ಕರೋನಾ ಸೋಂಕು ಇಡೀ ರಾಜ್ಯದಲ್ಲಿ ಅಬ್ಬರ ಶುರು ಮಾಡಿಕೊಂಡಿದೆ. ಜೂನ್ 28ರ ಲೆಕ್ಕಾಚಾರ ಇಡೀ ರಾಜ್ಯದ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 1267 ಹೊಸ ಕೇಸ್ಗಳು ಪತ್ತೆಯಾಗಿವೆ. 16 ಜನರು ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೇವಲ ಬೆಂಗಳೂರು ಒಂದರಲ್ಲೇ 783 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ, ಸರ್ಕಾರ ಮಾತ್ರ ಸಮುದಾಯಕ್ಕೆ ಸೋಂಕು ಹರಡಿಲ್ಲ. ಕರೋನಾ ನಿಯಂತ್ರಣದಲ್ಲಿದೆ ಎಂದು ಹೇಳುತ್ತಲೇ ಇದೆ. ರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ಕೊಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಅದೇ ಮಾತನ್ನು ಹೇಳಿದ್ದಾರೆ.
ಕರೋನಾ ಸೋಂಕಿತರಿಗೆ ಚಿಕಿತ್ಸೆ ಕೊಡುವುದಕ್ಕೆ ಸರ್ಕಾರ ವಿಫಲವಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಸೌಲಭ್ಯವಿಲ್ಲದೆ ಪಾಸಿಟಿವ್ ಸೋಂಕು ಅಧಿಕೃತವಾದ ಬಳಿಕವೂ ಚಿಕಿತ್ಸೆಗೆ ಕರೆದೊಯ್ಯಲಾಗದ ಪರಿಸ್ಥಿತಿ ಬೆಂಗಳೂರಿನಲ್ಲಿದೆ. ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ದಿಲ್ಲ ಎನ್ನುವ ವರದಿಗಳು ಬಂದಿವೆ. ಆರೋಗ್ಯ ಅಧಿಕಾರಿಗಳು ಅಂಕಿಸಂಖ್ಯೆಯನ್ನೇ ತಪ್ಪು ತಪ್ಪಾಗಿ ಕೊಡುತ್ತಿದ್ದಾರೆ ಎನ್ನುವ ಅನುಮಾನಗಳು ದಟ್ಟವಾಗುತ್ತಿದೆ. ಸಾವಿನ ಸಂಖ್ಯೆಯಲ್ಲೂ ಸರ್ಕಾರ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ. ಭಾನುವಾರ ಕೋವಿಡ್ನಿಂದ ಸಾವನ್ನಪ್ಪಿದವರ ಸಂಖ್ಯೆ 16 ಆಗಿದ್ದರೆ, ಕೋವಿಡ್ 19 ರೋಗಿಯಾಗಿದ್ದು, ಅನ್ಯ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ನಾಲ್ವರನ್ನು ಗುರುತಿಸಿದ್ದಾರೆ. ಆದರೆ ಬಿಬಿಎಂಪಿ ಆಯುಕ್ತರು ಮಾತ್ರ ಕಳೆದ 24 ಗಂಟೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಟ್ವೀಟ್ ಮಾಡಿದ್ದು, ಟ್ವೀಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೋಂಕು ಇದೆ ಚಿಕಿತ್ಸೆ ಕೊಡಿ ಎಂದು ಅಳಲು..!
ಕೋವಿಡ್ 19 ಸೋಂಕು ಬಂದರೆ ಸರ್ಕಾರ ಎಲ್ಲಾ ಜವಾಬ್ದಾರಿ ತೆಗೆದುಕೊಂಡು ಚಿಕಿತ್ಸೆ ಕೊಡುವುದಕ್ಕೆ ಮುಂದಾಗುತ್ತಿತ್ತು. ಆದರೆ ಸೋಂಕು ಹೆಚ್ಚಳವಾಗುತ್ತಿದ್ದ ಹಾಗೆ ಬಿಬಿಎಂಪಿ ಕೈ ಚೆಲ್ಲಿದ್ದು, ನಮಗೆ ಸೋಂಕು ಬಂದಿದೆ, ದಯಮಾಡಿ ಚಿಕಿತ್ಸೆ ಕೊಡಿ ಎಂದು ಅಂಗಲಾಚಿದ್ರೂ ಆರೋಗ್ಯ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ ದಂಪತಿಗೆ ಮೈಕೈ ನೋವು ಬಂದಿತ್ತು. ತಾವೇ ಸ್ವಂತ ಖರ್ಚಿನಲ್ಲಿ ಖಾಸಗಿ ಲ್ಯಾಬ್ಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಾಗ ದಂಪತಿಗೆ ಕರೋನಾ ಪಾಸಿಟಿವ್ ದೃಢಪಟ್ಟಿತ್ತು. ಆಸ್ಪತ್ರೆಗೆ ತೆರಳಲು ಸಿದ್ಧತೆ ಕೂಡ ಮಾಡಿಕೊಂಡು ಆರೋಗ್ಯ ಇಲಾಖೆಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಪ್ರಯೋಜನ ಆಗಿಲ್ಲ. 44 ವರ್ಷದ ಗಂಡ ಹಾಗೂ 42 ವರ್ಷದ ಹೆಂಡತಿ ಆತಂಕಕ್ಕೆ ಒಳಗಾಗಿದ್ದರು. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ, ಲಜ್ಜೆಗೇಡಿತನ ಈ ಪ್ರಕರಣದಿಂದ ಬೆಳಕಿಗೆ ಬಂದಿದೆ.
ಕರೋನಾದಿಂದ ಸತ್ತವರ ಸಂಸ್ಕಾರಕ್ಕೆ ಸರ್ಕಾರದ ಸಿದ್ಧತೆ..!
ಈ ಮಾತು ನಿಮ್ಮನ್ನು ಘಾಸಿಗೊಳಿಸಬಹುದು. ಆದರೂ ಇದು ಸತ್ಯ. ರಾಜ್ಯ ಸರ್ಕಾರದ ಕರೋನಾ ಸೋಂಕಿನಿಂದ ಜನರನ್ನು ಬಚಾವ್ ಮಾಡುವ ಕೆಲಸವನ್ನು ಕೈಬಿಟ್ಟಿದೆ. ಇದೀಗ ಸಾವನ್ನಪ್ಪಿದವರ ಶವ ಸಂಸ್ಕಾರಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಶವಗಳನ್ನು ಸುಡಲು ಚಿತಾಗಾರಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದೆ. ಚಿತಾಗಾರ ನಿರ್ಮಾಣಕ್ಕೆ ಸೂಕ್ತ ಸ್ಥಳದ ಹುಡುಕಾಟ ಮಾಡುತ್ತಿದೆ. ಇನ್ನೂ ಮೃತರ ಅಂತ್ಯಕ್ರಿಯೆ ನಡೆಸಲು ಪ್ರತ್ಯೇಕವಾಗಿ ಅಧಿಕಾರಿಗಳ ತಂಡ ರಚನೆಗೆ ಸರ್ಕಾರ ಸೂಚನೆ ನೀಡಿದೆ ಎನ್ನುವ ವರದಿಗಳು ಬೆಚ್ಚಿಬೀಳುವಂತೆ ಮಾಡಿದೆ.
ಸರ್ಕಾರ ಮಟ್ಟದಲ್ಲಿ ನಡೀತಿದೆ ಕರೋನಾ ಕಿತ್ತಾಟ..!
ಕರ್ನಾಟಕದಲ್ಲಿ ಕರೋನಾ ಸೋಂಕು ಹೆಚ್ಚಾಗಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿ ಮಾಡುತ್ತಿದ್ದಾರೆ ಎನ್ನುವುದು ಒಂದು ಸಂಗತಿ. ಈ ವಿಚಾರ ಸತ್ಯವಾದರೂ ರಾಜ್ಯ ಸರ್ಕಾರವೂ ಕೂಡ ಮತ್ತೊಂದು ಕಾರಣಕರ್ತವಾಗಿದೆ. ಯಾಕಂದ್ರೆ ಕರೋನಾ ನಿಯಂತ್ರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಟಸ್ಥ ನಿಲುವು ಹೊಂದಿದ್ದು, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಕರೋನಾ ಆರಂಭ ಕಾಲದಲ್ಲೇ ಇಬ್ಬರೂ ಬಹಿರಂಗವಾಗಿ ಗುದ್ದಾಡಿದ್ರಿಂದ ಸಿಎಂ ಯಡಿಯೂರಪ್ಪ, ಬೆಂಗಳೂರು ಉಸ್ತುವಾರಿಯಾಗಿ ಸುಧಾಕರ್ ಹಾಗೂ ಜಿಲ್ಲೆಗಳ ಉಸ್ತುವಾರಿ ಆಗಿ ಶ್ರೀರಾಮುಲು ಅವರನ್ನು ನಿಯೋಜಿಸಿದ್ದರು. ಆ ಬಳಿಕ ಕರೋನಾ ಬುಲೆಟಿನ್ ಉಸ್ತುವಾರಿ ಆಗಿ ಸುರೇಶ್ ಕುಮಾರ್ ಕೂಡ ಎಂಟ್ರಿ ಕೊಟ್ಟಿದ್ದರು.
ಇದೀಗ ಡಾ ಸುಧಾಕರ್ ನಿವಾಸದಲ್ಲಿ ಕೋವಿಡ್ 19 ಮೊಕ್ಕಾಂ ಹೂಡಿದ್ದು, ಸುಧಾಕರ್ ಸದ್ಯ ಕ್ವಾರಂಟೈನ್ನಲ್ಲಿದ್ದಾರೆ. ಹಾಗಾಗಿ ಯಾವುದೇ ಸಭೆಗಳಲ್ಲಿ ಭಾಗಿಯಾಗ್ತಿಲ್ಲ. ಆನ್ಲೈನ್ ಮೂಲಕ ಮಾತ್ರ ಅಧಿಕಾರಿಗಳ ಸಭೆ ನಡೆಸುತ್ತಾ ಮಾಹಿತಿ ಪಡೆಯುತ್ತಿದ್ದಾರೆ. ಹಾಗಾಗಿ ಆರ್ ಅಶೋಕ್ ಅವರನ್ನು ಬೆಂಗಳೂರು ಉಸ್ತುವಾರಿಯಾಗಿ ಸಿಎಂ ಯಡಿಯೂರಪ್ಪ ನೇಮಕ ಮಾಡಿದ್ದರು. ಅದರ ಬಗ್ಗೆ ಆರ್ ಅಶೋಕ್ ಟ್ವೀಟ್ ಮಾಡಿದ್ದು, ಸುಧಾಕರ್ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅಶೋಕ್ಗೆ ಟ್ವಿಟರ್ನಲ್ಲೇ ಟಾಂಗ್ ಕೊಟ್ಟಿದ್ದ ಸುಧಾಕರ್, ಭಾನುವಾರದ ಮಾತು ಎಂದು ಶೀರ್ಷಿಕೆ ಹಾಕಿ ಅಶೋಕ್ ಕಾಲು ಎಳೆದಿದ್ದರು ನಾನು ಬಾಲ್ಯದಲ್ಲಿ ಓದಿದ್ದ ಕಥೆಯೊಂದನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಾನು ನಮ್ಮ ಕೆಲಸವನ್ನು ಆತ್ಮಸಾಕ್ಷಿಯೊಂದಿಗೆ ಮತ್ತು ಹೆಚ್ಚಿನ ಉದ್ದೇಶದಿಂದ ಮಾಡೋಣ. ನಾಯಕತ್ವವು ಸ್ಥಾನದಲ್ಲಿಲ್ಲ, ಆದರೆ ಮಾಡುವ ಕೆಲಸದಲ್ಲಿದೆ ಎಂದಿದ್ದರು. ಈ ಮಾತಿಗೆ ಮತ್ತೆ ತಿರುಗೇಟು ಕೊಟ್ಟಿರುವ ಆರ್ ಅಶೋಕ್, ಇದು ಯಾರು ಸಭೆ ನಡೆಸ್ತಾರೆ ಎನ್ನುವುದು ಮುಖ್ಯವಲ್ಲ, ಎಲ್ಲರೂ ಸೇರಿ ಕೆಲಸ ಮಾಡಬೇಕಿರುವ ಸಮಯ ಎಂದು ಕೌಂಟರ್ ಕೊಟ್ಟಿದ್ದಾರೆ.
ಒಟ್ಟಾರೆ, ಕರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಸರ್ಕಾರ ಜನರ ಪ್ರಾಣ ಉಳಿಸುವ ಕೆಲಸ ಕೈಬಿಟ್ಟು ಶವಗಳನ್ನು ಸುಡುವುದಕ್ಕೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದೇ ರೀತಿಯ ಸಿದ್ಧತೆಯನ್ನು ಸರ್ಕಾರ ಕೋವಿಡ್ 19 ರೋಗಿಗಳನ್ನು ಕರೆತಂದು ಚಿಕಿತ್ಸೆ ನೀಡುವ ಕೆಲಸದಲ್ಲಿ ಮಾಡಿದ್ದರೆ, ಜನರ ಪ್ರಾಣವನ್ನೇ ಉಳಿಸಬಹುದಿತ್ತು. ಆದರೆ, ಸಾವು ಕೇವಲ ಲೆಕ್ಕದಲ್ಲಿ ಮಾತ್ರ ಉಳಿಯುತ್ತದೆ. ಇನ್ನೂ ಶವಗಳನ್ನು ಸಂಸ್ಕಾರ ಮಾಡದಿದ್ದರೆ ಕೊಳೆತು ನಾರುತ್ತದೆ ಎನ್ನುವ ಕಾರಣಕ್ಕೆ ಸುಡುವುದಕ್ಕೆ ಜಾಗಹುಡುಕುತ್ತಿದೆ ಎನ್ನಬಹುದು.