ಕರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವಂತೆಯೇ ಕೇರಳದಲ್ಲಿ ಶಿಗ್ಗೆಲಾ ಸೋಂಕು ಕಂಡುಬಂದಿದೆ. ಈಗಾಗಲೇ ಹನ್ನೊಂದು ವರ್ಷದ ಬಾಲಕನೋರ್ವ ಈ ಸೋಂಕಿಗೆ ಬಲಿಯಾಗಿರುವುದು ಜನರನ್ನು ಆತಂಕಕ್ಕೆ ದೂಡಿವೆ. ಅಲ್ಲದೆ, ಅನೇಕರು ಈ ಸೊಂಕಿನಿಂದ ಬಳಲುತ್ತಿರುವುದಾಗಿ ಕೇರಳ ಮಾಧ್ಯಮಗಳು ವರದಿ ಮಾಡಿವೆ.
ಮೃತಪಟ್ಟ ಬಾಲಕನ ಸಂಪರ್ಕಕ್ಕೆ ಬಂದವರಿಗೂ ಸೋಂಕು ತಗುಲಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಇದು ಹೊಸದಾಗಿ ಕಂಡುಬಂದಂತಹ ಸೋಂಕಲ್ಲ, ಬದಲಾಗಿ ಹಿಂದೆಯೂ ಪ್ರಕರಣ ದಾಖಲಾಗಿದ್ದವು. ದೇಶದಲ್ಲಿ ಇದುವರೆಗೂ ಶಿಗೆಲ್ಲಾ ಸೋಂಕಿಗೆ 13 ಜನ ಬಲಿಯಾಗಿದ್ದಾರೆ. ಇದೀಗ ಕೇರಳದಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದು, 6 ಮಂದಿಗೆ ಸೋಂಕಿನ ಲಕ್ಷಣ ಖಚಿತ ಪಟ್ಟಿದ್ದರೆ 20 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸೋಂಕಿನ ಲಕ್ಷಣಗಳು
ಜ್ವರ, ಕೆಮ್ಮು , ವಾಂತಿ, ಅತಿಸಾರ, ಹೊಟ್ಟೆ ನೋವು, ಸುಸ್ತು, ಡೀ-ಹೈಡ್ರೇಶನ್ ಸೇರಿದಂತೆ ಇತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ಸೋಂಕು ಮಕ್ಕಳಿಗೆ ತಗಲುವ ಸಾಧ್ಯತೆ ಹೆಚ್ಚು.
ಸೋಂಕು ಹರಡಲು ಕಾರಣ
ಕಲುಷಿತ ನೀರಿನ ಸೇವನೆ, ನೈರ್ಮಲ್ಯ ಕಾಪಾಡಿ ಕೊಳ್ಳದೆ ಇರುವುದು, ಹಳಸಿದ ಆಹಾರದ ಬಳಕೆ, ಕುಲುಷಿತ ನೀರಿನ ಸೇವನೆ, ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವುದು, ಸೋಂಕಿತ ಬಳಸಿದ ಶೌಚಾಲಯ ಬಳಸುವುದರಿಂದಲೂ ಸೋಂಕು ಹರಡುವ ಪ್ರಮಾಣ ಹೆಚ್ಚಿರುತ್ತದೆ.
ಮುಂಜಾಗೃತ ಕ್ರಮಗಳು
ಕುದಿಸಿದ ನೀರು ಕುಡಿಯುವುದು, ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು, ಸೋಂಕಿತರಿಂದ ಅಂತರ ಕಾಪಾಡಿಕೊಳ್ಳುವುದು, ಹಳಸಿದ ಆಹಾರ ಬಳಸದೆ ಪೌಷ್ಠಿಕತೆಯುಳ್ಳ ಆಹಾರ ಸೇವಿಸುವುದು.
ಕೇರಳ ಸರ್ಕಾರ ಈಗಾಗಲೇ ಜನ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಸೋಂಕು ಕಾಣಿಸಿಕೊಂಡ ಪ್ರದೇಶಗಳಲ್ಲಿ ಹೋಟೆಲ್ ಮತ್ತು ಮನೆಗಳಿಗೆ ಆರೋಗ್ಯ ಸಿಬ್ಬಂದಿಗಳು ಭೇಟಿನೀಡಿ ಆಹಾರ ಮತ್ತು ನೀರಿನ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ಜೊತೆಗೆ ಬಾವಿಗಳಿಗೆ ಕ್ಲೋರೀನ್ ಸಿಂಪಡಿಸಲಾಗುತ್ತಿದೆ. ಜನ ಜಾಗೃತರಾಗುವ ಮೂಲಕ ಶುಚಿತ್ವ ಕಾಪಾಡಿಕೊಂಡು ಆರೋಗ್ಯದ ಕಡೆ ಗಮನಹರಿಸಬೇಕೆಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ.