯೋಜನೆಯಾಗಬೇಕಾಗುತ್ತದೆ ಮತ್ತು ಆ ಪೈಕಿ ಶೇ.2-3ರಷ್ಟು ಮಂದಿ ವೈದ್ಯರಿಗೇ ಸೋಂಕು ತಗುಲಿ ಅವರುಗಳೇ ಕ್ವಾರಂಟೈನ್ ಆಗಿರುವ ಸಾಧ್ಯತೆ ಕೂಡ ಇದೆ.
ಹಾಗಾಗಿ ವೈದ್ಯರ ಕೊರತೆಯ ಈ ಗಂಭೀರತೆ ಕೂಡ ಸೋಂಕಿನಿಂದ ದೂರವಿರಲು ನಮಗೆ ಎಚ್ಚರಿಕೆ ಘಂಟೆಯಾಗಬೇಕಿದೆ. ವಾಸ್ತವಾಂಶಗಳ ಮೇಲಿನ ಈ ಲೆಕ್ಕಾಚಾರಗಳು ಆಘಾತಕಾರಿ ಭವಿಷ್ಯದ ಗಂಡಾಂತರದ ಭವಿಷ್ಯ ನುಡಿಯುತ್ತಿದ್ದು, ಜನತೆ ಈ ಅನಾಹುತದಿಂದ ಪಾರಾಗಲು ಇರುವ ಏಕೈಕ ಮಾರ್ಗವೆಂದರೆ; ಅನಗತ್ಯವಾಗಿ ಮನೆಯಿಂದ ಹೊರಹೋಗದೆ, ಸ್ವಯಂ ಕ್ವಾರಂಟೈನ್ ಒಳಗಾಗಿ ತಮ್ಮನ್ನೂ, ಸಮಾಜವನ್ನು ಸುರಕ್ಷಿತವಾಗಿಡುವುದು.