ಮುಂಬೈಯಿಂದ ಬಂದಿದ್ದ 61 ಮಂದಿ ಹಾಗೂ ದುಬೈಯಿಂದ ಬಂದಿದ್ದ 3 ಮಂದಿ ಸೇರಿ ಉಡುಪಿ ಜಿಲ್ಲೆಯಲ್ಲಿಂದು ಒಂದೇ ದಿನ 73 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಅಲ್ಲದೆ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳ ಹೇರ್ ಕಟ್ಟಿಂಗ್ ಮಾಡುತ್ತಿದ್ದ ವ್ಯಕ್ತಿಯಲ್ಲೂ ಕರೊನಾ ಸೋಂಕು ಪತ್ತೆಯಾಗಿತ್ತು. ಈ ನಿಟ್ಟಿನಲ್ಲಿ ಕ್ಷೌರ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ನೇರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವಾಗ, ಕರೊನಾ ಸೋಂಕಿತ ವ್ಯಕ್ತಿ ಭಾನುವಾರ ಹಿರಿಯ ಪೊಲೀಸ್ ಅಧಿಕಾರಿಗೆ ಹೇರ್ ಕಟ್ಟಿಂಗ್ ಮಾಡಿರುವುದು ಬೆಳಕಿಗೆ ಬಂದಿತ್ತು. ಸದ್ಯ ಹಿರಿಯ ಅಧಿಕಾರಿಯನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ
ಉಡುಪಿಯ ಡಿವೈಎಸ್ ಪಿ ಕಚೇರಿ ಹಾಗೂ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ ಪಿ ಸೇರಿದಂತೆ ನಾಲ್ವರು ಪೊಲೀಸರಿಗೆ ಸೋಂಕು ಖಚಿತವಾದ ಹಿನ್ನೆಲೆಯಲ್ಲಿ ಚಂದು ಮೈದಾನದಲ್ಲಿರುವ ಸಶಸ್ತ್ರ ಮೀಸಲು ಪಡೆಯ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಉಡುಪಿಯಲ್ಲಿಂದು ಕೊರೊನಾ ಸೋಂಕು ದೃಢಪಟ್ಟಿರುವ ಮಂದಿಯನ್ನು ಪತ್ತೆ ಹಚ್ಚಿ ಈಗಾಗಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕರೋನಾ ಸೋಂಕು ಕಾಣಿಸಿಕೊಂಡಿರುವವರಲ್ಲಿ 5 ಮಂದಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಜಿಲ್ಲಾಡಳಿತಕ್ಕೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಸಂಪರ್ಕ ಕಡಿತಗೊಂಡ ಕರೋನಾ ಸೋಂಕಿತರನ್ನು ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ, ಆತಂಕ ಪಡಬೇಕಾಗಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.