ಒಂದೇ ಕಟ್ಟಡದಲ್ಲಿ ವಾಸವಿದ್ದ 28 ಜನರಿಗೆ ಕರೋನಾ ವೈರಸ್ ಇದೆ ಎಂದು ವರದಿಯಾಗಿದೆ. ಹೈದರಾಬಾದ್ ನ ಮದನ್ನಪ್ಪೇಟ್ ಎಂಬಲ್ಲಿನ ಕಾಂಪ್ಲೆಕ್ಸ್ ಒಂದರಲ್ಲಿ ವಾಸವಿದ್ದ 28 ಜನರಿಗೆ ಕೋವಿಡ್ 19 ಪತ್ತೆಯಾಗಿದೆ. ಈ ಹಿನ್ನೆಲೆ ಮದನ್ನಪ್ಪೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಈ 28 ಜನರ ಪೈಕಿ ಮೂವರು ಮಕ್ಕಳು ಮತ್ತು 5 ಜನ ಇಲ್ಲಿನ ನಿವಾಸಿಯೊಬ್ಬರ ಮನೆಗೆ ಅತಿಥಿಯಾಗಿ ಬಂದವರಾಗಿದ್ದಾರೆ. ಮೊದಲು ಈ ಕಟ್ಟಡದಲ್ಲಿನ ವ್ಯಕ್ತಿಯೊಬ್ಬರು ಕರೋನಾ ಮಾದರಿಯಲ್ಲಿ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಕರೋನಾ ಪಾಸಿಟಿವ್ ಎಂದು ವರದಿ ಬಂದಿದೆ. ಇದಾದ ಬೆನ್ನಲ್ಲೇ ಈ ವ್ಯಕ್ತಿ ವಾಸವಿದ್ದ ಕಟ್ಟಡದ 55 ಮಂದಿ ಪರೀಕ್ಷೆ ಮಾಡಿಕೊಂಡಿದ್ದಾರೆ. ಈ 55 ಜನರ ಪೈಕಿ 28 ಜನರ ಕರೋನಾ ವರದಿ ಪಾಸಿಟಿವ್ ಆಗಿದೆ.

ಸದ್ಯ ಕರೋನಾ ಬಾಧಿಸಿರುವ 28 ಜನರ ಪೈಕಿ 11 ತಿಂಗಳ ಕೈಗೂಸೂ ಇದೆ. ಆಶ್ಚರ್ಯಕರ ಸಂಗತಿ ಎಂದರೆ, ಈ ಕಟ್ಟಡದಲ್ಲಿ ಕೋವಿಡ್ 19 ಮೊದಲು ಕಾಣಿಸಿಕೊಂಡ ವ್ಯಕ್ತಿ ಇಂಜಿನಿಯರಿಂಗ್ ಉದ್ಯೋಗಿ ಆಗಿದ್ದು ಲಾಕ್ ಡೌನ್ ಕಾರಣಕ್ಕೆ ಮನೆ ಬಿಟ್ಟು ಆಚೆಯೇ ಬಂದಿಲ್ಲವಂತೆ. ಆದರೂ ಈತನಲ್ಲಿ ಕರೋನಾ ಕಾಣಿಸಿಕೊಂಡಿದೆ. ಸದ್ಯಕ್ಕೆ ಇದು ಸ್ಥಳೀಯ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ಇಡೀ ಮದನ್ನಪ್ಪೇಟ್ ಹಾಗೂ ಅದರ ಸುತ್ತಲಿನ ಎಲ್ಲಾ ಪ್ರದೇಶಗಳನ್ನು ಸದ್ಯ ಸೀಲ್ ಡೌನ್ ಆಗಿದೆ ಎಂದು ವರದಿಯಾಗಿದೆ. ಈತನ್ಮಧ್ಯೆ, ಈ ಕರೋನಾ ಬಾಧಿತರ ಮೊದಲ ಸಂಪರ್ಕ, ಎರಡನೇ ಸಂಪರ್ಕ ಹೊಂದಿದ ಜನರನ್ನು ಪತ್ತೆ ಹಚ್ಚುವಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಮಗ್ನವಾಗಿದೆ. ಒಂದೇ ಕಟ್ಟಡದಲ್ಲಿ 28 ಜನರಿಗೆ ಕರೋನಾ ಪಾಸಿಟಿವ್ ಬಂದಿದ್ದು ಈಗ ಇಡೀ ದೇಶದ ಬೇಗುದಿ ಹೆಚ್ಚಿಸಿದೆ.