ಅಸ್ಸಾಂನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ನಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ – ಎನ್ ಆರ್ ಸಿ) ಪ್ರಕ್ರಿಯೆಯಿಂದಾಗಿ ಬಾಂಗ್ಲಾದೇಶದಿಂದ ವಲಸೆ ಬಂದಿರುವ ಮುಸ್ಲಿಮರಿಗಷ್ಟೇ ತೊಂದರೆಯಾಗಿಲ್ಲ, ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲೇ ನೆಲೆಸಿರುವ ಗೋರ್ಖಾ ಸಮುದಾಯದವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 25 ಲಕ್ಷದಷ್ಟು ಜನಸಂಖ್ಯೆಯ ಗೋರ್ಖಾ ಸಮುದಾಯದ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಎನ್ ಆರ್ ಸಿ ಪಟ್ಟಿಯಿಂದ ಹೊರಗಿಡಲಾಗಿದೆ.
‘ಇವರು ಮತದಾರರು ಎಂಬುದು ಖಚಿತವಾಗಿಲ್ಲ ಎಂಬುದಾಗಿ ಯಾವುದೇ ಕಾರಣವಿಲ್ಲದೆ ಈ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿದೆ’ ಎಂದು ಭಾರತೀಯ ಗೋರ್ಖಾ ಪರಿಸಂಘ (ಬಿಜಿಪಿ) ದೂರಿದೆ. ಪಟ್ಟಿಯಿಂದ ಹೊರಗಿಡಲಾಗಿರುವ ಜನರಿಗೆ ನೋಟಿಸ್ ಸಹ ಜಾರಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
Also Read: ಎನ್.ಆರ್.ಸಿ. – ತಾನು ಹೆಣೆದ ಬಲೆಗೆ ತಾನೇ ಸಿಲುಕಿತೇ ಬಿಜೆಪಿ?
“ನಾವು ಭಾರತೀಯ ನಾಗರಿಕರು ಎಂಬುದನ್ನು ಸಾಬೀತುಪಡಿಸಲು ನಮ್ಮ ಬಳಿ ಎಲ್ಲಾ ಅಗತ್ಯ ದಾಖಲೆಗಳಿವೆ. ವಿದೇಶಿಯರ ನ್ಯಾಯಮಂಡಳಿಯಲ್ಲಿ ಗೋರ್ಖಾ ಜನರನ್ನು ವಿಚಾರಣೆಗೊಳಪಡಿಸುವುದನ್ನು ಸಹಿಸಲಾಗುವುದಿಲ್ಲ. ಅದು ನಮಗೆ ಮಾಡುವ ಅವಮಾನ. ಗೋರ್ಖಾ ಜನರ ಪೌರತ್ವ ಪ್ರಶ್ನೆ ಮಾಡಿರುವ ಮತ್ತು ನೇಪಾಳಿ ಭಾಷೆ ಮಾತನಾಡುವ ಜನರನ್ನು ವಿದೇಶಿಯರ ನ್ಯಾಯಮಂಡಳಿಯಲ್ಲಿ ವಿಚಾರಣೆಗೊಳಪಡಿಸುವ ಎನ್ ಆರ್ ಸಿ ವ್ಯವಸ್ಥೆ ವಿರುದ್ಧ ಮಾನನಷ್ಟ ದಾವೆ ಹೂಡಲಾಗುವುದು” ಎಂದು ಬಿಜಿಪಿ ರಾಷ್ಟ್ರೀಯ ಅಧ್ಯಕ್ಷ ಸುಖ್ಮಾನ್ ಮೊಕ್ತಾನ್ ಎಚ್ಚರಿಸಿದ್ದಾರೆ.

“ಅಸ್ಸಾಂನಲ್ಲಿರುವ ಗೋರ್ಖಾ ಜನರಿಗೆ ಬಹಳ ದೀರ್ಘ ಇತಿಹಾಸವಿದೆ. ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳ ಸರ್ಕಾರದ ನಡುವೆ 1815 ರಲ್ಲಿ ನಡೆದ ಸುಗೌಲಿ ಒಪ್ಪಂದವು ಅಸ್ಸಾಂನಲ್ಲಿರುವ ಗೋರ್ಖಾ ಜನರ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಬ್ರಿಟಿಷರು 1815 ರಲ್ಲೇ ಅಸ್ಸಾಂ ಲೈಟ್ ಇನ್ಫ್ಯಾಂಟ್ರಿಗೆ ಗೋರ್ಖಾ ಜನರನ್ನು ನೇಮಕ ಮಾಡಿಕೊಂಡಿದ್ದರು.
ಸಂವಿಧಾನದ 5ನೇ ವಿಧಿಯಲ್ಲಿರುವ ಯಾವುದೇ ಷರತ್ತುಗಳನ್ನು ಪೂರೈಸುವ ಗೋರ್ಖಾ ಸಮುದಾಯದ ಸದಸ್ಯರನ್ನು ಭಾರತೀಯ ನಾಗರಿಕರೆಂದೇ ಪರಿಗಣಿಸಬೇಕು ಮತ್ತು ವಿದೇಶಿಯರ ನ್ಯಾಯಮಂಡಳಿ ವಿಚಾರಣೆಗೆ ಕಳುಹಿಸಬಾರದು ಎಂಬುದಾಗಿ ಗೃಹ ಸಚಿವಾಲಯದ ವಿದೇಶಾಂಗ ವಿಭಾಗವು ಕಳೆದ 2018 ಸೆಪ್ಟೆಂಬರ್ ತಿಂಗಳಲ್ಲೇ ಸ್ಪಷ್ಟ ನಿರ್ದೇಶನ ನೀಡಿದೆ.
“ಸಂವಿಧಾನ ಅನುಷ್ಠಾನವಾದ ಸಂದರ್ಭದಲ್ಲಿ ಭಾರತೀಯ ನಾಗರಿಕರಾಗಿದ್ದ, ಅಥವಾ ಹುಟ್ಟಿನಿಂದ ಭಾರತೀಯ ನಾಗರಿಕರಾಗಿರುವ, ಅಥವಾ ನೋಂದಣಿ ಮೂಲಕ ಭಾರತೀಯ ಪೌರತ್ವ ಪಡೆದಿರುವ ಅಥವಾ ಭಾರತೀಯ ಪೌರತ್ವ ಕಾಯ್ದೆ 1955ರ ನಿಬಂಧನೆಗಳ ಅನುಸಾರ ದೇಶೀಕರಣಗೊಂಡಿರುವರಾರೂ ವಿದೇಶಿಯರ ಕಾಯ್ದೆ 1946 ರ ಪರಿಚ್ಛೇದ 2(ಎ) ನಿಯಮಗಳನ್ವಯವಾಗಲೀ ಅಥವಾ ವಿದೇಶಿಯರ ನೋಂದಣಿ ಕಾಯ್ದೆ 1939ರ ನಿಯಮಗಳನ್ವಯವಾಗಲಿ ‘ವಿದೇಶಿಯರಲ್ಲ’. ಆದ್ದರಿಂದ ಇಂತಹ ಪ್ರಕರಣಗಳನ್ನು ವಿದೇಶಿಯರ ನ್ಯಾಯಮಂಡಳಿಗೆ ಕಳುಹಿಸಬಾರದು” ಎಂಬುದಾಗಿ ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿ ಸ್ಪಷ್ಟಪಡಿಸಿದೆ.

ಆದಾಗ್ಯೂ, ಈ ಅಧಿಸೂಚನೆಯ ಅನುಷ್ಠಾನದ ವಿಷಯದಲ್ಲಿ ಅಸ್ಸಾಂ ಸರ್ಕಾರವು ಸೋಮಾರಿತನ ಪ್ರದರ್ಶಿಸುತ್ತಿದೆ ಎಂಬುದು ಬಿಜಿಪಿಯ ಆರೋಪವಾಗಿದೆ. ಗುವಾಹಟಿ ಹೈಕೋರ್ಟ್ ನ ವಿದೇಶಿಯರ ನ್ಯಾಯಮಂಡಳಿ ಉಸ್ತುವಾರಿ ಪೀಠದ ಎದುರು ಅಸ್ಸಾಂ ಸರ್ಕಾರವು ಈ ಸಂಬಂಧ ಮಧ್ಯಸ್ಥಿಕೆ ಅರ್ಜಿ ಸಲ್ಲಿಸಿತ್ತು. ಆದರೆ ಪೀಠವು, ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲವೆಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿದೆ. ರಾಜ್ಯ ಸರ್ಕಾರವು ವಿದೇಶಿಯರ ವಿಭಾಗೀಯ ಪೀಠದ ಎದುರು ಅರ್ಜಿ ಸಲ್ಲಿಸಿದ್ದಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿರುವ ಬಿಜಿಪಿ ನಾಯಕರು, ಈ ಸಂಬಂಧ ಕೇಂದ್ರ ಸರ್ಕಾರದ ನಿರ್ದೇಶನದನ್ವಯ ತನ್ನ ಕರ್ತವ್ಯ ನಿರ್ವಹಿಸದಿದ್ದರೆ ಅಸ್ಸಾಂ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಲು ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯ ಮಾತುಗಳನ್ನೂ ಆಡಿದ್ದಾರೆ.
ಎನ್ ಆರ್ ಸಿ ಪಟ್ಟಿಯಿಂದ ಹೊರಗುಳಿದಿರುವವರಲ್ಲಿ ಸಾಮಾನ್ಯರಷ್ಟೇ ಅಲ್ಲದೆ, ಕೆಲ ಖ್ಯಾತನಾಮರು ಸೇರಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿದ್ದ ಛಬಿಲಾಲ್ ಉಪಾಧ್ಯಾಯ ಅವರ ಮೊಮ್ಮಗಳು ಮಂಜು ದೇವಿ ಮತ್ತು ಅವರ ಇಬ್ಬರು ಮಕ್ಕಳನ್ನು ಸಹ ಪಟ್ಟಿಯಿಂದ ಹೊರಗಿಡಲಾಗಿದೆ. ಆದರೆ ಮಂಜು ದೇವಿ ಅವರ ಪತಿಯ ಹೆಸರು ಮಾತ್ರ ಪಟ್ಟಿಯಲ್ಲಿ ಸೇರಿದೆ.

ಎನ್ ಆರ್ ಸಿ ಪಟ್ಟಿಯಿಂದ ಹೊರಗಿಡಲ್ಪಟ್ಟಿರುವ ಗೋರ್ಖಾ ಸಮುದಾಯದ ಮತ್ತೊಂದು ಪ್ರಮುಖ ಹೆಸರೆಂದರೆ, ಸಾಹಿತಿ ದುರ್ಗಾ ಖಾತಿವಾಡ ಅವರದು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಇವರ ಹೆಸರನ್ನು 1990 ರ ದಶಕದ ಖಚಿತವಲ್ಲದ ಮತದಾರ ಎಂಬುದಾಗಿ ಹೆಸರಿಸಿ ಪಟ್ಟಿಯಿಂದ ಕೈ ಬಿಡಲಾಗಿದೆ. ಆಶ್ಚರ್ಯ ಎಂದರೆ, ವಿದೇಶಿಯರ ನ್ಯಾಯಮಂಡಳಿಯು 2015 ರಲ್ಲಿ ದುರ್ಗಾ ಖಾತಿವಾಡ ಅವರನ್ನು ಭಾರತೀಯ ನಾಗರಿಕ ಎಂಬುದಾಗಿ ಘೋಷಿಸಿದೆ. ಇವರ ಹೆಸರನ್ನು ಎನ್ ಆರ್ ಸಿ ಪಟ್ಟಿಯ ಅಂತಿಮ ಕರಡಿನಲ್ಲಿ ಸೇರಿಸಲಾಗಿತ್ತಾದರೂ, ವರ್ಷದ ನಂತರ ಬಿಡುಗಡೆ ಮಾಡಿರುವ ಹೆಚ್ಚುವರಿ ಪಟ್ಟಿಯಿಂದ ಕೈಬಿಡಲಾಗಿದೆ.
“ಹಿಂದು, ಸಿಖ್, ಜೈನ, ಬುದ್ಧ ಮತ್ತು ಕ್ರೈಸ್ತ ನಿರಾಶ್ರಿತರನ್ನು ದೇಶ ಬಿಡುವಂತೆ ಒತ್ತಾಯಿಸುವುದಿಲ್ಲ” ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಭರವಸೆ ನೀಡಿ ಬಂದಿದ್ದಾರೆ. ಅವರ ಹೇಳಿಕೆಯಲ್ಲಿ ಮುಸ್ಲಿಮರಿಗೆ ಸ್ಥಾನ ಸಿಕ್ಕಿಲ್ಲ. ಹಾಗೆಯೇ ನೇಪಾಳಿಗಳಿಗೂ ಜಾಗ ಸಿಗುವುದಿಲ್ಲವೇ..?
ಕೃಪೆ: ದಿ ವೈರ್