ಕರೋನಾ ವೈರಸ್ ಚೀನಾದಲ್ಲಿ 2019 ರ ಡಿಸೆಂಬರ್ ತಿಂಗಳಿನಿಂದ ಆರಂಭವಾಯಿತು ಅನ್ನೋದಾಗಿ ಇದುವರೆಗೂ ನಂಬಲಾಗಿತ್ತು. ಮಾತ್ರವಲ್ಲದೇ ವುಹಾನ್ ನ ಮಾಂಸದ ಮಾರುಕಟ್ಟೆಯಿಂದ ಇದು ಮೊದಲ ಬಾರಿಗೆ ಹರಡಿರುವುದಾಗಿಯೂ ತಿಳಿಸಲಾಗಿತ್ತು. ಆದರೆ ಇದೀಗ ಅಮೆರಿಕಾದ ʼಹಾರ್ವರ್ಡ್ ಮೆಡಿಕಲ್ ಸ್ಕೂಲ್ ರಿಸರ್ಚ್ʼ ತನ್ನ ಸಂಶೋಧನೆಯಲ್ಲಿ, ಕರೋನಾ ವೈರಸ್ ಚೀನಾದಲ್ಲಿ 2019 ರ ಆಗಸ್ಟ್ ತಿಂಗಳಿನಿಂದಲೇ ಆರಂಭವಾಗಿತ್ತು ಅನ್ನೋದಾಗಿ ತಿಳಿಸಿದೆ. ಈ ಸಂಶೋಧನಾ ವರದಿ ಚೀನಾ ದೇಶವನ್ನು ಕಂಗೆಡಿಸಿ ಬಿಟ್ಟಿದೆ. ಕಾರಣ, ಇದುವರೆಗೂ ಡಿಸೆಂಬರ್ ತಿಂಗಳಿನಲ್ಲಿ ಕರೋನಾ ವೈರಸ್ ದಾಳಿಯಿಟ್ಟಿತ್ತು ಅನ್ನೋದಾಗಿ ಜಗತ್ತಿನ ಮುಂದೆ ಚೀನಾ ಹೇಳಿಕೊಂಡು ಬಂದಿತ್ತು. ಆದರೆ ʼಹಾರ್ವರ್ಡ್ ಮೆಡಿಕಲ್ ಸ್ಕೂಲ್ ರಿಸರ್ಚ್ʼ ಉಪಗ್ರಹ ಸಹಾಯದಿಂದ ಈ ಸಂಶೋಧನೆ ಕೈಗೊಂಡಿದ್ದು, 2019 ರ ಆಗಸ್ಟ್ ತಿಂಗಳಿನಿಂದಲೇ ಆರಂಭವಾಗಿತ್ತು ಅನ್ನೋದಾಗಿ ಒತ್ತಿ ಹೇಳಿದೆ.
ಪ್ರಮುಖವಾಗಿ ಉಪಗ್ರಹ ಸಹಾಯದಿಂದ ವುಹಾನ್ ಆಸ್ಪತ್ರೆಗೆ ಆಗಮಿಸಿದ ವಾಹನಗಳ ಸಂಖ್ಯೆ ಹಾಗೂ ಸರ್ಚ್ ಇಂಜಿನ್ ಗಳ ದತ್ತಾಂಶಗಳ ಮೇಲೆ ಸಂಶೋಧನೆ ನಡೆದಿದ್ದು, ಅದರನ್ವಯ ವುಹಾನ್ ಆಸ್ಪತ್ರೆಯ ಪಾರ್ಕಿಂಗ್ ತುಂಬಿದ್ದವು ಮತ್ತು ಸರ್ಚ್ ಇಂಜಿನ್ ಗಳಲ್ಲಿ ʼಕಫʼ ಹಾಗೂ ʼಅತಿಸಾರʼ ದಂತಹ ಕಾಯಿಲೆಗೆ ಸಂಬಂಧಪಟ್ಟಂತೆಯೇ ಅತೀ ಹೆಚ್ಚು ಹುಡುಕಾಟ ನಡೆದಿದ್ದಾಗಿ ಸಂಶೋಧನೆ ತಿಳಿಸುತ್ತಿದೆ. ಅಲ್ಲದೇ ಇದಕ್ಕಾಗಿ ʼಹಾರ್ವರ್ಡ್ ಮೆಡಿಕಲ್ ಸ್ಕೂಲ್ ರಿಸರ್ಚ್ʼ ಉತ್ತಮ ಗುಣಮಟ್ಟದ ಉಪಗ್ರಹಗಳ ಚಿತ್ರವನ್ನೇ ಪರಿಗಣಿಸಿದ್ದಾಗಿಯೂ ತಿಳಿಸಿದೆ. ಆದ್ದರಿಂದ ಡಿಸೆಂಬರ್ ಮುನ್ನವೇ ಅಂದರೆ ಆಗಸ್ಟ್ ತಿಂಗಳಲ್ಲೇ ಚೀನಾದಲ್ಲಿ ಕರೋನಾ ವೈರಸ್ ದಾಳಿಯಿಟ್ಟಿತ್ತು ಎಂದು ಸಂಶೋಧನೆ ತನ್ನ ವರದಿಯನ್ನ ಬಲವಾಗಿ ಸಮರ್ಥಿಸಿಕೊಂಡಿದೆ.
“ದಕ್ಷಿಣ ಚೀನಾದಲ್ಲಿ ಡಿಸೆಂಬರ್ ತಿಂಗಳಿಗೂ ಮುನ್ನವೇ ವೈರಸ್ ಪತ್ತೆಯಾಗಿತ್ತು. ಆ ನಂತರ ಇದು ಹರಡುತ್ತಾ ವುಹಾನ್ ನಾದ್ಯಂತ ಹಬ್ಬಿದೆ” ಎಂದು ಸಂಶೋಧನಾ ವರದಿ ತಿಳಿಸಿದೆ. ಮಾತ್ರವಲ್ಲದೇ ಆಗಸ್ಟ್ ತಿಂಗಳಿನಲ್ಲಿ ಅತ್ಯಂತ ಹೆಚ್ಚು ʼಅತಿಸಾರʼ ಹಾಗೂ ʼಕಫʼ ಪ್ರಕರಣಗಳು ವುಹಾನ್ ನಲ್ಲಿ ಕಂಡು ಬಂದಿವೆ ಎಂದು ಸಂಶೋಧನೆ ತಿಳಿಸಿದೆ.
ʼಹಾರ್ವರ್ಡ್ ಮೆಡಿಕಲ್ ಸ್ಕೂಲ್ ರಿಸರ್ಚ್ʼ ಸಂಶೋಧನೆ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಹಿಂದೆಯೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ನಿರ್ಮಿತ ವೈರಸ್ ಅಂತಲೇ ಆರೋಪಿಸುತ್ತಿದ್ದರು. ಮಾತ್ರವಲ್ಲದೇ ಅದಕ್ಕೆ ತನ್ನ ಬಳಿ ಪೂರಕ ದಾಖಲೆ ಇರುವುದಾಗಿಯೂ ತಿಳಿಸಿದ್ದರು. ಆದರೆ ಇದೀಗ ʼಹಾರ್ವರ್ಡ್ ಮೆಡಿಕಲ್ ಸ್ಕೂಲ್ ರಿಸರ್ಚ್ʼ ಸಂಶೋಧನೆ ಮತ್ತೊಂದು ಸಾಧ್ಯತೆಯನ್ನ ಮುಂದಿಟ್ಟಿದೆ.
Also Read: ಟ್ರಂಪ್ ಪಾಲಿಗೆ ಕರೋನಾ ʼಚೀನಿ ವೈರಸ್ʼ; ದೊಡ್ಡಣ್ಣನ ಹೇಳಿಕೆ ವಿರುದ್ಧ ಗಮನಸೆಳೆದ WHO
ಆದರೆ ಚೀನಾ ವಿದೇಶಾಂಗ ವಕ್ತಾರ ಹುವಾ ಚುನ್‌ಯಿಂಗ್ ಇದನ್ನ ಅಲ್ಲಗಳೆದಿದ್ದಾರೆ. “ಇದೊಂದು ಹಾಸ್ಯಾಸ್ಪದ ವಿಚಾರವಾಗಿದೆ. ಬಾಹ್ಯ ವೀಕ್ಷಣೆಯ ಆಧಾರದ ಮೇಲೆ ಇಂತಹ ಸಂಶೋಧನೆ ನಡೆಸಲು ಸಾಧ್ಯ ಅನ್ನೋದೆ ನಂಬಿಕೆಗೂ ಅರ್ಹವಾದ ವಿಚಾರವಲ್ಲ. ಬದಲಿಗೆ ಇದೊಂದು ಅಪ್ಪಟ ಹಾಸ್ಯಾಸ್ಪದ ವಿಚಾರವಾಗಿದೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಆದರೆ ಕಮ್ಯುನಿಸ್ಟ್ ನೇತೃತ್ವದ ಸರಕಾರ ಹೊಂದಿರುವ ಚೀನಾ ತನ್ನಲ್ಲಾದ ನಿಜವಾದ ಮಾಹಿತಿಯನ್ನ ಹೊರಹಾಕದೇ, ಜಾಗತಿಕ ಮಟ್ಟದಲ್ಲಿ ವಂಚನೆ ನಡೆಸಿದೆ ಅಂತಾ ಈ ಹಿಂದೆಯೇ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ವುಹಾನ್ ನ ವೈರಾಲಜಿ ಸಂಶೋಧನಾ ಕೇಂದ್ರದಿಂದಲೇ ವೈರಸ್ ಉತ್ಪತ್ತಿಯಾಗಿದೆ ಎಂದಿದ್ದರು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡುವ ಮೂಲಕ ʼದೊಡ್ಡಣ್ಣʼನ ಹೇಳಿಕೆಗೆ ಜಾಗತಿಕ ಮಾನ್ಯತೆ ಸಿಗದಂತೆ ಮಾಡಿತ್ತು. ಆದರೆ ಟ್ರಂಪ್ ಆರೋಪದಿಂದ ಹಲವು ರಾಷ್ಟ್ರಗಳ ವಿದೇಶಿ ಕಂಪೆನಿಗಳು ಚೀನಾದಿಂದ ಹಿಂದೆ ಸರಿದಿದೆ. ಇದು ಚೀನಾಕ್ಕೆ ಜಾಗತಿಕ ಮಟ್ಟದಲ್ಲಾದ ಬಹುದೊಡ್ಡ ಹೊಡೆತವೂ ಸರಿ.
ಆದರೆ ಇದೀಗ ಅಮೆರಿಕಾದ ʼಹಾರ್ವರ್ಡ್ ಮೆಡಿಕಲ್ ಸ್ಕೂಲ್ ರಿಸರ್ಚ್ʼ ತನ್ನ ಸಂಶೋಧನೆಯಲ್ಲಿ ಕರೋನಾ ವೈರಸ್ ಡಿಸೆಂಬರ್ ಮುನ್ನವೇ ಆರಂಭಗೊಂಡಿತ್ತು ಎಂದಿದ್ದು ಚೀನಾ ವಿರುದ್ಧ ಸಂಶಯಪಡಲು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ. ʼಬೆಂಕಿಯಿಲ್ಲದೇ ಹೊಗೆಯಾಡದುʼ ಅನ್ನೋ ಹಾಗೆ ಚೀನಾ ಕರೋನಾ ವಿಚಾರದಲ್ಲಿ ಅದೇನನ್ನೋ ಬಚ್ಚಿಡುತ್ತಿದೆ ಅನ್ನೋದನ್ನ ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದರೆ ʼಕರೋನಾ ಮೂಲʼ ಯಾವುದೆಂದು ಕಮ್ಯುನಿಸ್ಟರ ಸರ್ವಾಧಿಕಾರಿ ಸರಕಾರ ಹೊಂದಿರುವ ಚೀನಾ ಜಗತ್ತಿಗೆ ತಿಳಿಯಪಡಿಸಬೇಕಿದೆ.