ಕರೋನಾ ವೈರಾಣು ಇಡೀ ವಿಶ್ವದಲ್ಲೇ ಅಬ್ಬರ ನಡೆಸುತ್ತಿದೆ. ಇಲ್ಲೀವರೆಗೂ ವಿಶ್ವದಲ್ಲಿ 56,98,650 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 3,52,476 ಜನರು ಕೊರೊನಾ ಸೋಂಕನ್ನು ಎದುರಿಸಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 1,51,876ಕ್ಕೆ ಏರಿಕೆ ಆಗಿದ್ದು, 4,346 ಜನರು ಸಾವನ್ನಪ್ಪಿದ್ದಾರೆ. ಮೇ 20ರ ಬಳಿಕ ಹೆಚ್ಚಾದ ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ ಮೇ 21ರಂದು 6198, ಮೇ 22ರಂದು 6568, ಮೇ 23ರಂದು 6629, ಮೇ 24ರಂದು 7113, ಮೇ 25ರಂದು 6414, ಮೇ 26 ರಂದು 5843 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲಿ ನೆಮ್ಮದಿಯ ವಿಚಾರ ಎಂದರೆ, ಚೇತರಿಕೆಯ ಅನುಪಾತ ಶೇಕಡ 94ರಷ್ಟಿದ್ದರೆ, ಸಾವಿನ ಸರಾಸರಿ ಶೇಕಡ 6ರಷ್ಟಿದೆ. ಆದರೆ ಕರೋನಾ ನಡುವೆ ಇದೀಗ ಜಾಗತಿಕ ತಾಪಮಾನ ಜನರನ್ನು ಸಾವಿನ ಕೂಪಕ್ಕೆ ತಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಕರೋನಾ ಲಾಕ್ಡೌನ್ ಶುರುವಾಗಿದ್ದು ಮಾರ್ಚ್ 22ರ ಜನತಾ ಕರ್ಫ್ಯೂ ಜಾರಿಯಾದ ಬಳಿಕ. ಅಂದರೆ ಸರಿಯಾಗಿ ಬೇಸಿಗೆ ಶುರುವಾಗುವ ಸಮಯಕ್ಕೆ ಲಾಕ್ಡೌನ್ ಗುಮ್ಮ ದೇಶದ ಮೇಲೆ ಹೇರಿಕೆಯಾಗಿತ್ತು. ಲಾಕ್ಡೌನ್ ಆಗಿದ್ದರಿಂದ ಈ ಬಾರಿ ಬೇಸಿಗೆ ತಾಪತ್ರಯ ಜನರಿಗೆ ಕಾಣಿಸಲಿಲ್ಲ. ಯಾಕಂದ್ರೆ ಸಾಕಷ್ಟು ಜನರು ಮನೆಯಲ್ಲೇ ಉಳಿಯುವಂತಾಗಿತ್ತು. ಜೊತೆಗೆ ವಾಹನಗಳು ರಸ್ತೆಗೆ ಇಳಿಯದೆ ರಸ್ತೆಗಳೆಲ್ಲಾ ಖಾಲಿ ಖಾಲಿ ಹೊಡೆಯುತ್ತಿದ್ದವು. ಕಂಪನಿಗಳು, ಫ್ಯಾಕ್ಟರಿಗಳು ಕೂಡ ಕಾರ್ಯಚಟುವಟಿಕೆ ನಿಲ್ಲಿಸಿದ್ದರಿಂದ ಜಾಗತಿಕ ತಾಪಮಾನದ ಮೇಲೆ ಅಷ್ಟೊಂದು ಪ್ರಭಾವ ಹೆಚ್ಚಾಗಲಿಲ್ಲ. ಈಗಾಗಲೇ ಮೇ ಅಂತ್ಯಕ್ಕೆ ಬಂದಿದ್ದೇವೆ. ಜೂನ್ ಆರಂಭ ಎಂದರೆ ಮಾನ್ಸೂನ್ ಆರಂಭವಾಗುವ ಸಮಯ. ಈ ಸಮಯದಲ್ಲಿ ಬೇಸಿಗೆಯ ಬಿರು ಬಿಸಿ ಜನರಿಗೆ ತಟ್ಟಲು ಸಾಧ್ಯವೇ ಇಲ್ಲ. ಈ ವರ್ಷದ ಬೇಸಿಗೆಯ ತಾಪ ಜನರಿಗೆ ಮುಟ್ಟದೆ ಮಿಂಚಿ ಮರೆಯಾಯ್ತು ಎನ್ನುವ ವರದಿಗಳು ಬಿತ್ತರ ಆಗುತ್ತಿದ್ದವು. ಈ ವೇಳೆ ಪ್ರಕೃತಿ ತನ್ನ ಕರಾಳ ಮುಖ ಪ್ರರ್ದಶನ ಮಾಡಲು ಶುರು ಮಾಡಿದೆ
ಜೂನ್ 5 ರಿಂದ ಈ ಬಾರಿ ಮಾನ್ಸೂನ್ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅದರ ಜೊತೆಗೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪ್ರಭಾವದಿಂದ ಕರ್ನಾಟಕ ಸೇರಿದಂತೆ ದೇಶದ ಇತರೆ ಕಡೆಗಳಲ್ಲೂ ಭಾರೀ ಮಳೆಯಾಗುತ್ತಲೇ ಇದೆ. ಇದರ ನಡುವೆ ದೇಶವನ್ನು ಕಾಡಲು ಶುರುಮಾಡಿದೆ ಸುಡುವ ಗಾಳಿ. ಉತ್ತರ ಭಾರತದ ರಾಜ್ಯಗಳಲ್ಲಿ ಮೇ 22 ರಿಂದ ಮೇ 29ರ ತನಕ ತಾಪಮಾನ ಏರಿಕೆಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಉಷ್ಣಾಂಶದ ಗಾಳಿಯು ಬೀಸುತ್ತಿದ್ದು ಸರ್ಕಾರವನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಭಾರತದಲ್ಲಿ ಸಾಮಾನ್ಯವಾಗಿ ಮಾರ್ಚ್ ಹಾಗೂ ಜೂನ್ ಅವಧಿಯಲ್ಲಿ ಬಿಸಿಗಾಳಿ ಬೀಸುತ್ತದೆ ಎನ್ನುವುದು ವಾಡಿಕೆ. ಆದರೆ ಈ ಬಾರಿ ಬೇಸಿಗೆಯ ತಾಪವೇ ಇಲ್ಲದೆ ಕಳೆದಿದ್ದ ಜನರಿಗೆ ಸುಡುವ ಗಾಳಿ ಆರೋಗ್ಯ ಸಮಸ್ಯೆ ಹೊತ್ತು ತರುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲೂ ಕರೋನಾ ಲಾಕ್ಡೌನ್ ದಿನಗಳನ್ನು ಸಂಕಷ್ಟದಲ್ಲಿ ಕಳೆಯುತ್ತಿರುವ ಜನರಿಗೆ ಹೀಟ್ ವೇವ್ ಹೊಸ ಸಮಸ್ಯೆಯಾಗಿ ಪರಿಣಮಿಸಿದೆ.
ಪ್ರತಿ ವರ್ಷದ ವಾಡಿಕೆಯಂತೆ ಈ ಅವಧಿಯಲ್ಲಿ ಬಿಸಿಲಿನ ಉಷ್ಣಾಂಷ 40 ಡಿಗ್ರಿ ಸೆಲ್ಸಿಯಸ್ ಇರಬೇಕಿತ್ತು. ಆದರೆ, ಇದೀಗ 45 ರಿಂದ 50 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಮೇ 15ರ ನಂತರ ಭಾರತದಲ್ಲಿ ಭೇಸಿಗೆಯ ತೀವ್ರತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗಳು ನಿಧಾನವಾಗಿ ಆರಂಭವಾಗಲು ಶುರುವಾಗಿದ್ದೂ ಕೂಡ ಉಷ್ಣಾಂಶ ಏರಿಕೆ ಆಗಲು ಕಾರಣ ಎನ್ನುವ ಮಾತೂ ಕೇಳಿಬರುತ್ತಿದೆ. ಆದರೆ, ಕಳೆದ ವರ್ಷದಂತೆ ಸಾವಿನ ಸರಣಿಯನ್ನೇ ಸೃಷ್ಟಿಸುತ್ತಾ ಎನ್ನುವ ಭಯವೂ ಜನರನ್ನು ಕಾಡುತ್ತಿದೆ. ಆದರೆ ತಜ್ಞರ ಪ್ರಕಾರ ಮೇ 29ರ ತನಕ ಮಾತ್ರ ಬಿಸಿ ಗಾಳಿ ಬೀಸುತ್ತದೆ ಎನ್ನುವ ಮಾತಿದೆ. ಇನ್ನೆರಡು ದಿನಗಳಲ್ಲಿ ಬಿಸಿಗಾಳಿ ಬೀಸಿ ತಣ್ಣಗಾದರೆ ಜನರು ಕರೋನಾ ನಡುವೆ ನೆಮ್ಮದಿಯ (?) ಜೀವನ ಹುಡುಕಬಹುದು. ಇಲ್ಲದಿದ್ದರೆ, ಈಗಾಗಲೇ ಕರೋನಾ ಸೋಂಕಿನಿಂದ ಬಳಲಿ ಬಸವಳಿದಿರುವ ಹಿರಿಯ ಜೀವಗಳು ತಮ್ಮ ಜೀವನದ ಯಾತ್ರೆ ಮುಗಿಸಬೇಕಾಗುತ್ತದೆ.
24 ಗಂಟೆಗಳು ಮಾತ್ರ ಬೀಸುತ್ತಂತೆ ಬಿಸಿ ಗಾಳಿ..!
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಮುಂದಿನ 24 ಗಂಟೆಗಳ ಕಾಲ ಮಾತ್ರ ಬಿಸಿಗಾಳಿ ಬೀಸಲಿದ್ದು, ಆ ಬಳಿಕ ತಂಗಾಳಿ ಬರಲಿದೆ ಎನ್ನಲಾಗಿದೆ. ಇಷ್ಟು ದಿನ ಕೇವಲ ಉತ್ತರ ಭಾರತದ ಕಡೆ ಬೀಸುತ್ತಿದ್ದ ಬಿಸಿಗಾಳಿ, ಮುಂದಿನ 24 ಗಂಟೆಗಳಲ್ಲಿ ಇಡೀ ದೇಶವನ್ನೇ ಆವರಿಸಲಿದೆ ಎನ್ನುವ ಆತಂಕಕಾರಿ ಮಾಹಿತಿಯನ್ನೂ ಹವಾಮಾನ ಇಲಾಖೆ ಕೊಟ್ಟಿದೆ. ಹರಿಯಾಣ, ಚಂಡಿಗಢ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಪಧ್ಯಪ್ರದೇಶ, ಪೂರ್ವ ರಾಜಸ್ಥಾನ, ಪಂಜಾಬ್, ಬಿಹಾರ, ಜಾರ್ಖಂಡ್, ಓಡಿಶಾ, ಸೌರಾಷ್ಟ್ರ, ಕಛ್, ಸೆಂಟ್ರಲ್ ಮಹಾರಾಷ್ಟ್ರ, ಮರಾಠವಾಡ, ತೆಲಂಗಾಣ, ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಗಾಳಿಯ ತಾಪ ಹೆಚ್ಚಾಗಲಿದೆ ಎನ್ನಲಾಗಿದೆ. ಮೇ 30ರ ಬಳಿಕ ಶೀತಮಾರುತ ಶುರುವಾಗುವ ಸಾಧ್ಯತೆಯಿದ್ದು, ಉಷ್ಣಾಂಶಕ್ಕೆ ಬ್ರೇಕ್ ಬೀಳಲಿದೆ ಎನ್ನುವ ನಿರಿಕ್ಷೆಯಲ್ಲಿ ಹವಾಮಾನ ಇಲಾಖೆ ಇದೆ. ಆದರೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಳೆದ 10 ವರ್ಷದಲ್ಲಿ ಇದೇ ಬಾರಿಗೆ ದಾಖಲಾಗಿದೆ ಎನ್ನಲಾಗಿದೆ.
ಉಷ್ಣಾಂಶ ಹಾಗೂ ಬಿಸಿಗಾಳಿಗೂ ವ್ಯತ್ಯಾಸವೇನು..?
ಬಿಸಲು ಬಂದರೆ ನೆರಳಿನಲ್ಲಿ ಆಶ್ರಯ ಪಡೆದುಕೊಳ್ಳಬಹುದು ಎಂದು ಊಹೆ ಮಾಡಿದ್ದರೆ ತಪ್ಪು. ಯಾಕಂದ್ರೆ ಉಷ್ಣಾಂಶವೇ ಬೇರೆ ಅದರಿಂದ ಹೊರಹೊಮ್ಮವೆ ಬಿಸಿಗಾಳಿಯೇ ಬೇರೆ. ಬಿಸಿಲಿನಿಂದ ರಕ್ಷಣೆ ಪಡೆದುಕೊಂಡರೂ ಬಿಸಿಗಾಳಿ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ದೇಹದ ಮೇಲೆ ಬಾವುಗಳು (Ederna) ಉಂಟಾಗುವ ಸಾಧ್ಯತೆಯಿದೆ. ಆರೋಗ್ಯ ಬಲಹೀನವಾಗುವ ಸಾಧ್ಯತೆ ಹೆಚ್ಚು. ತೀವ್ರತರವಾದ ಜ್ವರದಿಂದ ಬಳಲುವ ಸಾಧ್ಯತೆ ಇರುತ್ತದೆ. ಆಯಾಸದಿಂದ ದೇಹ ನಿತ್ರಾಣಗೊಳ್ಳಲಿದೆ. ತಲೆತಿರುಗುವ ಸಾಧ್ಯತೆಯಿದ್ದು, ಎಲ್ಲಂದರಲ್ಲೇ ಬಿದ್ದು ಅಸುನೀಗುವ ಸಾಧ್ಯತೆಯಿರುತ್ತದೆ. ತಲೆನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತದಿಂದಲೂ ಬಳಲುಬಹುದು. ದೇಹದ ಉಷ್ಣಾಂಶ 40 ಡಿಗ್ರಿ ಮುಟ್ಟಿದ ಬಳಿಕ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿಯಂತೆ 1998 ರಿಂದ 2017ರ ನಡುವೆ ಬಿಸಿ ಗಾಳಿಯಿಂದ 1,66,000 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ. ಯಾವುದಕ್ಕೂ ನಿಮ್ಮ ಆರೋಗ್ಯ ಕರೋನಾದಿಂದ ಕಾಪಾಡಿಕೊಳ್ಳುವ ಜೊತೆಗೆ ಬಿಸಿಗಾಳಿಯಿಂದಲೂ ರಕ್ಷಣೆಗೆ ಮಹತ್ವ ಕೊಡಿ. ಆದಷ್ಟು ದೇಹವನ್ನು ತಂಪು ಮಾಡುವ ಆಹಾರ ಸೇವನೆ ನಿಮ್ಮ ಆಯ್ಕೆಯಾಗಿರಲಿ.