ಸಾಲು ಸಾಲು ಪರಿಸರ ವಿರೋಧಿ ನೀತಿ- ನಿಲುವುಗಳ ಮೂಲಕವೇ ಪರಿಸರಪ್ರಿಯರು ಮತ್ತು ಜನಸಾಮಾನ್ಯರ ತೀವ್ರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿರುವ ರಾಜ್ಯ ಸರ್ಕಾರ, ಇದೀಗ ಮತ್ತೊಂದು ಪರಿಸರ ವಿರೋಧಿ ತೀರ್ಮಾನಕ್ಕೆ ಮುಂದಾಗಿರುವುದು ವಿಶೇಷವಾಗಿ ಮಲೆನಾಡಿನಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್(ಎಂಪಿಎಂ) ಗೆ ಅಗತ್ಯ ಕಚ್ಛಾವಸ್ತು ಸರಬರಾಜಿಗಾಗಿ ಅಕೇಶಿಯಾ ಬೆಳೆಯಲು ನಲವತ್ತು ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದ್ದ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿಯ ಬರೋಬ್ಬರಿ 82 ಸಾವಿರ ಎಕರೆ ಅರಣ್ಯ ಪ್ರದೇಶದ ಗುತ್ತಿಗೆ ಅವಧಿ ಈಗ ಮುಗಿಯುತ್ತಿದೆ. ಮತ್ತೊಂದು ಕಡೆ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದ ಕಾರ್ಖಾನೆಯೇ ಸ್ಥಗಿತಗೊಂಡು ವರ್ಷಗಳೇ ಉರುಳಿವೆ. ಆದರೆ, ಕಾರ್ಖಾನೆಯೇ ಸ್ಥಗಿತಗೊಂಡಿದ್ದರೂ, ಮತ್ತೆ ಕಾರ್ಖಾನೆ ಆರಂಭದ ಸಾಧ್ಯತೆಗಳೂ ಕ್ಷೀಣಿಸಿದ್ದರೂ ಸರ್ಕಾರ, ಕಾರ್ಖಾನೆ ಆರಂಭಕ್ಕೆ ಆಸಕ್ತಿ ತೋರುವ ಬದಲಾಗಿ, ಎಂಪಿಎಂ ಹೆಸರಲ್ಲಿ ಮತ್ತೆ ಮೂರು ಜಿಲ್ಲೆಗಳ ವ್ಯಾಪ್ತಿಯ ಬಹುದೊಡ್ಡ ಪ್ರಮಾಣದ ಅರಣ್ಯ ಪ್ರದೇಶವನ್ನು ಲಾಭದ ದಂಧೆಗೆ ಬಳಸಲು ಮುಂದಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಲೆನಾಡಿನ ಸಹಜ ಅರಣ್ಯ ನಾಶದ ಪ್ರಮುಖ ಕಾರಣಗಳಲ್ಲಿ ಈ ಎಂಪಿಎಂ ನೆಡುತೋಪುಗಳ ಪಾತ್ರ ಕೂಡ ದೊಡ್ಡದಿದೆ. ನೈಸರ್ಗಿಕ ಕಾಡುಗಳನ್ನು ನಾಶ ಮಾಡಿ 35-40 ವರ್ಷಗಳಿಂದ ಅಕೇಶಿಯಾ ಏಕಜಾತಿ ನೆಡುತೋಪುಗಳನ್ನು ನಿರ್ಮಾಣ ಮಾಡುವ ಮೂಲಕ ಅರಣ್ಯ ಇಲಾಖೆ ಮತ್ತು ಕಂಪನಿ ಪರಿಸರ ನಾಶಕ್ಕೆ ಗಣನೀಯ ಕೊಡುಗೆ ನೀಡಿವೆ. ಅದರಿಂದಾಗಿ ಮಲೆನಾಡಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಲು, ಭೂ ಸವಕಳಿ ಹೆಚ್ಚಲು, ಸಾವಿರಾರು ನೈಸರ್ಗಿಕ ಸಸ್ಯ, ಮೂಲಿಕೆ, ಸರೀಸೃಪ, ಪ್ರಾಣಿ, ಪಕ್ಷಿ ಪ್ರಬೇಧಗಳ ನಾಶಕ್ಕೂ ಈ ನೆಡುತೋಪುಗಳು ಕಾರಣವಾಗಿವೆ. ಜೊತೆಗೆ ಬಹಳ ಮುಖ್ಯವಾಗಿ ಮಲೆನಾಡಿನ ಶೋಲಾ ಹುಲ್ಲುಗಾವಲು ನಾಶ ಮತ್ತು ಸ್ವತಃ ಅಕೇಶಿಯಾ ಎಲೆಗಳ ಪ್ಲಾಸ್ಟಿಕ್ ಮಾದರಿ ಹಾಸಿನಿಂದಾಗಿ ನೀರು ಭೂಮಿಗೆ ಇಂಗದೆ, ಅಂರ್ತಜಲ ಕುಸಿತಕ್ಕೂ ಕಾರಣವಾಗಿದೆ ಎಂಬುದು ಪ್ರತಿಷ್ಟಿತ ಐಐಎಸ್ಸಿ ಮುಂತಾದ ಸಂಸ್ಥೆಗಳ ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತಾಗಿದೆ.
ವಾಸ್ತವ ಹೀಗಿರುವಾಗ, ಮಲೆನಾಡು ಅರಣ್ಯ ಪ್ರದೇಶ ವಿವಿಧ ಕಾರಣಗಳಿಂದಾಗಿ ತೀವ್ರ ಒತ್ತಡಕ್ಕೆ ಸಿಲುಕಿರುವಾಗ, ಪಶ್ಚಿಮಘಟ್ಟ ಅಪಾಯಕ್ಕೆ ಸಿಲುಕಿರುವ ಬಗ್ಗೆ ಜಾಗತಿಕವಾಗಿ ಕೂಡ ದೊಡ್ಡ ಮಟ್ಟದಲ್ಲಿ ಕಾಳಜಿ ವ್ಯಕ್ತವಾಗುತ್ತಿರುವಾಗ, ಗುತ್ತಿಗೆ ಅವಧಿ ಮುಗಿದ 82 ಸಾವಿರ ಎಕರೆ ಪ್ರದೇಶದಲ್ಲಿ ಮತ್ತೆ ಸಹಜ ಹಸಿರು ಬೆಳೆಸುವ ಮೂಲಕ ಘಟ್ಟದ ಆರೋಗ್ಯ ಸುಧಾರಿಸುವ ಅವಕಾಶ ಒದಗಿ ಬಂದಿದೆ. ಇಂತಹ ಅವಕಾಶ ಬಳಸಿಕೊಳ್ಳುವ ಬದಲು, ಒಂದು ಕಡೆ ಅರ್ಧ, ಒಂದು ಎಕರೆ ಸಾಗುವಳಿದಾರರ ಮೇಲೆ ಒತ್ತುವರಿ ಪ್ರಕರಣ ಹಾಕಿ ಜೈಲಿಗೆ ಕಳಿಸುತ್ತಿರುವ ಸರ್ಕಾರ, ಮತ್ತೊಂದು ಕಡೆ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಏಕ ಜಾತಿ ವಾಣಿಜ್ಯ ವನೀಕರಣಕ್ಕೆ ಪರಭಾರೆ ಮಾಡುತ್ತಿದೆ. ಇಂತಹ ಪರಿಸರ ದ್ರೋಹಿ ಮತ್ತು ಜನದ್ರೋಹಿ ನಡೆಯ ಹಿಂದೆ, ಎಂಪಿಎಂ ನೆಪದಲ್ಲಿ ಮಲೆನಾಡಿನ ಅರಣ್ಯ ಜಾಗವನ್ನು ತಮ್ಮ ಕಬ್ಜಕ್ಕೆ ಪಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲವು ಪ್ರಭಾವಿಗಳ ಸ್ವ ಹಿತಾಸಕ್ತಿ ಅಡಗಿದೆ. ಶ್ರೀಗಂಧದಂತಹ ಲಾಭದ ಬೆಳೆ ತೆಗೆಯುವ ಲೆಕ್ಕಾಚಾರದಲ್ಲಿ ದೆಹಲಿ ಮಟ್ಟದ ಕೆಲವು ಪ್ರಭಾವಿಗಳು ಲಾಬಿ ನಡೆಸಿದ್ದಾರೆ ಎಂಬ ಮಾತುಗಳೂ ಇವೆ.
ಆ ಹಿನ್ನೆಲೆಯಲ್ಲಿ ಕಳೆದ ನಲವತ್ತು ವರ್ಷಗಳಿಂದಲೂ ಈ ನೆಡುತೋಪುಗಳ ವಿರುದ್ಧ ಹೋರಾಡುತ್ತಲೇ ಇದ್ದ ಮಲೆನಾಡಿನ ಪರಿಸರಪ್ರಿಯರು, ರೈತರು ಮತ್ತು ಸಾಮಾಜಿಕ ಕಾಳಜಿಯ ಜನಸಂಘಟನೆಗಳು ಒಗ್ಗೂಡಿ ಬೃಹತ್ ಜನಾಂದೋಲಕ್ಕೆ ಮುಂದಾಗಿವೆ. ಗುತ್ತಿಗೆ ಅವಧಿ ಮುಗಿದಿರುವ ಅರಣ್ಯ ಭೂಮಿಯನ್ನು ಸರ್ಕಾರ ತಕ್ಷಣವೇ ವಾಪಾಸ್ ಪಡೆದು ಸಹಜ ಅರಣ್ಯ ಬೆಳೆಸಬೇಕು ಎಂದು ಆ ಸಂಘಟನೆಗಳ ಒಕ್ಕೂಟ ‘ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ ಆಗ್ರಹಿಸಿದೆ.
ಮುಖ್ಯವಾಗಿ “ಮಲೆನಾಡಿನ ಕಾಡು, ನೆಲ, ಜಲದ ಮೇಲೆ ಹಕ್ಕು ಮಲೆನಾಡಿಗರಿಗೆ ಸೇರಿದ್ದು. ಅಲ್ಲಿ ನೈಸರ್ಗಿಕ ಅರಣ್ಯ ಬೆಳೆಯಬೇಕೇ ವಿನಃ ಆ ನೆಲ, ಕಾಡು, ನದಿಗಳು ಅರಣ್ಯ ಇಲಾಖೆಗೆ, ಸರ್ಕಾರಕ್ಕೆ ಲಾಭಕೋರ ದಂಧೆ ಮಾಡುವ ಉದ್ಯಮವಾಗಬೇಕಿಲ್ಲ. ಹಸಿರು ಬೆಳೆಯಬೇಕಾದ ಜಾಗದಲ್ಲಿ ಕೆಲವರ ಹಿತಾಸಕ್ತಿಗಾಗಿ ಹಣ ಬೆಳೆಯಬೇಕಾಗಿಲ್ಲ. ಮಲೆನಾಡಿನಲ್ಲಿ ಕಾಡು ಮರೆಯಾಗುತ್ತಿರುವಾಗ ಬರೋಬ್ಬರಿ 80 ಸಾವಿರ ಎಕರೆ ಸಹಜ ಕಾಡು ಬೆಳೆಸುವ ಅವಕಾಶವನ್ನು ಮಲೆನಾಡಿಗರು ಕಳೆದುಕೊಳ್ಳಲು ಸಿದ್ಧರಿಲ್ಲ. ಹಾಗಾಗಿ ಸರ್ಕಾರ, ಎಂಪಿಎಂ ಲೀಜ್ ಅವಧಿ ಮುಗಿಯುತ್ತಿದ್ದಂತೆ ಆ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಮತ್ತು ಅಲ್ಲಿ ನೈಸರ್ಗಿಕ ಕಾಡು ಬೆಳೆಯಲು ರಕ್ಷಣೆ ಒದಗಿಸಬೇಕು. ಇಲ್ಲವಾದಲ್ಲಿ ಮಲೆನಾಡಿನಾದ್ಯಂತ ಇದೊಂದು ಭಾವನಾತ್ಮಕ ವಿಷಯವಾಗಿ ಆಂದೋಲನೋಪಾದಿಯಲ್ಲಿ ಹೋರಾಟ ಭುಗಿಲೇಳಲಿದೆ” ಎಂದು ವೇದಿಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಈ ಭೂಮಿಯಲ್ಲಿ ನೈಸರ್ಗಿಕ ಅರಣ್ಯ ಬೆಳೆಸಲು ಒತ್ತು ನೀಡುವುದು, ಅರಣ್ಯ ಬೆಳೆಸಲು ಸಾಧ್ಯವಿರದ ಕಡೆ ಭೂರಹಿತ ಕಡುಬಡವರಿಗೆ ನೀಡಿ ಅಲ್ಲಿ ಅರಣ್ಯ ಬೆಳೆ ಬೆಳೆಸಲು ಅನುಮತಿ ನೀಡಬೇಕು, ಮತ್ತು ಅಲ್ಲಿನ ಉತ್ಪನ್ನಗಳ ಲಾಭವನ್ನು ಆ ರೈತರಿಗೆ ನೀಡಬೇಕು. ಜಿ.ಪಂ., ತಾ.ಪಂ., ಗ್ರಾ.ಪಂ., ಗಳಲ್ಲಿ ಗುತ್ತಿಗೆ ವಿಸ್ತರಣೆ ಮತ್ತು ನೆಡುತೋಪು ವಿರುದ್ಧ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳಿಸಬೇಕು. ಅಂತಿಮವಾಗಿ ಜನ ಹೋರಾಟಕ್ಕೆ ಸರ್ಕಾರ ಮಣಿಯದೇ ಹೋದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ದರಾಗಬೇಕು. ಕಾಡು ಮತ್ತು ಜೀವವೈವಿಧ್ಯ ಸೇವೆಗಳಿಗೆ ಬೆಲೆಕಟ್ಟಬೇಕು. ಮಲೆನಾಡಿಗರ ‘ನಮ್ಮಭೂಮಿ ನಮ್ಮ ಹಕ್ಕು’ ಸ್ಥಾಪಿತವಾಗಬೇಕು. ಭೂಮಿ ಒಂದು ಭಾವನಾತ್ಮಕ ವಿಷಯ. ನಮ್ಮ ಭೂಮಿಯಲ್ಲಿ ಯಾರಿಗೂ ದಂಧೆ ಮಾಡಲು ಅವಕಾಶವಿಲ್ಲ ಎಂಬ ಹಕ್ಕೊತ್ತಾಯಗಳೊಂದಿಗೆ ಮಲೆನಾಡಿನಾದ್ಯಂತ ಜನಹೋರಾಟ ಕಟ್ಟಲು ಸಂಘಟನೆಗಳ ಪ್ರಮುಖರು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದ್ದಾರೆ.

ಹೋರಾಟಕ್ಕೆ ಈಗಾಗಲೇ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ, ಮಲೆನಾಡು ಪರಿಸರ ಹಿತರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ ಹಸಿರುಸೇನೆ, ದಲಿತ ಸಂಘರ್ಷ ಸಮಿತಿ ಮತ್ತು ಇತರ ಹಲವು ಪರಿಸರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಒಕ್ಕೂಟದ ಭಾಗವಾಗಿ ಹೋರಾಟಕ್ಕೆ ಕೈಜೋಡಿಸಿವೆ.
ಆ.12ಕ್ಕೆ ಹಿಂದಿನ ಗುತ್ತಿಗೆ ಕೊನೆಗಾಣಲಿದ್ದು, ಈ ನಡುವೆ ಗುತ್ತಿಗೆ ನವೀಕರಿಸಿ ಮತ್ತೆ ಮೂವತ್ತು ವರ್ಷಗಳ ಅವಧಿಗೆ ಎಂಪಿಎಂ ಮತ್ತು ಇತರ ಕೆಲವು ಪ್ರಭಾವಿಗಳ ಕಂಪನಿಗಳ ಹೆಸರಿಗೆ ಭೂಮಿ ಪರಭಾರೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಬೃಹತ್ ಉದ್ಯಮ ಸಚಿವ ಜಗದೀಶ್ ಶೆಟ್ಟರ್ ಭದ್ರಾವತಿಗೆ ಭೇಟಿ ನೀಡಿ ಈ ಬಗ್ಗೆ ತೆರೆಮರೆಯ ಯತ್ನಗಳಿಗೆ ಚಾಲನೆ ನೀಡಿದ್ದಾರೆ. ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರನ ಹೆಸರಿನ ಕಂಪನಿ ಈ ಅಪಾರ ಭೂಮಿಯ ಮೇಲೆ ಕಣ್ಣಿಟ್ಟಿದ್ದು, ಅದನ್ನು ಗುತ್ತಿಗೆ ಪಡೆದು ಅಲ್ಲಿ ಲಾಭದಾಯಕ ಶ್ರೀಗಂಧ ಬೆಳೆಯುವ ಲೆಕ್ಕಾಚಾರ ಹಾಕಿದ್ದಾರೆ. ಜೊತೆಗೆ ಬಿಜೆಪಿ ಮತ್ತು ಸಂಘಪರಿವಾರದ ಕೆಲವು ಪ್ರಭಾವಿಗಳೂ ಈ ಅವಕಾಶ ಬಳಸಿಕೊಂಡು ದಟ್ಟ ಕಾಡಿನ ನಡುವಿನ ಭೂಮಿ ಗುತ್ತಿಗೆ ಹಿಡಿಯಲು ಹೊಂಚು ಹಾಕಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಅದೇ ಸಂಘಪರಿವಾರದ ಹಿನ್ನೆಲೆಯಲ್ಲಿ ವ್ಯಕ್ತಿಗಳೇ ಚುಕ್ಕಾಣಿ ಹಿಡಿದಿರುವ ಜೀವ ವೈವಿಧ್ಯ ಮಂಡಳಿಯಾಗಲೀ, ವನ್ಯಜೀವಿ ಮಂಡಳಿಗಳಾಗಲೀ, ಅಥವಾ ಪರಿಸರದ ಹೆಸರಲ್ಲಿ ಅಮಾಯಕರ ಮೇಲೆ ಪ್ರಹಾರ ನಡೆಸುವ ಪ್ರತಿಷ್ಠಿತ ಪರಿಸರ ಸಂಘಟನೆಗಳಾಗಲೀ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ. ಆ ಎಲ್ಲರ ಮೌನದ ಹಿಂದೆ ಇಂತಹ ಪ್ರಭಾವಿಗಳ ಹುಕುಂ ಇರುವಂತಿದೆ ಎಂಬ ಅನುಮಾನಗಳೂ ಇವೆ.
ಹಾಗಾಗಿ ಸಹಜವಾಗೇ ಈಗ ಈ ವಿಷಯ ಮಲೆನಾಡಿನಲ್ಲಿ ದೊಡ್ಡ ಆತಂಕದ ಸಂಗತಿಯಾಗಿದ್ದು, ಜನಸಾಮಾನ್ಯರು ಮಲೆನಾಡಿನ ನೆಲ, ಜಲ ನಮ್ಮದು, ಈ ನೆಲ-ಜಲದ ಭವಿಷ್ಯ ಮತ್ತು ವರ್ತಮಾನಗಳನ್ನು ನಾವು ನಿರ್ಧರಿಸುತ್ತೇವೆ. ಮುಚ್ಚಿಹೋದ ಕಂಪನಿಗಳ ಹೆಸರಿನಲ್ಲಿ ನಮ್ಮ ನೆಲವನ್ನು ಪ್ರಭಾವಿಗಳು ಮತ್ತು ಕಾರ್ಪೊರೇಟ್ ಕಂಪನಿಗಳ ಕಬ್ಜಕ್ಕೆ ತೆಗೆದುಕೊಳ್ಳಲು ಬಿಡುವುದಿಲ್ಲ. ಇಲ್ಲಿ ಸಹಜ ಕಾಡು ಬೆಳೆಯಬೇಕೇ ವಿನಃ ಯಾರದೋ ಖಜಾನೆ ತುಂಬಿಸುವ ದುಡ್ಡಿನ ಬೆಳೆ ಬೇಕಾಗಿಲ್ಲ. ದಶಕಗಳ ಕಾಲ ಇಲ್ಲಿನ ಸಹಜ ಕಾಡು ನಾಶಮಾಡಿ ನೀವು ಬೆಳೆಸಿದ ಈ ಏಕಜಾತಿ ನೆಡುತೋಪುಗಳು ಈ ನೆಲದ ಸಂಕಷ್ಟಕ್ಕೆ ಕೊಟ್ಟ ಕೊಡುಗೆ ಸಾಕು. ಇನ್ನು ನಮ್ಮ ನೆಲ-ಜಲ ನಾವು ಕಾಯ್ದುಕೊಳ್ಳುತ್ತೇವೆ ಎಂದು ಘಂಟಾಘೋಷವಾಗಿ ಹೇಳತೊಡಗಿದ್ದಾರೆ. ಜೊತೆಗೆ ಇಷ್ಟು ದಶಕಗಳ ಕಾಲ ಇಲ್ಲಿನ ಬೆಟ್ಟಗುಡ್ಡ ಬಗೆದು ಬೆಳೆದ ಏಕಜಾತಿ ನೆಡುತೋಪುಗಳಿಂದ ಬಂದ ಹಣ ಎಲ್ಲಿ ಹೋಯಿತು? ಆ ಹಣ ಮಲೆನಾಡಿನ ಹಿತಾಸಕ್ತಿಗೆ ಹೇಗೆ ಬಳಕೆಯಾಗಿದೆ? ಅರಣ್ಯ ಇಲಾಖೆ ಬೆಳೆಸಿ, ಕಟಾವು ಮಾಡಿದ ಏಕ ಜಾತಿ ನೆಡುತೋಪುಗಳ ಆದಾಯ ಮತ್ತು ಅದರ ಬಳಕೆಯ ಬಗ್ಗೆ ಲೆಕ್ಕ ಕೊಡಲಿ ಮೊದಲು ಎಂದೂ ಹೋರಾಟಗಾರರು ದನಿ ಎತ್ತಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲಾ ಮಟ್ಟದಲ್ಲಿ ಸಂಘಟನೆ ಆರಂಭವಾಗಿದ್ದು, ತಾಲೂಕು ಮತ್ತು ಹೋಬಳಿ ಮಟ್ಟದಲ್ಲೀ ಸಂಘಟನೆ ವಿಸ್ತರಿಸಿ, ಬೀದಿ ಹೋರಾಟ ಮತ್ತು ಕಾನೂನು ಹೋರಾಟವನ್ನು ನಡೆಸುವ ಮೂಲಕ, ಕರೋನಾ ಸಂಕಷ್ಟದ ಹೊತ್ತಲ್ಲಿ ಕೆಲವೇ ಮಂದಿಯ ಹಿತಾಸಕ್ತಿಗಾಗಿ ನಾಡಿನ ಹಿತ ಬಲಿಕೊಡುವ ಬಿಜೆಪಿ ಸರ್ಕಾರದ ವರಸೆಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಮಲೆನಾಡಿನ ಜಾಗೃತ ಮನಸ್ಸುಗಳು ಘೋಷಿಸಿವೆ. ಆಗಸ್ಟ್ 12ರ ಹೊತ್ತಿಗೆ ಸರ್ಕಾರದ ನಿರ್ಧಾರದ ಬಳಿಕ ಬೀದಿ ಹೋರಾಟಕ್ಕೆ ಚಾಲನೆ ನೀಡಲು ಒಕ್ಕೂಟ ತೀರ್ಮಾನಿಸಿದೆ ಎಂದು ಪ್ರಮುಖರು ಹೇಳಿದ್ದಾರೆ.
ಒಟ್ಟಾರೆ, ಕಳೆದ ವರ್ಷ ಅತ್ಯಂತ ಕ್ಷಿಪ್ರಗತಿಯ ವ್ಯಾಪಕ ಚಳವಳಿಯಾಗಿ ಯಶಸ್ವಿಯಾದ ಶರಾವತಿ ನದಿ ಉಳಿಸಿ ಹೋರಾಟದ ಬಳಿಕ, ಮಲೆನಾಡು ಮತ್ತೊಂದು ಹೋರಾಟಕ್ಕೆ ಇದೀಗ ಅಕೇಶಿಯಾ ವಿರುದ್ಧ ಕಹಳೆಯೂದಿದೆ.