ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆ ಮಟ್ಟದ ಕರೋನಾ ಪ್ರಕರಣ ದಾಖಲಾಗಿದ್ದು, ಒಂದೇ ದಿನದಲ್ಲಿ 8,909 ಪ್ರಕರಣಗಳು ಪತ್ತೆಯಾಗಿದೆ. ಭಾರತದಲ್ಲಿ ಇದುವರೆಗೂ 2 ಲಕ್ಷದ 17 ಸಾವಿಕ್ಕೂ ಅಧಿಕ ಮಂದಿ ಕರೋನಾ ಸೋಂಕಿಗೆ ತುತ್ತಾಗಿದ್ದಾರೆ. ದೇಶದಲ್ಲಿ ಇಂದು ಕರೋನಾ ಸೋಂಕಿನಿಂದಾಗಿ 217 ಮಂದಿ ಅಸುನೀಗಿದ್ದು ಒಟ್ಟು ಮರಣ ಸಂಖ್ಯೆ 6075 ತಲುಪಿದೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 1 ಲಕ್ಷದ 4 ಸಾವಿರ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ ಅತೀ ಹೆಚ್ಚು ಕರೋನಾ ಪ್ರಕರಣ ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಇಂದು 123 ಮಂದಿ ಅಸುನೀಗಿದ್ದಾರೆ. ಇದುವರೆಗೂ ಮಹಾರಾಷ್ಟ್ರದಲ್ಲಿ ಕರೋನಾದಿಂದ 2710 ಮಂದಿ ಅಸುನೀಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮುಂಬೈ ನಗರವೊಂದರಲ್ಲೇ 1442 ಹೊಸ ಕರೋನಾ ಪತ್ತೆಯಾಗಿದ್ದು ರಾಜ್ಯದಲ್ಲಿ ಒಟ್ಟು 2933 ಹೊಸ ಪ್ರಕರಣಗಳು ದಾಖಲಾಗಿವೆ. ಮರಾಠರ ರಾಜ್ಯದಲ್ಲಿ 77,793 ಕರೋನಾ ಪ್ರಕರಣಗಳು ಇದುವರೆಗೂ ದಾಖಲಾಗಿವೆ.
ಕರ್ನಾಟಕ ಆರೋಗ್ಯ ಇಲಾಖೆ ಜೂನ್ 4ರ ಸಂಜೆ 5 ಗಂಟೆಗೆ ಬಿಡುಗಡೆಗೊಳಿಸಿದ ಅಂಕಿಅಂಶದ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 257 ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 4320 ತಲುಪಿದೆ. ಇಂದು 106 ಮಂದಿ ಕರೋನಾದಿಂದ ಚೇತರಿಸಿಕೊಂಡಿದ್ದು, 1,610 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿಗೆ ಇಂದು 04 ಮಂದಿ ಬಲಿಯಾಗಿದ್ದು, ಒಟ್ಟು ಮರಣಗೊಂಡವರ ಸಂಖ್ಯೆ 57 ತಲುಪಿದೆ.










