ಮಂಗಳವಾರ (15-10-2019) ಕಲಬುರ್ಗಿ ನಗರದಲ್ಲಿ ಅದೆಷ್ಟು ಜನಸ್ತೋಮ. ಎಲ್ಲಿದೆ ಭಾಷಣ ಎಲ್ಲಿದೆ ಭಾಷಣ ಎಂದು ಕೇಳುವವರ ಸಂಖ್ಯೆ ಸಾವಿರ ಗಡಿ ದಾಟಿತ್ತು. ಸೋಮವಾರವಷ್ಟೇ ಮಂಗಳವಾರದ ಭಾಷಣ ಸ್ಥಳ ಮತ್ತು ವೇಳೆಯನ್ನು ಕಲಬುರ್ಗಿ ವಿಶ್ವವಿದ್ಯಾಲಯದ ಪರಿಮಳಾ ಅಂಬೇಕರ್ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ರಾಜ್ಯ ಸರ್ಕಾರದ `ಮೌಖಿಕ’ ಆದೇಶದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದು ಮಾಡಲಾಯಿತು. ಇದರ ಬಗ್ಗೆ ವಿಶ್ವವಿದ್ಯಾಲಯದಲ್ಲೇ ಅಪಸ್ವರಗಳು ಎದ್ದವು. ಕೆಲವರು ಭಾಷಣ ಬೇಕು ಎಂದರೆ ಕೆಲವರು ಬೇಡವೇ ಬೇಡ ಎಂಬ ನಿಲುವಿಗೂ ಬಂದರು.
ಏಕೆ ಬೇಡ? ಏನಿವರ ವಾದ?
ಸಿಪಿಐ ಮುಖಂಡರಾದ ಕನ್ಹಯ್ಯಕುಮಾರ ಭಾಷಣಗಳು ಪ್ರಚೋದನಾಕಾರಿಯಾಗಿರುತ್ತವೆ ಹಾಗೂ ಅವರು ದೇಶದ್ರೋಹಿಯೊಬ್ಬನನ್ನು ಪೂಜಿಸಿದ್ದರು ಎಂಬ ಆಪಾದನೆ ಅವರ ಮೇಲಿದ್ದು, ಅದೇ ಕಾರಣದಿಂದ ಕೆಲ ಸಂಘಟನೆಗಳು ಭಾಷಣಕ್ಕೆ ಅವಕಾಶ ನೀಡಿದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಕರೆ ನೀಡಿದರು. ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸೇರುವ ನಿರೀಕ್ಷೆ ಇದ್ದುದರಿಂದ ಸುರಕ್ಷತಾ ದೃಷ್ಟಿಯಿಂದ ಮುಂಜಾನೆಯ, ಅಂದರೆ ವಿಶ್ವವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಭಾಷಣವನ್ನು ರದ್ದುಗೊಳಿಸಲಾಯಿತು. ಈ ದಿಢೀರ್ ಬೆಳವಣಿಗೆಯಿಂದ ಹಲವಾರು ವಿದ್ಯಾರ್ಥಿಗಳು ಕೊನೆ ಘಳಿಗೆಯಲ್ಲಿ ವಿಚಲಿತರಾದರು ಹಾಗೂ ಬಹುತೇಕರಿಗೆ ಇದು ಏಕೆ ಹೀಗಾಯಿತು ಎಂದು ತಿಳಿಯಲೇ ಇಲ್ಲ.
ಮಂಗಳವಾರ ಬೆಳಿಗ್ಗೆ ಕಲಬುರ್ಗಿ ಭಾಗದ ಸಂಸದರು, ಬಿಜೆಪಿ ಮುಖಂಡರು ಮತ್ತು ಶ್ರೀರಾಮ ಸೇನೆಯ ಸದಸ್ಯರು ಹಾಗೂ ಇನ್ನು ಕೆಲವು ಜನರು ಉಪನ್ಯಾಸ ಬೇಡ, ರದ್ದುಗೊಳಿಸಿ ಎಂದು ಹಂಗಾಮಿ ಕುಲಪತಿ ಪ್ರೊ. ಪರಿಮಳಾ ಅಂಬೇಕರ್ ಅವರ ಮೇಲೆ ಒತ್ತಡ ತಂದಿದ್ದರು. ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ವಿದ್ಯಾರ್ಥಿಗಳು ಹಾಗೂ ಜನರು ಉತ್ತಮ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಎಂದು ಕುಲಪತಿಗಳು ಹೇಳಿದಾಗ, ಪ್ರತಿಭಟನೆ ನಡೆಯುವ ಸಂಭವಗಳ ಬಗ್ಗೆ ಪೋಲಿಸ್ ಅಧಿಕಾರಿಗಳು ತಿಳಿಸಿದ್ದರು. ಆಗ ಪರಿಮಳಾ ಅಂಬೇಕರ್ ಅವರಿಗೆ ಶಿಕ್ಷಣ ಇಲಾಖೆ ಮೂಲಕ ರದ್ದು ಪಡಿಸಿ ಎಂಬ ಆದೇಶ ಬಂತು. ಇದು ಬಂದಾಗ ಸೋಮವಾರ ರಾತ್ರಿಯಾಗಿತ್ತು. ಆದ್ದರಿಂದ ಪರಿಮಳಾ ಮಂಗಳವಾರ ಬೆಳಗ್ಗೆ ಈ ಮಾತನ್ನು ಸಂಘಟಕರಿಗೆ ತಿಳಿಸಿದರು. ಆಗಲೇ ಜನರು ಸೇರಿದ್ದರು. ತಕ್ಷಣ ಪೋಲೀಸರು ಬಿಗಿ ಬಂದೋಬಸ್ತ್ ಮಾಡಿ, ವಿಶ್ವ ವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಭವನಕ್ಕೆ ಕೀಲಿ ಹಾಕಿದರು.
ನಂತರ ಮಧ್ಯಾಹ್ನದ ಭಾಷಣ ವಿಶ್ವೇಶ್ವರಯ್ಯ ಇನ್ ಸ್ಟಿಟ್ಯೂಟ್ ಆಫ್ ಎಂಜನೀಯರ್ಸ್ ಹಾಲ್ ನಲ್ಲಿ ನಡೆಯಬೇಕಿತ್ತು. ವಿಶ್ವವಿದ್ಯಾಲಯದಲ್ಲಿ ಸೇರಿದ್ದ ಜನರೆಲ್ಲ ಅಲ್ಲಿ ನೆರೆಯಲಾರಂಭಿಸಿದರು. ಆಗ ಜಿಲ್ಲಾಧಿಕಾರಿ ಬಿ ಶರತ್ ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮ ರದ್ದುಗೊಳಿಸುವಂತೆ ಸಂಘಟಕರಿಗೆ ಸೂಚಿಸಿದರು. ಇಲ್ಲೂ ಜನರೂ ಸುಮ್ಮನೆ ವಾಪಸ್ಸಾದರು.
ಈ ಹೊತ್ತಿಗೆ ಬಹುತೇಕ ಜನರು ಇನ್ನೇನು ಭಾಷಣ ಮಾಡಲು ಜಿಲ್ಲಾಧಿಕಾರಿಗಳು ಅವಕಾಶ ನೀಡುತ್ತಾರೋ ಇಲ್ಲವೆಂಬ ಅನುಮಾನದಿಂದ ಸಂಜೆ 5 ಗಂಟೆಯ ಕಾರ್ಯಕ್ರಮಕ್ಕೆ ಕಾದರು. ಈ ಕಾರ್ಯಕ್ರಮ ಶ್ರೀನಿವಾಡ ಗುಡಿ ಟ್ರಸ್ಟ್ ಹಾಗೂ ಸಂವಿಧಾನಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಇಲ್ಲೂ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡಬಹುದೆಂದು ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ ಕೊನೆಗೂ ಕನ್ಹಯ್ಯ ಕುಮಾರ ಭಾಷಣ ಮಾಡಿದ್ದು ಇಲ್ಲಿ.
ಕನ್ಹಯ್ಯ ಏನಂದರು:
ಕನ್ಹಯ್ಯ ಇಲ್ಲಿ ‘ಸಂವಿಧಾನ ರಕ್ಷಣೆಯಲ್ಲಿ ಯುವಕರ ಪಾತ್ರ’ ಕುರಿತು ಉಪನ್ಯಾಸ ನೀಡಿದರು. ಅದರ ಜೊತೆಗೆ ಪ್ರಧಾನಿ ಮೋದಿಯವರಿಗೆ ಟಾಂಗ್ ನೀಡುತ್ತ ಹೇಳಿದ್ದು ಹೀಗೆ:
‘ಪ್ರಧಾನಿ ನರೇಂದ್ರಮೋದಿ ಅವರನ್ನು ಟೀಕೆ ಮಾಡುವವರು, ದ್ವೇಷಿಸುವವರು ದೇಶದ್ರೋಹಿಗಳು ಎಂಬುದು ಅವರ ಅನುಯಾಯಿಗಳ ಅಂಬೋಣ. ಸರ್ಕಾರದ ವಾಸ್ತವಾಂಶಗಳನ್ನು ಬಿಚ್ಚಿಡುವ ಪತ್ರಕರ್ತ ರವೀಶ್‌ಕುಮಾರ್ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಬಂತು. ಆದರೆ, ಅವರನ್ನೂ ಮೋದಿ ಅನುಯಾಯಿಗಳು ದೇಶದ್ರೋಹಿಗಳ ಪಟ್ಟಿಗೆ ಸೇರಿಸಿಬಿಟ್ಟಿದ್ದಾರೆ. ಅವರ ಅನುಯಾಯಿಗಳ ದೃಷ್ಟಿಯಲ್ಲಿ ದೇಶದ್ರೋಹಿ ಎನಿಸಿಕೊಂಡಿರುವ ಅಭಿಜಿತ್ ಬ್ಯಾನರ್ಜಿ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಬರುತ್ತದೆ. ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞರಾಗಿರುವ ಬ್ಯಾನರ್ಜಿ ಅವರು ಸರ್ಕಾರವೇ ನಡೆಸುತ್ತಿರುವ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಹೆಮ್ಮೆಯ ಪ್ರತಿಭೆ. ಈಗಿನದ್ದು ವಾಟ್ಸಾಪ್ ವಿಶ್ವವಿದ್ಯಾಲಯಗಳು. ಇಲ್ಲಿರುವ ಐಟಿ ಸೆಲ್ ಗಳು ಪಕ್ಷದ ಪರ ಅಭಿಪ್ರಾಯ ರೂಪಿಸುವ ಕಾರ್ಯದಲ್ಲಿ ತತ್ಪರವಾಗಿವೆ. ಆದ್ದರಿಂದ ಕೆಲವು ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕೂಡ ನಮ್ಮೆಲ್ಲರ ಮೇಲಿದೆ. ಇವತ್ತು ಇಲ್ಲಿ ನನ್ನ ಭಾಷಣ ತಡೆಯಲು ನಾನಾ ಪ್ರಯತ್ನಗಳು ನಡೆದವು. ಭಾಷಣ ಮಾಡುವ ಹಾಗೂ ಕೇಳುವ ಹಕ್ಕು ಎಲ್ಲರಿಗಿದೆ. ಬರೀ ವಿಶ್ವವಿದ್ಯಾಲಯದಲ್ಲಿ ನನ್ನ ಭಾಷಣ ತಡೆದರೆ ಸಾಕು ಎಂದು ಸರ್ಕಾರ ತಿಳಿದುಕೊಂಡಿದ್ದರೆ ಅದು ತಪ್ಪು. ನನ್ನ ಭಾಷಣ ಫೇಸ್ ಬುಕ್ ನಲ್ಲಿ ಲೈವ್ ಆಗಿ ಹೋಗಿದೆ. ಪ್ರಪಂಚದಾದ್ಯಂತ ಜನರನ್ನು ತಲುಪಿದೆ”. ಎಂದು ಹೇಳಿದರು.
‘ಅಂಬಾನಿ ಮಕ್ಕಳು ಹಾಗೂ ಬಡವರ ಮಕ್ಕಳು ಒಂದೇ ಶಾಲೆಯಲ್ಲಿ ಏಕೆ ಓದುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಒಂದೇ ಶಾಲೆಯಲ್ಲಿ ಓದುವ ವಾತಾವರಣ ಸೃಷ್ಟಿಯಾಗಬೇಕು. ಆ ನಿಟ್ಟಿನಲ್ಲಿ ಭಾರತದ ಸಂವಿಧಾನ ನೀಡಿದ ಅವಕಾಶವನ್ನು ಬಳಸಿಕೊಂಡು ಹೆಚ್ಚು ಹೆಚ್ಚು ವಿಶ್ವವಿದ್ಯಾಲಯಗಳನ್ನು ಸರ್ಕಾರ ಸ್ಥಾಪಿಸಬೇಕು ಎಂದು ಒಟ್ಟಾಗಿ ಒತ್ತಡ ಹೇರಬೇಕು’ ಎಂದು ಸಲಹೆ ನೀಡಿದರು. ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕನ್ಹಯ್ಯಕುಮಾರ್, “ಬ್ರಿಟಿಷರು ಹೇಗೆ ಹಿಂದೂ ಮುಸ್ಲಿಮರನ್ನು ಒಡೆದು ಆಳಿದರೂ ಅದೇ ರೀತಿಯಲ್ಲಿ ರೀತಿ ಆಡಳಿತ ನಡೆಸುತ್ತಿದೆ” ಎಂದರು.
ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮಿಜಿ ಹೇಳಿದ್ದು ಹೀಗೆ, “ಭಾರತದ ಬಗ್ಗೆ ಕಿಂಚಿತ್ತೂ ಗೌರವ ಇಟ್ಟುಕೊಳ್ಳದ ಹಾಗೂ ಭಯೋತ್ಪಾದಕ ಸಂಸತ್ ದಾಳಿ ಕೋರ ಅಫ್ಝಲ್ ಗುರುವಿನ ಪುಣ್ಯತಿಥಿ ಆಚರಿಸಿರುವ ಒಬ್ಬ ಧೂರ್ತನಿಂದ ಉಪನ್ಯಾಸ ಕೊಡಿಸುತ್ತಿರುವುದು ನಮ್ಮ ನಾಡಿನ ದೌರ್ಭಾಗ್ಯ. ಇದನ್ನು ಶ್ರೀ ರಾಮ ಸೇನೆ ಖಂಡಿಸುತ್ತದೆ. ಗುಲ್ಬರ್ಗ ವಿವಿ ಅತಿ ಎನಿಸುವಷ್ಟು ಒಂದು ಜಾತಿ ವ್ಯವಸ್ಥೆಯ ಪಾಶದಲ್ಲಿದೆ”.
ಹನುಮಂತ ನಾಗನೂರ, ವಿವಿ ವಿದ್ಯಾರ್ಥಿಯೊಬ್ಬರು ಪ್ರತಿಧ್ವನಿ ತಂಡಕ್ಕೆ ಹೇಳಿದ್ದು ಹೀಗೆ, “ಒಬ್ಬರ ಭಾಷಣದಿಂದ ಇಷ್ಟು ರಾದ್ಧಾಂತವೇ! ಪೊಲೀಸರು, ಪ್ರೆಸ್, ಹಲವು ಹಿಂದೂ ಪರ ಸಂಘಟನೆಗಳು, ಹೀಗೆ ನಮ್ಮ ವಿಶ್ವವಿದ್ಯಾಲಯದ ಸಿಬ್ಬಂದಿಗಳಲ್ಲೇ ಭಿನ್ನಾಭಿಪ್ರಾಯ ಇದೆ. ಶಿಕ್ಷಣ ಇಲಾಖೆ ಹಾಗೂ ಸರ್ಕಾರದಿಂದ ಒತ್ತಡವಿದೆ. ಕೆಲವೆಡೆ 144 ಕಲಂ ಜಾರಿ. ಅಬ್ಬಬ್ಬಾ ಇಷ್ಟಾದ ಮೇಲೆ ಆ ಕನ್ಹಯ್ಯಕುಮಾರ ಮಾತು ಕೇಳಲೇ ಬೇಕು ಎಂಬ ಹಂಬಲ ಜಾಸ್ತಿಯಾಯಿತು. ಚೆನ್ನಾಗಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾತುಗಳನ್ನು ಹೇಳುತ್ತ ಮೋದಿ ಅವರನ್ನು ಹೆಚ್ಚಾಗಿ ಟಾರ್ಗೆಟ್ ಮಾಡಿದರು ಎಂದೆನಿಸಿದರೂ ಅವುಗಳಲ್ಲಿ ಕೆಲವು ಸತ್ಯಗಳೇ ಇದ್ದವು”.
ವಿಶ್ವವಿದ್ಯಾಲಯದ ಸಿಬ್ಬಂದಿಯೊಬ್ಬರು ಖಾರವಾಗಿ ನುಡಿದಿದ್ದು ಹೀಗೆ, “ನಮ್ಮ ತಂಡ ಕೆಲವು ಸದಸ್ಯರು, ಕಷ್ಟ ಪಟ್ಟು ಕನ್ಹಯ್ಯಕುಮಾರ ಅವರನ್ನು ಸಂಪರ್ಕಿಸಿ, ಅವರ ವೇಳೆ ಪಡೆದುಕೊಂಡು ದಿನಾಂಕ ನಿಗದಿ ಮಾಡಿದ ಮೇಲೆ ಕಾರ್ಯಕ್ರಮ ಚೆನ್ನಾಗಿ ಆಗಬಹುದು ಎಂಬ ನಿರೀಕ್ಷೆ ಇಟ್ಟಿದ್ದು ಸುಳ್ಳಾಯಿತು. ಶ್ರೀರಾಮ ಸೇನೆಯವರು ಮಾಡುವುದನ್ನು ಮಾಡಲಿ, ಅದು ಅವರ ಕೆಲಸ. ಆದರೆ ಸರ್ಕಾರವೂ ಪೊಲೀಸರ ಮುಖಾಂತರ ಸುರಕ್ಷತೆ ಎಂಬ ಕಾರಣವಿಟ್ಟಿದ್ದು ಬೇಸರ ಮೂಡಿಸಿತು”.