ಇಂದು ಇಡೀ ದೇಶಾದ್ಯಂತ ಕರೋನಾ ಸೋಂಕು ಹರಡುವ ಭೀತಿ ಎದುರಾಗಿದ್ದು ಜನರು ಮನೆಗಳಿಂದ ಹೊರ ಬಾರದಂತೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಈ ರೀತಿಯ ಬಿಕ್ಕಟ್ಟನ್ನು ಸ್ವಾತಂತ್ರ್ಯಾ ನಂತರ ದೇಶ ಎಂದೂ ಎದುರಿಸಿರಲಿಲ್ಲ. ಯಾವುದೇ ದೇಶವು ಮುನ್ನಡೆಯಲು ಒಂದು ಉತ್ತಮ ಸರ್ಕಾರ ಬೇಕೆ ಬೇಕಾಗಿದೆ. ನಮ್ಮ ಚುನಾಯಿತ ಪ್ರತಿನಿಧಿಗಳು ಬಿಕ್ಕಟ್ಟನ್ನು ಎದುರಿಸಲು ಸೂಕ್ತ ನೀತಿ ನಿಯಮಗಳನ್ನು ರೂಪಿಸಲು ಮತ್ತು ಈ ನಿಯಮಾವಳಿಗಳಿಂದ ಆಗಬಹುದಾದ ತೊಂದರೆಯನ್ನೂ ಪರಿಹರಿಸಲು ಸಮರ್ಥವಾಗಿರಬೇಕು.
ಇಂದು ಕೋವಿಡ್-19 ಸೃಷ್ಟಿಸಿರುವ ಬಿಕ್ಕಟ್ಟನ್ನು ಉತ್ತಮವಾಗಿ ನಿಭಾಯಿಸಬಲ್ಲ ಪರಿಣತಿಯುಳ್ಳ ವ್ಯಕ್ತಿಗಳ ಅಗತ್ಯವು ದೇಶಕ್ಕೆ ಅತ್ಯವಶ್ಯವಾಗಿದೆ. ಆದರೆ ಇಂದು ದೇಶದಲ್ಲಿ ಯಾವೊಂದು ರಾಜಕೀಯ ಪಕ್ಷವೂ ಕೂಡ ಅಂತಹ ಅನುಭವ ಮತ್ತು ಪರಿಣತಿಯನ್ನು ಹೊಂದಿರುವ ರಾಜಕಾರಣಿಗಳು ತಮ್ಮ ಪಕ್ಷದಲ್ಲಿದ್ದಾರೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಈಗ ದೇಶಕ್ಕೆ ಅಗತ್ಯವಿರುವ ಇಂತಹ ಕ್ಲಿಷ್ಟ ಸಂದರ್ಭದಲ್ಲಿ ವೃತ್ತಿಪರ ರಾಜಕಾರಣಿಗಳಲ್ಲಿ ಇಂತಹ ಪರಿಣತಿಯಾಗಲೀ, ಕೌಶಲ್ಯವಾಗಲೀ ಇಲ್ಲ ಎಂದೇ ಹೇಳಬಹುದು.
ಪ್ರಸ್ತುತ ದೇಶ ಎದುರಿಸುತ್ತಿರುವ ಸವಾಲಿನ ವ್ಯಾಪ್ತಿಯನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಈಗ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವುದು ಮಾತ್ರವಲ್ಲ, ದೇಶದ ಆರ್ಥಿಕ ಬೆನ್ನೆಲುಬನ್ನು ಬಲಪಡಿಸಲೇಬೇಕಿದೆ. ಈ ಬಿಕ್ಕಟ್ಟಿನಿಂದ ಹೊರಬರಲು ದೇಶದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡಿಕೊಂಡು, ಎಲ್ಲ ವರ್ಗದ ಜನರನ್ನೂ ಒಟ್ಟಿಗೆ ಕೊಂಡೊಯ್ಯುವ
ಸರ್ಕಾರ ಬೇಕಾಗಿದೆ. ಈಗ ದೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳು ಇಂತಹ ಸಂದರ್ಭದಲ್ಲೂ ತಮ್ಮ ವಿರೋಧಿಗಳನ್ನು ಟೀಕಿಸುತ್ತಿರುವುದನ್ನು ಗಮನಿಸಿದ್ದೇವೆ. ಈಗ ದೇಶಕ್ಕೆ ಎಲ್ಲ ರಾಜಕೀಯ ಪಕ್ಷಗಳನ್ನು ಒಳಗೊಂಡ ರಾಷ್ಟ್ರೀಯ ಸರ್ಕಾರವೊಂದು ಬೇಕಾಗಿದೆ ಎಂಬ ಚರ್ಚೆ ಮಾಡಲು ಇದು ಅತ್ಯಂತ ಸೂಕ್ತ ಸಮಯವಾಗಿದೆ.
ಇದು ಏಕೆಂದರೆ ವಿವಿಧ ರಾಜಕಾರಣಿಗಳಲ್ಲಿ ವಿವಿಧ ವಿಷಯಗಳಲ್ಲಿ ಪರಿಣತಿ ಹೊಂದಿರುವವರು ಇದ್ದಾರೆ. ಆರೋಗ್ಯ, ಆರ್ಥಿಕತೆ, ಕೈಗಾರಿಕೆ, ವ್ಯಾಪಾರ, ವಿದೇಶಾಂಗ ವ್ಯವಹಾರಗಳು, ಮನೆ, ಕಾರ್ಮಿಕ, ಸಾರಿಗೆ, ದತ್ತಾಂಶ ನಿರ್ವಹಣೆ, ಸಂವಹನ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಉಸ್ತುವಾರಿ ನೋಡಿಕೊಳ್ಳುವ ಪ್ರತಿಯೊಂದು ಪ್ರಮುಖ
ಮಂತ್ರಿ ಹುದ್ದೆಗಳನ್ನು ಈಗಾಗಲೇ ಯಶಸ್ವಿಯಾಗಿ ನಿರ್ವಹಿಸಿರುವ ನೂರಾರು ರಾಜಕಾರಣಿಗಳು ಇಂದು ಮನೆಯಲ್ಲಿದ್ದಾರೆ. ಏಕೆಂದರೆ ಅವರ ಪಕ್ಷವು ಅಧಿಕಾರದಲ್ಲಿ ಇಲ್ಲದಿರುವ ಕಾರಣದಿಂದ, ಅವರು ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಇಲ್ಲ. ಈ ಪರಿಣಿತ ಜನರು ಇರಬೇಕಾದ ಹುದ್ದೆಗಳಲ್ಲಿ ಇಂದು ಪರಿಣಿತರಲ್ಲದವರು ಇದ್ದಾರೆ. ಇದರಿಂದ ಅಡಳಿತ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಉದಾಹರಣೆಗೆ, ಇಂದಿನ ಆರ್ಥಿಕ ಹಿಂಜರಿತದ ಕಾಲದಲ್ಲಿ ದೇಶದ ಹಣಕಾಸು ಮಂತ್ರಿಯಾಗಿ ಮನಮೋಹನ್ ಸಿಂಗ್ ಅವರು ಉತ್ತಮ ಆಯ್ಕೆ ಆಗುತ್ತಾರೆ. ಏಕೆಂದರೆ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಿಂಗ್ ಅವರ ಸೇವೆ ಅನನ್ಯವಾಗಿದ್ದು 1991 ರಲ್ಲಿ ಜಾಗತೀಕರಣ, ಉದಾರೀಕಣ ಮತ್ತು ಖಾಸಗೀಕರಣದ ಮೂಲಕ ವಿದೇಶೀ ಬಂಡವಾಳ ಹೂಡಿಕೆಗೆ ನೀಡಿದ ಒತ್ತು, 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾಗಿ ಅವರ ಹಿಂದಿನ ಅನುಭವದಿಂದಾಗಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ನಿಜಕ್ಕೂ ಅತ್ಯುತ್ತಮವಾಗಿತ್ತು. ಅವರ ಮೂರು ದಶಕಗಳ ಸೇವೆ ದೇಶವು ಬದಲಾವಣೆಯ ದಾಪುಗಾಲಿನ ಜತೆಗೇ ಆರ್ಥಿಕ ಚೇತರಿಕೆಗೂ ಕಾರಣವಾಯಿತು.
ಸಿಂಗ್ ಅವರದ್ದು ಒಂದು ಉದಾಹರಣೆಯಾಗಿದೆ, ಆದರೆ ಸಲಹೆಯಲ್ಲ. ಅದೇ ರೀತಿಯಲ್ಲಿ, ಅಧಿಕಾರದಲ್ಲಿರುವ ಪಕ್ಷದೊಂದಿಗಿನ ಸಂಬಂಧವನ್ನು ಲೆಕ್ಕಿಸದೆ ಹಲವಾರು ವೃತ್ತಿಪರ ಅರ್ಥಶಾಸ್ತ್ರಜ್ಞರು ಮತ್ತು ಹಣಕಾಸು ಅಧಿಕಾರಿಗಳು ನಮ್ಮಲ್ಲಿದ್ದು ಈಗ ಅವರ ಸಲಹೆ ಮತ್ತು ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ವಾಸ್ತವವಾಗಿ, ರಾಷ್ಟ್ರೀಯ ಸರ್ಕಾರವು ಕೇವಲ ಮಂತ್ರಿಗಳ ಹುದ್ದೆಗಳಿಗೆ ಮಾತ್ರವಲ್ಲ, ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು, ಮತ್ತು ಜಾರಿ ಮಾಡಲಾದ ಕಾರ್ಯಸೂಚಿಗಳ ಮೇಲ್ವಿಚಾರಣೆ ಮಾಡಲು ಸೂಕ್ತ ಅನುಭವವುಳ್ಳ ಅಧಿಕಾರಿಗಳ ತಂಡವೂ ಬೇಕೆ ಬೇಕಾಗಿದೆ.

ಆರೋಗ್ಯದ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲೇ ಶ್ರೇಷ್ಟರಾದ ತಜ್ಞರು ,ಉನ್ನತ ಚಿಂತಕರು ಮತ್ತು ಅನುಭವವುಳ್ಳವರನ್ನು ಹೊಂದಿದೆ, ಆದರೆ ಅವರು ಕೇಂದ್ರದಲ್ಲಿ ಕಾರ್ಯಸೂಚಿಯನ್ನು ಜಾರಿಗೊಳಿಸುವ ತೀರ್ಮಾನ ತೆಗೆದುಕೊಳ್ಳುವ ಹುದ್ದೆಗಳನ್ನು ಹೊಂದಿದ್ದಾರೆ. ಅವರು ಪ್ರಸ್ತುತ ವೈದ್ಯಕೀಯ ವ್ಯವಸ್ಥೆಗಳು ಮತ್ತು ಸಾರ್ವಜನಿಕ ಆರೋಗ್ಯ ಎರಡರಲ್ಲೂ ನಿರ್ಧಾರ ತೆಗೆದುಕೊಳ್ಳುವ ಅಪಾರ ಅನುಭವಗಳನ್ನು ಹೊಂದಿದ್ದಾರೆ. ಆದರೆ ಅವರು ನಿರ್ಧಾರ ತೆಗೆದುಕೊಳ್ಳುವ ಜತೆಗೇ ಅನುಷ್ಠಾನಗೊಳಿಸುವ ಪ್ರಕ್ರಿಯೆಯ ಭಾಗವೂ ಕೂಡ ಆಗಿದ್ದರೆ ಮಾತ್ರ ಸಂಪೂರ್ಣ ಅನುಷ್ಟಾನ ಸಾಧ್ಯವಾಗುತ್ತದೆ. ಅವರ ನೇರ ಪಾಲ್ಗೊಳ್ಳುವಿಕೆಯು ಇಲ್ಲದಿದ್ದರೆ ಕಾರ್ಯಕ್ರಮಗಳ ಅನುಷ್ಟಾನ ಪರಿಣಾಮಕಾರಿ
ಅಗಿರುವುದಿಲ್ಲ. ಪ್ರಸ್ತುತ ಸರ್ಕಾರದ ಭಾಗವಾಗಿರುವ ಅನುಭವವುಳ್ಳ ವ್ಯಕ್ತಿಗಳ ಸಂಖ್ಯೆ ಕಡಿಮೆ ಆಗಿದ್ದರೆ ಅವರು ಜಾರಿಗೆ ತರುವ ಕಾರ್ಯಕ್ರಮಗಳ ಅನುಷ್ಟಾನದಲ್ಲೂ ಲೋಪ ಕಂಡು ಬರುವುದು ಸಹಜವೇ ಆಗಿದೆ.
ದೇಶದ ನೋಟು ನಿಷೇಧ ಕಾಯ್ದೆ , ಸರಕು ಮತ್ತು ಸೇವಾ ತೆರಿಗೆ ಜಾರಿ , ಆರ್ಥಿಕತೆಯ ಅನನುಭವ ಮತ್ತು ತಜ್ಞರ ಸಂಖ್ಯೆ ಕಡಿಮೆ ಆಗಿದ್ದರೆ ಇದರ ಪರಿಣಾಮವಾಗಿ, ದೇಶದ ಪ್ರತಿಯೊಬ್ಬ ಪ್ರಜೆಯೂ ಈಗಲೂ ಬೆಲೆ ತೆರಬೇಕಾಗಿದೆ. ಈಗ, ಕೋವಿಡ್ 19 ಸೋಂಕು ಹರಡದಂತೆ ತಡೆಗಟ್ಟಲು 21 ದಿನಗಳ ಲಾಕ್ ಡೌನ್ ಘೋಷಿಸಿರುವುದು ಮತ್ತು ಸೋಂಕು ಎದುರಿಸಲು ಕ್ರಮಗಳನ್ನು ಅವಲೋಕಿಸಿದಾಗ ಈ ನಿರ್ಧಾರಗಳಲ್ಲಿ ಅಧಿಕಾರದಲ್ಲಿರುವವರ ದೂರದೃಷ್ಟಿಯ ಕೊರತೆ ಸ್ಪಷ್ಟವಾಗಿದೆ. ಇದರಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಕೋವಿಡ್ -19 ಹರಡುವಿಕೆಯು ಜಾಸ್ತಿ ಅಗುವ ಪರಿಸ್ಥಿತಿಗೆ ಕಾರಣವಾಗುತ್ತದೆ.
ಇದು ಒಂದು ನ್ಯೂನತೆಯಾಗಿದ್ದು, ತಕ್ಷಣದ ಗಮನವನ್ನು ನೀಡಬೇಕಾಗಿದೆ. ಮತ್ತೊಮ್ಮೆ, ಯೋಜನೆ ಮತ್ತು ಯೋಜನಾ ನಿರ್ವಹಣೆಯಲ್ಲಿ ತರಬೇತಿ ಪಡೆದ ಜನರನ್ನು, ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಯೋಜನೆಗಳನ್ನು ಕಾರ್ಯತಂತ್ರ ಮತ್ತು ಅನುಷ್ಠಾನದಲ್ಲಿ ತೊಡಗಿಸಿಕೊಂಡವರನ್ನು ಕರೆತರುವುದು ಅವಶ್ಯಕವಾಗಿದೆ.
ಮೇಲೆ ಹೇಳಿದ ವಿಷಯಗಳೆಲ್ಲವೂ ಸಹಜವಾಗಿ, ಪ್ರಸ್ತುತ ಆಡಳಿತಕ್ಕೆ ಹೆಸರುವಾಸಿಯಾದ ಅತಿಯಾದ ಕೇಂದ್ರೀಕೃತಗೊಂಡಿರುವ ನೀತಿಯಿಂದ ಭಾರಿ ಬದಲಾವಣೆಯ ಅಗತ್ಯವಿದೆ. ಪ್ರತಿಯೊಬ್ಬ ವ್ಯಕ್ತಿ ಅಥವಾ ಸಮೂಹವು ಯಶಸ್ವಿಯಾಗಬೇಕಾದರೆ ಸಂಪೂರ್ಣವಾಗಿ ಅಧಿಕಾರ ಹೊಂದಿರಬೇಕು. ಪ್ರಧಾನ ಮಂತ್ರಿ ಮತ್ತು ಅವರ ಕಚೇರಿಗೆ ಸಂಬಂಧಿಸಿದಂತೆ, ಅವರು ಎಲ್ಲಾ ಸಚಿವಾಲಯಗಳ ನಡುವೆ ಸಮನ್ವಯವನ್ನು ಹೆಚ್ಚಿಸುವ ಕೆಲಸವನ್ನು ಮುನ್ನಡೆಸಬೇಕು ಮತ್ತು ತೆಗೆದುಕೊಂಡ ಎಲ್ಲಾ ಕಾರ್ಯ ಸೂಚಿಗಳ ಅನುಷ್ಠಾನಗೊಂಡ ಕುರಿತ ಮೇಲ್ವಿಚಾರಣೆಯನ್ನು ನಿರಂತರವಾಗಿ ಮಾಡುತ್ತಿರಬೇಕು.
ಆದರೆ ಕಟು ಸತ್ಯವೇನೆಂದರೆ, ಸರ್ಕಾರವು ದೇಶದ ಪ್ರತಿಯೊಬ್ಬ ಪ್ರಜೆಗೂ ಕೂಡ ಅನುಕೂಲವಾಗುವಂತೆ ನೀತಿ, ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಚುನಾವಣೆಗಳು ಅಲ್ಪಾವಧಿಯಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುವುದಿಲ್ಲ, ಆದರೆ ನಂತರ ಸರ್ಕಾರಗಳು ಕೈಗೊಂಡ ತೀರ್ಮಾನಗಳಿಂದ ಮಹತ್ವ ಪಡೆಯಬಹುದು. ಉತ್ತಮ ನಾಯಕರು ತಾವು ತೆಗೆದುಕೊಂಡ ತೀರ್ಮಾನಗಳು ಮತ್ತು ಅನುಷ್ಟಾನದಲ್ಲಿ ಆಗಿರುವ ಪ್ರಗತಿಯ ಬಗ್ಗೆ ನಾವು ಪ್ರಶ್ನಿಸಬಹುದು. ನಿಜವಾದ ರಾಷ್ಟ್ರೀಯ ಸರ್ಕಾರ ಎಂದರೆ ಪರಿಣತಿಯುಳ್ಳ ನಾಯಕರನ್ನು ಪ್ರಜೆಗಳು ಪ್ರಶ್ನೆ ಮಾಡಲು ವಿಫುಲ ಅವಕಾಶಗಳು ಇರಬೇಕು. ರಾಷ್ಟ್ರೀಯ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ದೇಶದ ಅಭಿವೃದ್ದಿಯ ವೇಗ ನಿಸ್ಸಂದೇಹವಾಗಿ ಹೆಚ್ಚಲಿದೆ.