ಕರೋನಾ ಭೀತಿಯಿಂದಾಗಿ ಜನರು ತಮ್ಮ ತಮ್ಮ ಮನೆಗಳಲ್ಲಿ ತಾವೇ ಬಂಧಿಯಾಗಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಜನತೆ ಮೂರ್ಖರಾಗುತ್ತಿರುವುದು ಇದು ಮೊದಲ ಬಾರಿಯೇನೂ ಅಲ್ಲ. ಹಿಂದೆಯೂ ಪ್ರಧಾನಿ ಮೋದಿ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಜನತೆಗೆ ಅದು ಅಭ್ಯಾಸವಾಗಿದೆ.
ವಿಶೇಷ ಎಂದರೆ ಪ್ರಧಾನಿ ಮೋದಿ ಅವರು ಮೂರ್ಖರ ದಿನದಂದೇ ಅಂದರೆ ‘ಏಪ್ರಿಲ್ 1’ ರಂದೇ ಜನರನ್ನು ‘ಮೂರ್ಖ’ರನ್ನಾಗಿ ಮಾಡಿದ್ದಾರೆ. ಮೋದಿ ನಿಮ್ಮನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಜನರಿಗೆ ಹೇಳಿದರೆ, ಯಾರೋ ಮೂರ್ಖರ ದಿನ ಅದಕ್ಕಾಗಿ ತಮಾಷೆ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾರೆ. ಹೀಗಾಗಿ ಜನರಿಗೆ ತಾವು ಮೂರ್ಖರಾಗಿರುವುದು ಗೊತ್ತಾಗುವುದೇ ಇಲ್ಲ. ಅಷ್ಟರ ಮಟ್ಟಿಗೆ ಪ್ರಧಾನಿ ಮೋದಿ ಅವರ ಚಾಣಾಕ್ಷತನವನ್ನು ಮೆಚ್ಚಲೇಬೇಕು!
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ 18 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ನಡುವೆ ಪ್ರತಿ ಬ್ಯಾರೆಲ್ ಗೆ 20 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿರುವ ಕಚ್ಚಾ ತೈಲ ಬೆಲೆಯು 10 ಡಾಲರ್ ಗೆ ಕುಸಿಯುವ ಸಾಧ್ಯತೆ ಬಗ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ತಜ್ಞರು ಅಂದಾಜಿಸುತ್ತಿದ್ದಾರೆ. ಅಂದರೆ ಜನವರಿ ಆರಂಭದಲ್ಲಿ ಪ್ರತಿ ಬ್ಯಾರೆಲ್ ಗೆ 60 ಡಾಲರ್ ಇದ್ದ ಕಚ್ಚಾ ತೈಲವು ಈಗಾಗಲೇ 20 ಡಾಲರ್ ಗೆ ಕುಸಿದಿದೆ. ಬರುವ ದಿನಗಳಲ್ಲಿ 10 ಡಾಲರ್ ಗೆ ಕುಸಿಯಲೂಬಹುದು.
ಇಂತಹ ಸಂದರ್ಭದಲ್ಲಿ ಇಡೀ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿನ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಗಣನೀಯವಾಗಿ ಕುಸಿದಿದೆ, ಕುಸಿಯುತ್ತಲೇ ಇದೆ. ಆದರೆ, ಕಚ್ಚಾ ತೈಲವು 60 ಡಾಲರ್ ಗಳಿಂದ 20 ಡಾಲರ್ ಗಳಿಗೆ ಕುಸಿದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಯದೇ ಇರುವುದು ಭಾರತದಲ್ಲಿ ಮಾತ್ರ!
ಭಾರತದ ಬಡಪಾಯಿ ಗ್ರಾಹಕನ ದುರಾದೃಷ್ಟ ನೋಡಿ. ಪ್ರಧಾನಿ ನರೇಂದ್ರ ಮೋದಿ ಅವರು ಮೂರ್ಖರ ದಿನದಂದೇ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಏರಿಸಿದ್ದಾರೆ. ಏಪ್ರಿಲ್ 1 ರಿಂದ (ಮಾರ್ಚ್ 31ರ ಮಧ್ಯರಾತ್ರಿ 12ರ ನಂತರ) ಪೆಟ್ರೋಲ್ ಮತ್ತು ಡೀಸೆಲ್ ದರವು ಶೇ.2.30ರಷ್ಟು ಏರಿಕೆಯಾಗಿದೆ. ರೂಪಾಯಿ ಲೆಕ್ಕದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 1.65 ರೂಪಾಯಿ ಏರಿಕೆಯಾಗಿದ್ದರೆ, ಡಿಸೇಲ್ 1.62 ರೂಪಾಯಿ ಜಿಗಿದಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರವು 73.62 ರೂಪಾಯಿಗೆ ಏರಿದೆ. ಮಾರ್ಚ್ 31 ರಂದು ಈ ದರ 71.97 ರೂಪಾಯಿಗಳಷ್ಟಿತ್ತು. ಡಿಸೇಲ್ ದರವು ಮಾರ್ಚ್ 31 ರಂದು 64.41 ರೂಪಾಯಿ ಇದ್ದದ್ದು 66.03 ರೂಪಾಯಿಗೆ ಏರಿದೆ. ನಾವು ಈ ಹಿಂದೆಯೇ ಹೇಳಿದಂತೆ- ಜಗತ್ತಿನಲ್ಲಿ ಕಚ್ಚಾ ತೈಲ ದರವು ಶೂನ್ಯಕ್ಕೆ ಇಳಿದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್ ದರವು 70 ರೂಪಾಯಿಗಿಂತ ಕೆಳಮಟ್ಟಕ್ಕೆ ಮತ್ತು ಡಿಸೇಲ್ ದರವು 60 ರೂಪಾಯಿಗಿಂತ ಕೆಳಮಟ್ಟಕ್ಕೆ ಇಳಿಯಲು ಬಿಡುವುದಿಲ್ಲ!
ಇಡೀ ದೇಶವೇ ಲಾಕ್ ಡೌನ್ ಆಗಿದೆ. ವಿವಿಧ ಮಹಾನಗರಗಳಲ್ಲಿ ಗೂಗಲ್ ನಡೆಸಿರುವ ಸಮೀಕ್ಷೆ ಪ್ರಕಾರ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸುವವರ ಸಂಖ್ಯೆ ಶೇ.75ರಷ್ಟು ತಗ್ಗಿದೆ. ಬೇಡಿಕೆಯೇ ಇಲ್ಲದ ಹೊತ್ತಿನಲ್ಲಿ, ಪ್ರಧಾನಿ ಮೋದಿ ಸರ್ಕಾರ ಏಕಾಏಕಿ 1.65 ರೂಪಾಯಿ ಏರಿಕೆ ಮಾಡಿದೆ. ಸಾಮಾನ್ಯ ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ನಿತ್ಯವೂ 5 ರಿಂದ 25 ಪೈಸೆಗಳವರೆಗೆ ಏರಿಕೆಯಾಗುತ್ತಿತ್ತು. ಈಗ ಧಿಡೀರ್ 1.65 ರೂಪಾಯಿ ಏರಿಕೆಯಾಗಿದೆ. ಲಾಕ್ ಡೌನ್ ಮುಗಿದ ನಂತರ ಗ್ರಾಹಕರು ಬಂಕ್ ಗೆ ತೆರಳಿ ಪೆಟ್ರೋಲ್ ಮತ್ತು ಡಿಸೇಲ್ ಹಾಕಿಸಿಕೊಂಡಾಗಲಷ್ಟೇ ಪ್ರಧಾನಿ ಮೋದಿ ಏಪ್ರಿಲ್ 1 ರಂದು ನೀಡಿದ ಕೊಡುಗೆ ಗೊತ್ತಾಗುತ್ತದೆ.
ಬೆಲೆ ಏರಿಕೆ ಇಷ್ಟಕ್ಕೆ ನಿಲ್ಲೊದಿಲ್ಲಾ..!
ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಇಷ್ಟಕ್ಕೆ ಮುಗಿಯಿತೇ? ಖಂಡಿತಾ ಇಲ್ಲ. ಬರುವ ದಿನಗಳಲ್ಲಿ ಮೋದಿ ಸರ್ಕಾರವು ಇನ್ನೂ 6.35 ರೂಪಾಯಿ ಪೆಟ್ರೋಲ್ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಹೇಗೆಂದರೆ ‘ಕೋವಿಡ್-19’ ಸೋಂಕು ತಡೆಯಲು ಲಾಕ್ ಡೌನ್ ಹೇರುವ ಮುನ್ನಾ ದಿನ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಾನು ಬಯಸಿದ ಯಾವುದೇ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಜ್ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ಅನುವು ಮಾಡಿಕೊಡುವ ನಿಬಂಧನೆಗೆ ಅನುಮೋದನೆ ಪಡೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕದ ಮಿತಿಯನ್ನು ಕ್ರಮವಾಗಿ ಲೀಟರ್‌ಗೆ 18 ಮತ್ತು 12 ರೂಪಾಯಿಗೆ ಏರಿಸಲು ಹಣಕಾಸು ಕಾಯ್ದೆ ಎಂಟನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಲಾಗಿದೆ. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ 2020 ರ ಹಣಕಾಸು ಮಸೂದೆಗೆ ತಿದ್ದುಪಡಿ ಮಸೂದೆಯು ಯಾವುದೇ ಚರ್ಚೆಯಿಲ್ಲದೇ ಅಂಗೀಕಾರವಾಗಿದೆ. ಹಿಂದಿನ ಮಿತಿ ಪೆಟ್ರೋಲ್‌ಗೆ ಲೀಟರ್‌ಗೆ 10 ಮತ್ತು ಡೀಸೆಲ್‌ಗೆ 4 ರೂಪಾಯಿ ಇತ್ತು. ‘ಕೋವಿಡ್-19’ ನಿಂದ ಉದ್ಭವಿಸಿರುವ ಸಂಕಷ್ಟದಿಂದ ಏಕಾಏಕಿ ಬಂದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಸುಂಕ ಹೇರುತ್ತಿರುವುದಾಗಿ ಮೋದಿ ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಂಡಿದೆ. ಮಾರ್ಚ್ 14ರಂದು ಏರಿಸಿದ ಎಕ್ಸೈಜ್ ಸುಂಕ ತಲಾ 3 ರೂಪಾಯಿಗಳಿಂದ ವಾರ್ಷಿಕ 39,000 ಕೋಟಿ ಹೆಚ್ಚುವರಿ ಆದಾಯಗಳಿಸುವ ನಿರೀಕ್ಷೆ ಇದೆ. 3 ರೂಪಾಯಿ ಪೈಕಿ ವಿಶೇಷ ಹೆಚ್ಚುವರಿ ಎಕ್ಸೈಜ್ ಸುಂಕ 2 ರೂಪಾಯಿ ಮತ್ತು ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಮೇಲಿನ ಉಪಕರ (ಸೆಸ್) 1 ರೂಪಾಯಿ ಸೇರಿದೆ.

ಉದ್ದೇಶಿತ ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ಯಾವಾಗ ಬೇಕಾದರೂ 8 ರೂಪಾಯಿ ಏರಿಕೆ ಮಾಡುವ ಅಧಿಕಾರವನ್ನು ನೀಡಿದೆ. ಆ ಅಧಿಕಾರವನ್ನು ಬಳಸಿಕೊಂಡು ನರೇಂದ್ರ ಮೋದಿ ಸರ್ಕಾರವು ದೇಶವ್ಯಾಪಿ ಬೇಡಿಕೆಯೇ ಇಲ್ಲದ ಹೊತ್ತಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಕ್ರಮವಾಗಿ 1.65 ಮತ್ತು 1.62 ರೂಪಾಯಿ ಏರಿಕೆ ಮಾಡಿದೆ. ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಬರುವ ದಿನಗಳಲ್ಲಿ ಇನ್ನೂ ಉಳಿದ ಮೊತ್ತವನ್ನು ಏರಿಕೆ ಮಾಡಲಿದೆ. ಅಂದರೆ, ಪೆಟ್ರೋಲ್ ದರ ಪ್ರಸ್ತುತ 73.62 ರೂಪಾಯಿ ಇದೆ. ಇದೇ ಗರಿಷ್ಠ ಮೊತ್ತವಲ್ಲ. ಈಗಾಗಲೇ ಸಂಸತ್ತಿನಲ್ಲಿ ಅನುಮೋದನೆ ಪಡೆದಿರುವ 8 ರೂಪಾಯಿಗಳಷ್ಟನ್ನೂ ಏರಿಕೆ ಮಾಡಿದರೆ ಪೆಟ್ರೋಲ್ ದರವು 80 ರೂಪಾಯಿಗೆ, ಡಿಸೇಲ್ ದರವು 73.50 ರ ಆಜುಬಾಜಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ಬಡಪಾಯಿ ಗ್ರಾಹಕರನ್ನು ಮತ್ತಷ್ಟು ಮೂರ್ಖರನ್ನಾಗಿ ಮಾಡಲಿದ್ದಾರೆ!