ತೀವ್ರ ಆರ್ಥಿಕ ಕುಸಿತದ ಪರಿಣಾಮ ರಿಯಲ್ ಎಸ್ಟೇಟ್ ಮೇಲೆ ನೇರವಾಗಿ ಅಪ್ಪಳಿಸಿದೆ. ಮಾರುಕಟ್ಟೆ ಸದ್ಯಕ್ಕೆ ಸುಧಾರಣೆ ಕಾಣುವುದಿಲ್ಲ. ಈಗಾಗಲೇ ರಿಯಲ್ ಎಸ್ಟೇಟ್ ವಲಯ ತೀವ್ರ ಸಂಕಷ್ಟದಲ್ಲಿದೆ. ರಿಯಲ್ ಎಸ್ಟೇಟ್ ಭಾರೀ ಒತ್ತಡವನ್ನು ಎದುರಿಸುತ್ತಿರುವುದರಿಂದ ಕಡಿಮೆ ದರಕ್ಕೆ ಆಸ್ತಿ ಮಾರಾಟ ಮಾಡುವಂತೆ ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಲಹೆ ನೀಡಿದ್ದಾರೆ.
ನಿಮ್ಮ ಬಳಿ ಇರುವ ಸೈಟು ಮತ್ತು ಫ್ಲಾಟುಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಸುಧಾರಣೆಗಾಗಿ ಕಾಯುತ್ತಾ ಕೂರಬೇಡಿ. ಸದ್ಯಕ್ಕೆ ಮಾರುಕಟ್ಟೆ ಅರ್ಥ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ. ಕಡಿಮೆ ದರ ನಿಗದಿ ಪಡಿಸಿ ನಿಮ್ಮಲ್ಲಿರುವ ಸೈಟು, ಫ್ಲಾಟುಗಳನ್ನು ಮಾರಾಟ ಮಾಡಿ ಎಂದಿದ್ದಾರೆ.
ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (NREDCo) ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಸ್ಥರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆಘಾತಕಾರಿ ಸಲಹೆ ನೀಡಿದ್ದಾರೆ.
ನೀವು ಸರ್ಕಾರದ ಸಹಾಯ ನಿರೀಕ್ಷಿಸುವುದಾದರೆ ಅದಕ್ಕಾಗಿ ಬಹಳ ಸಮಯ ಕಾಯಬೇಕಾಗಬಹುದು ಎಂದ ಸಚಿವ ಸದ್ಯಕ್ಕೆ ಯಾವ ಸಹಾಯವನ್ನೂ ಕೇಂದ್ರ ಸರ್ಕಾರದ ಕಡೆಯಿಂದ ನಿರೀಕ್ಷಿಸಬೇಡಿ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮ ನಷ್ಟದ ಹಾದಿಯಲ್ಲಿರುವುದು ನಮ್ಮ ಗಮನಕ್ಕೆ ಬಂದಿದೆ. ವ್ಯವಹಾರ ಉಳಿಸಿಕೊಳ್ಳಬೇಕೆಂದರೆ ಕಡಿಮೆ ದರಕ್ಕೆ ಮಾರಾಟ ಮಾಡುವುದೇ ಉತ್ತಮ ಎಂದಿದ್ದಾರೆ.
ನೋಟ್ ಬ್ಯಾನ್, ಜಿಎಸ್‌ಟಿ ಮುಂತಾದ ಕೇಂದ್ರದ ಆರ್ಥಿಕ ನೀತಿಯಿಂದಾಗಿ ರಿಯಲ್ ಎಸ್ಟೇಟ್ ವಲಯ ನಷ್ಟದ ಹಾದಿ ಸವೆಸಿತ್ತು. ಸದ್ಯ ಕರೋನಾ ಸಾಂಕ್ರಾಮಿಕ ಹಾಗೂ ಅದರ ನಿಯಂತ್ರಣಕ್ಕೆ ಜಾರಿಗೆ ತಂದಿರುವ ಸಂಪೂರ್ಣ ಲಾಕ್‌ಡೌನ್‌ನಿಂದ ವ್ಯವಹಾರಗಳು ನಡೆಯದೇ ರಿಯಲ್ ಎಸ್ಟೇಟ್ ಉದ್ಯಮ ತೀವ್ರ ಸಂಕಷ್ಟದಲ್ಲಿದೆ.