ನವದೆಹಲಿ: ವಿಶ್ವದ ಎರಡನೆಯ ಅತಿದೊಡ್ಡ ಆರ್ಥಿಕತೆಯಾಗಿರುವ ಐರೋಪ್ಯ ಒಕ್ಕೂಟದೊಂದಿಗೆ, ವಿಶ್ವದ ನಾಲ್ಕನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾದ ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದವು ಅಮೆರಿಕಾದ ಸುಂಕ ನೀತಿಗೆ ತಿರುಗೇಟು ಎಂದು ಬಣ್ಣಿಸಲಾಗಿದೆ. ಅಷ್ಟಲ್ಲದೇ ಈ ಒಪ್ಪಂದವೂ ಜಾಗತಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದ ಕುರಿತ ಮಾತುಕತೆ ಬಳಿಕ, ಐರೋಪ್ಯ ಪರಿಷತ್ತಿನ ಅಧ್ಯಕ್ಷ ಆ್ಯಂಟೊನಿಯೊ ಕೋಸ್ಟಾ, ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಇದು ವ್ಯಾಪಾರ ಒಪ್ಪಂದ ಮಾತ್ರವಲ್ಲ. ಯುರೋಪ್ ರಾಷ್ಟ್ರಗಳು ಹಾಗೂ ಭಾರತ ಒಟ್ಟಿಗೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ರೂಪಿಸಿರುವ ನೀಲನಕ್ಷೆ’ ಎಂದು ಬಣ್ಣಿಸಿದರು.
ಇದು ಐತಿಹಾಸಿಕ ಒಪ್ಪಂದವಾಗಿದ್ದು, ಭಾರತದ ರೈತರು, ಸಣ್ಣ ಉದ್ದಿಮೆದಾರರಿಗೆ ಯುರೋಪ್ ರಾಷ್ಟ್ರಗಳ ಮಾರುಕಟ್ಟೆ ತೆರೆದುಕೊಳ್ಳಲಿದೆ. ತಯಾರಿಕಾ ಕ್ಷೇತ್ರಕ್ಕೆ ಹೊಸ ಅವಕಾಶಗಳ ಸೃಷ್ಟಿಯಾಗಲಿದೆ, ಸೇವಾ ವಲಯದಲ್ಲಿನ ಸಹಕಾರವನ್ನು ಬಲಪಡಿಸಲಿದೆ.
ಸದ್ಯದ ಜಾಗತಿಕ ಪ್ರಕ್ಷುಬ್ಧ ವಾತಾವರಣದಲ್ಲಿ, ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಐತಿಹಾಸಿಕ ಒಪ್ಪಂದವು, ಅಂತರರಾಷ್ಟ್ರೀಯ ಸುಸ್ಥಿರತೆಯನ್ನು ಬಲಪಡಿಸಲಿದೆ ಎಂದು ಹೇಳಿದರು.
ಇನ್ನು ಮೋದಿ ಉದ್ದೇಶಿಸಿ ಐರೋಪ್ಯ ಪರಿಷತ್ತಿನ ಅಧ್ಯಕ್ಷ ಆ್ಯಂಟೊನಿಯೊ ಕೋಸ್ಟಾ, ನಮ್ಮ
ಮಾತುಕತೆ, ರಾಜತಾಂತ್ರಿಕ ಮಾರ್ಗದ ಮೂಲಕ ಉಕ್ರೇನ್‌ನಲ್ಲಿ ಶಾಂತಿ ನೆಲಸುವಂತಾಗಬೇಕು. ಇದಕ್ಕೆ ಪೂರಕವಾದ ವಾತಾವರಣ ಸೃಷ್ಟಿಗೆ ನೆರವು ನೀಡುವುದನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತೇವೆ ಎಂದು ಹೇಳಿದರು.
ಯುರೋಪ್ ಒಕ್ಕೂಟ ಮತ್ತು ಭಾರತದ ನಡುವಿನ ಮುಕ್ತ ಮಾರುಕಟ್ಟೆ ಒಪ್ಪಂದದಿಂದ ಭಾರತದಿಂದ ರಪ್ತಾಗುವ ಮತ್ತು ಆಮದು ಆಗುವ ಕೆಲ ವಸ್ತುಗಳಿಗೆ ಸುಂಕ ಕಡಿಮೆ ಅಥವಾ ಸುಂಕ ರಹಿತವಾಗಲಿದೆ. ಇದು ವಸ್ತುಗಳ ಬೆಲೆ ಇಳಿಕೆಗೆ ಸಹಕಾರಿಯಾಗಲಿದೆ.












