ಕಾಂಗ್ರೆಸ್ ಮುಖಂಡರಾದ ಪಿ ಚಿದಂಬರಂ ಹಾಗೂ ಡಿ ಕೆ ಶಿವಕುಮಾರ್ ಅವರ ವಿರುದ್ಧದ ಆರ್ಥಿಕ ಅಪರಾಧಗಳ ತನಿಖೆಯಿಂದ ದೇಶದೆಲ್ಲೆಡೆ ಸಂಚಲನ ಮೂಡಿದೆ. ಅದರಲ್ಲಿಯೂ ಶಿವಕುಮಾರ್ ವಿರುದ್ಧದ ತನಿಖೆಯ `ಮಿಂಚಿನ ಗತಿ’ ಭಷ್ಟಾಚಾರದ ವಿರುದ್ಧ ದನಿ ಎತ್ತುತ್ತಿರುವ ಎಲ್ಲರಿಗೂ ಸಂತಸವನ್ನೇ ತಂದಿದೆ. ಅದಕ್ಕೆ ಕಾರಣ ಇಷ್ಟೆ. ಇದುವರೆಗೂ ಅನೇಕ ಸಾಮಾಜಿಕ ಹೋರಾಟಗಾರರು ಡಿ ಕೆ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರೂ, ಎಲ್ಲಾ ರೀತಿಯ ತನಿಖೆಗಳಿಂದ ಶಿವಕುಮಾರ್ ಒಂದಲ್ಲ ಒಂದು ರೀತಿಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ, ನಿಜಕ್ಕೂ ಕಾನೂನಿನ `ಕೈ’ ಬಲಿಷ್ಠವಾಗಿದೆಯೇ ಅಥವಾ ಹಾಗಾಗಿದೆ ಎಂಬಂತೆ ತೋರುತ್ತಿದೆಯೇ?
ಕೆಲವು ವಾರಗಳ ಹಿಂದೆ ಪ್ರತಿಧ್ವನಿ ಈ ಬಗ್ಗೆ ವಿಸ್ತ್ರತ ವರದಿ ಮಾಡಿತ್ತು. ಮೋದಿ ಸರ್ಕಾರ ಅಧಿಕಾರಕ್ಕೇರಿದಾಗಿನಿಂದ ಹಿಂದೆಂದಿಗಿಂತಲೂ ಬಲಿಷ್ಠವಾಗಿರುವ ಇಡಿ (Enforcement Directorate) ದೇಶದ ಕಪ್ಪು ಹಣ ಕೂಡಿಡುವ ಎಲ್ಲಾ ಆರ್ಥಿಕ ಅಪರಾಧಿಗಳ ಬೆನ್ನ ಹಿಂದೆ ಬೀಳಬೇಕಿತ್ತಲ್ಲವೇ? ಆದರೆ ಹಾಗೆ ಆಗುತ್ತಿಲ್ಲ.
Also Read: ಕಾಳ ಧನಿಕರು ಮಾತ್ರವಲ್ಲ, ಧನಿಕರನ್ನೂ ಇಡಿ ತನಿಖೆ ಮಾಡಬೇಡವೇ
ಇದಕ್ಕೆ ಉತ್ತಮ ಉದಾಹರಣೆ, ಸದ್ಯದ ಬಿಜೆಪಿ ಸರ್ಕಾರದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧದ ಇಡಿ ವಿಚಾರಣೆ. ಶಿವಮೊಗ್ಗದ ವಕೀಲ ವಿನೋದ್ ಬಿ ಎನ್ನುವವರು ಈಶ್ವರಪ್ಪ ವಿರುದ್ಧ ಮೊದಲು ಅಕ್ರಮ ಆಸ್ತಿ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಲೋಕಾಯುಕ್ತ ಪೊಲೀಸರು ತನಿಖೆ ಬಳಿಕ ಮಧ್ಯಂತರ ವರದಿಯನ್ನು ಕೋರ್ಟ್ ಗೆ ಸಲ್ಲಿಸುತ್ತಾರೆ. ಅದರ ಪ್ರಕಾರ ತಮ್ಮ ಕುಟುಂಬದವರ ಹೆಸರಿನಲ್ಲಿ ಹಾಗೂ ಸ್ವಂತ ಹೆಸರಿನಲ್ಲಿ ಈಶ್ವರಪ್ಪ ಅವರು ಗಳಿಸಿರುವ ಆಸ್ತಿಯ ವಿವರ ಸಲ್ಲಿಸಲಾಗುತ್ತದೆ. ಈ ವರದಿ ವಿರುದ್ಧ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವ ಈಶ್ವರಪ್ಪ `ತಾಂತ್ರಿಕ ಆಧಾರದಲ್ಲಿ’ ತಡೆ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
ಈ ಸಂದರ್ಭದಲ್ಲಿ ಲೋಕಾಯುಕ್ತ ತನಿಖೆಯ ವರದಿಯನ್ನು ಪಡೆಯುವ ವಿನೋದ್, 2017ರಲ್ಲಿ ಇಡಿಗೆ ದೂರು ದಾಖಲಿಸುತ್ತಾರೆ. ಆದರೆ, ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡ ಬಗ್ಗೆ ಇಡಿ ತಮಗೆ ಮಾಹಿತಿ ನೀಡಿಲ್ಲ ಎನ್ನುತ್ತಾರೆ ವಿನೋದ್. “ಲೋಕಾಯುಕ್ತ ಕೋರ್ಟ್ ಗೆ ಅಕ್ರಮ ಆಸ್ತಿ ಸಂಬಂಧ ದೂರು ದಾಖಲಿಸಿದ್ದು 2013ರಲ್ಲಿ. ಈ ಬಗ್ಗೆ ಮಧ್ಯಂತರ ವರದಿ ಸಲ್ಲಿಕೆಯಾದ ಹೊತ್ತಿನಲ್ಲಿ ಹೈಕೋರ್ಟ್ ತಡೆಯಾಜ್ಞೆ ಬರುತ್ತದೆ. ಹೈಕೋರ್ಟ್ 2014ರಲ್ಲಿ ಪೂರ್ವಾನುಮತಿ ಅಗತ್ಯ ಇಲ್ಲ ಎಂದು ಆದೇಶ ನೀಡುತ್ತದೆ. ಮತ್ತೆ ವಿಚಾರಣೆ ಮುಂದುವರಿಯುತ್ತದೆ. 2015ರಲ್ಲಿ ಮತ್ತೆ ಈಶ್ವರಪ್ಪ ಅವರು ಹೈಕೋರ್ಟ್ ಗೆ ಹೋಗುತ್ತಾರೆ. ಹೈಕೋರ್ಟ್ ಅರ್ಜಿ ತಳ್ಳಿ ಹಾಕಿದ ಮೇಲೆ ಮತ್ತೆ ಶಿವಮೊಗ್ಗ ಕೋರ್ಟ್ ಗೆ ಬರುತ್ತದೆ. ನಂತರ ಶಿವಮೊಗ್ಗ ಲೋಕಾಯುಕ್ತ ಕೋರ್ಟ್ ಲೋಕಾಯುಕ್ತ ತನಿಖೆಯನ್ನೇ ಬರ್ಖಾಸ್ತುಗೊಳಿಸುತ್ತದೆ. ನಾನು ಆ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದೇನೆ. ಅದು ಇನ್ನೂ ವಿಚಾರಣೆಗೆ ಬಾಕಿ ಇದೆ. ಇಡಿಗೆ ದೂರು ದಾಖಲಿಸುವಾಗ 300 ಪುಟಗಳ ಲೋಕಾಯುಕ್ತ ಮಧ್ಯಂತರ ವರದಿಯನ್ನು ಕೂಡ ಸಲ್ಲಿಸಿದ್ದೇನೆ. ಇದರಲ್ಲಿ ಈಶ್ವರಪ್ಪ ಮತ್ತು ಕುಟುಂಬ ಕೋಲ್ಕತ್ತಾ ಮೂಲದ ಅಸ್ತಿತ್ವದಲ್ಲಿಲ್ಲದ ಕಂಪೆನಿಗಳಿಂದ ಪಡೆದ ಹಣ, ಅಬುದಾಬಿಯಲ್ಲಿ ಹೂಡಿರುವ ಹಣ ಎಲ್ಲವೂ ಸೇರಿದೆ,’’ ಎಂದು ವಿನೋದ್ ಹೇಳಿದರು.
ಪಶ್ಚಿಮ ಬಂಗಾಳ ಮೂಲದ ಸ್ಯೂಟ್ ಕೇಸ್ ಕಂಪೆನಿಗಳು:
ಲೋಕಾಯುಕ್ತ ತನಿಖೆಯಿಂದ ಹೊರಬಂದ ಅನೇಕ ದಾಖಲೆಗಳಲ್ಲಿ ಮಹತ್ವವಾದವುಗಳು, ಈಶ್ವರಪ್ಪ ಅವರ ಮಗ ಕೆ ಈ ಕಾಂತೇಶ್ ಅವರು ನಿರ್ದೇಶಕರಾಗಿರುವ ಭರಣಿ ಪವರ್ ಪ್ರೈ ಲಿ. ಸಂಸ್ಥೆಯ ಷೇರುಗಳನ್ನು ಖರೀದಿ ಮಾಡುವ, ಅಸ್ತಿತ್ವದಲ್ಲಿ ಇಲ್ಲದೇ ಇರುವ ಪಶ್ಚಿಮ ಬಂಗಾಳದಲ್ಲಿ ರಿಜಿಸ್ಟರ್ ಆಗಿರುವ ಕಂಪೆನಿಗಳು. ಈ ಪೈಕಿ ಹೆಚ್ಚಿನ ಕಂಪೆನಿಗಳು ಷೇರು ಖರೀದಿಸುವುದು ಈಶ್ವರಪ್ಪ ಇಂಧನ ಸಚಿವರಾಗಿದ್ದಾಗ. ಈ ಕಂಪೆನಿಗಳ ವಿವರ, ಕಂಪೆನಿಗಳು ಕೃತಕ ಮುಖಬೆಲೆಗೆ ಖರೀದಿಸಿರುವುದರಿಂದ ಭರಣಿ ಸಂಸ್ಥೆ ಪಡೆದ ಮೊತ್ತದ ವಿವರ ಹೀಗಿದೆ;
1. Chirag Commodeal Private Ltd (50 ಲಕ್ಷ)
2. Blueview Tradecomm Private Ltd (55 ಲಕ್ಷ)
3. Sunview Retail Private Ltd (50 ಲಕ್ಷ)
4. Free Tower Private Ltd (32.50 ಲಕ್ಷ)
5. Wellworth Trademark Private Ltd (92 ಲಕ್ಷ)
6. Vrindaban Agencies Private Ltd (50 ಲಕ್ಷ)
7. Credence Projects Private Ltd (37.50 ಲಕ್ಷ)
8. Silverlake Traders Private Ltd (17.50 ಲಕ್ಷ)
9. Commit Marketing Private Ltd (68 ಲಕ್ಷ)
ಈ ಪೈಕಿ, ಮೇಲಿನ Commit Marketing Private Ltd ಎಂಬ ಕಂಪೆನಿ 2010-11 ನೇ ಸಾಲಿನಲ್ಲಿ ಗಳಿಸಿದ ಆದಾಯ ರೂ 26.64 ಲಕ್ಷ, ಮುಂದಿನ ವರ್ಷದಲ್ಲಿ (2011-12) ಗಳಿಸಿದ ಆದಾಯ 22.64 ಲಕ್ಷ. ಹೀಗಿದ್ದರೂ, ಮೇಲೆ ನೀಡಲಾಗಿರುವ ಷೇರು ಖರೀದಿ (ರೂ 68 ಲಕ್ಷ) ಅಲ್ಲದೇ, ಇದೇ ಕಂಪೆನಿ ಈಶ್ವರಪ್ಪ ಅವರ ಮಗ ಕಾಂತೇಶ್ ಅವರಿಗೆ ವೈಯಕ್ತಿಕವಾಗಿ ರೂ 3.64 ಕೋಟಿ, ಈಶ್ವರಪ್ಪ ಪತ್ನಿ ಜಯಲಕ್ಷ್ಮಿ ಅವರಿಗೆ ರೂ 17 ಲಕ್ಷ ಹಾಗೂ ಈಶ್ವರಪ್ಪ ಅವರ ಪುತ್ರಿ ಸುಮಾ ಅವರಿಗೆ ರೂ 74 ಲಕ್ಷ ಸಾಲ ನೀಡಿದೆ.
ಇನ್ನು ಆಟೋ ಕ್ಲಚಸ್ ಕ್ಯಾಸ್ಟಿಂಗ್ ಪ್ರೈ ಲಿ ಎಂಬ ಇನ್ನೊಂದು ಕಂಪೆನಿಯ ವ್ಯವಹಾರಗಳೂ ಕೂಡ ಕಪ್ಪು ಹಣ ಶುದ್ದಗೊಳಿಸುವ ಉದ್ದೇಶ ಹೊಂದಿರುವ ಹಾಗಿವೆ, ಹಾಗೂ PML (Prevention of Money Laundering Act) ಕಾಯ್ದೆಯ ತನಿಖೆಗೆ ಒಳಪಡುವ ವ್ಯವಹಾರ ಹೊಂದಿವೆ. ಈ ಕಂಪೆನಿಯ ನಿರ್ದೇಶಕರಾಗಿರುವ ಕೆ ಈ ಕಾಂತೇಶ್ ರೂ 38 ಲಕ್ಷ ಮೊತ್ತದ ಷೇರುಗಳನ್ನು ಹೊಂದಿದ್ದಾರೆ. 2009-10 ನೇ ಸಾಲಿನಲ್ಲಿ ಕಾಂತೇಶ್ ಈ ಕಂಪೆನಿಗೆ ರೂ 20 ಲಕ್ಷ ಅಸುರಕ್ಷಿತ ಸಾಲ (Unsecured Loan) ನೀಡುತ್ತಾರೆ, ಮರುವರ್ಷ 2010-11 ನೇ ಸಾಲಿನಲ್ಲಿ ಮರಳಿ ಪಡೆಯುತ್ತಾರೆ.
ಈ ದಾಖಲೆಗಳೆಲ್ಲಾ ಗಾಳಿಯಲ್ಲಿ ಸಿಕ್ಕಿರುವುದಲ್ಲ. ಬದಲಾಗಿ ಲೋಕಾಯುಕ್ತ ತನಿಖೆ ವೇಳೆ ತನಿಖಾಧಿಕಾರಿಗಳು ಪಡೆದಿರುವ ಅಧಿಕೃತ ದಾಖಲೆಗಳು. ಲೋಕಾಯುಕ್ತ ಅಧಿಕಾರಿಗಳು ಸಲ್ಲಿಸಿದ ವರದಿಯ ಪ್ರಕಾರ ಈಶ್ವರಪ್ಪ ಹಾಗೂ ಕಾಂತೇಶ್ ಅವರು ಅಬುದಾಬಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಲೈಸೆನ್ಸ್ ನಂಬರ್ 1161034) ದೇಶಗಳಲ್ಲಿ ಬಂಡವಾಳ ಹೂಡಿರುವ ಬಗ್ಗೆ ದಾಖಲೆಗಳು ಸಿಕ್ಕಿರುತ್ತವೆ. ಆದರೆ, ಈ ಬಗ್ಗೆ ಹೆಚ್ಚಿನ ದಾಖಲೆಗಳನ್ನು ಒದಗಿಸುವಲ್ಲಿ ಲೋಕಾಯುಕ್ತ ಅಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ ಕೋರಿರುವುದಾಗಿ 2013ರಲ್ಲಿ ಕೋರ್ಟ್ ಗೆ ಸಲ್ಲಿಸಲಾಗಿದ್ದ ಮಧ್ಯಂತರ ವರದಿಯಲ್ಲಿ ಹೇಳಲಾಗಿದೆ.
ಅಂದರೆ, ವಕೀಲ ವಿನೋದ್ ಅವರು 2017ರಲ್ಲಿ ಅಧಿಕೃತವಾಗಿ ದೂರು ಸಲ್ಲಿಸುವ ಮೊದಲೇ ಇಡಿ ಅಧಿಕಾರಿಗಳಿಗೆ ಈಶ್ವರಪ್ಪ ಹಾಗೂ ಅವರ ಮಗ ವಿದೇಶದಲ್ಲಿ ಹೊಂದಿರುವ ವ್ಯವಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ರಿಜಿಸ್ಟರ್ ಮಾಡಿರುವ ಶೆಲ್ ಕಂಪೆನಿಗಳಿಂದ ಪಡೆದ ಹಣದ ಬಗ್ಗೆ ಮಾಹಿತಿ ಇತ್ತು. ತನಿಖೆ ಬಗ್ಗೆ ಇಡಿ ಅಧಿಕಾರಿಗಳಲ್ಲಿ ಪ್ರತಿಧ್ವನಿ ಕೇಳಿದಾಗ “ತನಿಖೆ ಇನ್ನೂ ಪ್ರಗತಿಯಲ್ಲಿದೆ,’’ ಎಂಬ ಉತ್ತರ ಸಿಕ್ಕಿದೆ.
ಈ ವ್ಯವಹಾಗಳಲ್ಲದೇ ಈಶ್ವರಪ್ಪ ಅವರು ಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಹಾಗೂ ಅವರ ಕುಟುಂಬದವರ ಹೆಸರಿನಲ್ಲಿ ಖರೀದಿಸಲಾದ ಒಟ್ಟು 29 ಆಸ್ತಿಗಳ ವಿವರವನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದರು. ಈ ಆಸ್ತಿಗಳ ಪೈಕಿ ಹೆಚ್ಚಿನವು ಶಿವಮೊಗ್ಗದಲ್ಲಿದ್ದರೆ, ಕೆಲವು ಬೆಂಗಳೂರು ಹಾಗೂ ಇನ್ನು ಕೆಲವು ಇತರ ರಾಜ್ಯಗಳಲ್ಲಿವೆ. 2008-2013 ವರೆಗಿನ ಬಿಜೆಪಿ ಸರ್ಕಾರದಲ್ಲಿ ಈಶ್ವರಪ್ಪ ಇಂಧನ, ಕಂದಾಯ, ಜಲ ಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಜೊತೆಗೆ, ಕೆಲ ಕಾಲ ಉಪಮುಖ್ಯಮಂತ್ರಿಯೂ ಆಗಿದ್ದರು.