ಅಯೋಧ್ಯೆ ಭೂವಿವಾದದಲ್ಲಿ ರಾಮಮಂದಿರ ಪರ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ ಬಳಿಕ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯಾಗಿ ಮಂದಿರ ನಿರ್ಮಾಣ ಕಾರ್ಯಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆಯಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದಲೇ ಅದು ಕಾಗೆ ಕಷ್ಟಪಟ್ಟು ಕಟ್ಟಿದ್ದ ಗೂಡಿನಲ್ಲಿ ಕೋಗಿಲೆ ಬಂದು ಮೊಟ್ಟೆ ಇಟ್ಟು ಹೋದಂತಾಗಿದೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಾರಣೀಭೂತರಾದವರು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವುದು ಸ್ವತಃ ಬಿಜೆಪಿ ಪಕ್ಷ ಹಾಗೂ ವಿರೋಧ ಪಕ್ಷಗಳ ವಿರೋಧಕ್ಕೂ ಕಾರಣವಾಗಿದೆ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ 235 ಅಡಿ ಅಗಲ, 360 ಅಡಿ ಉದ್ದ ಇರಲಿದ್ದು, ಬರೋಬ್ಬರಿ 161 ಅಡಿ ಎತ್ತರದ ಮಂದಿರ ನಿರ್ಮಾಣವಾಗಲಿದೆ. ಇದಕ್ಕಾಗಿ 25 ಅಡಿ ಆಳದ ಅಡಿಪಾಯವನ್ನೂ ಹಾಕಲಾಗುತ್ತದೆ. ಇದರ ಮೇಲೆ 6 ಅಡಿಯ ಅಡಿಪಾಯ ಹಾಕಿ ಸ್ತಂಭಗಳನ್ನು ನಿರ್ಮಾಣ ಮಾಡಲಾಗುತ್ತದೆ. ರಾಮಮಂದಿರ ನಿರ್ಮಾಣ ಯೋಜನೆಯಂತೆ 25 ಅಡಿ ತಳಪಾಯ ಹಾಕಿದ ನಾಯಕರು ಇಂದಿನ ಕಾರ್ಯಕ್ರಮದಿಂದ ದೂರವಾಗಿದ್ದಾರೆ. ಆದರೆ, ಮೇಲ್ಭಾಗದ 6 ಅಡಿ ತಳಪಾಯ ಹಾಕಿದವರು ಹೆಸರು ಹಾಕಿಸಿಕೊಳ್ಳುವಂತಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಸುಮಾರು 17 ಅಡಿ ಎತ್ತರದ 106 ಸ್ತಂಭಗಳ ಆಧಾರದ ಮೇಲೆ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಯೋಜನೆ ರೂಪುಗೊಂಡಿದೆ. ಇದರಲ್ಲಿ ನೆಲಮಾಳಿಗೆ ಛಾವಣಿಯಲ್ಲಿ ಗರ್ಭಗುಡಿ ಇರಲಿದೆ ಎನ್ನಲಾಗಿದೆ. ಬಿಜೆಪಿಯನ್ನು ಇಷ್ಟು ಪ್ರಭಲವಾಗುವಂತೆ ಕಟ್ಟಲು ಸ್ಥಂಭಗಳಾಗಿ ನಿಂತಿದ್ದ ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಇಂದಿನ ಭೂಮಿಪೂಜೆಯಲ್ಲಿ ಪ್ರಮುಖರಾಗಿ ಪಾಲ್ಗೊಳ್ಳಬೇಕಿತ್ತು. ಆದರೆ ವಿಪರ್ಯಾಸ, ಆ ಇಬ್ಬರ ಹೋರಾಟ ಕೇವಲ ಇತಿಹಾಸವಾಗಿ ಉಳಿದುಕೊಂಡಿತು. ಆ ಇತಿಹಾಸದ ಪುಟಗಳ ಪ್ರಮುಖ ಹಾಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹೆಸರು ಅಚ್ಚೊತ್ತಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
80ರ ದಶಕದ ತನಕ ಕೇವಲ ಹಿಂದೂಪರ ಸಂಘಟನೆಗಳು ಹಾಗೂ ವಿಶ್ವ ಹಿಂದೂ ಪರಿಷತ್ ನಡೆಸುತ್ತಿದ್ದ ಹೋರಾಟವನ್ನು ಸ್ವತಃ ಬಿಜೆಪಿ ಕೈಗೆತ್ತಿಕೊಂಡಿತ್ತು. ಸ್ವತಃ ಲಾಲ್‌ಕೃಷ್ಣ ಅಡ್ವಾಣಿ ಹೋರಾಟಕ್ಕೆ ಅಣಿಯಾದರು. 1990ರ ಸೆಪ್ಟೆಂಬರ್ 25ರಂದು ಸೋಮನಾಥ ದೇವಾಲಯದಿಂದ ಅಯೋಧ್ಯೆಗೆ ರಾಮರಥ ಯಾತ್ರೆ ಶುರು ಮಾಡಿದ್ದರು. ಪ್ರತಿ ದಿನ 300 ಕಿಲೋ ಮೀಟರ್ ದೂರ ಕ್ರಮಿಸುವ ಯೋಜನೆ ಹಾಕಿಕೊಂಡಿದ್ದ ಆಯೋಜಕರು ಹತ್ತಾರು ಹಳ್ಳಿಗಳಲ್ಲಿ ಬಹಿರಂಗ ಭಾಷಣ ಮಾಡುತ್ತಾ ಜನರನ್ನು ಜಾಗೃತಗೊಳಿಸವ ಕೆಲಸ ಮಾಡಲಾಯ್ತು. ಪ್ರಚೋದಿತ ಭಾಷಣಗಳಿಂದ ಅಲ್ಲಲ್ಲಿ ಗಲಭೆಗಳೂ ನಡೆದವು, ಬಿಹಾರದಲ್ಲಿ ಲಾಲ್ ಕೃಷ್ಣ ಅಡ್ವಾಣಿಯನ್ನು ಬಂಧಿಸಿ ಅತಿಥಿ ಗೃಹದಲ್ಲಿಡಲಾಗಿತ್ತು. ಬಂಧನದ ಬಳಿಕವೂ ಅಯೋಧ್ಯೆಯತ್ತ ಹೊರಟ ಕಾರ್ಯಕರ್ತರ ದಂಡನ್ನು ತಡೆದ ಉತ್ತರ ಪ್ರದೇಶ ಸರ್ಕಾರ ಒಂದೂವರೆ ಲಕ್ಷ ಜನರನ್ನು ಬಂಧನ ಮಾಡಿತ್ತು. ಇದೇ ಕಾರಣದಿಂದ ವಿ.ಪಿ ಸಿಂಗ್ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಕೊಟ್ಟಿದ್ದ ಬಾಹ್ಯ ಬೆಂಬಲವನ್ನು ವಾಪಸ್ ಪಡೆಯಲಾಯ್ತು.ಈ ಎಲ್ಲಾ ಘಟನೆಗಳು 1991ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಲಾಭವಾಗಿ ಪರಿಣಮಿಸಿತ್ತು.
ಕೇವಲ ವಿಶ್ವ ಹಿಂದೂ ಪರಿಷತ್‌ಗೆ ಬೆಂಬಲ ಸೂಚಿಸುವ ಉದ್ದೇಶಕ್ಕಾಗಿ ಕೈಗೆತ್ತಿಕೊಂಡ ರಾಮರಥ ಯಾತ್ರೆ, ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಅಭೂತಪೂರ್ವ ಯಶಸ್ಸು ತಂದುಕೊಟ್ಟಿತು. ಜೊತೆಗೆ ಬಿಜೆಪಿ ಅದೃಷ್ಟವೇ ಖುಲಾಯಿಸಿತು. ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ ಸೇರಿದಂತೆ ದೇಶದ ಸಾಕಷ್ಟು ರಾಜ್ಯಗಳಲ್ಲಿ ಬಿಜೆಪಿ ಅತಿ ಹೆಚ್ಚಿನ ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾಗಿತ್ತು. ಮತಗಳಿಕೆಯ ಪ್ರಮಾಣ ದ್ವಿಗುಣವಾಗಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬಂತು. ನಂತರ 1992ರಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಕರಸೇವಕರ ಪಡೆ ಡಿಸೆಂಬರ್ 6ರಂದು ವಿವಾದಕ್ಕೆ ಕಾರಣವಾಗಿದ್ದ ಕಟ್ಟಡವನ್ನು ಧ್ವಂಸ ಮಾಡಿದ್ದರು.
ರಾಮಮಂದಿರ ನಿರ್ಮಾಣಕ್ಕೆ ಇಷ್ಟೆಲ್ಲಾ ಮಾಡಿದ ಲಾಲ್‌ಕೃಷ್ಣ ಅಡ್ವಾಣಿ ಅವರನ್ನು ಇಂದಿನ ಕಾರ್ಯಕ್ರಮಕ್ಕೆ ಕರೆದು ಅವರಿಂದಲೇ ಪೂಜೆ ಕಾರ್ಯ ನೆರವೇರಿಸಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಆದರೆ ಅವರೆಲ್ಲಾ ಹೋರಾಟ ಮಾಡಿದರು. ಇತ್ತೀಚಿಗೆ ಪ್ರವರ್ಧಮಾನಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿ ಜೈ ಶ್ರೀರಾಮ್ ಎಂದಿದ್ದಾರೆ. ತನ್ನ ಹೋರಾಟದ ದಿನಗಳನ್ನು ಮೆಲುಕು ಹಾಕುತ್ತಾ ಅವರು ಭಾಷಣ ಬಿಗಿಯುವಾಗ ಆ ಹಿರಿಯ ಜೀವಗಳು ಅದೆಷ್ಟು ನೋವನ್ನು ಅದುಮಿಟ್ಟುಕೊಂಡಿವೆಯೋ ಆ ಶ್ರೀರಾಮನೇ ಬಲ್ಲ.
ಕರೋನಾ ಸೋಂಕಿನಿಂದ ಇಡೀ ದೇಶವೇ ಬಳಲುತ್ತಿದೆ. ಕರ್ನಾಟಕ ಸೇರಿದಂತೆ ಕೆಲವು ಕಡೆಗಳಲ್ಲಿ ಚಿಕಿತ್ಸೆ ಸಿಗದೆ ಜನರು ಪರದಾಡುವಂತಾಗಿದೆ. ಆರ್ಥಿಕವಾಗಿ ಬಡವಾಗಿ ಹೋಗಿರುವ ದೇಶದಲ್ಲಿ ವೆಂಟಿಲೇಟರ್, ಆಸ್ಪತ್ರೆಯ ಬೆಡ್‌ಗಳ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗದೇ ಇರುವಾಗ, ಭವ್ಯವಾಗಿ ಶಿಲಾನ್ಯಾಸ ಕಾರ್ಯಕ್ರಮ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಶ್ರೀರಾಮನ ಮಂದಿರ ನಿರ್ಮಾಣದಲ್ಲಿ ಬೆಳ್ಳಿ ಹಾಗೂ ಚಿನ್ನದ ಇಟ್ಟಿಗೆ ಬಳಸಿ ಭೂಮಿ ಪೂಜೆ ನೆರವೇರಿಸಲಾಗಿದೆ. ಇದು ಭಾರತದ ಶ್ರೀಮಂತಿಕೆ ಪ್ರದರ್ಶನವೋ ಅಥವಾ ಶ್ರೀರಾಮನು ರಾಜನಾಗಿದ್ದ ಎನ್ನುವ ಕಾರಣಕ್ಕೆ ಈ ರೀತಿಯ ಆಲೋಚನೆ ಮಾಡಿದ್ದಾರೆಯೋ ಎನ್ನುವುದು ಇನ್ನೂ ಅರ್ಥವಾಗದ ಪ್ರಶ್ನೆಯಾಗಿದೆ.
ರಾಮ ಮಂದಿರ ನಿರ್ಮಾಣಕ್ಕಾಗಿ 1989ರಲ್ಲಿ ದೇಶಾದ್ಯಂತ ಇಟ್ಟಿಗೆ ಸಂಗ್ರಹ ಮಾಡುವ ಕೆಲಸ ಮಾಡಿತ್ತು. ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಿಸುವ ಉದ್ದೇಶದಿಂದ ದೇಶದ ಎಲ್ಲಾ ರಾಜ್ಯಗಳಿಂದಲೂ ಇಟ್ಟಿಗೆ ಸಂಗ್ರಹ ಅಭಿಯಾನ ನಡೆಸಲಾಗಿತ್ತು. ಶಿಲಾನ್ಯಾಸಕ್ಕೆ ಅಂದಿನ ಸರ್ಕಾರ ಅನುಮತಿಯನ್ನೂ ನೀಡಿತ್ತು. ನವೆಂಬರ್ 1989 ರಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮವೂ ನಡೆದಿತ್ತು. ಆದರೆ, ಶ್ರೀರಾಮನ ಮಂದಿರ ನಿರ್ಮಾಣ ಆಗಲಿಲ್ಲ. ಆ ಬಳಿಕ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಂದು ಇಟ್ಟಿಗೆ 11 ರೂಪಾಯಿ ಕಾಣಿಕೆ ರೂಪದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೊಡುವಂತೆ ಕರೆ ನೀಡಿದ್ದರು. ಆಗಲೂ ಇಟ್ಟಿಗೆ ಸಂಗ್ರಹವಾಗಿದೆ. ಸಂಗ್ರಹ ಮಾಡಿದ್ದ ಇಟ್ಟಿಗೆಗಳು ಏನಾದವೂ..? ಈಗ ರಾಮ ಮಂದಿರ ನಿರ್ಮಾಣದಲ್ಲಿ ಬಳಸಲಾಗುತ್ತದೆಯೇ..? ಎಂದರೆ ಇಲ್ಲ.

ರಾಜಸ್ಥಾನದ ಭರತ್ಪುರದ ಕಲ್ಲುಗಳನ್ನು ಬಳಸಿ ಕೆತ್ತನೆ ಮಾಡಿಸಲಾಗ್ತಿದ್ದು, ಕೇವಲ ಕಲ್ಲುಗಳಿಂದಲೇ ಶ್ರೀರಾಮನ ಮಂದಿರ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಶೇಕಡ 70ರಷ್ಟು ಕಲ್ಲುಗಳ ಕೆತ್ತನೆ ಕಾರ್ಯ ಮುಕ್ತಾಯವಾಗಿದೆ. 100 ರಿಂದ 120 ಎಕರೆಯಲ್ಲಿ ವಿಸ್ತೀರ್ಣದಲ್ಲಿ ನಿರ್ಮಾಣ ಆಗುತ್ತಿರುವ ನಾಗರ ಶೈಲಿಯ 3 ಅಂತಸ್ತು, 1 ಶಿಖರ, 5 ಮಂಟಪ ಇರಲಿದೆ. ಶಿಖರ ಗರ್ಭಗೃಹ, ಕಳಶ, ಗೋಪುರ, ರಥ, ಮಂಟಪ, ಅರ್ಥಮಂಟಪ, ಪರಿಕ್ರಮ ತೋರಣ, ಪ್ರದಕ್ಷಿಣೆ ಜಾಗವೆಂದು 17 ವಿಭಾಗ ಮಾಡಲಾಗಿದೆ. ಎಲ್ಲವೂ ಕಲ್ಲಿನಿಂದಲೇ ನಿರ್ಮಾಣ ಆಗುತ್ತಿದ್ದು, ಇಟ್ಟಿಗೆಗಳನ್ನು ಬಳಸುವುದಿಲ್ಲ ಎನ್ನಲಾಗಿದೆ.
ಇವೆಲ್ಲಕ್ಕೂ, ಸಮರ್ಥಕರಿಂದ ಉತ್ತರ ಸಿದ್ಧವಾಗಿದೆ. ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಅವರಿಗೆ ವಯಸ್ಸಾಗಿದೆ. 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಬರಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆ ಕಾರಣಕ್ಕಾಗಿ ಅಡ್ವಾಣಿ ಭಾಗಿಯಾಗಿಲ್ಲ ಎನ್ನಬಹುದು. ಆದರೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಯಸ್ಸು ಕೂಡಾ 60 ದಾಟಿದೆ ಎಂಬುದನ್ನೂ ಗಮನದಲ್ಲಿಡಬೇಕಿತ್ತು.
ರಾಮ ಮಂದಿರ ಭೂಮಿ ಪೂಜೆಯಲ್ಲಿ 40 ಕೆಜಿ ಬೆಳ್ಳಿ ಇಟ್ಟಿಗೆ ಇಡಲಾಗಿದೆ. ಇಷ್ಟೇ ಅಲ್ಲದೆ ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷ 11 ಬೆಳ್ಳಿ ಇಟ್ಟಿಗೆ ಕೊಡುವುದಾಗಿ ಕಮಲ್‌ನಾಥ್ ಘೋಷಣೆ ಮಾಡಿದ್ದರು. ತಮಿಳುನಾಡಿನಿಂದ ಒಂದು ಬೆಳ್ಳಿ ಹಾಗೂ ಒಂದು ಚಿನ್ನದ ಇಟ್ಟಿಗೆ ಕಳುಹಿಸಲಾಗಿದೆ. ಆದರೆ ಶ್ರೀರಾಮ ಜನ್ಮಭೂಮಿಯಲ್ಲಿ ಇಷ್ಟು ಪ್ರಮಾಣದ ಬೆಳ್ಳಿ ಹಾಗೂ ಚಿನ್ನದ ಇಟ್ಟಿಗೆಯನ್ನು ತಳಪಾಯಕ್ಕೆ ಸೇರಿಲಾಗುತ್ತದೆಯೇ ಎಂದರೆ ಇಲ್ಲ.
ಕೇವಲ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಕಾರ್ಯಕ್ರಮ ಎನ್ನುವ ಕಾರಣಕ್ಕೆ ಬೆಳ್ಳಿ ಇಟ್ಟಿಗೆಯನ್ನು ಇಟ್ಟು ಪೂಜೆ ಮಾಡಲಾಯ್ತು. ಆದರೆ ಆ ಬಳಿಕ ಬೆಳ್ಳಿ ಇಟ್ಟಿಗೆಯನ್ನು ಕಿತ್ತು ಕಲ್ಲಿನಿಂದಲೇ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗಿದೆ. ಟ್ರಸ್ಟ್‌ನ ಬ್ಯಾಂಕ್ ಲಾಕರ್‌ಗೆ ಬೆಳ್ಳಿ ಹಾಗೂ ಚಿನ್ನದ ಇಟ್ಟಿಗೆ ರವಾನಿಸಲಾಗುತ್ತದೆ ಎನ್ನುವ ಮಾಹಿತಿ ಇದೆ. ಫಂಡ್ ಸಂಗ್ರಹಕ್ಕೆ ಟ್ರಸ್ಟ್ ಈ ರೀತಿಯ ಯೋಜನೆ ಮಾಡಿದೆ ಎಂದು ಸಮರ್ಥನೆ ಮಾಡಿಕೊಳ್ಳಬಹುದು. ಆದರೆ ಪೂಜೆಗಿಟ್ಟ ಕಲ್ಲನ್ನು ಕೀಳುವುದು ಸರಿಯಲ್ಲ ಎನ್ನುವುದು ಹಿಂದೂಗಳ ಭಾವನೆಗೆ ಧಕ್ಕೆಯಾಗದೇ?