ಭಾರತ ಅತೀ ದೊಡ್ಡ ʼಬಿಗ್ ಬ್ಯಾಂಗ್ʼ ಸುಧಾರಣೆ ಕಂಡದ್ದು 1991 ರ ನಂತರ. ಪತ್ರಕರ್ತರು, ಕೈಗಾರಿಕೋದ್ಯಮಿಗಳು ಹಾಗೂ ಅರ್ಥಶಾಸ್ತ್ರಜ್ಞರು ಇವರೆಲ್ಲರೂ ಇದರ ಉಪಯೋಗ ಪಡೆದಿದ್ದರು. ಏಕೆಂದರೆ 1991 ರ ನಂತರ ದೇಶದಲ್ಲಿ ಈಸ್ಟ್ ಇಂಡಿಯಾ ಕಂಪೆನಿಗಳಿಗೆ ವಿದೇಶಿ ಬಂಡವಾಳ ಹೂಡಿಕೆ ಮಾಡಲು ಅವಕಾಶ ಮಾಡಿಕೊಡಲಾಯಿತು. ಕೇವಲ ಇದು ಮಾತ್ರವಲ್ಲದೇ ಪ್ರತಿ ಕೇಂದ್ರ ಬಜೆಟ್ ಸಮಯದಲ್ಲೂ ಒಂದು ನಿರೀಕ್ಷೆ ಇದ್ದೇ ಇರುತ್ತವೆ. ಅದೇನೆಂದರೆ ಎರಡನೇ ತಲೆಮಾರಿನ ರಚನಾತ್ಮಕ ಸುಧಾರಣೆಯ ಬಗ್ಗೆ. ಅಂತಹ ಕಾಯುವಿಕೆಯೂ ಇಂದು ನಿನ್ನೆಯದ್ದಲ್ಲ. ಅದು ಮನಮೋಹನ್ ಸಿಂಗ್ ಆರ್ಥಿಕ ಸಚಿವರಾಗಿದ್ದ ಅವಧಿಯಿಂದ ಹಿಡಿದು ಆ ನಂತರದ ಪಿ. ಚಿದಂಬರಂ, ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ ಹಾಗು ಅರುಣ್ ಜೇಟ್ಲಿವರೆಗೂ ಇತ್ತು. ಆದರೆ ಅಂತಹ ನಿರೀಕ್ಷೆಗಳಿಗೆಲ್ಲ ಪ್ರತಿ ಬಾರಿಯೂ ದ್ರೋಹವಾಗುತ್ತಲೇ ಬಂದಿದೆ. ಇದೀಗ 2019 ರ ಚುನಾವಣಾ ಪ್ರಣಾಳಿಕೆಯ ಹೊರತಾಗಿಯೂ ಹಾಲಿ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್ ಅವರಿಂದಲೂ ʼಬಿಗ್ ಬ್ಯಾಂಗ್ ಸುಧಾರಣೆʼ ಮಾಡಲು ಸಾಧ್ಯವಾಗಲೇ ಇಲ್ಲ.
ಈಗಾಗಲೇ ಲಾಕ್‌ಡೌನ್ ನಿಂದಾಗಿ ತಲೆದೋರಿದ ನಿರುದ್ಯೋಗ ಸ್ಥಿತಿಯಿಂದ ವಲಸೆ ಕಾರ್ಮಿಕರು ನಗರ ಬಿಟ್ಟು ತಮ್ಮ ತವರಿಗೆ ತೆರಳಿದ್ದಾರೆ. ಇದರಿಂದಾಗಿ ದೇಶದ ಅಭಿವೃದ್ಧಿ ಮೇಲೆಯೂ ಸಾಕಷ್ಟು ಪರಿಣಾಮ ಬೀರಲಿದೆ. ಕಾರಣ, ಅದಾಗಲೇ ನಗರಗಳಲ್ಲಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿ ನಡೆಸಲು ಸರಕಾರ ಗ್ರೀನ್ ಸಿಗ್ನಲ್ ನೀಡಿದರೂ ಕಾರ್ಮಿಕರ ಕೊರತೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ. ಅತ್ತ ವಲಸೆ ಕಾರ್ಮಿಕರು ಹಾಗೂ ಇನ್ನಿತರ ದುಡಿಯುವ ವರ್ಗಗಳ ಸಂಕಷ್ಟಕ್ಕೆ ಸೂಕ್ತವಾದ ಸ್ಪಂದನೆ ಬೇಕಿತ್ತೇನೋ ನಿಜ. ಅದಕ್ಕೆ ಪೂರಕಯೆನ್ನುವಂತೆ ಪ್ರಧಾನಿ ನರೇಂದ್ರ ಮೋದಿ ʼಬಿಗ್ ಬ್ಯಾಂಗ್ ಸುಧಾರಣೆʼಯ ಭರವಸೆ ನೀಡಿದ್ದಾರೆ.
ಈ ಮೂಲಕ ಕೃಷಿಕ ವರ್ಗಕ್ಕೆ ಮುಕ್ತ ಮಾರುಕಟ್ಟೆ ಅವಕಾಶ, ರಕ್ಷಣಾ ಉತ್ಪಾದನೆಯ ಮೇಲೆ ಎಫ್‌ಡಿಐ ಮಿತಿಯನ್ನು ಶೇಕಡಾ 74ಕ್ಕೆ ಏರಿಸುವುದು. MSME ವ್ಯಾಖ್ಯಾನ ಬದಲಿಸುವುದು, ಕಲ್ಲಿದ್ದಲು ಹಾಗೂ ಖನಿಜ ಗಣಿಗಾರಿಕೆ ಸುಧಾರಣೆ ಹಾಗೂ ಇದರ ಜೊತೆಗೆ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಕಾರ್ಮಿಕ ಕಾನೂನುಗಳನ್ನ ತಿದ್ದುಪಡಿ ಮಾಡಲಾಗಿದೆ.
ಆದರೆ ವಾಸ್ತವದಲ್ಲಿ ಭಾರತ ಕುಸಿತದ ಸಮಯದಲ್ಲಿ ಮಾತ್ರ ಸುಧಾರಣೆಗೆ ಮುಂದಾಗುತ್ತಿದೆ ಅನ್ನೋದು ಸ್ಪಷ್ಟ. ಅದರ ಬದಲಾಗಿ ಒಂದು ದೂರದೃಷ್ಟಿಯುಳ್ಳ ಯೋಜನೆಗಳು ಜಾರಿಯಾಗುತ್ತಿಲ್ಲ. ಆದರೆ ಭಾರತದಲ್ಲಿ ರಚನಾತ್ಮಕ ರೀತಿಯಲ್ಲಿ ಆರ್ಥಿಕ ಸುಧಾರಣೆ ಆಗಬೇಕಿದೆ. ಹಾಗಿದ್ದಲ್ಲಿ ಮಾತ್ರ ಆಗಬಹುದಾದ ಆರ್ಥಿಕ ಆಘಾತಗಳನ್ನ ದೇಶ ತಡೆಯಬಹುದು. ಆದರೆ ದೇಶದಲ್ಲಿ ಪರಿಸ್ಥಿತಿ ಹಾಗಿಲ್ಲ, ಯಾವಾಗ ಆರ್ಥಿಕತೆ ಉತ್ತಮವಾಗಿರುತ್ತದೋ ಅದಾಗ ರಾಜಕೀಯ ನಾಯಕರು ರಾಜಕೀಯ ವಿಚಾರದಲ್ಲಿಯೇ ನಿರತರಾಗಿರುತ್ತಾರೆ. ಆದ್ದರಿಂದ ದೇಶದಲ್ಲಿ ರಾಜಕೀಯ ಚರ್ಚೆ, ವಿರೋಧ ಇಲ್ಲದೇ ಸುಧಾರಣೆಗಳು ಪೂರ್ವಭಾವಿಯಾಗಿ ನಡೆಯಬೇಕಿದೆ ಅನ್ನೋದನ್ನ ಆರ್ಥಿಕ ಸಂದಿಗ್ಧ ಪರಿಸ್ಥಿತಿಗಳು ಕಲಿಸಿಕೊಟ್ಟಿವೆ. ಆದರೆ ಹೆಚ್ಚಿನ ಪೂರ್ವಭಾವಿ ಸಮಯವಿರದೇ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಮತ್ತಷ್ಟು ಗೊಂದಲ ಹುಟ್ಟುಹಾಕುತ್ತವೆ ಅನ್ನೋದು ಸತ್ಯ.
ಈ ಹಿಂದೆಯೂ ಆರ್ಥಿಕ ಕುಸಿತ ಅನ್ನೋದನ್ನ ದೇಶ ಕಂಡಿದೆ. ಇದೀಗ ನರೇಂದ್ರ ಮೋದಿ ಸರಕಾರವನ್ನ ಕರೋನಾ ಇನ್ನಷ್ಟು ಆರ್ಥಿಕವಾಗಿ ಕಟ್ಟಿ ಹಾಕಿದೆ. ಆದರೆ ಇದೆಲ್ಲವನ್ನ ಮರೆಮಾಚಲು ನಿರ್ಮಲಾ ಸೀತರಾಮನ್ ಆಕರ್ಷಕ ಶೀರ್ಷಿಕೆ ನೀಡಿ ಸುಧಾರಣೆಯ ಮಾತನ್ನಾಡುತ್ತಿದ್ದಾರೆ. ಅಲ್ಲದೇ ಈ ಸಮಯದಲ್ಲಿ ಸಾಲ ಬಾಕಿ ಉಳಿಸುವ ಕಂಪೆನಿಗಳನ್ನ ಸುಸ್ತಿದಾರರನ್ನಾಗಿ ಘೋಷಿಸುವುದಾಗಲೀ, ವರುಷದ ಅಂತ್ಯದವರೆಗೆ ಯಾವುದೇ ಕಂಪೆನಿಯ ದಿವಾಳಿತನ ಘೋಷಿಸುವುದಾಗಲೀ ಮಾಡದೇ ಇರುವುದಾಗಿಯೂ ಹಾಗು ಕೆಲವು ವ್ಯವಹಾರ ಅಪರಾಧಗಳನ್ನ ಕೈ ಬಿಡುವ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಖಾಸಗಿ ಕಂಪೆನಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದ್ದು ಯಾವುದೇ ಕ್ಷೇತ್ರದಲ್ಲೂ ಹೂಡಿಕೆ ಮಾಡುವ ಅವಕಾಶ ಪಡೆಯಲಿದೆ.
ಕೋವಿಡ್-19 ತಂದಿಟ್ಟ ಸಂದಿಗ್ಧತೆಯಿಂದ ಹೊರಬರಲು ನರೇಂದ್ರ ಮೋದಿ ಸರಕಾರ ಎರಡು ಮಾದರಿಯ ತಂತ್ರಗಾರಿಕೆಗೆ ಮುಂದಾಗಿದೆ. ಒಂದು ಆರ್ಥಿಕ ಸುಧಾರಣೆ ಹಾಗೂ ಇನ್ನೊಂದು ರಚನಾತ್ಮಕ ಸುಧಾರಣೆ. ಕಾರಣ, ಕರೋನಾ ಆಕ್ರಮಿಸುವ ಮುನ್ನವೇ ದೇಶದಲ್ಲಿ ಆರ್ಥಿಕತೆ ಕೂಡಾ ಕುಸಿದಿತ್ತು. ಆರ್ಥಿಕತೆ ಮೇಲೆತ್ತಬೇಕಾದ ಸಮಯದಲ್ಲೆಲ್ಲ ನರೇಂದ್ರ ಮೋದಿ ರಾಜಕೀಯ ಮಾಡುತ್ತಲೇ ಹೋದರು. CAA ಜಾರಿ, ಕಾಶ್ಮೀರ ವಿಶೇಷ ಪ್ರಾತಿನಿಧ್ಯ ರದ್ದತಿ ಮುಂತಾದ ರಾಜಕೀಯ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿದಾಯಕರಾಗಿದ್ದರು.
ಅದರೆ ಈಗ ಅನಿವಾರ್ಯವಾಗಿ ಬದಲಾವಣೆಯ ಕಾಲಘಟ್ಟಕ್ಕೆ ಭಾರತ ಬಂದು ನಿಂತಿದೆ. ಈಗಾಗಲೇ ಪಾಶ್ಚಿಮಾತ್ಯ ಕಂಪೆನಿಗಳು ಚೀನಾದಿಂದ ಹಿಂದೆ ಸರಿಯಲು ಮುಂದಾಗಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯೂ ಜೋರಾಗಿದೆ. ಹಾಗೇನಾದರೂ ಆದಲ್ಲಿ ಅಂತಹ ಕಂಪೆನಿಗಳು ಚೀನಾ ಗಡಿ ದೇಶವಾದ ಭಾರತದತ್ತ ತನ್ನ ನೋಟ ಬೀರುವ ಸಾಧ್ಯತೆ ಜಾಸ್ತಿಯಿದೆ. ಇಂತಹ ಅವಕಾಶಗಳು ಇದುವರೆಗೂ ಒದಗಿ ಬಂದಿರಲಿಲ್ಲ, ಹಾಗಾಗಿ ಭಾರತದ ʼಮೇಕ್ ಇನ್ ಇಂಡಿಯಾʼ ಕನಸಿಗೂ ಅದು ಇನ್ನಷ್ಟು ಪುಷ್ಟಿ ನೀಡುವ ಸಾಧ್ಯತೆಯಿದೆ.
ಅಲ್ಲದೇ ಕಳೆದ ತಿಂಗಳು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಕೂಡಾ ಇದನ್ನೇ ಉಲ್ಲೇಖಿಸಿದ್ದರು. “ಭಾರತವು ಕುಸಿತದ ಸಮಯದಲ್ಲಿ ಸುಧಾರಣೆ ಮಾಡುತ್ತದೆ ಎಂದೇ ಹೇಳಲಾಗುತ್ತದೆ”, ಅಂತೆಯೇ ದೇಶ ಈಗ ಕೋವಿಡ್-19ನಲ್ಲೂ ಆರ್ಥಿಕ ಸುಧಾರಣೆಯನ್ನ ಎದುರು ನೋಡುತ್ತಿದೆ ಎಂದಿದ್ದರು. ಒಟ್ಟಿನಲ್ಲಿ ದೇಶ ಆರ್ಥಿಕವಾಗಿ ತೀರಾ ಕುಸಿತ ಕಾಣುತ್ತಿದ್ದರೂ, ಇನ್ನೊಂದೆಡೆ ಕೋವಿಡ್-19 ಅನ್ನೋದು ದೇಶವನ್ನ ಎತ್ತಿ ಹಿಡಿಯಬಹುದು ಅನ್ನೋ ಹತ್ತಾರು ಲೆಕ್ಕಾಚಾರಗಳು ಕೂಡಾ ಎದುರಿಗೆ ಕಾಣುತ್ತಿವೆ. ಒಂದು ವೇಳೆ ಹಾಗೆಯೇ ಆದ್ದಲ್ಲಿ, ಕರೋನೋತ್ತರ ಭಾರತ ಬೇರೆ ದೇಶಗಳಿಗಿಂತ ವಿಭಿನ್ನವಾಗಿ ಚೇತರಿಕೆ ಕಾಣಬಹುದು. ಆದರೆ ಅದಕ್ಕೆ ಆಳುವ ಸರಕಾರದ ಆಲೋಚನೆಗಳು ಮುಖ್ಯವಾಗುತ್ತದೆ.