ಮಾರ್ಚ್ 24 ರಂದು ಲಾಕ್‌ಡೌನ್ ಆಗುತ್ತಲೇ ರಸ್ತೆಗಿಳಿಯುತ್ತಿದ್ದ ಬಸ್, ಕಾರು, ಆಟೋ ಹಾಗೂ ಇನ್ನೊಂದೆಡೆ ಮೆಟ್ರೋ ರೈಲು, ರೈಲು ಹಾಗೂ ವಿಮಾನಯಾನ ಎಲ್ಲವೂ ಸ್ಥಗಿತಗೊಂಡಿದ್ದವು. ಜನಸಾಮಾನ್ಯರು ಬೀದಿಗಿಳಿಯಲು ಭಯಪಟ್ಟುಕೊಂಡಿದ್ದರು. ಕರೋನಾ ಆವರಿಸಿಕೊಳ್ಳುವ ಭೀತಿ ಎಲ್ಲರಲ್ಲೂ, ಎಲ್ಲೆಲ್ಲಿಯೂ ಹರಿದಾಡಿತ್ತು. ಆದರೆ ಆ ಸಮಯಕ್ಕೆ ರಸ್ತೆಯಲ್ಲಿ ಕಾಣಸಿಕ್ಕಿರೋದು ವಲಸೆ ಕಾರ್ಮಿಕರು. ಮಹಾನಗರಗಳಿಗೆ ಬಂದು ಬದುಕು ಕಟ್ಟಿಕೊಳ್ಳುವ ಸಣ್ಣ ಕನಸು ಹೊತ್ತು ಬಂದಿದ್ದ ಆ ಕಾರ್ಮಿಕರೆಲ್ಲ ಭಾರವಾದ ಹೆಜ್ಜೆಯನ್ನರಿಸಿ ತಮ್ಮೂರಿನತ್ತ ಪಯಣ ಬೆಳೆಸಿದ್ದರು. ಪ್ರಧಾನ ಮಂತ್ರಿಗಳೇನೋ ಶ್ರೀಮಂತ ರಾಷ್ಟ್ರದ ಅಧ್ಯಕ್ಷರುಗಳು ಘೋಷಿಸುವಂತೆ ಕೇವಲ 4 ಗಂಟೆಯೊಳಗಾಗಿ ಬಂದ್ ಮಾಡುವಂತೆ ಸಂದೇಶ ನೀಡಿ ತೆರಳಿದರು. ಅದಕ್ಕೆ ಪೂರಕವಾಗಿ ಬಿಜೆಪಿ ಐಟಿ ಸೆಲ್‌ಗಳು ಗ್ರಾಫಿಕ್ಸ್ ಪೋಸ್ಟ್ ರಚಿಸಿ ಪ್ರಚಾರ ಶುರು ಮಾಡಿದ್ದವು. ಆದರೆ ʼಗ್ರೌಂಡ್ ರಿಯಾಲಿಟಿʼ ಅನ್ನೋದೊಂದು ಇದೆಯಲ್ವೇ? ಅದು ಮಾತ್ರ ಬೇರೆಯದ್ದೇ ಕತೆ ಹೇಳುತ್ತಿತ್ತು.
ಕೆಲಸ ಕಳೆದುಕೊಂಡ ಕಾರ್ಮಿಕರು ಅನಿವಾರ್ಯವಾಗಿ ತಮ್ಮ ಭಾರವಾದ ಹೆಜ್ಜೆಯನ್ನಿರಿಸಿ ತಮ್ಮ ತವರು ಜಿಲ್ಲೆ, ರಾಜ್ಯಗಳಿಗೆ ಹೊರಟು ನಿಂತಿದ್ದರು. ಅಂದು ಯಾವೊಬ್ಬನೂ ʼನಿಮ್ಮ ಸಂಕಷ್ಟಕ್ಕೆ ನಾವಿದ್ದೇವೆʼ ಅನ್ನೋ ರಾಜಕಾರಣಿ ಇರಲಿಲ್ಲ. ಅದೆಷ್ಟೋ ರಾಜಕೀಯ ರಹಿತ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು ಮಾಡಿರುವಷ್ಟು ಉಪಕಾರ ಯಾವೊಬ್ಬ ರಾಜಕಾರಣಿಯೂ ಮಾಡಿರಲಿಲ್ಲ. ಇದರಿಂದಾಗಿ ಕೆಲವೆಡೆ ಕಾಲ್ನಡಿಗೆಯಲ್ಲಿಯೇ ತೆರಳುತ್ತಿದ್ದ ಕಾರ್ಮಿಕರನ್ನ ತಡೆದ ಪೊಲೀಸರ ವಿರುದ್ಧ ಪ್ರತಿಭಟನೆಗಳೂ ನಡೆದವು. ಅಸಹಾಯಕ ಕಾರ್ಮಿಕರಿಗೆ ಅದಕ್ಕಿಂತ ಭಿನ್ನ ದಾರಿಯಿರಲಿಲ್ಲ. ಮೊದಲೇ ಕೆಲಸ ಕಳೆದುಕೊಂಡು, ವೇತನವಿಲ್ಲದೇ ಬದುಕೋದು ಅವರಿಗೆ ಬೇಕಾಗಿ ಇರಲಿಲ್ಲ. ಹೀಗಾಗಿ ಕಿಲೋ ಮೀಟರ್ ಲೆಕ್ಕ ಹಾಕದೇ ಪ್ರಮುಖ ಹೆದ್ದಾರಿಗಳಲ್ಲೇ ಇವರ ಪಯಣ ಮುಂದುವರೆದಿತ್ತು. ದುರಂತ ಮತ್ತು ದುರಾದೃಷ್ಟವೆಂದರೆ ಹೀಗೆ ಹೊರಟ ಕಾರ್ಮಿಕರು ಮನೆ ಸೇರುವ ಮುನ್ನವೇ ಮಸಣ ಸೇರಿರೋ ಘಟನೆಯೂ ವರದಿಯಾಗಿತ್ತು. ಈ ಕುರಿತು ʼಪ್ರತಿಧ್ವನಿʼ ಕೂಡಾ ಸಮಗ್ರ ವರದಿ ಬಿತ್ತರಿಸಿತ್ತು.
Also Read: ಲಾಕ್‌ಡೌನ್: 900 ಕಿ.ಮೀ ಪ್ರಯಾಣ ಮಾಡಿದ ಗರ್ಭಿಣಿ, ಆಸ್ಪತ್ರೆಗೆ ದಾಖಲಿಸಲು ವೈದ್ಯರಿಂದ ನಿರಾಕರಣೆ
2019 ಲೋಕಸಭಾ ಚುನಾವಣೆ, ಅದಕ್ಕೂ ಮೊದಲು ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ರಾಜಕಾರಣಿಗಳು ತಮ್ಮ ಮತದಾರರನ್ನು ವಿದೇಶದಿಂದ ಕರೆಸಿಕೊಂಡ ಉದಾಹರಣೆಗಳೂ ಇವೆ. ಅದರಲ್ಲೂ ಕರ್ನಾಟಕದ ಕರಾವಳಿ ಭಾಗದಲ್ಲಿ ವಿದೇಶದಿಂದ, ಮುಂಬೈಯಿಂದ ವೋಟ್ ಹಾಕಲು ಬಂದವರೂ ಇದ್ದಾರೆ. ಇವರು ಬಂದಿದ್ದಾರೆ ಅನ್ನೋದಕ್ಕಿಂತಲೂ ಇವರನ್ನ ರಾಜಕಾರಣಿಗಳು ಕರೆಸಿಕೊಂಡಿದ್ದಾರೆ. ಮಹಾನಗರಗಳಲ್ಲಿದ್ದ ಉತ್ತರ ಕರ್ನಾಟಕದ ಮಂದಿ, ಉತ್ತರ ಭಾರತದ ಮಂದಿ ವೋಟ್‌ಗಾಗಿ ರೈಲು, ಬಸ್ಸು ಹತ್ತಿದ್ದೂ ಇದೆ. ಇದೆಲ್ಲದರ ಹಿಂದೆ ರಾಜಕಾರಣದ ಲೆಕ್ಕಾಚಾರವಿತ್ತು. ಅಂದು ತಲೆಗೊಬ್ಬರಂತೆ ಎಣಿಸಿ ಹಣ ನೀಡಿ, ಕರೆಸಿಕೊಳ್ಳುತ್ತಿದ್ದರು. ವೋಟ್‌ಗೂ ಹಣ ನೀಡುತ್ತಿದ್ದರು. ಬಸ್ಸು, ರೈಲು ಎಲ್ಲದರ ಪ್ರಯಾಣ ದರ ರಾಜಕಾರಣಿಗಳೇ ಭರಿಸುತ್ತಿದ್ದರು. ಇದು ಕೇವಲ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಬಹುತೇಕ ರಾಷ್ಟ್ರೀಯ ಸಹಿತ ಪ್ರಾದೇಶಿಕ ಪಕ್ಷಗಳು ಕೂಡಾ ಇದೇ ನೀತಿಯನ್ನ ಅಳವಡಿಸಿಕೊಂಡಿದೆ. ಆದರೆ ಇದೇ ರಾಜಕಾರಣಿಗಳಿಗೆ ಕರೋನಾ ಸಮಯದಲ್ಲಿ ಅದೇನಾಯ್ತು? ಸಂದಿಗ್ಧತೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ತಮ್ಮ ರಾಜ್ಯದ ಕಾರ್ಮಿಕರನ್ನ ಕರೆಸಿಕೊಳ್ಳಲು ಇವರಿಗೆ ಅದೇನು ಅಡ್ಡಿಯಾಯಿತು? ಒಂದು ವೇಳೆ ಇದೇ ಸಮಯದಲ್ಲಿ ಚುನಾವಣೆ ಇರುತ್ತಿದ್ದರೆ?
Also Read: ಮರದ ಕೆಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ.!
ಹಾಗಂತ ಕೆಲವು ನಾಯಕರು ತಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸಾವಿರ ಬಸ್‌ಗಳನ್ನು ಒದಗಿಸಿದವರಿದ್ದಾರೆ. ರಾಜ್ಯದಲ್ಲಿ KSRTC ಬಸ್ ಟಿಕೆಟ್‌ಗಾಗಿ ಕೋಟಿ ರೂಪಾಯಿ ಕೊಟ್ಟಿರುವ ಉದಾಹರಣೆಯೂ ಇದೆ. ಆದರೆ ಆಡಳಿತ ಪಕ್ಷಗಳು ಕೈ ಕಟ್ಟಿ ಕುಳಿತಾಗ, ವಲಸೆ ಕಾರ್ಮಿಕರು ಬೀದಿ ಪಾಲಾಗುತ್ತಿರುವುದು ನೋಡಿದಾಗಲೂ ಚುನಾವಣೆಯ ವೋಟ್‌ಗಾಗಿ ಕರೆದ ರಾಜಕಾರಣಿಗಳಿಗೆ ಇದ್ಯಾವುದೂ ನೆನಪಾಗಿಲ್ಲ.

2019ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಹಾರ ರಾಜ್ಯದಲ್ಲಿ ನಡೆದ ಚುನಾವಣಾ ರ್ಯಾಲಿಯ ಒಂದು ಉದಾಹರಣೆ ಪರಿಗಣಿಸೋದಾದರೆ ಆ ರಾಜ್ಯ ಅಂದು ತೋರಿದ್ದ ಆಸಕ್ತಿ, ಅಧಿಕಾರಕ್ಕೆ ಬಂದ ಮೇಲೆ ತೋರುತ್ತಿದ್ದರೆ?. ಅಂದು ಬಿಹಾರದ ಪಾಟ್ನಾ ಗಾಂಧಿ ಮೈದಾನದಲ್ಲಿ ನಡೆದ ಸಂಕಲ್ಪ ರ್ಯಾಲಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಪರವಾಗಿ ಅಂದು ಪ್ರಧಾನಿ ನರೇಂದ್ರ ಮೋದಿ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ವೇದಿಕೆ ಹಂಚಿಕೊಳ್ಳುವ ಸಂದರ್ಭ ನಿತೀಶ್ ಕುಮಾರ್ ಅವರಿಗೂ ಪ್ರತಿಷ್ಠೆ ವಿಚಾರವಾಗಿತ್ತು. ಅಂದು ಬಿಹಾರದಲ್ಲಿ ನಡೆದ ಸಂಕಲ್ಪ ರ್ಯಾಲಿಯಲ್ಲಿ ನಡೆದ ಸಭೆಗಾಗಿ ಅಲ್ಲಿನ ರಾಜಕಾರಣಿಗಳು 30 ರೈಲು ಹಾಗೂ 6 ಸಾವಿರ ಬಸ್‌ಗಳನ್ನ ವ್ಯವಸ್ಥೆ ಮಾಡಿದ್ದರು ಅನ್ನೋದಾಗಿ ಎನ್‌ಡಿಟಿವಿ ರಾಷ್ಟ್ರೀಯ ವಾಹಿನಿ ಸುದ್ದಿ ಮಾಡಿತ್ತು. ಆದರೆ ಇಂದು ಅದೇ ರಾಜ್ಯದ ವಲಸೆ ಕಾರ್ಮಿಕರಿಗೆ ಸೂಕ್ತ ವಾಹನ ವ್ಯವಸ್ಥೆ ಅಧಿಕಾರ ಇದ್ದ ಹೊರತಾಗಿಯೂ ನಿತೀಶ್ ಕುಮಾರ್ ಸರಕಾರಕ್ಕೆ ಸಾಧ್ಯವಾಗಲಿಲ್ಲ!?
Also Read: ವಲಸೆ ಕಾರ್ಮಿಕರ ವಿಚಾರದಲ್ಲಿ ಮೋದಿ ಮಾಡಿದ 6 ಎಡವಟ್ಟುಗಳೇನು..?
ಚುನಾವಣಾ ರ್ಯಾಲಿ, ಚುನಾವಣೆಗಾಗಿ ದೇಶದ ಮುಕ್ಕುಮೂಲೆಯಲ್ಲಿದ್ದರೂ ತಮ್ಮ ಪಕ್ಷದ ಹಾಗೂ ವೈಯಕ್ತಿಕ ಹಣ ನೀಡಿ ಮತದಾರರನ್ನು ಕರೆಸಿಕೊಳ್ಳುವ ಇದೇ ಪಕ್ಷಗಳಿಗೆ ಇಂದು ಯಾಕಾಗಿ ತಮ್ಮ ಮತದಾರರನ್ನ ಕರೆಸಿ ಅವರಿಗೆ ಭದ್ರತೆ ನೀಡಲು ಸಾಧ್ಯವಾಗುತ್ತಿಲ್ಲ? ಇದು ಕೇವಲ ಬಿಹಾರ ಒಂದರ ಕಥೆಯಲ್ಲ. ಕರ್ನಾಟಕ ಸಹಿತ ಉತ್ತರ ಪ್ರದೇಶ, ಒಡಿಶಾ, ಅಸ್ಸಾಂ, ಝಾರ್ಖಂಡ್ ಹಾಗೂ ದೇಶದ ಬಹುತೇಕ ರಾಜ್ಯಗಳ ಕಥೆಯೇ ಇಷ್ಟು. ತನಗೆ ಬೇಕಾದಾಗ ಮತದಾರರನ್ನ ವಿಮಾನ ಕೊಟ್ಟು ಕರೆಸಿಕೊಳ್ಳಲು ಸಿದ್ದರಿರುವವರು ಅಧಿಕಾರಕ್ಕೆ ಬಂದ ಮೇಲೆ ತಮ್ಮ ಮತದಾರರನ್ನ ಕನಿಷ್ಟ ಪಕ್ಷ ಬಸ್ ಕಳುಹಿಸಿ ಕರೆಸಿಕೊಳ್ಳಲು ಮರೆತು ಹೋಗುವಷ್ಟು ಅಧಿಕಾರದ ಲಾಲಸೆಯಲ್ಲಿ ಮುಳುಗಿರುತ್ತಾರೆ.
Also Read: ವಲಸೆ ಕಾರ್ಮಿಕರ ನಿರ್ವಹಣೆಯಲ್ಲಿ ಎಡವಿದ ಕೇಂದ್ರ ಸರ್ಕಾರ; ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಜೆಪಿ!
ಇದಕ್ಕಿಂತ ದುರಂತವೆಂದರೆ, ಆಡಳಿತ ಪಕ್ಷ ವಿಪಕ್ಷಗಳು ಮಾಡುತ್ತಿರುವ ಒಳ್ಳೆಯ ಕೆಲಸವನ್ನೂ ಸಹಿಸುವ ದೊಡ್ಡತನ ಹೊಂದಿಲ್ಲ. ಅದರಲ್ಲೂ ರಾಜಕಾರಣ ಅನ್ನೋ ಅಸ್ತ್ರವನ್ನೇ ಪ್ರಯೋಗಿಸುತ್ತಿದೆ. ಒಂದೆಡೆ ದೇಶದ ಚುಕ್ಕಾಣಿ ಹಿಡಿದ ಬಿಜೆಪಿ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತಾಡುತ್ತಾ, ವಿಪಕ್ಷಗಳು ಆಡಳಿತ ಪಕ್ಷದ ಬೆನ್ನಿಗೆ ನಿಲ್ಲುವಂತೆ ಕರೆ ನೀಡುತ್ತಿದ್ದಾರೆ. ಆದರೆ ಇನ್ನೊಂದೆಡೆ ವಿಪಕ್ಷಗಳು ಮಾಡೋದೆ ʼಅಳಿಲ ಸೇವೆʼ ಅದಕ್ಕೂ ಆಡಳಿತ ಪಕ್ಷಗಳು ಬುಸುಗುಟ್ಟುತ್ತವೆ. ಹಾಗಿದ್ದರೆ ಆರ್‌ಎಸ್‌ಎಸ್ ತನ್ನ ಸಿದ್ಧಾಂತದಲ್ಲಿ ವಿಪಕ್ಷಗಳಿಗೂ ಗೌರವ ನೀಡಿ ಅಂತಾ ಯಾಕಾಗಿ ಹೇಳಬಾರದು?
ಒಟ್ಟಿನಲ್ಲಿ ಮತದಾರ ದೇಶದಲ್ಲಿ ಯಾವತ್ತಿದ್ದರೂ ಕೇವಲ ಮತ ಹಾಕಲಿರುವ ಸರಕಿನ ಥರ ಕಾಣುವಂತಾಗಿದೆ ಅಂದರೆ ತಪ್ಪಾಗದು. ಅಂತಹ ಪಾಠವನ್ನ ಈ ಕರೋನಾ ಕಲಿಸಿಕೊಟ್ಟಿದೆ. ವೋಟ್‌ಗಾಗಿ ಬಸ್, ರೈಲು ಕಳುಹಿಸುವ ನಾಯಕರಿಗೆ ಚುನಾವಣೆಯಲ್ಲಿ ಉತ್ತರ ಕೊಡದ ಹೊರತು, ಅವರು ಕಳುಹಿಸಿ ಕೊಟ್ಟ ಬಸ್, ರೈಲುಗಳು ಹಾಗೆಯೇ ಯಾವೊಬ್ಬ ಮತದಾರನೂ ಇಲ್ಲದೇ ಬಂದ ದಾರಿಗೆ ಸುಂಕ ಇಲ್ಲ ಅನ್ನೋ ಹಾಗೆ ವಾಪಾಸ್ ತೆರಳದ ಹೊರತು ಈ ದೇಶದ ಸಾಮಾಜಿಕ ವ್ಯವಸ್ಥೆಯನ್ನ ಬದಲಾಯಿಸಲು ಕಷ್ಟ ಸಾಧ್ಯ ಅನ್ನೋದು ದಿಟ.