ಐದು ತಿಂಗಳ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ಸ್ಥಾಪಿಸಿದ ಛಲಗಾರ ಬಿ ಎಸ್ ಯಡಿಯೂರಪ್ಪ ಅವರು ಬಹಿರಂಗವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತುಗಳನ್ನು ಆಡಿರುವ ಸಂದರ್ಭವು ಒತ್ತಡದ ಸನ್ನಿವೇಶ ಎಂದಾದರೂ ಅದರ ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ವೇದಿಕೆಯಲ್ಲಿ ಸ್ವಾಮೀಜಿಯೊಂದಿಗೆ ವಾಗ್ವಾದಕ್ಕಿಳಿದ ಯಡಿಯೂರಪ್ಪನವರೊಳಗಿನ ಸಂಘರ್ಷ ಮತ್ತು ಹತಾಶೆಯು ಹಿರಿಯ ನಾಯಕನನ್ನು ಕೇಂದ್ರ ಬಿಜೆಪಿ ನಾಯಕತ್ವ ಸುಡುವ ಕಾವಲಿಯಲ್ಲಿಟ್ಟಿರುವುದಕ್ಕೆ ಸ್ಪಷ್ಟ ಉದಾಹರಣೆ ಎನ್ನಲಾಗುತ್ತಿದೆ.
ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಅವರು “ಸಮಾಜವು ನಿಮ್ಮ ಬೆನ್ನಿಗೆ ಅಚಲವಾಗಿ ನಿಂತಿದೆ. ಪಂಚಮಸಾಲಿ ಸಮಾಜದಿಂದ 13 ಮಂದಿ ಆಯ್ಕೆಯಾಗಿದ್ದು, ಮುರುಗೇಶ್ ನಿರಾಣಿ ಸೇರಿದಂತೆ ಕನಿಷ್ಠ ಮೂವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಸಮಾಜ ನಿಮ್ಮ ಕೈಬಿಡಲಿದೆ” ಎಂದು ಸ್ವಾಮೀಜಿ ಹೇಳುತ್ತಿದ್ದಂತೆ ಯಡಿಯೂರಪ್ಪ ಕೆರಳಿದರು. ಪಕ್ಕದಲ್ಲಿದ್ದ ನಿರಾಣಿಯವರ ಮೇಲೂ ಬಿಎಸ್ ವೈ ಸಿಟ್ಟು ವ್ಯಕ್ತಪಡಿಸಿದ್ದಾರೆ. ಕೇಂದ್ರ ನಾಯಕತ್ವದ ಅವಗಣನೆಯನ್ನು ಸಮರ್ಥವಾಗಿ ಪ್ರಶ್ನಿಸಲು ಸೋಲುವ ಬಿಎಸ್ವೈ ತಾನು ನಂಬಿರುವ ಸಮಾಜದ ಸ್ವಾಮೀಜಿಗಳ ಎಚ್ಚರಿಕೆಗೆ ತಿರುಗೇಟು ನೀಡಿರುವುದು ಸರಿ ಎನಿಸಿದರೂ ಅವರ ದ್ವಂದ್ವ ವಿರೋಧಾಭಾಸವಾಗಿ ಕಾಣಿಸುತ್ತಿದೆ. 2008-11 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾದಾಗ ಬಚಾವಾಗಲು ಲಿಂಗಾಯತ ಸಮುದಾಯದ 100 ಸ್ವಾಮೀಜಿಗಳ ನಿಯೋಗದ ಬೆನ್ನತ್ತಿದ್ದ ಬಿಎಸ್ ವೈ ಈಗ ಅದೇ ಸಮಾಜದ ಸ್ವಾಮೀಜಿಯ ಆಗ್ರಹಕ್ಕೆ ಸೆಡ್ಡು ಹೊಡೆದಿರುವುದು ರಾಜಕೀಯ ಲೆಕ್ಕಾಚಾರದ ಭಾಗವಿರಬಹುದು ಎಂಬ ರಾಜಕೀಯ ತಜ್ಞರ ಮಾತುಗಳನ್ನು ಸುಲಭಕ್ಕೆ ತಳ್ಳಿಹಾಕಲಾಗದು.
ಸ್ವಾಮೀಜಿಯೊಬ್ಬರು ನಿರ್ದಿಷ್ಟ ಸಮಾಜದ ಮುಖಂಡರಿಗೆ ರಾಜಕೀಯ ಸ್ಥಾನಮಾನಕ್ಕೆ ಒತ್ತಾಯಿಸುವ ವಿದ್ಯಮಾನ ಹೊಸದೇನಲ್ಲ. ಆದರೆ, ಬೆದರಿಕೆಯ ಬೆಳವಣಿಗೆ ಅಸಹಜವಾದುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರದಲ್ಲಿರುವವರು ಬಹಿರಂಗವಾಗಿ ರಾಜಕೀಯ ನಿಲುವು ತಳೆಯುವುದು ಉತ್ತಮ ಬೆಳವಣಿಗೆಯಲ್ಲ. ಇಂದಿನ ಈ ಸ್ಥಿತಿ ನಿರ್ಮಾಣವಾಗುವುದರಲ್ಲಿ ಬಿಎಸ್ ವೈ ಪಾಲು ದೊಡ್ಡದಿದೆ ಎಂಬುದು ವಾಸ್ತವ. ಆದ್ದರಿಂದ ಈ ಥರದ ಅತಿರೇಕಗಳನ್ನು ಅರಗಿಸಿಕೊಳ್ಳುವುದನ್ನು ಬಿಎಸ್ ವೈ ಕಲಿಯುವುದು ಅನಿವಾರ್ಯ.
ಮುಖ್ಯಮಂತ್ರಿ ಅವರನ್ನು ಸಮಾಧಾನ ಮಾಡುತ್ತಲೇ ಮಾತು ಮುಂದುವರಿಸಿದ ಸ್ವಾಮೀಜಿಯು “ಈ ಸಂದೇಶ ಮೋದಿ-ಶಾಗೆ ತಲುಪಲಿ” ಎಂದಿರುವುದೂ ಕುತೂಹಲ ಮೂಡಿಸಿದೆ. ಭಾರಿ ನೆರೆಯಿಂದ ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳು ಶತಮಾನದಲ್ಲಿ ಕಂಡಿರದ ಸಂಕಷ್ಟ ಎದುರಿಸುತ್ತಿವೆ. ಇದಕ್ಕೆ ನ್ಯಾಯಯೋಚಿತವಾಗಿ ಸ್ಪಂದಿಸದ ತಮ್ಮದೇ ಪಕ್ಷದ ಪ್ರಧಾನಿ ಮೋದಿಯವರಿಗೆ ತುಮಕೂರಿನ ಬಹಿರಂಗ ಸಭೆಯಲ್ಲಿ ಆಗ್ರಹ ಪೂರ್ವಕ ಮನವಿ ಸಲ್ಲಿಸಿದ ಬಿಎಸ್ ವೈ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಅದರ ಬೆನ್ನಿಗೆ 1,850 ಕೋಟಿ ರುಪಾಯಿ ನೆರವಿನ ಪೈಕಿ ಬರಬೇಕಾದ ಅಂದಾಜು 650 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಅಮಿತ್ ಶಾ ಅವರು ಬಿಎಸ್ ವೈ ಗೆ ಕಾಲಾವಕಾಶ ನೀಡದೇ ಇರುವುದರಿಂದ ವಿಚಲಿತರಾಗಿದ್ದಾರೆ. ಅನರ್ಹರಾಗಿ ಗೆದ್ದುಬಂದು ಸ್ಥಾನಮಾನಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಅವರುಗಳು ಬಿಎಸ್ವೈ ಅವರನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದ್ದಾರೆ. ವಿರೋಧ ಪಕ್ಷಗಳು ಇದನ್ನೇ ಪ್ರಬಲ ಅಸ್ತ್ರವಾಗಿ ಬಳಸುತ್ತಿರುವುದರಿಂದ ಮುಖ್ಯಮಂತ್ರಿ ಇರುಸುಮುರುಸು ಅನುಭವಿಸುತ್ತಿದ್ದಾರೆ.
ಬಿಎಸ್ ವೈ ಮಂತ್ರಿಮಂಡಲವು 34 ಸದಸ್ಯ ಬಲ ಹೊಂದಿದೆ. ಆಗಸ್ಟ್ ನಲ್ಲಿ ಮೊದಲ ಬಾರಿಗೆ ಸಂಪುಟ ವಿಸ್ತರಿಸಿ 17 ಮಂದಿಗೆ ಸಚಿವ ಸ್ಥಾನ ಕಲ್ಪಿಸಲಾಗಿದೆ. ಒಟ್ಟಾರೆ 37 ವೀರಶೈವ ಲಿಂಗಾಯತ ಶಾಸಕರು ಬಿಜೆಪಿಯಲ್ಲಿದ್ದು, ಬಿಎಸ್ ವೈ ಸೇರಿದಂತೆ 8 ಮಂದಿಗೆ ಪ್ರಾತಿನಿಧ್ಯ ದೊರೆತಿದೆ. ಇತ್ತೀಚೆಗೆ 17 ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರ ಶಾಸಕರಿಗೆ ಮಂತ್ರಿ ಸ್ಥಾನದ ಭರವಸೆ ನೀಡಿ ಅವರನ್ನು ರಾಜೀನಾಮೆ ಕೊಡಿಸಿದ ಬಿಎಸ್ವೈ ಅವರಿಗೆ ನೀಡಿದ ಮಾತು ಉಳಿಸಿಕೊಳ್ಳಲಾರದ ಸ್ಥಿತಿ ತಲುಪಿದ್ದಾರೆ. ಉಳಿದ ಸ್ಥಾನಗಳಲ್ಲಿ ಸ್ವಾಮೀಜಿಗಳು ಹೇಳಿದವರಿಗೆ ಪ್ರಾತಿನಿಧ್ಯ ನೀಡಿದರೆ ಅನರ್ಹರಾಗಿ ಗೆದ್ದವರಿಗೆ ಅವಕಾಶ ಕಲ್ಪಿಸುವುದು ಹೇಗೆ? ತಮ್ಮ ಸಮುದಾಯದ ಸ್ವಾಮೀಜಿಯ ಮಾತು ಮಾನ್ಯ ಮಾಡಿದರೆ ಉಳಿದ ಸಮುದಾಯಗಳ ಮಠಾಧೀಶರು ಬೀದಿಗಿಳಿದರೆ ಅದನ್ನು ನಿಭಾಯಿಸುವುದು ಹೇಗೆ? ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಹೆಚ್ಚಿದ್ದು, ವಚನಾನಂದ ಶ್ರೀ ಬಹಿರಂಗ ಎಚ್ಚರಿಕೆ ಉಳಿದವರ ಆಗ್ರಹಕ್ಕೆ ದಾರಿ ಮಾಡಿಕೊಟ್ಟಂತಾಗುವುದಿಲ್ಲವೇ? ಎಲ್ಲರೂ ಒತ್ತಡ ತಂತ್ರ ಅನುಸರಿಸಿದರೆ ಸಮಸ್ಯೆ ಬಗೆಹರಿಸುವುದು ಹೇಗೆ? ಆರ್ ಎಸ್ ಎಸ್ ನಾಯಕರನ್ನು ಸಂತೈಸುವುದು ಹೇಗೆ? ಹೀಗೆ ಬಿಎಸ್ ವೈ ನೂರಾರು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ಬಿಎಸ್ ವೈ ಸ್ಫೋಟಗೊಂಡಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಇದನ್ನು ಒಪ್ಪದ ಬಿಜೆಪಿ ಟೀಕಾಕಾರರು ಸ್ವಾಮೀಜಿ ಮೂಲಕ ಬಿಎಸ್ ವೈ ಅವರು ಮೋದಿ-ಶಾಗೆ ತಾನು ಸಿಲುಕಿರುವ ಒತ್ತಡದ ಸನ್ನಿವೇಶದ ಸಂದೇಶ ರವಾನಿಸಿದ್ದಾರೆ. ಬಿಎಸ್ ವೈ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಸ್ವಾಮೀಜಿ ಹೇಳಿರುವುದು ಕೇಂದ್ರ ಹಾಗೂ ಆರ್ ಎಸ್ ಎಸ್ ನಾಯಕರು ನೀಡುತ್ತಿರುವ ಕಿರುಕುಳಕ್ಕೆ ಉತ್ತರಿಸುವ ತಂತ್ರವೇ ಆಗಿದೆ ಎನ್ನಲಾಗುತ್ತಿದೆ. ಅನರ್ಹ ಶಾಸಕರನ್ನು ಗೆಲ್ಲಿಸುವಲ್ಲಿ ಲಿಂಗಾಯತ ಸಮುದಾಯವು ಬಿಎಸ್ ವೈ ಬೆನ್ನಿಗೆ ನಿಂತಿದೆ. ಈ ಮೂಲಕ ಸ್ವಪಕ್ಷದೊಳಗಿನ ಶತ್ರುಗಳಿಗೆ ಸಮಾಜವು ಉತ್ತರಿಸಿದೆ. ಈಗ ಅದೇ ಸಮುದಾಯದ ಸ್ವಾಮೀಜಿಗಳ ಮೂಲಕ ಒತ್ತಡ ಸೃಷ್ಟಿಸಿ ಕಾರ್ಯ ಸಾಧನೆಗೆ ಬಿಎಸ್ ವೈ ಗುಪ್ತ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ. ಲಿಂಗಾಯತ ಸಮುದಾಯವು ಬಿಜೆಪಿಗೆ ನಿಷ್ಠವಾಗಿದೆ. ಇದೇ ಕಾರಣಕ್ಕೆ ಬಿಜೆಪಿಯಲ್ಲಿ 75 ವರ್ಷ ತುಂಬಿದವರಿಗೆ ಸ್ಥಾನಮಾನ ನೀಡುವುದಿಲ್ಲ ಎಂಬ ನಿಯಮವನ್ನು ಸಡಿಲಗೊಳಿಸಿ, ಬಿಎಸ್ ವೈ ಅವರನ್ನು ಮುಖ್ಯಮಂತ್ರಿಯಾಗಿಸಲಾಗಿದೆ. ಈಗ ಸಂಘ ಪರಿವಾರದ ನಾಯಕರ ಆಣತಿಯಂತೆ ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ಸುಲಲಿತವಾಗಿ ಆಡಳಿತ ನಡೆಸಲು, ಸಂಪುಟ ಪುನಾರಚಿಸಲು ಹಾಗೂ ಕೇಂದ್ರದಿಂದ ನೀಡಬೇಕಾದ ಅನುದಾನವನ್ನು ಕಾಲಕ್ಕೆ ತಕ್ಕಂತೆ ಬಿಡುಗಡೆ ಮಾಡದೆ ಕಿರಕುಳ ನೀಡಲಾಗುತ್ತಿದೆ. ರಾಜಕೀಯವಾಗಿ ಬಲಾಢ್ಯರಾಗಿರುವ ಮೋದಿ-ಶಾ ಜೋಡಿಯನ್ನು ಬಿಎಸ್ವೈ ನೇರವಾಗಿ ಟೀಕಿಸಲಾಗದು. ಆದ್ದರಿಂದ ಸಮುದಾಯದ ಮೂಲಕ ಒತ್ತಡ ಸೃಷ್ಟಿಸಿ, ಸಾರ್ವಜನಿಕವಾಗಿ ಅನುಕಂಪ ಸೃಷ್ಟಿಸಿಕೊಳ್ಳುವ ಮೂಲಕ ಸಂಘ ಪರಿವಾರ ಹಾಗೂ ಕೇಂದ್ರ ನಾಯಕತ್ವವನ್ನು ಬಗ್ಗಿಸುವ ಪ್ರತಿತಂತ್ರವನ್ನು ಹಿರಿಯ ರಾಜಕಾರಣಿ ಯಡಿಯೂರಪ್ಪ ಮಾಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ರಾಜಕೀಯ ತಂತ್ರ-ಪ್ರತಿತಂತ್ರಗಳ ಆಟ. ಬಿಎಸ್ ವೈ ಇದರಲ್ಲಿ ಪಳಗಿದ ನಾಯಕ.