ರಾಜ್ಯ ವಿಧಾನಸಭೆ ಉಪಚುನಾವಣೆ ಕಣ ರಂಗು ಹೆಚ್ಚಿಸಿಕೊಳ್ಳುತ್ತಿದೆ. ನಾಯಕರ ಮಧ್ಯೆ ವಾಕ್ಸಮರವೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡು ಬಿಜೆಪಿ ಸೇರಿ ಸ್ಪರ್ಧಿಸುತ್ತಿರುವವರಿಗೆ ಇದು ರಾಜಕೀಯವಾಗಿ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಇದರ ಜತೆಗೇ ಉಪ ಚುನಾವಣೆಯ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆ ಜತೆಗೆ ಅಳಿವು-ಉಳಿವಿನ ವಿಚಾರವೂ ಆಗಿದೆ.
ಅನರ್ಹ ಶಾಸಕರಿಗೆ ಈ ಉಪ ಚುನಾವಣೆ ಸೋಲು-ಗೆಲುವಿನ ಸವಾಲಾಗಿದ್ದರೆ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವ ಹೋರಾಟ. ಸ್ವಲ್ಪ ಎಡವಿದರೂ ಪಕ್ಷದ ಮೇಲಿನ ಹಿಡಿತ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಬ್ಬರೂ ತಮ್ಮ ಪ್ರತಿಷ್ಠೆಯನ್ನೇ ಪಣವಾಗಿಟ್ಟುಕೊಂಡು ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ತೀವ್ರಗೊಳಿಸಿದ್ದಾರೆ. ಮೇಲ್ನೋಟಕ್ಕೆ ನೋಡಿದಾಗ ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗಿಂತ ಯಡಿಯೂರಪ್ಪ ಅವರು ಎರಡು ಹೆಜ್ಜೆ ಮುಂದಿದ್ದಾರೆ. ಆದರೆ, ಮತದಾರರ ತೀರ್ಪು ಬಂದ ಬಳಿಕವಷ್ಟೇ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರಲ್ಲಿ ಗೆದ್ದವರಾರು, ಸೋತವರಾರು ಎಂಬುದು ನಿರ್ಧಾರವಾಗಬೇಕಷ್ಟೆ.
ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಎರಡೂ ಪಕ್ಷಗಳಲ್ಲಿ ಸಾಕಷ್ಟು ಅಸಮಾಧಾನ, ಬಿನ್ನಮತ ಸೃಷ್ಟಿಯಾಗಿತ್ತು. ಇದರ ಪರಿಣಾಮ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿದೆ. ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಪ್ರಶ್ನೆ ಇಲ್ಲವಾದರೂ ಆಂತರಿಕ ಭಿನ್ನಮತ ಮಾತ್ರ ಬಿಜೆಪಿಯಲ್ಲಿರುವುದಕ್ಕಿಂತಲೂ ತೀವ್ರವಾಗಿದೆ. ನಾಯಕರ ನಡುವಿನ ಕಚ್ಚಾಟ ಈ ಭಿನ್ನಮತದ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಎರಡೂ ಪಕ್ಷಗಳಲ್ಲಿ ಇದು ಶಮನವಾಗದೇ ಇದ್ದರೆ ಫಲಿತಾಂಶದಲ್ಲಿ ಅದು ಪ್ರತಿಫಲಿಸುವುದು ಖಚಿತ.
ಯಡಿಯೂರಪ್ಪ ಅವರಿಗೇನು ಪ್ರತಿಷ್ಠೆ?
ಸದ್ಯ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕ. ಅದರ ಜತೆ ಜತೆಗೇ ಅವರ ವಿರುದ್ಧ ಕತ್ತಿ ಮಸೆಯುವ ಪ್ರಯತ್ನಗಳೂ ಅಷ್ಟೇ ಜೋರಾಗಿ ನಡೆಯುತ್ತಿದೆ. ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೊದಲಿನಿಂದಲೂ ಎಣ್ಣೆ-ಸೀಗೇಕಾಯಿಗಳಂತಿದ್ದು, ಪರಸ್ಪರ ತಿರುಗೇಟು ನೀಡಲು ಕಾಯುತ್ತಲೇ ಇದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಅವರ ಇಚ್ಛೆಗೆ ವಿರುದ್ಧವಾಗಿ ಬಿ.ಎಲ್.ಸಂತೋಷ್ ಅವರ ಆಪ್ತ ನಳಿನ್ ಕುಮಾರ್ ಕಟೀಲ್ ಅವರಿಗೆ ನೀಡಿದಾಗಲೇ ಪಕ್ಷದಲ್ಲಿ ಯಡಿಯೂರಪ್ಪ ಅವರ ಹಿಡಿತವನ್ನು ಸಡಿಲಗೊಳಿಸಲು ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಯಿತು. ನಂತರ ಬಿಜೆಪಿಗೆ ಇಬ್ಬರು ಉಪಾಧ್ಯಕ್ಷರ ನೇಮಕ, ಬಿಬಿಎಂಪಿ ಮೇಯರ್ ಆಯ್ಕೆ ವಿಚಾರದಲ್ಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಯಡಿಯೂರಪ್ಪ ಅವರನ್ನು ಸಂಪೂರ್ಣ ದೂರವಿಟ್ಟರು. ಪಕ್ಷದ ರಾಜ್ಯ ಕಚೇರಿಯಲ್ಲಿ ಯಡಿಯೂರಪ್ಪ ಅವರ ಅವಧಿಯಲ್ಲಿ ನೇಮಕಗೊಂಡಿದ್ದ ಕೆಲಸಗಾರರನ್ನು ಮನೆಗೆ ಕಳುಹಿಸಲಾಯಿತು. ಆರಂಭದಲ್ಲಿ ಈ ಬಗ್ಗೆ ಮೌನವಾಗಿದ್ದ ಯಡಿಯೂರಪ್ಪ, ತಮ್ಮ ವಿರುದ್ಧ ನಡೆಯುತ್ತಿರುವ ಸಂಚು ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡು ನನ್ನನ್ನು ದೂರವಿಟ್ಟು ಪಕ್ಷವನ್ನು ಅದು ಹೇಗೆ ಬೆಳೆಸುತ್ತೀರಿ ಎಂಬ ಎಚ್ಚರಿಕೆಯ ಸಂದೇಶವನ್ನು ನಾಯಕರಿಗೆ ಕಳುಹಿಸಿಕೊಟ್ಟರು. ಇದರಿಂದ ಬೆದರಿದ ರಾಜ್ಯಾಧ್ಯಕ್ಷರು ಯಡಿಯೂರಪ್ಪ ಅವರೊಂದಿಗೆ ರಾಜಿ ಸಂಧಾನ ಮಾಡಿಕೊಂಡು ಪರಿಸ್ಥಿತಿ ನಿಭಾಯಿಸಿದ್ದಾರೆ.
ಪ್ರಸ್ತುತ ಉಪ ಚುನಾವಣೆಯಲ್ಲಿ ಗೆದ್ದು ಸರ್ಕಾರವನ್ನು ಅಲ್ಪಮತದಿಂದ ಬಹುಮತದತ್ತ ಕೊಂಡೊಯ್ಯುವ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷ ಯಡಿಯೂರಪ್ಪ ಅವರ ಹೆಗಲ ಮೇಲೆ ಹಾಕಿದೆ. ಅದಕ್ಕೆ ತಕ್ಕಂತೆ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ. ಒಂದೊಮ್ಮೆ ನಿರೀಕ್ಷಿತ ಸ್ಥಾನಗಳನ್ನು ಗೆದ್ದು ಸರ್ಕಾರ ಬಹುಮತ ಗಳಿಸಿಕೊಳ್ಳದೇ ಇದ್ದಲ್ಲಿ ಆಗ ಯಡಿಯೂರಪ್ಪ ಅವರು ಸಮಸ್ಯೆ ಎದುರಿಸಬೇಕಾಗುತ್ತದೆ. ಏಕೆಂದರೆ, ಸರ್ಕಾರ ಅಲ್ಪಮತಕ್ಕೆ ಕುಸಿದರೆ ಆಗ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲು ಜೆಡಿಎಸ್ ಬೆಂಬಲ ಅಗತ್ಯವಾಗಿದೆ. ಆಗ ಮುಖ್ಯಮಂತ್ರಿಯನ್ನು ಬದಲಿಸಬೇಕು ಎಂಬ ಬೇಡಿಕೆಯನ್ನು ಜೆಡಿಎಸ್ ಮುಂದಿಟ್ಟರೆ ಯಡಿಯೂರಪ್ಪ ಮತ್ತು ಪಕ್ಷ ಇಕ್ಕಟ್ಟಿಗೆ ಸಿಲುಕಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಯಡಿಯೂರಪ್ಪ ಅವರಿಗೆ ಯಾರ ಹಂಗೂ ಇಲ್ಲದೆ ಅಧಿಕಾರದಲ್ಲಿ ಮುಂದುವರಿಯಲು ಮತ್ತು ಪಕ್ಷದಲ್ಲಿ ತನ್ನ ಪ್ರಾಬಲ್ಯ ತೋರಿಸಲು ಈ ಚುನಾವಣೆಯ ಗೆಲುವು ಪ್ರತಿಷ್ಠೆಯ ವಿಚಾರವಾಗಿದೆ.
ಸಿದ್ದರಾಮಯ್ಯ ಅವರಿಗೆ ಅಳಿವು-ಉಳಿವು
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಗೆ ಇದು ಅಳಿವು-ಉಳಿವಿನ ಪ್ರಶ್ನೆ. ಮೂಲ ಕಾಂಗ್ರೆಸ್, ಅದರಲ್ಲೂ ಪಕ್ಷದ ಹಿರಿಯ ನಾಯಕರು ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡಿದ್ದು, ಪಕ್ಷವನ್ನು ಅವರ ತೆಕ್ಕೆಯಿಂದ ಹೊರತರಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇವರ ವಿರೋಧದ ನಡುವೆಯೂ ಹೈಕಮಾಂಡ್ ಸಿದ್ದರಾಮಯ್ಯ ಪರ ನಿಂತಿರುವುದು ಈ ಹಿರಿಯ ನಾಯಕರು ಮತ್ತಷ್ಟು ಕೆರಳುವಂತೆ ಮಾಡಿದೆ. ಈ ಕಾರಣಕ್ಕಾಗಿಯೇ ಅವರು ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದರು.
ಸದ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಏಕಾಂಗಿ ಎನ್ನುವಂತಾಗಿದ್ದಾರೆ. ಪ್ರತಿಪಕ್ಷದವರು ಮಾತ್ರವಲ್ಲ, ಸ್ವಂತ ಪಕ್ಷದವರೂ ಸಿದ್ದರಾಮಯ್ಯ ವಿರುದ್ಧ ಮುಗಿಬೀಳಲು ಸಜ್ಜಾಗಿ ನಿಂತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಉಪ ಚುನಾವಣೆಯಲ್ಲಿ ಹಿರಿಯ ನಾಯಕರೇ ಸಿದ್ದರಾಮಯ್ಯ ಅವರಿಗೆ ಅಸಹಕಾರ ತೋರಿಸುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಪಕ್ಷದ ಅಭ್ಯರ್ಥಿಗಳು ಸೋತರೆ ಅದರ ಹೊಣೆ ಉಪ ಚುನಾವಣೆಯ ಜವಾಬ್ದಾರಿ ಹೊತ್ತಿರುವ ಸಿದ್ದರಾಮಯ್ಯ ಅವರದ್ದಾಗುತ್ತದೆ. ಸಿದ್ದರಾಮಯ್ಯ ವೈಫಲ್ಯ ಕಂಡರೆ ಅದರ ಲಾಭ ಪಡೆದುಕೊಂಡು ಪಕ್ಷದಲ್ಲಿ ಅವರ ಹಿಡಿತ ಕಡಿಮೆ ಮಾಡಬಹುದು.
ಇದಕ್ಕೆ ಸಿದ್ದರಾಮಯ್ಯ ಅವರೂ ಕಾರಣರಾಗಿದ್ದಾರೆ. ತಮ್ಮ ಜತೆ ಕೆಲವೇ ಕೆಲವು ಮಂದಿಯನ್ನು ಸೇರಿಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ತಮ್ಮ ನಂತರ ಜತೆಗಿರುವವರು ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅವರಿಗೆ ಆದ್ಯತೆ ನೀಡುತ್ತಿದ್ದಾರೆ. ಇದು ಕೂಡ ಹಿರಿಯ ನಾಯಕರಿಗೆ ತಲೆನೋವಾಗಿದೆ. ಹೀಗಾಗಿ ಸಿದ್ದರಾಮಯ್ಯ ಹಿಡಿತ ಕಮ್ಮಿಯಾದರೆ ಪಕ್ಷದಲ್ಲಿ ತಮ್ಮ ಮಾತು ನಡೆಯುತ್ತದೆ ಎಂಬುದು ಅವರ ಆಲೋಚನೆ. ಅದಕ್ಕಾಗಿ ಉಪ ಚುನಾವಣೆಯನ್ನು ಸಿದ್ದರಾಮಯ್ಯ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಗೆದ್ದು ತಮ್ಮ ಅಸ್ತಿತ್ವ ಉಳಿಸುಕೊಳ್ಳಲು ಸಿದ್ದರಾಮಯ್ಯ ಹೋರಾಡುತ್ತಿದ್ದಾರೆ.
ಹಾಗೆ ನೋಡಿದರೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಸಚಿವರು, ಮುಖಂಡರ ಸಾಥ್ ಸಿಗುತ್ತಿದೆ. ನಳಿನ್ ಕುಮಾರ್ ಕಟೀಲ್ ಅವರೂ ಭಿನ್ನಾಭಿಪ್ರಾಯ ದೂರವಿಟ್ಟು ಯಡಿಯೂರಪ್ಪ ಅವರೊಂದಿಗೆ ಹೋಗುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರ ಅಸಹಾಕಾರ ಹೆಚ್ಚಾಗುತ್ತಿದೆ. ಇದು ಗೊತ್ತಿದ್ದೇ ಸಿದ್ದರಾಮಯ್ಯ ಅವರು ಏಕಾಂಗಿಯಾಗಿ ಹೋಗುತ್ತಿದ್ದಾರೆ. ತಮ್ಮ ಕನಸಾಗಿದ್ದ ಮುಖ್ಯಮಂತ್ರಿ ಸ್ಥಾನವನ್ನು ಹೇಗೂ ಗಳಿಸಿದ್ದೂ ಆಗಿದೆ, ಕಳೆದುಕೊಂಡುದ್ದೂ ಆಗಿದೆ. ಇನ್ನು ಸೋತರೂ, ಗೆದ್ದರೂ, ಅದರಿಂದ ಏನೇ ಪರಿಣಾಮಗಳಾದರೂ ಹೆಚ್ಚಿನ ಸಮಸ್ಯೆಯೇನೂ ಆಗುವುದಿಲ್ಲ. ಹೀಗಾಗಿ ತಮ್ಮ ವಿರುದ್ಧ ಪಕ್ಷದೊಳಗೆ ತಿರುಗಿ ಬಿದ್ದವರಿಗೆ ಪಾಠ ಕಲಿಸಬೇಕು. ಅದಕ್ಕಾಗಿಯಾದರೂ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ.