ಕರೋನಾ ರೋಗ ಗುಣಪಡಿಸುವ ಆರ್ಯುವೇದ ಔಷಧ ಕಂಡುಹಿಡಿದಿದ್ದು, ಸರ್ಕಾರ ಕೇಳಿದರೆ ಆ ಔಷಧ ಸಂಯೋಜನೆಯನ್ನು ಉಚಿತವಾಗಿ ನೀಡಲು ಸಿದ್ಧ ಎಂದು ಹೇಳಿದ್ದ ಆರ್ಯುವೇದ ತಜ್ಞ ಡಾ ಗಿರಿಧರ ಕಜೆ ಅವರಿಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಬಿಎಂಸಿಆರ್ ಐ) ನೋಟೀಸ್ ನೀಡಿದ್ದು, ಸುಳ್ಳು ಮಾಹಿತಿ ಹರಡುವುದು ವೈದ್ಯಕೀಯ ನೀತಿ ಸಂಹಿತೆಗೆ ವಿರುದ್ಧವಾದದು ಎಂದು ಎಚ್ಚರಿಕೆ ನೀಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರೋನಾ ರೋಗ ಸಂಪೂರ್ಣ ಗುಣಪಡಿಸುವುದು ತಮ್ಮ ಆರ್ಯುವೇದ ಔಷಧಿಯಿಂದ ಸಾಧ್ಯವಿದೆ. ಈಗಾಗಲೇ ಬೆಂಗಳೂರಿನಲ್ಲಿ ಔಷಧಿಯ ಪ್ರಯೋಗ ನಡೆಸಿದ್ದು, ಪ್ರಯೋಗಕ್ಕೆ ಒಳಗಾದ ಎಲ್ಲರೂ ಸಂಪೂರ್ಣ ರೋಗದಿಂದ ಗುಣಮುಖರಾಗಿದ್ದಾರೆ. ಈ ಔಷಧವನ್ನು ಕಳೆದ 20 ವರ್ಷಗಳಿಂದ ವೈರಾಣು ರೋಗಕ್ಕೆ ಬಳಸಲಾಗಿದ್ದು, ಯಶಸ್ವಿಯಾಗಿದೆ ಎಂದು ಸ್ವತಃ ಗಿರಿಧರ ಕಜೆ ಮಾಧ್ಯಮಗಳಿಗೆ ಹೇಳಿದ್ದರು. ಈ ನಡುವೆ ಮಾಧ್ಯಮಗಳು ಕೂಡ ‘ಕರೋನಾಕ್ಕೆ ರಾಮಬಾಣ ಕಂಡುಹಿಡಿದ ಗಿರಿಧರ ಕಜೆ’, ‘ಕರೋನಾ ರೋಗಕ್ಕೆ ಗಿರಿಧರ್ ಕಜೆ ಆಯುರ್ ಬಾಣ’ ಮುಂತಾದ ರೀತಿಯಲ್ಲಿ ಬಗೆಬಗೆಯಲ್ಲಿ ಬಣ್ಣಿಸಿ ಭಾರೀ ಪ್ರಚಾರವನ್ನೂ ನೀಡಿದ್ದವು.
ಜೊತೆಗೆ, ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇದೇ ಗಿರಿಧರ ಕಜೆ ಅವರ ಮಾರ್ಗದರ್ಶನದಲ್ಲಿ ಅವರದೇ ಔಷಧಿಯ ಆರ್ಯುವೇದ ಕಿಟ್ ತಯಾರಿಸಿ, ಐದು ಲಕ್ಷ ಜನರಿಗೆ ವಿತರಿಸುವ ಕಾರ್ಯಕ್ಕೆ ಸ್ವತಃ ಅವರಿಂದಲೇ ಚಾಲನೆ ನೀಡಲಾಗಿದೆ. ಕಳೆದ ನಾಲ್ಕು ದಿನಗಳಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕಜೆ ಆರ್ಯುವೇದ ಕಿಟ್ ವಿತರಣೆ ಕಾರ್ಯ ಭರದಿಂದ ಸಾಗಿದೆ. ಅಷ್ಟೇ ಅಲ್ಲದೆ, ಈ ಆರ್ಯುವೇದ ಕಿಟ್ ಗಳನ್ನು ಸರ್ಕಾರದ ಆಯುಷ್ ಇಲಾಖೆಯಿಂದಲೇ ಪ್ಯಾಕ್ ಮಾಡಿ ವಿತರಿಸಲಾಗುತ್ತಿದೆ! ಈ ಇಡೀ ಅಭಿಯಾನ ಸ್ವತಃ ಶಿವಮೊಗ್ಗ ನಗರ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಅಣತಿಯಂತೆಯೇ ನಡೆಯುತ್ತಿದೆ.
ಒಂದು ಕಡೆ ಸರ್ಕಾರದ ಒಂದು ಇಲಾಖೆಯೇ ಇವರ ಔಷಧವನ್ನು ಪ್ಯಾಕ್ ಮಾಡಿ ಆರ್ಯುವೇದ ಕಿಟ್ ಎಂದು ಮನೆಮನೆಗೆ ವಿತರಣೆ ಮಾಡುತ್ತಿದ್ದರೆ, ಮತ್ತೊಂದು ಕಡೆ ಅದೇ ಸರ್ಕಾರದ ಮತ್ತೊಂದು ಸಂಸ್ಥೆ ಆ ಔಷಧಿಯು ಬಳಕೆ ಮತ್ತು ಅದರ ಕುರಿತ ಪ್ರಚಾರ ವೈದ್ಯಕೀಯ ನೀತಿಸಂಹಿತೆಗೆ ವಿರುದ್ಧವಾಗಿದ್ದು, ಎಥಿಕ್ಸ್ ಕಮಿಟಿಯ ಗಮನಕ್ಕೆ ತಾರದೆ ಅದರ ಪ್ರಚಾರ ಮಾಡುವುದು ಮತ್ತು ವಿತರಣೆ ಮಾಡುವುದು ಕಾನೂನು ಬಾಹಿರ. ಇಂತಹ ನಡತೆ ಸಲ್ಲದು. ಇದು ಅತ್ಯಂತ ಸೂಕ್ಷ್ಮ ಸಂಗತಿಯಾಗಿದ್ದು, ಈ ಬಗ್ಗೆ ನೀವು ಜನರಿಗೆ ವಾಸ್ತವಾಂಶಗಳನ್ನು ಹೇಳಬೇಕು. ಇಲ್ಲದೇ ಹೋದರೆ ನಿಮ್ಮ ಔಷಧಗಳ ಕ್ಲಿನಿಕಲ್ ಪ್ರಯೋಗವನ್ನು ರದ್ದು ಮಾಡಲಾಗುವುದು ಎಂದು ತಾಕೀತು ಮಾಡಿದೆ. ಅಂದರೆ; ಡಾ ಗಿರಿಧರ ಕಜೆ ಅವರು ದೇಶದ ಆಸ್ತಿ ಎಂದು ಬಣ್ಣಿಸಿ ಸ್ವತಃ ಸಚಿವ ಈಶ್ವರಪ್ಪ ಅವರು ಶಿವಮೊಗ್ಗದ ಜನತೆಗೆ ವಿತರಿಸುತ್ತಿರುವ ಕಜೆ ಅವರ ಆರ್ಯುವೇದ ಔಷಧ ಕಾನೂನುಬದ್ಧ ರೀತಿಯಲ್ಲಿ ಜನರಿಗೆ ತಲುಪಿಲ್ಲ ಮತ್ತು ಅವರು ಜನರಿಂದ ವಾಸ್ತವಾಂಶಗಳನ್ನು ಮುಚ್ಚಿಟ್ಟು ಔಷಧಿಗೆ ಪ್ರಚಾರ ಕೊಟ್ಟಿದ್ದಾರೆ ಎಂದು ಈ ನೋಟಿಸ್ ಹೇಳಿದೆ!
ಬಿಎಂಸಿಆರ್ ಐ ಎಥಿಕ್ಸ್ ಕಮಿಟಿ ಜುಲೈ 17ರಂದು ಕಜೆ ಅವರಿಗೆ ನೋಟೀಸ್ ಜಾರಿಮಾಡಿದ್ದು, ಔಷಧದ ಕುರಿತ ಅನಧಿಕೃತ ಮಾಹಿತಿಯನ್ನು ಪ್ರಕಟಿಸಿದ್ದಕ್ಕಾಗಿ ಈ ನೋಟೀಸ್ ಜಾರಿಮಾಡಿರುವುದಾಗಿ ಹೇಳಲಾಗಿದೆ.
“ಕೋವಿಡ್-19 ಪಾಸಿಟಿವ್ ರೋಗಿಗಳಿಗೆ ನಿಗದಿತ ಆರೈಕೆಯೊಂದಿಗೆ ಹೆಚ್ಚುವರಿಯಾಗಿ ನಿಮ್ಮ ಭೌಮ್ಯ ಮತ್ತು ಸಾಥ್ಯ್ಮಾ ಎಂಬ ಎರಡು ಮಾತ್ರೆಗಳ ಪ್ರಭಾವ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಕ್ಲಿನಿಕಲ್ ಪ್ರಯೋಗಕ್ಕಾಗಿ ನೀವು ಬಿಎಂಸಿಆರ್ಐ ಕೋರಿದ್ದೀರಿ.”
“ಈ ಔಷಧಗಳ ಪ್ರಯೋಗ ಇನ್ನೂ ಆರಂಭಿಕ ಹಂತದಲ್ಲೇ ಇದ್ದು, ಬಿಎಂಸಿಆರ್ಐನ ಎಥಿಕ್ಸ್ ಕಮಿಟಿಗೆ ಆ ಕುರಿತ ಯಾವುದೇ ಫಲಿತಾಂಶ ಸಲ್ಲಿಕೆಯಾಗಿಲ್ಲ. ಇಂತಹ ವಾಸ್ತವವನ್ನು ಮುಚ್ಚಿಟ್ಟು ನೀವು, ಪ್ರಯೋಗ ಯಶಸ್ವಿಯಾಗಿದೆ ಎಂದು ಸಾರ್ವಜನಿಕವಾಗಿ ಪ್ರಚಾರ ಮಾಡಿದ್ದೀರಿ. ಇದನ್ನು ಒಪ್ಪಲಾಗದು ಮತ್ತು ಇದು ಹೊಣೆಗಾರಿಕೆಯನ್ನು ಮೀರಿದ ವರ್ತನೆಯಾಗಿದೆ. ಇಂತಹ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವ ಮುನ್ನ ಸಂಬಂಧಿಸಿದ ಎಲ್ಲಾ ಸಕ್ಷಮ ಪ್ರಾಧಿಕಾರಗಳ ಅನುಮತಿ ಅಗತ್ಯ ಎಂಬುದು ನಿಮಗೆ ತಿಳಿಯದ ಸಂಗತಿಯೇನಲ್ಲ.”
“ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಮಾಹಿತಿ ಅತ್ಯಂತ ಸೂಕ್ಷ್ಮವಾದುದಾದ್ದರಿಂದ ನಿಮ್ಮ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆ ಹಿನ್ನೆಲೆಯಲ್ಲಿ; ಈ ಕುರಿತ ವಾಸ್ತವಾಂಶಗಳನ್ನು, ವಾಸ್ತವ ಪರಿಸ್ಥಿತಿಯನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಸ್ಪಷ್ಟಪಡಿಸಿ. ಇಲ್ಲವಾದಲ್ಲಿ; ಸಾರ್ವಜನಿಕರನ್ನು ದಾರಿತಪ್ಪಿಸುವ ಇಂತಹ ನಿಮ್ಮ ನಡವಳಿಕೆಗಾಗಿ ನಾವು ನಿಮ್ಮ ಔಷಧ ಪ್ರಯೋಗವನ್ನು ರದ್ದು ಮಾಡಬೇಕಾಗುತ್ತದೆ”.
ಇದು ಸ್ವತಃ ಬಿಎಂಸಿಆರ್ ಐ ನ ಎಥಿಕ್ಸ್ ಕಮಿಟಿ ಅಧ್ಯಕ್ಷರೇ ನೇರವಾಗಿ ಕಜೆಯವರಿಗೆ ನೀಡಿರುವ ನೋಟೀಸಿನ ಪೂರ್ಣಪಾಠ. ಅಂದರೆ; ಬಿಎಂಸಿಆರ್ ಐನ ಅನುಮತಿ ಪಡೆಯದೇ, ಮತ್ತು ಕ್ಲಿನಿಕಲ್ ಪ್ರಯೋಗ ಇನ್ನೂ ಪ್ರಾಥಮಿಕ ಹಂತದಲ್ಲಿರುವಾಗಲೇ ವೈದ್ಯ ಡಾ ಕಜೆ, ತಮ್ಮ ಪ್ರಯೋಗ ಯಶಸ್ವಿಯಾಗಿದೆ. ಕರೋನಾ ವಿರುದ್ಧ ತಮ್ಮ ಔಷಧ ರಾಮಬಾಣ ಎಂದು ಜನತೆಯ ದಾರಿ ತಪ್ಪಿಸಿದ್ದಾರೆ. ಜೊತೆಗೆ, ಇಂತಹ ಸೂಕ್ಷ್ಮ ವಿಷಯದಲ್ಲಿ ಎಚ್ಚರಿಕೆಯಿಂದ ವರದಿ ಮಾಡಬೇಕಿದ್ದ ಮಾಧ್ಯಮಗಳು ಕೂಡ, ಹೊಣೆ ಮರೆತು ಕರೋನಾಕ್ಕೆ ಕಜೆ ರಾಮಬಾಣ ಕಂಡುಹಿಡಿದ್ದಿದ್ದಾರೆ ಎಂದು ಪುಂಖಾನುಪುಂಖ ಪ್ರಚಾರ ನೀಡಿದ್ದಾರೆ. ಇದೀಗ ಕರೋನಾದಂತಹ ಸಂಕಷ್ಟದ ಹೊತ್ತಲ್ಲಿ ವೈದ್ಯರು ಎಂದುಕೊಂಡವರು ಮತ್ತು ಮಾಧ್ಯಮಗಳು ಎಷ್ಟು ಹೊಣೆಗಾರಿಕೆ ಪ್ರದರ್ಶಿಸುತ್ತಿವೆ ಎಂಬುದಕ್ಕೆ ಒಂದು ನಿದರ್ಶನವಾಗಿ ಈ ನೋಟೀಸ್ ನಿಂತಿದೆ.
ಜೊತೆಗೆ, ಮಾಧ್ಯಮಗಳ ಪ್ರಚಾರ ಮತ್ತು ವೈದ್ಯರ ಹೇಳಿಕೆಯನ್ನೇ ನಂಬಿ, ಇನ್ನು ಸೂಕ್ತ ಕ್ಲಿನಿಕಲ್ ಟ್ರಯಲ್ ನಡಿ ನಿಯಮಾನುಸಾರವಾಗಿ ಸಾಬೀತಾಗದ ಒಂದು ಔಷಧವನ್ನು ಸ್ವತಃ ಸರ್ಕಾರದ ಸಚಿವರೊಬ್ಬರು ತಮ್ಮ ಕ್ಷೇತ್ರದ ಲಕ್ಷಾಂತರ ಮಂದಿಗೆ ವಿತರಿಸಲು ಹೊರಟಿದ್ದಾರೆ ಮತ್ತು ಅದಕ್ಕೆ ಆಯುಷ್ ಇಲಾಖೆಯೇ ಅಧಿಕೃತವಾಗಿ ಕೈಜೋಡಿಸಿದೆ!